ಸೋಮವಾರ, ಜನವರಿ 20, 2020
29 °C

ಡಯಾಪರ್ ಆಯ್ಕೆ ಹೇಗೆ?

ಡಾ.ಎಂ.ಡಿ.ಸೂರ್ಯಕಾಂತ Updated:

ಅಕ್ಷರ ಗಾತ್ರ : | |

ಮೊದಲ  ಎರಡು ವರ್ಷದವರೆಗೆ ಮಗುವಿಗೆ ಅಗತ್ಯವಾದ ವಸ್ತುಗಳಲ್ಲಿ ಬೇಬಿ ಡಯಾಪರ್(ಕೂಸು ಚೆಡ್ಡಿ, ಬೇಬಿ ನ್ಯಾಪಿ) ಅತಿ ಮುಖ್ಯ. ಹಲವಾರು ನಮೂನೆಯ ಡಯಾಪರ್‌ಗಳ ಜಾಹೀರಾತು ಮಾಧ್ಯಮಗಳಲ್ಲಿ ಬರುತ್ತವೆ. ಆದರೆ ಇವು ದುಬಾರಿ, ಆರೋಗ್ಯಕ್ಕೆ ಒಳ್ಳೆಯದಲ್ಲ, ಹತ್ತಿ ಬಟ್ಟೆಯಿಂದ ಮನೆಯಲ್ಲಿ ಸಿದ್ಧಪಡಿಸಿದನ್ನು ಬಳಸಿ ಎಂಬುದು ಹಿರಿಯರ ಸಲಹೆ.

ಮನೆಯಲ್ಲಿ ತಯಾರಿಸಿದ ಚೆಡ್ಡಿಗಳನ್ನು ದಿನಕ್ಕೆ 10-12 ಬಾರಿ ಬದಲಿಸಬೇಕು. ತಮ್ಮ ಮಕ್ಕಳೊಂದಿಗೆ ಮಾತನಾಡಲು ಸಮಯವಿಲ್ಲದ ಈಗಿನ ಉದ್ಯೋಗಸ್ಥರಿಗೆ ಹೀಗೆ ಪದೇ ಪದೇ ಬದಲಿಸುವುದು ಕಷ್ಟ. ಇದರಿಂದಾಗಿ ದಿನಕ್ಕೆ 3-4 ಬಾರಿ ಬದಲಿಸಬಹುದಾದ ರೆಡಿಮೇಡ್ ಡಯಾಪರ್ ಇವರಿಗೆ ಇಷ್ಟ.

ಆದರೆ ಸಿದ್ಧಪಡಿಸಿದ ಡಯಾಪರ್‌ಗಳಲ್ಲಿನ ಕೃತಕ ವಸ್ತುಗಳಿಂದ ಅಲರ್ಜಿ, ಮೂತ್ರದ ಸೋಂಕು, ನಡೆದಾಡಲು ತೊಂದರೆ ಎಂಬ ವಿವಾದಾತ್ಮಕ ಮಾಹಿತಿ ಮಾತೆಯರಿಗೆ ಗೊಂದಲ ಮೂಡಿಸಿದೆ. ಈ ಎಲ್ಲ ಕಾರಣಗಳಿಂದಾಗಿ ಕಂದನಿಗೆ ಸುರಕ್ಷಿತ ಯಾವುದೆಂಬ ಸಂಶಯದಲ್ಲಿದ್ದಾರೆ ಅವರು. ಹಾಗಾದರೆ, ಡಯಾಪರ್‌ನಲ್ಲಿ ಎಷ್ಟು ವಿಧ? ಆಯ್ಕೆ ಹೇಗೆ? ಸಾಧಕ, ಬಾಧಕಗಳೇನು?

ಬಳಸಿ ಬಿಸಾಡುವ ಚೆಡ್ಡಿ

ಉದ್ಯೋಗಸ್ಥ ತಂದೆ-ತಾಯಿಯರ ಶಿಶುವಿಗೆ ಇವು ಹೆಚ್ಚು ಉಪಯುಕ್ತ. ಹೆತ್ತವರ ಗೈರು ಹಾಜರಿಯಲ್ಲಿ ಮಗುವಿನ ಆರೈಕೆ ಮಾಡುವ ಕೆಲಸದಾಕೆ ಅಥವಾ ಅಜ್ಜ-ಅಜ್ಜಿ ಮಗುವಿಗೆ ಸುಲಭವಾಗಿ ತೊಡಿಸಬಹುದು. ಇವುಗಳಲ್ಲಿ 6ರಿಂದ 10 ಗಂಟೆಗಳಲ್ಲಿ ಮಾಡಿದ ಮಲ-ಮೂತ್ರದ ತೇವಾಂಶ ಹೀರಿಕೊಳ್ಳುವ ರಾಸಾಯನಿಕ ತಂತ್ರಜ್ಞಾನವಿರುತ್ತದೆ. ಹೀಗಾಗಿ ಪ್ರತಿ 8 ರಿಂದ 10 ಗಂಟೆಗಳಿಗೊಮ್ಮೆ ಬದಲಿಸಿದರೆ ಸಾಕು. ಮಗುವಿನ ಬಟ್ಟೆ, ಹೊದಿಕೆ, ಬೆಡ್‌ಶೀಟ್, ನೆಲ ಒದ್ದೆ ಮತ್ತು ಮಲಿನವಾಗುವ ಚಿಂತೆಯಿಲ್ಲ.

ಪೂರ್ಣವಾಗಿ ತೇವಾಂಶದ ಹೀರುವಿಕೆಯಿಂದಾಗಿ ಮೂತ್ರ-ಮಲ ವಿಸರ್ಜನೆ ಮಾಡಿರುವುದು ಮಗುವಿಗೆ ಗೊತ್ತಾಗುವುದಿಲ್ಲ. ಹೀಗಾಗಿ ಮಗುವಿಗೆ ಕಿರಿಕಿರಿ ಇಲ್ಲ. ದಿನ ಪೂರ್ತಿ ದುಡಿದು ಬಂದ ತಂದೆ-ತಾಯಿ ನಿದ್ರೆಯಿಂದ ಎದ್ದು ಬಂದು ಪದೇ ಪದೇ ಡಯಾಪರ್ ಬದಲಿಸುವ ಕಷ್ಟವಿಲ್ಲ.

ಬಳಕೆ ನಂತರ ನೇರವಾಗಿ ಕಸದ ಬುಟ್ಟಿಗೆ ಹಾಕಬಹುದಾಗಿದ್ದರಿಂದ, ಸ್ವಚ್ಛಗೊಳಿಸಿ ಮರುಬಳಕೆಯ ತಾಪತ್ರಯವಿಲ್ಲ.  ಪ್ರವಾಸದಲ್ಲಿದ್ದಾಗಲೂ ಅನುಕೂಲ.

ಅನಾನುಕೂಲತೆ: ಸಾಮಾನ್ಯರಿಗೆ ಇವು ದುಬಾರಿಯೇ. ಒಂದು ಡಯಾಪರ್ ಬೆಲೆ ಅಂದಾಜು ರೂ 12. ತಿಂಗಳಿಗೆ  ಖರ್ಚು ಎರಡು ಸಾವಿರ ರೂಪಾಯಿ. ಇದಲ್ಲದೆ ಶಿಶುವಿನ ತೊಡೆ, ಮಲದ್ವಾರದ ಸುತ್ತಲಿನ ತ್ವಚೆ ಕೆಂಪಗಾಗಿ ಕೆಲವು ಮಕ್ಕಳಿಗೆ ಕಿರಿಕಿರಿಯಾಗಬಹುದು. ಮಲಮೂತ್ರದ ಮೇಲೆ ಸ್ವಯಂ ನಿಯಂತ್ರಣ (ಮಲಮೂತ್ರ ಬಂದಾಗ ಹೆತ್ತವರಿಗೆ ಸೂಚಿಸುವುದು) 6 ತಿಂಗಳು ವಿಳಂಬದ ಸಂಭವ (ಸಹಜ ಅವಧಿ 18 ರಿಂದ 24 ತಿಂಗಳು).

ಸಿದ್ಧಪಡಿಸಿದ ಮರುಬಳಕೆಯ ಹತ್ತಿ ಚೆಡ್ಡಿ 

ಇದರಲ್ಲಿ ಎರಡು ಭಾಗ. ಶುಭ್ರಗೊಳಿಸಿ ಮರುಬಳಸಬಹುದಾದ ಹೊರಚೆಡ್ಡಿ ಮತ್ತು ತೇವಾಂಶ ಹೀರುವ ಒಂದೇ ಬಾರಿ ಬಳಸಿ ಬಿಸಾಡಬಹುದಾದ ಒಳಭಾಗ. (ಲೈನರ್ ಅಥವಾ ಡಯಾಪರ್ ಪ್ಯಾಡ್). ಅದನ್ನು ಹೊರಚೆಡ್ಡಿಯ ಒಳಭಾಗಕ್ಕೆ ಅಂಟಿಸಬೇಕು. ಪ್ರತಿ 5-6 ಗಂಟೆಗೊಮ್ಮೆ ಒದ್ದೆಯಾದ ಒಳಭಾಗ ಮಾತ್ರ ಬದಲಿಸಬೇಕು. ಹೊರ ಚೆಡ್ಡಿಯನ್ನು ಒದ್ದೆ ಅಥವಾ ಮಲಿನವಾದಾಗ ಬದಲಿಸಬೇಕು ಮತ್ತು ಇದನ್ನು ಸ್ವಚ್ಛಗೊಳಿಸಿ ಮರುಬಳಸಬಹುದು. ಅಂದಾಜು ಬೆಲೆ ಒಳಬಾಗ ಒಂದಕ್ಕೆ ರೂ:5. ಹೊರಚೆಡ್ಡಿ ರೂ 15 ರಿಂದ 60.

ಮನೆಯಲ್ಲಿ ಸಿದ್ಧಪಡಿಸಿದ ಬಟ್ಟೆ ಚೆಡ್ಡಿ 

 ಹೊಸಬಟ್ಟೆ ಅಥವಾ ಹಳೆಬಟ್ಟೆ, ಟವೆಲ್‌ಅನ್ನು ತ್ರಿಕೋನ ಅಥವಾ ಚೌಕಾಕಾರದಲ್ಲಿ ಕತ್ತರಿಸಿ, ಕಟ್ಟುದಾರ (ಲೇಸ್) ಅಥವಾ ಸುರಕ್ಷಿತ ಗುಂಡುಸೂಜಿ (ಸೇಫ್ಟಿ ಪಿನ್) ಬಳಸಿ ಕೂಸು ಚೆಡ್ಡಿಯಾಗಿಸುವುದು. ಇದು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಬಳಕೆಯಲ್ಲಿದೆ. ಅನುಕೂಲವೆಂದರೆ ಅತ್ಯಂತ ಕಡಿಮೆ ಖರ್ಚಿನದು. ತ್ವಚೆಗೆ ತೊಂದರೆ ಇಲ್ಲ, ಮಲಮೂತ್ರದ ಸ್ವಯಂ ನಿಯಂತ್ರಣ ವಿಳಂಬವಾಗದು. ಬಟ್ಟೆ ಚೆಡ್ಡಿಗಳಲ್ಲಿ ತೇವಾಂಶ ಹೀರುವ ಗುಣ ಇಲ್ಲದ್ದರಿಂದ ಮಗು ಮೂತ್ರ ಮಾಡಿದಾಗೆಲ್ಲಾ ದಿನಕ್ಕೆ 12-15 ಬಾರಿ ಬದಲಿಸಬೇಕು. ಇದಲ್ಲದೆ ಮಗುವಿನ ಹಾಸಿಗೆ, ಹೊದಿಕೆ ಬಟ್ಟೆ, ಒದ್ದೆಯಾಗುವ  ಅನಾನುಕೂಲತೆ ಇದೆ. ಮಳೆ, ಚಳಿಯಲ್ಲಿ ಒದ್ದೆ ಬಟ್ಟೆ ಒಣಗಿಸುವುದು ಕಷ್ಟಕರ. ಪ್ರವಾಸದಲ್ಲಿ ಬಳಸುವಂತಿಲ್ಲ.

ಯಾವ ಬ್ರಾಂಡ್ ಉತ್ತಮ?

ಬಳಸಿ ಬಿಸಾಡುವ ಮತ್ತು ಮರುಬಳಕೆಯ ಹತ್ತಾರು ಬ್ರಾಂಡ್‌ಗಳು ಲಭ್ಯವಿದ್ದು, ಯಾವ ಕಂಪೆನಿಯದು ಉತ್ತಮ ಎಂಬ ಗೊಂದಲ ಸಹಜ. ಇಲ್ಲಿ ಹೆತ್ತವರ ಆರ್ಥಿಕ ಸ್ಥಿತಿ, ಜೀವನ ಶೈಲಿ ಮುಖ್ಯ. ಪಾಲಕರು ತಮಗೆ ಎಟಕುವ ಬೆಲೆಯ ಡಯಾಪರ್ ಖರೀದಿಸಬೇಕು. ಖರ್ಚು ಕಡಿಮೆಯ ಇನ್ನೊಂದು ಉಪಾಯ ಹೀಗಿದೆ: ಹಗಲಿನಲ್ಲಿ ಮನೆಯಲ್ಲಿ ಸಿದ್ಧಪಡಿಸಿದ ಅಥವಾ ಮರುಬಳಕೆಯದನ್ನು ಬಳಸಿರಿ. ರಾತ್ರಿ ಹಾಗೂ ಪ್ರಯಾಣದಲ್ಲಿದ್ದಾಗ ಬಳಸಿ ಬಿಸಾಡುವುದನ್ನು ಬಳಸಿ. ಆಯ್ಕೆಯ ಮುಂಚೆ ಮಕ್ಕಳ ತಜ್ಞರ ಅಥವಾ ಅನುಭವಿ ತಾಯಿ ಜೊತೆ ಚರ್ಚಿಸಿರಿ.

ಸೈಜ್ ಆಯ್ಕೆ

ಬಳಸಿ ಬಿಸಾಡುವ ಡಯಾಪರ್‌ಗಳು ಮಗುವಿನ ತೂಕಕ್ಕೆ ಅನುಗುಣವಾಗಿ ವಿವಿಧ ಅಳತೆಗಳಲ್ಲಿ ಲಭ್ಯ. ಉದಾ: 4 ಕಿಲೋ ತೂಕದವರೆಗಿನ ಮಗುವಿಗೆ ಸೈಜ್ 4ರಿಂದ 6 ಕಿಲೋ- ಸೈಜ್ 1, 6ರಿಂದ 10 ಕಿಲೋ- ಸೈಜ್2 ಇತ್ಯಾದಿ. ಈ ಸೈಜಗಳು ಬ್ರಾಂಡ್‌ನಿಂದ ಬ್ರಾಂಡ್‌ಗೆ ಭಿನ್ನವಾಗಿದ್ದು, ಡಯಾಪರ್ ಪ್ಯಾಕ್ ಮೇಲೆ ನಮೂದಿಸಿರುವ ಸೈಜನ್ನು  ಗಮನಿಸಿ ಖರೀದಿಸಿರಿ.

(ಮೊ: 94485 79390)

ಪ್ರತಿಕ್ರಿಯಿಸಿ (+)