ಶನಿವಾರ, ಮೇ 8, 2021
26 °C

ಟ್ಯಾಂಕರ್ ಡಿಕ್ಕಿ: ಚಿಂದಿ ಆಯುವ ಯುವಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೀರಿನ ಟ್ಯಾಂಕರ್ ಡಿಕ್ಕಿ ಹೊಡೆದು ಚಿಂದಿ ಆಯುವ ಯುವಕನೊಬ್ಬ ಮೃತಪಟ್ಟಿರುವ ಘಟನೆ ಮಣಿಪಾಲ್ ಆಸ್ಪತ್ರೆ ಬಳಿಯ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ ಶುಕ್ರವಾರ ನಡೆದಿದೆ.ನಗರದ ಮಾರತ್ತಹಳ್ಳಿ ಸಮೀಪದ ಗುಡಿಸಲೊಂದರಲ್ಲಿ ವಾಸವಾಗಿದ್ದ ಮೊಹಮ್ಮದ್ ಶಾಹೀನ್ ಖಾನ್(18) ಮೃತಪಟ್ಟವರು.ಮೊಹಮ್ಮದ್ ಶಾಹೀನ್ ಗುರುವಾರ ರಾತ್ರಿ 11.45ರ ಸುಮಾರಿಗೆ ತಳ್ಳು ಗಾಡಿಯಲ್ಲಿ ಚಿಂದಿ ತುಂಬಿಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಹಿಂದಿನಿಂದ ಬಂದ ನೀರಿನ ಟ್ಯಾಂಕರ್ ಅವರಿಗೆ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ವಾಹನ ಚಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.ಕೂಲಿ ಕಾರ್ಮಿಕ ಸಾವು: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಕೂಲಿ ಕಾರ್ಮಿಕ ಲಕ್ಷ್ಮೀನರಸಿಂಹಯ್ಯ (40) ಎಂಬುವರು ಮೃತಪಟ್ಟಿರುವ ಘಟನೆ ಮೇಖ್ರಿ ವೃತ್ತದ ರಮಣಶ್ರೀ ಉದ್ಯಾನದ ಬಳಿ ಗುರುವಾರ ರಾತ್ರಿ ನಡೆದಿದೆ.ಮಧುಗಿರಿಯ ಐ.ಡಿ.ಹಳ್ಳಿ ಮೂಲದ ಲಕ್ಷ್ಮೀನರಸಿಂಹಯ್ಯ ಅರಮನೆ ಮೈದಾನದಲ್ಲಿರುವ ಕಲ್ಯಾಣ ಮಂಟಪವೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡು ಅಲ್ಲೇ ವಾಸವಾಗಿದ್ದರು. ಗಾಯಗೊಂಡು ರಸ್ತೆ ಬದಿಯಲ್ಲಿ ಬಿದ್ದಿದ್ದ ಅವರನ್ನು ಸ್ಥಳೀಯರು ಶುಕ್ರವಾರ ಬೆಳಗ್ಗೆ ಸಮೀಪದ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆಗೆ ಸ್ಪಂದಿಸದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.ಮೃತರ ಜೇಬಿನಲ್ಲಿದ್ದ ಚೀಟಿಯ ಸಹಾಯದಿಂದ ಅವರ ಹೆಸರು, ವಿಳಾಸವನ್ನು ಪತ್ತೆ ಹಚ್ಚಲಾಯಿತು. ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ ಎಂದು ಸದಾಶಿವನಗರ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.ಹಳಿ ದಾಟುತ್ತಿದ್ದ ವೃದ್ಧ ಸಾವು: ನಾಯಂಡಹಳ್ಳಿ ರೈಲು ನಿಲ್ದಾಣದಲ್ಲಿ ಶುಕ್ರವಾರ ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದು ಚಿಕ್ಕಕರಿಗೌಡ (95) ಎಂಬುವರು ಸಾವನ್ನಪ್ಪಿದ್ದಾರೆ. ಮಲ್ಲೇಶ್ವರ ರೈಲು ನಿಲ್ದಾಣದ ಬಳಿ ಸಂಭವಿಸಿದ ಮತ್ತೊಂದು ಅಪಘಾತದಲ್ಲಿ ರಿಜ್ವಾನಾ ಎಂಬ ಯುವತಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.ಮೂಲತಃ ಮದ್ದೂರಿನವರಾದ ಚಿಕ್ಕಕರಿಗೌಡ ಅವರು, ಬ್ಯಾಟರಾಯನಪುರದಲ್ಲಿರುವ ಮಗಳ ಮನೆಗೆ ಬಂದಿದ್ದರು. ಬೆಳಿಗ್ಗೆ 8.30ರ ಸುಮಾರಿಗೆ ಹಳಿ ದಾಟುವಾಗ ತಿರುಪತಿ - ಚಾಮರಾಜನಗರ ಮಾರ್ಗದ ಪ್ಯಾಸೆಂಜರ್ ರೈಲು ಅವರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಚಿಕ್ಕಕರಿಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದರು.ಮತ್ತೊಂದು ಪ್ರಕರಣ: ಮಲ್ಲೇಶ್ವರ ರೈಲು ನಿಲ್ದಾಣದಲ್ಲಿ ಮಧ್ಯಾಹ್ನ 3.45ರ ಸುಮಾರಿಗೆ ರೈಲಿಗೆ ಸಿಲುಕಿ ರಿಜ್ವಾನಾ ಎಂಬುವರು ಸಾವನ್ನಪ್ಪಿದ್ದಾರೆ. ಮೃತರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಅವರಿಗೆ ಸುಮಾರು 20-25 ವರ್ಷವಿರಬಹುದು.ಆಸ್ಪತ್ರೆಯ ಮಾರ್ಗ ಮಧ್ಯೆ ಸಾವನ್ನಪ್ಪಿರುವುದನ್ನು ವೈದ್ಯರು ದೃಢಪಡಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.