ಬುಧವಾರ, ಮೇ 25, 2022
29 °C

ಡಾಟಾ ಎಂಟ್ರಿ ಆಪರೇಟರ್‌ಗಳ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಕನಿಷ್ಠ ವೇತನ ಜಾರಿಗೊಳಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅಕೌಂಟೆಂಟ್ ಕಂ ಡಾಟಾ ಎಂಟ್ರಿ ಆಪರೇಟರ್‌ಗಳ ಸಂಘವು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಿಂದ ಪ್ರಮುಖ ಬೀದಿಗಳಲ್ಲಿ ಮೌನ ಮೆರವಣಿಗೆ ನಡೆಸಿ ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಿದರು.ಕಾರ್ಮಿಕ ಇಲಾಖೆಯು ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಮಾಸಿಕ 5,327 ರೂಪಾಯಿ ಕನಿಷ್ಠ ವೇತನ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ. ಬೇರೆ ಜಿಲ್ಲೆಗಳಲ್ಲಿ ಈಗಾಗಲೇ ಕನಿಷ್ಠ ವೇತನ ನೀಡಲಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಮಾತ್ರ ಕನಿಷ್ಠ ವೇತನ ಜಾರಿಗೊಳಿಸಿಲ್ಲ ಎಂದು ರಾಜ್ಯಪಾಲರಿಗೆ ಸಲ್ಲಿಸಿರುವ ಮನವಿಪತ್ರದಲ್ಲಿ ದೂರಿದ್ದಾರೆ.ಡಾಟಾ ಎಂಟ್ರಿ ಆಪರೇಟರ್‌ಗಳು ಉದ್ಯೋಗ ಖಾತರಿ, ವಾರ್ಷಿಕ ಖರ್ಚು- ವೆಚ್ಚ ಸೇರಿದಂತೆ ಗ್ರಾಮ ಪಂಚಾಯಿತಿಗಳಲ್ಲಿ ಎಲ್ಲ ಯೋಜನೆಗಳ ಕಂಪ್ಯೂರೀಕರಣ ಕೆಲಸ ನಿರ್ವಹಿಸುತ್ತಿದ್ದಾರೆ. ಅದಾಗಿಯು 2007ರಿಂದ ವೇತನ ಪರಿಷ್ಕರಿಸಿಲ್ಲ. 8 ತಿಂಗಳಿಂದ ವೇತನ ಬಿಡುಗಡೆ ಮಾಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.2010-11ನೇ ಸಾಲಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಎಂ.ಐ.ಎಸ್. ಅಳಿಸಿ ಹೋದ ಹಿನ್ನೆಲೆಯಲ್ಲಿ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ವಜಾ ಮಾಡಲಾಗಿದೆ. ಆದರೆ, ಇದಕ್ಕೆ ಮೇಲಧಿಕಾರಿಗಳೇ ಹೊಣೆ ಆಗಿದ್ದಾರೆ ಎಂದು ಆಪಾದಿಸಿದ್ದಾರೆ.ವಜಾಗೊಳಿಸಿದವನ್ನು ಮತ್ತೆ ಸೇವೆಗೆ ಸೇರಿಕೊಳ್ಳಬೇಕು. ಹೊರ ಗುತ್ತಿಗೆ ಕೈಬಿಡಬೇಕು. ಹಾಗೂ ಬಾಕಿ ವೇತನ ಪಾವತಿಸಬೇಕು ಎಂದು ಒತ್ತಾಯಿಸಿದ್ದಾರೆ.ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅಕೌಂಟೆಂಟ್ ಕಂ ಡಾಟಾ ಎಂಟ್ರಿ ಆಪರೇಟರ್‌ಗಳ ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ಕೆ.ಎಸ್. ಕರಂಜೆ, ಅಧ್ಯಕ್ಷ ರಂಗಾಚಾರಿ ನಾರೋಜ, ಪ್ರಧಾನ ಕಾರ್ಯದರ್ಶಿ ಮಹೇಶ ಟಾಳೆ, ಗುರುಶಾಂತ ದಾನಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.