ಗುರುವಾರ , ಮೇ 26, 2022
28 °C

ಡಾ.ರಾಜ್ ಸ್ಮಾರಕ: ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿ

ಶಿವರಾಂ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡದ ಮೇರುನಟ ಡಾ. ರಾಜ್‌ಕುಮಾರ್ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಕಂಠೀರವ ಸ್ಟುಡಿಯೋ ಬಳಿ ಸುಮಾರು 2.5 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸುತ್ತಿರುವ ಈ ಸ್ಮಾರಕವನ್ನು ಡಿಸೆಂಬರ್ 15ರಿಂದ ನಗರದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸಂದರ್ಭದಲ್ಲಿ ಉದ್ಘಾಟಿಸಲು ಸರ್ಕಾರ ಚಿಂತನೆ ನಡೆಸಿದೆ.ಇದುವರೆಗೆ ಶೇ 85ರಿಂದ 90ರಷ್ಟು ಕೆಲಸ ಮುಗಿದಿದ್ದು, ಇನ್ನೊಂದು ತಿಂಗಳಲ್ಲಿ ಸ್ಮಾರಕ ನಿರ್ಮಾಣ ಕೆಲಸ ಪೂರ್ಣಗೊಳ್ಳಲಿದೆ ಎಂದು ಕಂಠೀರವ ಸ್ಟುಡಿಯೋ ವ್ಯವಸ್ಥಾಪಕ ನಿರ್ದೇಶಕ ಎನ್.ಆರ್. ವಿಶುಕುಮಾರ್ `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.2006ರ ಏಪ್ರಿಲ್ 12ರಂದು ನಿಧನರಾದ ವರನಟ ಡಾ. ರಾಜ್ ಅವರನ್ನು ಕುಟುಂಬ, ಚಿತ್ರರಂಗ ಹಾಗೂ ಸರ್ಕಾರದ ಆಶಯದಂತೆ ಕಂಠೀರವ ಸ್ಟುಡಿಯೋ ಬಳಿ 13ರಂದು ಸಮಾಧಿ ಮಾಡಲಾಯಿತು. ಆನಂತರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಚಿಸಿದ ಉನ್ನತ ಮಟ್ಟದ ಸಮಿತಿಯ ತೀರ್ಮಾನದಂತೆ ಡಾ.ರಾಜ್ ಸ್ಮಾರಕ ನಿರ್ಮಾಣಕ್ಕಾಗಿ ಟ್ರಸ್ಟ್ ರಚಿಸಲಾಯಿತು. ಅದರಂತೆ, 2007ರ ಆಗಸ್ಟ್ 23ರಂದು ಈ ಟ್ರಸ್ಟ್ ನೋಂದಣಿಯಾಯಿತು.ವಾರ್ತಾ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಜತೆಗೆ, ಡಾ. ಪಾರ್ವತಮ್ಮ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಸಾಹಿತಿ ಬರಗೂರು ರಾಮಚಂದ್ರಪ್ಪ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಕಂಠೀರವ ಸ್ಟುಡಿಯೋ ವ್ಯವಸ್ಥಾಪಕ ನಿರ್ದೇಶಕರು ಸಮಿತಿಯಲ್ಲಿದ್ದಾರೆ.ಡಾ. ರಾಜ್ ಸ್ಮಾರಕ ನಿರ್ಮಾಣಕ್ಕಾಗಿ ಸರ್ಕಾರ ಮೊದಲ ಹಂತದಲ್ಲಿ 2007-08ನೇ ಸಾಲಿನಲ್ಲಿ 3 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿತು. 2008ರ ನವೆಂಬರ್ 12ರಂದು ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿತು.ಆರಂಭದಲ್ಲಿ ಲೋಕೋಪಯೋಗಿ ಇಲಾಖೆ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಿ, ಮೊದಲ ಕಂತಿನಲ್ಲಿ 275 ಲಕ್ಷ ರೂಪಾಯಿಗಳನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಲಾಯಿತು. ಆದರೆ, ವಾಸ್ತುಶಿಲ್ಪಿ ನೀಡಿದ ವಿನ್ಯಾಸ ಸರಿ ಹೊಂದಲಿಲ್ಲ ಎಂಬ ಕಾರಣಕ್ಕಾಗಿ ಡಾ. ರಾಜ್ ಕುಟುಂಬವೇ ಗಣೇಶ್ ಎಂಬ ಖಾಸಗಿ ವಾಸ್ತುಶಿಲ್ಪಿ ಮೂಲಕ ಸ್ಮಾರಕದ ವಿನ್ಯಾಸ ನೀಡಿತು. ಡಾ. ರಾಜ್ ಕುಟುಂಬದ ಆಶಯದಂತೆ ಸ್ಮಾರಕ ನಿರ್ಮಾಣ ಕೆಲಸ ಕೈಗೆತ್ತಿಕೊಳ್ಳಲಾಯಿತು.ಆನಂತರ ಸರ್ಕಾರ ರಾಜ್ ಸ್ಮಾರಕ ನಿರ್ಮಾಣಕ್ಕಾಗಿ 2008-09ರಲ್ಲಿ 1 ಕೋಟಿ, 2009-10ರಲ್ಲಿ 1 ಕೋಟಿ, 2010-11ರಲ್ಲಿ 2 ಕೋಟಿ ರೂಪಾಯಿ ಬಿಡುಗಡೆ ಮಾಡಿತು. ಆರಂಭದಲ್ಲಿ ಲೋಕೋಪಯೋಗಿ ಇಲಾಖೆಗೆ 4.75 ಕೋಟಿ ಹಾಗೂ ವಿದ್ಯುತ್ ಸಂಪರ್ಕ ಕೆಲಸಕ್ಕೆ ರೂ 41 ಲಕ್ಷ ಸೇರಿ ಒಟ್ಟು 5.16 ಕೋಟಿ ರೂಪಾಯಿ ಬಿಡುಗಡೆ ಮಾಡಲಾಯಿತು. ಇದಲ್ಲದೆ, ಪ್ರತಿಷ್ಠಾನದ ಸಭೆ, ಡಾ. ರಾಜ್ ಜನ್ಮ ದಿನ, ಪುಣ್ಯ ತಿಥಿ ಮತ್ತಿತರ ಕಾರ್ಯಕ್ರಮಗಳಿಗೆ 30 ಲಕ್ಷ ರೂಪಾಯಿ ಖರ್ಚಾಗಿದ್ದು, 55 ಲಕ್ಷ ರೂಪಾಯಿ ಪ್ರತಿಷ್ಠಾನದ ಬಳಿಯಿದೆ.ಏನೇನು ಅಭಿವೃದ್ಧಿ:


ಕಂಠೀರವ ಸ್ಟುಡಿಯೋ ಬಳಿಯ 2.5 ಎಕರೆ ಪ್ರದೇಶದಲ್ಲಿ ಸ್ಮಾರಕದ ಸುತ್ತ ಕಾಂಪೌಂಡ್ ನಿರ್ಮಿಸಲಾಗಿದೆ. ಬಿಡಿಎ ವಿಶೇಷ ಭೂ ವಿನ್ಯಾಸ ಮಾಡಿ ಉದ್ಯಾನ ನಿರ್ಮಿಸಿದೆ. ಈಗ ಉದ್ಯಾನದಲ್ಲಿ ಬೆಳೆಸಿರುವ ಹೂ ಗಿಡಗಳೆಲ್ಲ ದೊಡ್ಡದಾಗಿ ಬೆಳೆದರೆ ಸ್ಮಾರಕಕ್ಕೆ ಇನ್ನಷ್ಟು ಕಳೆ ಬರಲಿದೆ.ಸ್ಮಾರಕದ ಬಳಿಯೇ ಆಡಳಿತ ಕಚೇರಿ, ಶೌಚಾಲಯ ನಿರ್ಮಿಸಲಾಗಿದೆ. ಸ್ಮಾರಕ ವೀಕ್ಷಿಸಲು ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.40 ಶಿಲಾಫಲಕಗಳ ಸ್ಥಾಪನೆ:

ಸ್ಮಾರಕದ ಮುಂಭಾಗದಲ್ಲಿ 40 ಶಿಲಾ ಫಲಕಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಡಾ. ರಾಜ್ ನಟಿಸಿರುವ ಬೇಡರ ಕಣ್ಣಪ್ಪ ಚಿತ್ರದಿಂದ ಹಿಡಿದು ಪ್ರಮುಖ ಸಾಮಾಜಿಕ ಹಾಗೂ ಪೌರಾಣಿಕ ಚಿತ್ರಗಳ ಪೋಸ್ಟರ್‌ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ.ರಾಜ್ ಸ್ಮಾರಕ ಎಲ್ಲರ ಗಮನಸೆಳೆಯಲು ಅದು ಪ್ರವೇಶಿಸುವಂತಹ ವರ್ತುಲ ರಸ್ತೆಯ ಪ್ರವೇಶ ದ್ವಾರದ ಬಳಿ ರಾಜ್ ನಟಿಸಿರುವ ಪ್ರಮುಖ ಚಿತ್ರಗಳ ಪೋಸ್ಟರ್‌ಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ವಿಶುಕುಮಾರ್ ಮಾಹಿತಿ ನೀಡಿದ್ದಾರೆ.ಹಣದ ಬದಲಿಗೆ ಪರ್ಯಾಯ ಜಾಗ:


ಕಂಠೀರವ ಸ್ಟುಡಿಯೋಗೆ ಸೇರಿದ 2.5 ಎಕರೆ ಪ್ರದೇಶದಲ್ಲಿ ಸ್ಮಾರಕ ನಿರ್ಮಿಸಿರುವುದರಿಂದ ಅದಕ್ಕೆ ಪ್ರತಿಯಾಗಿ ಮಾರುಕಟ್ಟೆ ದರ 16.5 ಕೋಟಿ ರೂಪಾಯಿ ನೀಡಲು ಸರ್ಕಾರದ ಮಟ್ಟದಲ್ಲಿ ಮೊದಲು ನಿರ್ಧಾರವಾಗಿತ್ತು. ಆದರೆ, ಇದೀಗ ಸರ್ಕಾರ ಹಣದ ಬದಲಿಗೆ ಪರ್ಯಾಯ ಜಾಗ ನೀಡಲು ನಿರ್ಧರಿಸಿದೆ.2011-12ನೇ ಸಾಲಿನ ಬಜೆಟ್‌ನಲ್ಲಿಯೂ ಸರ್ಕಾರ ರಾಜ್ ಪ್ರತಿಷ್ಠಾನಕ್ಕೆ 1 ಕೋಟಿ ರೂಪಾಯಿಗಳನ್ನು ನೀಡಲು ಪ್ರಕಟಿಸಿದೆ. ಹಣ ಮಂಜೂರಾಗಿದ್ದು, ಇನ್ನೂ ಹಣ ಬಿಡುಗಡೆಯಾಗಿಲ್ಲ. ಆದರೂ, ಯಾವುದೇ ಹಣದ ಕೊರತೆ ಇಲ್ಲ ಎಂದು ಕಂಠೀರವ ಸ್ಟುಡಿಯೋ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.ಸದ್ಯಕ್ಕೆ ಕಂಠೀರವ ಸ್ಟುಡಿಯೋ ಸಿಬ್ಬಂದಿ ಮೂಲಕವೇ ಸ್ಮಾರಕ ನಿರ್ವಹಣೆ ಮಾಡಲಾಗುತ್ತಿದೆ. ಉದ್ಘಾಟನೆ ಬಳಿಕ ಸರ್ಕಾರದ ಮೂಲಕ ಸ್ಮಾರಕದ ನಿರ್ವಹಣೆಗೆ ಸಿಬ್ಬಂದಿ ನಿಯೋಜಿಸಲು ಕೋರಲಾಗುವುದು ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.