ಶನಿವಾರ, ಜನವರಿ 25, 2020
29 °C

ಡಿನೋಟಿಫಿಕೇಷನ್: ಜಾಗ ಬಿಡಿಎ ಸುಪರ್ದಿಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯಶವಂತಪುರ ಹೋಬಳಿಯ ಜಾರಕಬಂಡೆ ಕಾವಲ್ ಬಳಿ, ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಆಗಿದೆ ಎನ್ನಲಾದ ಡಿನೋಟಿಫೈ ಜಮೀನನ್ನು 48 ಗಂಟೆಯ ಒಳಗೆ ತನ್ನ ಸುಪರ್ದಿಗೆ ಪಡೆದುಕೊಳ್ಳುವಂತೆ ಹೈಕೋರ್ಟ್, ಬಿಡಿಎಗೆ ಸೋಮವಾರ ಆದೇಶಿಸಿದೆ.ಈ ಪ್ರದೇಶದಲ್ಲಿ ನಾಮಫಲಕಗಳು ಇದ್ದರೆ ಅವುಗಳನ್ನು ಕೂಡಲೇ ತೆರವುಗೊಳಿಸುವಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ತಿಳಿಸಿದೆ. ಯಡಿಯೂರಪ್ಪನವರ ವಿರುದ್ಧ ಶಾಸಕ ನೆ.ಲ.ನರೇಂದ್ರಬಾಬು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇದಾಗಿದೆ.ಬಡಾವಣೆಯೊಂದರ ನಿರ್ಮಾಣಕ್ಕೆಂದು ಸ್ವಾಧೀನ ಪಡಿಸಿಕೊಳ್ಳಲಾದ ಜಮೀನನ್ನು 25 ವರ್ಷಗಳ ನಂತರ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. `ನಂದಿನಿ ಲೇಔಟ್‌ನ ಮುಂದುವರಿದ ಬಡಾವಣೆ~ಗಾಗಿ 1985ರಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, 2009ರ ಆಗಸ್ಟ್ 19ರಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರ ಆದೇಶದ ಮೇರೆಗೆ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿದೆ ಎನ್ನುವುದು ಆರೋಪ.

`ಈ ಜಮೀನನ್ನು ಸ್ವಾಧೀನಪಡಿಸಿಕೊಂಡ ನಂತರ ಅದರ ಮಾಲೀಕರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ.ನಿಯಮದ ಪ್ರಕಾರ, ಒಮ್ಮೆ ಪರಿಹಾರ ಪಡೆದ ಮೇಲೆ ಅದನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವುದು ಕಾನೂನುಬಾಹಿರ. ಈ ಜಾಗದಲ್ಲಿ ಶಾಲೆ ನಡೆಯುತ್ತಿರುವ ಕಾರಣ, ಮಕ್ಕಳ ಭವಿಷ್ಯಕ್ಕಾಗಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿದೆ ಎಂದು ಸಮಜಾಯಿಷಿ ನೀಡಲಾಗಿದೆ. ಆದರೆ ಬಿಡಿಎ ಸ್ವಾಧೀನದಲ್ಲಿದ್ದ ಶಾಲೆಯನ್ನು 1985ರಲ್ಲಿ ಜಮೀನು ಸ್ವಾಧೀನ ಪಡಿಸಿಕೊಂಡಾಗಲೇ ತೆರವು ಮಾಡಲಾಗಿದೆ. ಶಾಲೆಯ ನೆಪವೊಡ್ಡಿ ತಮಗೆ ಬೇಕಾದವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿದೆ.ಆದರೆ ಈಗ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ತಕ್ಷಣ `ಬೆನಕ ವಿದ್ಯಾ ಸಂಸ್ಥೆ~ಯ ಫಲಕವನ್ನು ಅಳವಡಿಸಲಾಗಿದೆ. ಆದರೆ ಅಲ್ಲಿ ಯಾವುದೇ ಕಟ್ಟಡಗಳೇ ಇಲ್ಲ~ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ವಿಚಾರಣೆಯನ್ನು ಮಾರ್ಚ್ 26ಕ್ಕೆ ಮುಂದೂಡಲಾಯಿತು.ನಿರೀಕ್ಷಣಾ ಜಾಮೀನು ನಿರಾಕರಣೆ


ಬಿಬಿಎಂಪಿಯಲ್ಲಿ 2008ರಿಂದ 2011ರವರೆಗೆ ನಡೆದಿದೆ ಎನ್ನಲಾದ ಅವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪ ಹೊತ್ತ ನಾಲ್ವರು ಅಧಿಕಾರಿಗಳಿಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ಸೋಮವಾರ ನಿರಾಕರಿಸಿದೆ.   ಟೆಂಡರ್ ಪ್ರಕ್ರಿಯೆಯಲ್ಲಿ ವಂಚನೆ, ಹಣಕಾಸಿನ ಅವ್ಯವಹಾರ ಇತ್ಯಾದಿ ಆರೋಪಗಳು ಇವರ ಮೇಲಿದೆ. ಈ ಹಿನ್ನೆಲೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಆದುದರಿಂದ ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಅವರು ಕೋರ್ಟ್ ಮೊರೆ ಹೋಗಿದ್ದರು. `ಅರ್ಜಿದಾರರನ್ನು ಬಂಧಿಸುತ್ತಾರೆ ಎಂಬ ಬಗ್ಗೆ ಸಂದೇಹಪಡುವ ಯಾವ ಅಂಶಗಳೂ ಕಂಡು ಬರುತ್ತಿಲ್ಲ. ಒಂದು ವೇಳೆ ಆ ರೀತಿ ಏನಾದರೂ ಬಲವಾದ ಸಂದೇಹ ಅರ್ಜಿದಾರರಿಗೆ ಇದ್ದರೆ ಅವರು ಕೋರ್ಟ್‌ನಲ್ಲಿ ಮುಂದೆ ಅರ್ಜಿ ಸಲ್ಲಿಸಬಹುದು~ ಎಂದ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಅರ್ಜಿ ವಜಾಗೊಳಿಸಿದರು.ಪಾಲಿಕೆಯ ಹಣಕಾಸು ವಿಭಾಗದ ಉಪ ನಿಯಂತ್ರಕರಾಗಿದ್ದ ಸಿ.ಎ. ಶಿವಪ್ಪ, ಪ್ರಧಾನ ಎಂಜಿನಿಯರ್ ಬಿ.ಟಿ.ರಮೇಶ್, ಮಲ್ಲೇಶ್ವರ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಜಿ. ಪ್ರಕಾಶ್‌ಕುಮಾರ್, ರಾಜರಾಜೇಶ್ವರಿನಗರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೀರಾ ನಾಯ್ಕ ಹಾಗೂ ಗಾಂಧಿನಗರ ವಿಭಾಗದ ಕಿರಿಯ ಎಂಜಿನಿಯರ್ ಎಂ.ಪ್ರಭು ಅವರು ಅರ್ಜಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಎಸ್.ಚಂದ್ರಮೌಳಿ ವಾದಿಸಿದರು.

ಪ್ರತಿಕ್ರಿಯಿಸಿ (+)