ಶನಿವಾರ, ಮೇ 28, 2022
27 °C

ಟ್ಯಾಂಕ್ ಇದೆ; ನೀರೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಬುರ್ಗಾ: ತಾಲ್ಲೂಕಿನ ಕುದ್ರಿಕೊಟಗಿ ಗ್ರಾಮದಲ್ಲಿ ಪ್ರಮುಖ ರಸ್ತೆ ಪಕ್ಕದಲ್ಲಿ ನಿರ್ಮಿಸಿರುವ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಗೊಂಡು ಸುಮಾರು ಎರಡುವರೆ ವರ್ಷ ಕಳೆದರೂ ಇನ್ನೂವರೆಗೂ ನೀರು ಸಂಗ್ರಹಿಸಿದೇ ಇರುವುದರಿಂದ ಈ ಬೃಹತ್ ಟ್ಯಾಂಕ್ ಇದ್ದು ಇಲ್ಲದಂತಾಗಿದೆ.ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ ಎಂದು ಗ್ರಾಮದ ಹೊಳೆಯಪ್ಪ ಗೋನಾಳ ದೂರಿದ್ದಾರೆ.ಜನತೆಗೆ ನೀರಿನ ಅಗತ್ಯತೆಯನ್ನು ಮನಗಂಡು ಗ್ರಾಮಕ್ಕೆ ಮಂಜೂರಾಗಿದ್ದ ಈ ಒವರ್ ಹೆಡ್ ಟ್ಯಾಂಕ್ ಹಂತ ಹಂತವಾಗಿ ಸಿದ್ದಗೊಂಡಿತು, ಆದರೆ ಸಿದ್ದಗೊಂಡಾಗಿನಿಂದಲೂ ಹನಿ ನೀರು ಟ್ಯಾಂಕಿಗೆ ಪೂರೈಕೆಯಾಗಲಿಲ್ಲ, ಟ್ಯಾಂಕಿನಿಂದ ಭೂಮಿ ಮಟ್ಟಕ್ಕೆ ಪೈಪು ಜೋಡಿಸಿದ್ದನ್ನು ಬಿಟ್ಟರೆ ಬೇರೆ ಏನೂ ಮಾಡಿಲ್ಲ, ಹೀಗೆ ಸುಮಾರು ವರ್ಷಗಳಿಂದಲೂ ನೀರು ಸಂಗ್ರಹವಾಗದೇ ಇರುವುದರಿಂದ ಟ್ಯಾಂಕ್ ಬಹುತೇಕ ಕಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದರ ಪರಿಣಾಮವಾಗಿ ಸದ್ರಿ ಟ್ಯಾಂಕ್ ಉಪಯೋಗಕ್ಕೆ ಬಾರದ ಸ್ಥಿತಿಗೆ ತಲುಪಿದಂತಿದೆ.ನಿರ್ಮಾಣ ಹಂತದಲ್ಲಿಯೇ ಭಾರಿ ಕಳಪೆಯಾಗಿಯೂ ಕಾಟಾಚಾರಕ್ಕೆ ನಿರ್ಮಾಣಗೊಂಡ ಈ ಟ್ಯಾಂಕ್ ಬಳಕೆಯ ಮುನ್ನವೆ ಈ ದುರಾವಸ್ಥೆಗೆ ತಲುಪಿದ್ದು ಅಧಿಕಾರಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಅಲ್ಲದೇ ಸರ್ಕಾರದ ದುಡ್ಡು ಸಾರ್ವಜನಿಕರ ಅನುಕೂಲಕ್ಕೆ ವ್ಯಯವಾದರೂ ಅದರ ಸದ್ಬಳಕೆ ಮಾಡಿಕೊಡುವಲ್ಲಿ ಅಧಿಕಾರಿಗಳ ವಿಫಲರಾಗಿದ್ದು ಬೇಸರದ ಸಂಗತಿ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.ರಸ್ತೆಯ ಪಕ್ಕದಲ್ಲಿರುವ ಕೊಳವೆಬಾವಿಯ ನೀರನ್ನು ಟ್ಯಾಂಕ್‌ಗೆ ಪೂರೈಸಿ ಗ್ರಾಮದ ಜನತೆಗೆ ಸಮರ್ಪಕವಾಗಿ ಸರಬುರಾಜು ಮಾಡುವ ಉದ್ದೇಶದಿಂದ ನಿರ್ಮಾಣಗೊಂಡಿದ್ದರೂ ಇನ್ನೂವರೆಗೂ ಉದ್ದೇಶ ಮಾತ್ರ ಈಡೇರುತ್ತಿಲ್ಲ, ಈ ಕುರಿತು ಜನಪ್ರತಿನಿಧಿಗಳಿಗೆ ಸಾಕಷ್ಟು ಸಲ ಒತ್ತಾಯಿಸಿದರೂ ಯಾರೊಬ್ಬರು ಸ್ಪಂದಿಸಿಲ್ಲ, ಅಲ್ಲದೇ ಟ್ಯಾಂಕಿನ ಬಳಿ ರಸ್ತೆ ಪಕ್ಕದ ಮತ್ತೊಂದು ಬದಿಯಲ್ಲಿರುವ ಕೊಳವೆಬಾವಿಗೆ ಅಳವಡಿಸಿರುವ ಕೈಪಂಪು ಕೆಟ್ಟು ವರ್ಷ ಗತಿಸಿದರೂ ಅದನ್ನು ಕೂಡಾ ದುರಸ್ತಿಗೊಳಿಸಲು ಸಂಬಂಧಪಟ್ಟವರು ಮುಂದೆ ಬರುತ್ತಿಲ್ಲ ಇದರಿಂದ ಗ್ರಾಮಸ್ಥರು ನೀರಿನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಟ್ಯಾಂಕಿನ ಬುಡದಲ್ಲಿ ಅಕ್ಕಪಕ್ಕದ ಜನರು ಜಾನುವಾರುಗಳ ವಿಶ್ರಾಂತಿಯ ಪ್ರದೇಶವನ್ನಾಗಿ ಮಾಡಿಕೊಂಡಿದ್ದಾರೆ. ಜನತೆಗೆ ನೀರು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಈ ಟ್ಯಾಂಕಿನ ಬಳಕೆಯನ್ನು ಮಾಡಿಕೊಳ್ಳುವ ಮೂಲಕ ಗ್ರಾಮಕ್ಕೆ ಸಮರ್ಪಕ ನೀರು ಪೂರೈಸುವ ಕೆಲಸವನ್ನು ಗ್ರಾಮ ಪಂಚಾಯಿತಿ ಮಾಡಬೇಕಾಗಿದೆ. ಅಲ್ಲದೇ ವಿವಿಧ ಹಂತದ ಜನಪ್ರತಿನಿಧಿಗಳು ಕೂಡಾ ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರಬೇಕು ಎಂದು   ಎಂದು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.