ಮಂಗಳವಾರ, ಜನವರಿ 21, 2020
19 °C

ಡಿಸಿಪಿ ಕಚೇರಿಗಳಲ್ಲಿ ಮಹಿಳಾ ಸಮಾಲೋಚನಾ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮಹಿಳಾ ಸಮಾಲೋಚನಾ ಕೇಂದ್ರಗಳನ್ನು ಎಲ್ಲ ಡಿಸಿಪಿ ಕಚೇರಿಗಳಲ್ಲಿ ತೆರೆಯಲಾಗುವುದು’ ಎಂದು ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ರಾಘವೇಂದ್ರ ಎಚ್‌. ಔರಾದ್‌ಕರ್‌ ಹೇಳಿದರು. ಬಿ–ಪ್ಯಾಕ್‌ ಸಂಘಟನೆಯು ನಗರದ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ನಾಗರಿಕ ನಾಯಕತ್ವ ತರಬೇತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.‘ಪೊಲೀಸ್‌ ಕಮಿಷನರ್‌ ಕಚೇರಿಗೇ ಬಂದು ಮಹಿಳಾ ಸಮಾಲೋಚನೆಯಲ್ಲಿ ಪಾಲ್ಗೊಳ್ಳಬೇಕಿಲ್ಲ. ಇನ್ನು ಮುಂದೆ ಎಲ್ಲ ಡಿಸಿಪಿ ಕಚೇರಿಗಳಲ್ಲಿ ಸಮಾಲೋಚನೆಗೆ ವ್ಯವಸ್ಥೆ ಮಾಡಲಾಗುವುದು’ ಎಂದರು. ‘ಸಮುದಾಯ ಪೊಲೀಸ್‌ ಎಂಬ ಕ್ರಿಯಾ ಯೋಜನೆ ಅಡಿಯಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಸಹ ಕೈ ಜೋಡಿಸಲು ಕ್ರಮ ಕೈಗೊಳ್ಳಲಾಗುವುದು. ಮಹಿಳಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಹೇಳಿದರು.‘ಪೊಲೀಸ್‌ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಒಟ್ಟು 640 ರಾತ್ರಿ ಗಸ್ತುಗಳಿವೆ. ಆದರೆ, ಒಂದು ಬಡಾವಣೆಗೆ ಒಬ್ಬ ಕಾನ್‌ಸ್ಟೆಬಲ್‌ ಮಾತ್ರ ನಿಯೋಜಿಸಲು ಸಾಧ್ಯ. ಸಾರ್ವಜನಿಕರು ತಾವೇ ಖುದ್ದಾಗಿ ರಾತ್ರಿ ಗಸ್ತು ಮಾಡುತ್ತೇವೆ ಎಂದು ಬಂದರೆ ಅದಕ್ಕೆ ನಮ್ಮ ಸ್ವಾಗತವಿದೆ’ ಎಂದರು.‘ಈಗಿರುವ ಕಾನ್‌ಸ್ಟೆಬಲ್‌ಗಳ ಮೇಲೆ ಕೆಲಸದ ಒತ್ತಡ ಜಾಸ್ತಿಯಿದೆ. ಅವರು 16 ಗಂಟೆ ಕೆಲಸ ಮಾಡಬೇಕಾಗಿದೆ’ ಎಂದ ಅವರು, ‘ಇಂದು ಯಾವುದೇ ಪ್ರಕರಣಕ್ಕೆ ಪಂಚನಾಮೆ ಮಾಡುವವರು ದೊರೆಯುವುದಿಲ್ಲ. ಪಂಚನಾಮೆ ಮಾಡಿದರೆ, ಮುಂದೆ ಕೋರ್ಟ್‌ಗೆ ಅಲೆಯಬೇಕಾಗುತ್ತದೆ ಎಂಬ ಭಯವಿದೆ. ಆದರೆ, ಅಲ್ಲಿರುವ ಸ್ಥಳೀಯ ವ್ಯಕ್ತಿಗಳೇ ಸ್ವತಃ ತಾವೇ ಪಂಚನಾಮೆ ಮಾಡಲು ಮುಂದೆ ಬರಬೇಕು’ ಎಂದು ಹೇಳಿದರು.ಬಿ–ಪ್ಯಾಕ್‌ ಸಂಘಟನೆಯ ಉಪಾಧ್ಯಕ್ಷ ಮೋಹನ್‌ದಾಸ್‌ ಪೈ ಮಾತನಾಡಿ, ‘ಮೇಯರ್‌ಗೆ ನಗರದ ಅಭಿವೃದ್ಧಿಗೆ ಶ್ರಮಿಸಲು 5 ವರ್ಷಗಳು ಬೇಕು. ಮೇಯರ್‌ ಅಧಿಕಾರಾವಧಿಯನ್ನು 5 ವರ್ಷದವರೆಗೆ ವಿಸ್ತರಿಸಬೇಕು’ ಎಂದು ಒತ್ತಾಯಿಸಿದರು. ಬಿ–ಪ್ಯಾಕ್‌ ಸಂಘಟನೆಯ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಷಾ, ‘ಉತ್ತಮ ಆಡಳಿತ ವ್ಯವಸ್ಥೆಯನ್ನು ರೂಪಿಸಲು ಸಾರ್ವಜನಿಕರು ಸಹ ಪ್ರಯತ್ನ ಪಡಬೇಕು.

ಈ ನಿಟ್ಟಿನಲ್ಲಿ ನಗರದ ಜನಪ್ರತಿನಿಧಿಗಳಿಗೆ ಸೂಕ್ತವಾದ ತರಬೇತಿ ನೀಡುವುದು ಬಿ–ಪ್ಯಾಕ್‌ ಸಂಘಟನೆಯ ಉದ್ದೇಶವಾಗಿದೆ. ಇದರಿಂದ ತಕ್ಷಶಿಲಾ ಸಂಸ್ಥೆಯೊಡನೆ ಸೇರಿ ಬಿ–ಪ್ಯಾಕ್‌ ನಾಗರಿಕ ನಾಯಕತ್ವ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ’ ಎಂದರು. ಮೇಯರ್‌ ಬಿ.ಎಸ್‌.ಸತ್ಯನಾರಾಯಣ, ‘ಆಸ್ತಿ ತೆರಿಗೆ ವಸೂಲಿಗೆ ಹೊರ ಗುತ್ತಿಗೆಗೆ ನೀಡಲಾಗುವುದು. ಆಸ್ತಿ ತೆರಿಗೆ ವಸೂಲಿಗೆ ಬೆಸ್ಕಾಂನ ಸಹಾಯವನ್ನು ಕೇಳಲಾಗುವುದು’ ಎಂದು ಹೇಳಿದರು.‘ತ್ಯಾಜ್ಯ ವಿಂಗಡಣೆ ಮತ್ತು ನಿರ್ವಹಣೆ ಇಂದು ದೊಡ್ಡ ಸವಾಲಾಗಿದೆ. ಕೆ.ಆರ್‌.ಮಾರುಕಟ್ಟೆಯೊಂದರಿಂದಲೇ  ಪ್ರತಿದಿನ 100 ರಿಂದ 120 ಟನ್‌ ನಷ್ಟು ತ್ಯಾಜ್ಯ ಸಂಗ್ರಹಣೆಯಾಗುತ್ತದೆ’ ಎಂದರು. ‘ನಗರದಲ್ಲಿ ಒಂದು ಬೃಹತ್‌ ಸಮ್ಮೇಳನವನ್ನು ಏರ್ಪಡಿಸಿ, ಅಲ್ಲಿ ಐಟಿ ಬಿಟಿ ಕಂಪೆನಿಗಳು ಸೇರಿದಂತೆ ದೊಡ್ಡ ದೊಡ್ಡ ಕಾಲೇಜುಗಳು, ಹೋಟೆಲ್‌­ಗಳನ್ನು ಆಹ್ವಾನಿಸ­ಲಾಗುವುದು. ಅವರಿಗೆ ಉದ್ಯಾನ, ಶಾಲೆ, ಆಸ್ಪತ್ರೆಗಳ ನಿರ್ವಹಣೆ­ಯ ಹೊಣೆಯನ್ನು ವಹಿಸಲಾಗುವುದು’ ಎಂದು ಹೇಳಿದರು.

‘ಪಬ್ಲಿಕ್‌ ಐ ಯೋಜನೆ ಜಾರಿ’

ಸಾರಿಗೆ ನಿರ್ವಹಣೆಗೆ ಪಬ್ಲಿಕ್‌ ಐ ಎಂಬ ಹೊಸ ಯೋಜನೆಯನ್ನು  ಜಾರಿಗೆ ತರಲಾಗುವುದು. ಯಾರಾದರೂ ಸಾರಿಗೆ ನಿಯಮವನ್ನು ಉಲ್ಲಂಘಿಸಿದಾಗ ನಾಗರಿಕರೆ ಮಾಹಿತಿ ನೀಡಿದರೆ, ಅದರ ಕುರಿತು ಕ್ರಮಗಳನ್ನು ಕೈಗೊಳ್ಳಲಾಗುವುದು

– ರಾಘವೇಂದ್ರ ಔರಾದ್‌ಕರ್‌,ನಗರ ಪೊಲೀಸ್‌ ಕಮಿಷನರ್‌.‘ನಾನೂ ಲಂಚ ನೀಡಿದ್ದೆ’


ಪ್ರಾಮಾಣಿಕವಾಗಿ ಹೇಳುವುದಾದರೆ, ನಾನು ಸಹ ನನ್ನ ಕೆಲಸಕ್ಕೆ ಲಂಚವನ್ನು ನೀಡಿದ್ದೆ. ಇಂದಿನ ವ್ಯವಸ್ಥೆ ಅಷ್ಟು ಹಾಳಾಗಿದೆ. ಹಣ ನೀಡದೆ ಯಾವ ಕೆಲಸವೂ ಆಗುವುದಿಲ್ಲ

– ಕಿರಣ್‌ ಮಜುಂದಾರ್‌ ಷಾ, ಮುಖ್ಯಸ್ಥೆ. ಬಿ–ಪ್ಯಾಕ್‌ ಸಂಘಟನೆ.

ಪ್ರತಿಕ್ರಿಯಿಸಿ (+)