ಶನಿವಾರ, ಏಪ್ರಿಲ್ 10, 2021
29 °C

ಡಿಸೆಂಬರ್ ಒಳಗೆ ಅಂತರರಾಷ್ಟ್ರೀಯ ಸ್ಥಾನಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ವಜ್ರಮಹೋತ್ಸವ ಆಚರಿಸುತ್ತಿರುವ ಮಂಗಳೂರು ವಿಮಾನ ನಿಲ್ದಾಣ ಇದೇ ಡಿಸೆಂಬರ್ ಒಳಗೆ ಅಂತರರಾಷ್ಟ್ರೀಯ ಸ್ಥಾನಮಾನ ಪಡೆಯಲಿದೆ. ಈ ಸಂಬಂಧ ಅಧಿಕೃತ ಘೋಷಣೆಗಾಗಿ ಅಗತ್ಯವಿರುವ ಎಲ್ಲ ಸಹಕಾರವನ್ನು ಕೇಂದ್ರ ಸರ್ಕಾರ ನೀಡಲು ಸಿದ್ಧವಿದೆ ಎಂದು ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯಿಲಿ ಭರವಸೆ ನೀಡಿದರು.ನಗರದ ಸೇಂಟ್ ಅಲೋಷಿಯಸ್ ಪ್ರೌಢಶಾಲಾ ಸಭಾಗೃಹದಲ್ಲಿ ಭಾನುವಾರ ಮಂಗಳೂರು ವಿಮಾನ ನಿಲ್ದಾಣ ವಜ್ರಮಹೋತ್ಸವ ಸಮಿತಿ ಹಾಗೂ ಕೆನರಾ ವಾಣಿಜ್ಯ ಕೈಗಾರಿಕಾ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಂತರರಾಷ್ಟ್ರೀಯ ಸ್ಥಾನಮಾನ ಘೋಷಣೆಗೆ ಇನ್ನೂ ಕೆಲ ಮೂಲ           ಸೌಕರ್ಯಗಳ ಕೆಲಸವಾಗಬೇಕಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದರು.ಬೆಂಗಳೂರು ವಿಮಾನ ನಿಲ್ದಾಣಕ್ಕೆ ಅಂತರರಾಷ್ಟ್ರೀಯ ಸ್ಥಾನಮಾನ ಅಧಿಕೃತವಾಗಿ ಸಿಕ್ಕಿದ್ದು ಅದು ದೇವನಹಳ್ಳಿಗೆ ಸ್ಥಳಾಂತರಗೊಂಡ ಮೇಲೆ. ಮಂಗಳೂರು ವಿಮಾನ ನಿಲ್ದಾಣಕ್ಕೂ ಈ ಸ್ಥಾನಮಾನ ಸಿಕ್ಕಲು ಇನ್ನೂ ಕನಿಷ್ಠ ಒಂದು ಸಾವಿರ ಅಡಿ ರನ್‌ವೇ ವಿಸ್ತರಣೆ ಆಗಬೇಕಾಗಿದೆ. ಆದರೆ ಈ ವಿಷಯದಲ್ಲಿ ಮುಖಂಡರಲ್ಲಿ ಸಹಮತ ಬೇಕಾಗಿದ್ದು ಅಭಿವೃದ್ಧಿಗಾಗಿ ಭಿನ್ನಮತ ಮರೆಯಬೇಕು ಎಂದು ವೇದಿಕೆಯಲ್ಲಿದ್ದ ಬಿಜೆಪಿಯ ಸಂಸದ ನಳಿನ್ ಕುಮಾರ್ ಅವರನ್ನು ಚುಚ್ಚಿದರು.ಉತ್ತಮ ಭವಿಷ್ಯತ್ತಿಗಾಗಿ ಸವಾಲುಗಳನ್ನು ಎದುರಿಸುವುದು ಅನಿವಾರ್ಯ. ಆ ಕಾಲದಲ್ಲಿ ಯು. ಶ್ರೀನಿವಾಸ ಮಲ್ಯ ಅಭಿವೃದ್ಧಿ ಚಿಂತನೆ ನಡೆಸದಿದ್ದರೆ ಈಗಿನ ವಿಮಾನ ನಿಲ್ದಾಣ ಇಲ್ಲಿರುತ್ತಿರಲಿಲ್ಲ. ಮಂಗಳೂರು ವಿಮಾನ ನಿಲ್ದಾಣಕ್ಕೆ ಮಲ್ಯ ಅವರ ಹೆಸರು ನಾಮಕರಣ ಮಾಡಲು ತಾವು ಪ್ರಾಮಾಣಿಕ ಯತ್ನ ನಡೆಸುವುದಾಗಿ ಅವರು ತಿಳಿಸಿದರು.ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಂಆರ್‌ಪಿಎಲ್, ಎಸ್‌ಇಜೆಡ್‌ಗಳು ಅಗತ್ಯ. ಆದರೆ ಈ ವಿಷಯದಲ್ಲಿ ಕೆಲವರು ಅಪಪ್ರಚಾರ ನಡೆಸುತ್ತಿದ್ದು ಇದು ಉತ್ತಮ ಬೆಳವಣಿಗೆ ಅಲ್ಲ. ತಾವು ಆಯ್ಕೆಯಾಗಿದ್ದು ಚಿಕ್ಕಬಳ್ಳಾಪುರದಿಂದ. ಆದರೂ ಈ ಭಾಗದ ಅಭಿವೃದ್ಧಿಗೆ ತಾವು ಸದಾ ದುಡಿಯುವುದಾಗಿ ತಿಳಿಸಿದರು.ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ವಿಮಾನ ನಿಲ್ದಾಣಕ್ಕೆ ಮಲ್ಯರ ಹೆಸರು ಇಡಲು ತಮ್ಮದೇನೂ ಅಭ್ಯಂತರ ಇಲ್ಲ. ಆದರೆ ರಾಣಿ ಅಬ್ಬಕ್ಕ ಅವಳ ಹೆಸರೂ ಸಹ ಕೆಲವರು ಪ್ರಸ್ತಾಪಿಸುತ್ತಿದ್ದಾರೆ. ಈ ಭಾಗದ ಸರಕು ಸಾಗಾಟ ಬಲಪಡಿಸಲು ಕಾರ್ಗೋ ನಿಲ್ದಾಣ ಅಗತ್ಯ ಎಂದರು.ದಕ್ಷಿಣ ಕನ್ನಡದವರು ಅಭಿವೃದ್ಧಿಯನ್ನು ಇಲ್ಲವೆ ಉದ್ಯಮಗಳನ್ನು ಯಾವತ್ತೂ ವಿರೋಧಿಸುವುದಿಲ್ಲ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಪರಿಸರ ಹಾಳುಗೆಡವಿ ಸ್ಥಳೀಯ ಸಂಸ್ಕೃತಿ ನಾಶಕ್ಕೆ ಯತ್ನಿಸಿದರೆ ಸುಮ್ಮನಿರುವುದಿಲ್ಲ. ಉದ್ಯೋಗ ನೀಡುವ ಸುಳ್ಳು ಭರವಸೆಯನ್ನು ಪ್ರತಿಭಟಿಸಬೇಕಾಗುತ್ತದೆ ಎಂದು ಹೇಳುವ ಮೂಲಕ ಮೊಯಿಲಿ ಈ ಕುರಿತು ಮಾಡಿದ ಟೀಕೆಗೆ ತಿರುಗೇಟು ನೀಡಿದರು.ವಿಧಾನಸಭೆ ಉಪ ಸಭಾಧ್ಯಕ್ಷ ಯೋಗೀಶ್ ಭಟ್, ವಿಮಾನ ನಿಲ್ದಾಣಕ್ಕೆ ಮಲ್ಯರ ಹೆಸರು ಇಡಲು ವಾರದೊಳಗೆ ಸದನದಲ್ಲಿ ನಿರ್ಣಯವೊಂದನ್ನು ಕೈಗೊಳ್ಳಲಾಗುವುದು, ಡಿಸೆಂಬರ್ ಒಳಗೆ ವಿಸ್ತರಿತ ರನ್‌ವೇ ಕಾಮಗಾರಿ ಮುಗಿಸಲಾಗುವುದು ಎಂದರು. 13 ನದಿಗಳ ನೀರು ಸಮುದ್ರಕ್ಕೆ ಸೇರಿ ವ್ಯರ್ಥವಾಗುವುದನ್ನು ತಡೆಯಲು ಪಶ್ಚಿಮವಾಹಿನಿ ಯೋಜನೆ ರೂಪಿಸಿದ್ದು ಈ ಬಗ್ಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಭಟ್ ಸ್ಪಷ್ಟಪಡಿಸಿದರು.ವಿಮಾನ ನಿಲ್ದಾಣ ನಿರ್ದೇಶಕ ಎಂ.ಆರ್. ವಾಸುದೇವ್ ಮಾತನಾಡಿ, 2002ರಲ್ಲಿ ನಿಲ್ದಾಣದ ಆದಾಯ ರೂ 4 ಕೋಟಿ ಆದಾಯ ಇದ್ದು ಈಗ ರೂ 36 ಕೋಟಿಗೆ ಹೆಚ್ಚಿದೆ ಎಂದರು.

ಕೆಸಿಸಿಐ ಅಧ್ಯಕ್ಷ ಜಿ.ಜಿ. ಮೋಹನದಾಸ್ ಪ್ರಭು ವಿವಿಧ ಬೇಡಿಕೆಗಳ ಮನವಿಯನ್ನು ಈ ಸಂದರ್ಭದಲ್ಲಿ ಸಚಿವ ಮೊಯಿಲಿ ಅವರಿಗೆ ಸಲ್ಲಿಸಿದರು. ವಿಮಾನ ನಿಲ್ದಾಣ ವಜ್ರಮಹೋತ್ಸವ ಸಮಿತಿ ಸಂಯೋಜಕ ತೇಜೋಮಯ, ಕಾರ್ಪೋರೇಷನ್ ಬ್ಯಾಂಕ್ ಅಧ್ಯಕ್ಷ ರಾಮನಾಥ ಪ್ರದೀಪ್, ಶಾಸಕ ಬಿ. ರಮಾನಥ ರೈ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.