ಶನಿವಾರ, ಏಪ್ರಿಲ್ 17, 2021
23 °C

ಡಿಎಸ್‌ಪಿ ವರ್ಗಾವಣೆಗೆ ಮೆಟಗುಡ್ಡ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: `ಬೈಲಹೊಂಗಲದಲ್ಲಿ ಬುಧವಾರ ಆಟೋರಿಕ್ಷಾ ಚಾಲಕರು ನನ್ನ ವಿರುದ್ಧ ಪ್ರತಿಭಟನೆ ನಡೆಸಿ, ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಈವರೆಗೂ ಡಿಎಸ್‌ಪಿ ಈ ಬಗ್ಗೆ ನನಗೆ ತಿಳಿಸಿಲ್ಲ. ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು~ ಎಂದು ಶಾಸಕ ಜಗದೀಶ ಮೆಟಗುಡ್ಡ ಪಟ್ಟು ಹಿಡಿದ ಪ್ರಸಂಗ ಗುರುವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾಮಗಾರಿಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆಯಿತು.ಬುಧವಾರ ಬೈಲಹೊಂಗಲದಲ್ಲಿ ಆಟೊರಿಕ್ಷಾ ಚಾಲಕರ ವಿರುದ್ಧ ಹರಿಹಾಯ್ದಿದ್ದ ಶಾಸಕ ಮೆಟಗುಡ್ಡ ವಿರುದ್ಧ ಪ್ರತಿಭಟನೆ ನಡೆದಿತ್ತು. ಶಾಸಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪೊಲೀಸ್ ಠಾಣೆಗೆ ಮನವಿ ಸಹ ಸಲ್ಲಿಕೆಯಾಗಿತ್ತು.ಈ ವಿಷಯ ಪತ್ರಿಕೆಗಳಲ್ಲಿ ಬಂದಿದ್ದರಿಂದ ತಮಗೆ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ಡಿಎಸ್‌ಪಿ ಹುದ್ದೆ ಖಾಲಿ ಇದ್ದರೂ ಪರವಾಗಿಲ್ಲ, ಕೂಡಲೇ ಅವರನ್ನು ವರ್ಗಾಯಿಸಬೇಕು ಎಂದು ಆಗ್ರಹಿಸಿದರು.ಬೈಲಹೊಂಗಲದ ಬಸ್ ನಿಲ್ದಾಣದೊಳಗೆ ಆಟೋರಿಕ್ಷಾ ನಿಲ್ದಾಣ ಮಾಡಲಾಗಿದೆ. ಮೊದಲು ಅದನ್ನು ಹೊರಗೆ ಹಾಕಬೇಕು. ಆಟೋ ಚಾಲಕರು ಬಸ್ ನಿಲ್ದಾಣದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಆಟೋರಿಕ್ಷಾ ಚಾಲಕರೊಂದಿಗೆ ಜಿಪಂ ಮಾಜಿ ಸದಸ್ಯರು ಹೋರಾಟ ನಡೆಸುತ್ತಿದ್ದಾರೆ. ಸರ್ಕಾರಿ ಅಭಿವೃದ್ಧಿ ಕೆಲಸಗಳಿಗೆ ಅಡ್ಡ ಪಡಿಸುವುದೊಂದೇ ಇವರ ಕೆಲಸ. ಇತ್ತೀಚೆಗೆ ಮುಖ್ಯಮಂತ್ರಿಗಳು ಬರುವ ದಿನದಂದೇ ಬೈಲಹೊಂಗಲ ಬಂದ್‌ಗೆ ಅವರಿಗೆ ಅನುಮತಿ ನೀಡಲಾಗಿತ್ತು. ಇಂಥವರ ಮೇಲೆ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.`ಅಭಿವೃದ್ಧಿ ಕೆಲಸಕ್ಕೆ ಅಡ್ಡ ಪಡಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ~ ಎಂದು ಎಸ್‌ಪಿ ಸಂದೀಪ ಪಾಟೀಲ ಹೇಳಿದರು.ಬಸ್ ನಿಲ್ದಾಣದೊಳಿಗಿರುವ ಆಟೊ ರಿಕ್ಷಾ ನಿಲ್ದಾಣವನ್ನು ಸ್ಥಳಾಂತರಿಸಬೇಕು. ಆಟೊ ಚಾಲಕರೊಂದಿಗೆ ಮಾತುಕತೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಡಿಎಸ್‌ಪಿ, ಉಪವಿಭಾಗಾಧಿಕಾರಿ ಹಾಗೂ ಆರ್‌ಟಿಒ ಅಧಿಕಾರಿಗಳಿಗೆ ಸಚಿವ ಉಮೇಶ ಕತ್ತಿ ಸೂಚಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.