ಭಾನುವಾರ, ಮೇ 16, 2021
26 °C

ಡೀಸೆಲ್ ಕಾರಿಗೆ ಶುಕ್ರದೆಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಂದೊಂದು ಕಾಲವಿತ್ತು. ಡೀಸೆಲ್ ಕಾರುಗಳನ್ನು ಬಾಡಿಗೆಗೆ ಒಯ್ಯಲೂ ಜನ ಇಷ್ಟಪಡುತ್ತಿರಲಿಲ್ಲ. ವಿಪರೀತ ಶಬ್ದ, ಕಡಿಮೆ ಪಿಕ್‌ಅಪ್, ಹೆಚ್ಚು ಹೊಗೆ, ಪೆಟ್ರೋಲ್ ಎಂಜಿನ್‌ಗೆ ಹೋಲಿಸಿದರೆ ದುಬಾರಿ ಎಂಬ ಆರೋಪಗಳು ಡೀಸೆಲ್ ಕಾರಿನ ತಲೆ ಮೇಲಿತ್ತು. ಬಾಡಿಗೆಗೆ ಟ್ಯಾಕ್ಸಿ ಓಡಿಸುವವರು ಮಾತ್ರ ಡೀಸೆಲ್ ಎಂಜಿನ್ ಕಾರುಗಳನ್ನು ಹೊಂದಿರುತ್ತಿದ್ದರು.ಆದರೆ, ಇದೀಗ ಜನರ ಮನಸ್ಥಿತಿ ಬದಲಾಗಿದೆ. ಹಣದುಬ್ಬರ ನಿಯಂತ್ರಿಸಲೆಂದು ಭಾರತೀಯ ರಿಸರ್ವ್ ಬ್ಯಾಂಕ್ ವಾಹನಗಳ ಸಾಲದ ಮೇಲಿನ ಬಡ್ಡಿ ಹೆಚ್ಚಿಸಲು ಸೂಚಿಸಿರುವುದು ಮತ್ತು ಪೆಟ್ರೋಲ್ ಬೆಲೆಯ ನಾಗಾಲೋಟದಿಂದ ಡೀಸೆಲ್ ಕಾರುಗಳು ಜನ ಮೆಚ್ಚುಗೆಗೆ ಪಾತ್ರವಾಗುತ್ತಿವೆ.ಪಿಕ್‌ಅಪ್- ಹೆಚ್ಚುಹೊಗೆ ಮತ್ತು ವಿಪರೀತ ಶಬ್ದ ಮಾಲಿನ್ಯದ ಆರೋಪಗಳು ತಂತ್ರಜ್ಞಾನ ಸುಧಾರಣೆಯೊಂದಿಗೆ ನಿವಾರಣೆಯಾಗಿದೆ.ಶೇ 70ರಷ್ಟು ಸಣ್ಣ ಕಾರುಗಳೇ ಇರುವ ದೇಶದ ಒಟ್ಟು ಕಾರು ಮಾರುಕಟ್ಟೆಯಲ್ಲಿ ಶೇ 20ರಷ್ಟು ಡೀಸೆಲ್ ಎಂಜಿನ್ ಕಾರುಗಳೇ ರಾರಾಜಿಸುತ್ತಿವೆ. ಬಹುತೇಕ ಎಲ್ಲ ಕಾರು ತಯಾರಿಕಾ ಸಂಸ್ಥೆಗಳು ಜನಪ್ರಿಯ ಡೀಸೆಲ್ ಎಂಜಿನ್ ಕಾರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ.ಭಾರತದಲ್ಲಿ ಮಾತ್ರವಲ್ಲ ಯೂರೋಪಿಯನ್ ಮಾರುಕಟ್ಟೆಯಲ್ಲೂ ಡೀಸೆಲ್ ಎಂಜಿನ್‌ಗಳು ಜನಪ್ರಿಯವಾಗುತ್ತಿವೆ ಎನ್ನುತ್ತಾರೆ ಜನರಲ್ ಮೋಟಾರ್ಸ್ ಇಂಡಿಯಾದ ನಿರ್ದೇಶಕ ವಿಕಾಸ್ ಜೈನ್.ಕಾರುಗಳನ್ನು ಕೊಳ್ಳುವಾಗ ಗ್ರಾಹಕರು ಅದರ ರೀಸೇಲ್ ವ್ಯಾಲ್ಯೂವನ್ನೂ (ಮರು ಮಾರಾಟ ಮೌಲ್ಯ)  ಗಮನಿಸುವುದು ವಾಡಿಕೆ. ಈ ದೃಷ್ಟಿಯಿಂದ ಯೋಚಿಸಿದರೂ ಡೀಸೆಲ್ ಕಾರುಗಳು ಮುಂಚೂಣಿಯಲ್ಲಿವೆ.`ಡೀಸೆಲ್ ಎಂಜಿನ್ ಇರುವ ಸೆಕೆಂಡ್ ಹ್ಯಾಂಡ್ ಕಾರುಗಳ ಬೇಡಿಕೆ ಕೇವಲ ಒಂದು ವರ್ಷದಲ್ಲಿ ಶೇ 20ರಷ್ಟು ಹೆಚ್ಚಿದೆ. ಇಂತಹ ಕಾರುಗಳನ್ನು ಖರೀದಿಸಲು ಗ್ರಾಹಕರು ತುದಿಗಾಲಲ್ಲಿ ನಿಂತಿದ್ದಾರೆ.ಆದರೆ, ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಗೆ ಡೀಸೆಲ್ ಎಂಜಿನ್ ಕಾರುಗಳೇ ಬರುತ್ತಿಲ್ಲ. ಬೇಡಿಕೆ- ಪೂರೈಕೆಯ ಅಂತರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.ಮುಂದಿನ ದಿನಗಳಲ್ಲಿ ಪೆಟ್ರೋಲ್ ಎಂಜಿನ್ ಕಾರುಗಳಿಗಿಂತ ಡೀಸೆಲ್ ಎಂಜಿನ್ ಕಾರುಗಳಿಗೇ ಹೆಚ್ಚು ಬೆಲೆ ಬರಬಹುದು~ ಎಂಬ ವಿಶ್ಲೇಷಣೆ ಮುಂದಿಡುತ್ತಾರೆ ಮಹೀಂದ್ರಾ ಫರ್ಸ್ಟ್ ಚಾಯ್ಸ ವೀಲ್ಸ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಸಹ.ಕೇವಲ ಒಂದು ವರ್ಷದಲ್ಲಿ ಪೆಟ್ರೋಲ್ ದರ ಶೇ 34ರಷ್ಟು ಹೆಚ್ಚಿದೆ. ಹೀಗಾಗಿ ಅಪರೂಪಕ್ಕೊಮ್ಮೆ ಕಾರು ಬಳಸುವವರು ಮಾತ್ರ ಪೆಟ್ರೋಲ್ ಕಾರಿನತ್ತ ಗಮನ ಹರಿಸುತ್ತಿದ್ದಾರೆ. ಉಳಿದವರ ಚಿತ್ತ ಡೀಸೆಲ್ ಕಾರಿನತ್ತ ಹರಿದಿದೆ.ತಯಾರಿಕೆ ಖೋತಾ

ಪೆಟ್ರೋಲ್ ದರ ಮತ್ತು ವಾಹನ ಸಾಲದ ಮೇಲಿನ ಬಡ್ಡಿ ಏರಿಕೆಯ ಜತೆ ಜತೆಗೆ ಪೆಟ್ರೋಲ್ ಕಾರು ಮಾರಾಟ ಪ್ರಮಾಣವೂ ಕುಸಿಯುತ್ತಿದೆ.ಭಾರತದ ವಾಹನ ಮಾರುಕಟ್ಟೆಯ ಸಿಂಹಪಾಲು ಪಡೆದಿರುವ ಮಾರುತಿ ಸುಜುಕಿ ಮತ್ತು ಟಾಟಾ ಮೋಟಾರ್ಸ್  ಈಗಾಗಲೇ ತಯಾರಿಕೆ ತಗ್ಗಿಸುವ ಪ್ರಕಟಣೆ ಹೊರಡಿಸಿವೆ. ಭಾರತದಲ್ಲಿ ವಹಿವಾಟು ನಡೆಸುತ್ತಿರುವ ಅಮೆರಿಕ ಮೂಲದ ಫೋರ್ಡ್ ಮೋಟಾರ್ಸ್ ಸಹ ಇದೇ ಚಿಂತನೆಯಲ್ಲಿದೆ.`ತಯಾರಾದ ಕಾರು ಮಾರಾಟವಾಗದಿದ್ದರೆ ಗೋದಾಮು ತುಂಬಿ ಹೋಗುತ್ತವೆ. ಅವುಗಳ ಮೇಲೆ ಹೂಡಿರುವ ಬಂಡವಾಳದ ಪ್ರತಿಫಲ ಮೌಲ್ಯ ಕಡಿಮೆಯಾಗುತ್ತದೆ.

ಉತ್ಪಾದನೆಯನ್ನೇ ತಗ್ಗಿಸಿದರೆ ಬಂಡವಾಳ ಹೂಡಿಕೆಯ ಮಿತಿ ಮತ್ತು ಪ್ರತಿಫಲದ ಅನುಪಾತ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ~ ಎನ್ನುವುದು ಫೋರ್ಡ್ ಇಂಡಿಯಾದ ಅಧ್ಯಕ್ಷ ಮೈಕೆಲ್ ಬೊನ್ಹಮ್ ಅವರ ಅಭಿಪ್ರಾಯ.ಮುಂದೂಡಿಕೆ


ಹೊಸ ಕಾರು ಕೊಳ್ಳುವ ಕನಸು ಕಂಡಿದ್ದವರು ಇದೀಗ ತಮ್ಮ ಕನಸನ್ನು ಮುಂದೂಡುವ ನಿರ್ಧಾರಕ್ಕೆ ಬಂದಿದ್ದಾರೆ. ಹಳೆಯ ಕಾರು ಮಾರಿ ಹೊಸ ಕಾರು ಖರೀದಿಸುವ ಉಮೇದಿನಲ್ಲಿದ್ದವರು ಹಳೆ ಕಾರನ್ನು ಉಳಿಸಿಕೊಳ್ಳಲು ಬದ್ಧರಾಗುತ್ತಿದ್ದಾರೆ.ತುಮಕೂರಿನ  ರಾಜ್‌ಕುಮಾರ್ `ಮಾರುತಿ ಎಸ್‌ಎಕ್ಸ್4~ ಪೆಟ್ರೋಲ್ ಕಾರ್ ಖರೀದಿಸುವ ಉತ್ಸಾಹದಲ್ಲಿದ್ದರು. ಇದಕ್ಕಾಗಿ ಸಾಕಷ್ಟು ಹಣವನ್ನೂ ಹಲವು ವರ್ಷಗಳಿಂದ ಕೂಡಿಟ್ಟಿದ್ದರು.ಆದರೆ, ವಾಹನ ಸಾಲದ ಬಡ್ಡಿ ಮತ್ತು ದುಬಾರಿ ಪೆಟ್ರೋಲ್ ಲೆಕ್ಕಾಚಾರದಿಂದ ಕಂಗಾಲಾಗಿ ಡೀಸೆಲ್ ಕಾರ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ.ಆಗರ್ಭ ಶ್ರೀಮಂತ ಶ್ರೀಕಾಂತ್ ಆಪ್ಟೆಗೆ ಹಲವು ವರ್ಷಗಳಿಂದ `ಬಿಎಂಡಬ್ಲ್ಯು~ ಪೆಟ್ರೋಲ್ ಕಾರ್ ಖರೀದಿ ಕನಸಿತ್ತು. ಆದರೆ, ಇದೀಗ ತಮ್ಮ ಹಳೆಯ `ಮರ್ಸಿಡಿಸ್ ಸಿ ಕ್ಲಾಸ್~ ಡೀಸೆಲ್ ಕಾರ್ ಉಳಿಸಿಕೊಳ್ಳುವುದೇ ಜಾಣತನ ಎಂದು ಗೆಳೆಯರ ಮುಂದೆ ಕಾಫಿ ಹೀರುತ್ತಾ ಪ್ರವಚನ ಆರಂಭಿಸಿದ್ದಾರೆ.ಇಂಧನ ದರ ಮತ್ತು ವಾಹನ ಸಾಲದ ಬಡ್ಡಿ ಒಂದೇ ಸಮನೆ ಏರುಗತಿಯಲ್ಲಿ ಇರುವುದರಿಂದ ಒಟ್ಟಾರೆ ಆಟೊಮೊಬೈಲ್ ಉದ್ಯಮ ತಲ್ಲಣಗೊಂಡಿದೆ. ಮೇಲ್ನೋಟಕ್ಕೆ ಡೀಸೆಲ್ ಎಂಜಿನ್ ಕಾರ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ಗೋಚರಿಸುತ್ತದೆ. ಆದರೆ, ಪೆಟ್ರೋಲ್- ಡೀಸೆಲ್ ಪೈಕಿ ನಿಮಗೆ ಯಾವುದು ಹಿತ? ಎಂಬ ಪ್ರಶ್ನೆಗೆ ಮಾತ್ರ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ.ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್‌ಗೆ   ರೂ. 71.36 ಮತ್ತು ಡೀಸೆಲ್‌ಗೆ ರೂ. 45.38 ಇದೆ. ಪೆಟ್ರೊಲ್‌ಗೆ ಹೋಲಿಸಿದರೆ ಡೀಸೆಲ್ ದರ ರೂ. 26ರಷ್ಟು ಕಡಿಮೆ.

 

ಇದೊಂದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಡೀಸೆಲ್ ಕಾರ್ ಖರೀದಿಸುವ ಬಗ್ಗೆ ಎರಡೆರಡು ಬಾರಿ ಯೋಚನೆ ಮಾಡಬೇಕು. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳ ತಂತ್ರಜ್ಞಾನದಲ್ಲಿಯೇ ಭಿನ್ನತೆ ಇದೆ.ಡೀಸೆಲ್ ಎಂಜಿನ್‌ನ ವಿನ್ಯಾಸ ಮತ್ತು ಕಾರ್ಯನಿರ್ವಹಣೆ ಪೆಟ್ರೋಲ್ ಎಂಜಿನ್‌ಗಿಂತ ಹೆಚ್ಚು ಸಂಕೀರ್ಣ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಡೀಸೆಲ್ ಎಂಜಿನ್ ಕಾರಿನ ಬೆಲೆಯು ಅದೇ ಸಾಮರ್ಥ್ಯದ ಸಹವರ್ತಿ ಪೆಟ್ರೋಲ್ ಎಂಜಿನ್ ಕಾರಿನ ಬೆಲೆಗಿಂತ ರೂ.75 ಸಾವಿರದಿಂದ ರೂ. 1 ಲಕ್ಷದವರೆಗೆ ಹೆಚ್ಚಿರುತ್ತದೆ.ಪ್ರತಿ ಕಿ.ಮೀಗೆ ವ್ಯಯವಾಗುವ ಇಂಧನ ಮತ್ತು ನಿರ್ವಹಣೆ ಖರ್ಚು ಕಡಿಮೆ ಎಂಬ ಏಕೈಕ ಕಾರಣಕ್ಕೆ ಡೀಸೆಲ್ ಕಾರು ಖರೀದಿಸುವ ಮೊದಲು ಅನೇಕ ಸಂಗತಿಗಳನ್ನು ಗಮನದಲ್ಲಿ ಇರಿಸಿಕೊಳ್ಳುವುದು ಒಳಿತು.* ರೀಸೇಲ್ ದೃಷ್ಟಿಯಿಂದ ಡೀಸೆಲ್ ಕಾರ್ ಒಳ್ಳೆಯ ಆಯ್ಕೆಯಲ್ಲ.* ಡೀಸೆಲ್ ಕಾರ್‌ನ ವಿಮಾ ವೆಚ್ಚ ಪೆಟ್ರೋಲ್ ಕಾರ್‌ಗಿಂತ ಹೆಚ್ಚು.* ಬ್ಯಾಂಕ್‌ಗಳು ಡೀಸೆಲ್ ಕಾರ್ ಖರೀದಿಗೆ ಸಾಲ ನೀಡುವಾಗ ಹೆಚ್ಚು ಬಡ್ಡಿ ನಿಗದಿಪಡಿಸುತ್ತವೆ.* ಡೀಸೆಲ್ ಕಾರ್‌ನ ದರ ಪೆಟ್ರೋಲ್ ಕಾರ್ ದರಕ್ಕಿಂತ ಹೆಚ್ಚು.* ನಿಯಮಿತ ಕಾರ್ ಬಳಕೆ ಇದ್ದರೆ ಮಾತ್ರ (ದಿನಕ್ಕೆ 30 ಕಿಮೀಗೂ ಹೆಚ್ಚು) ಡೀಸೆಲ್ ಕಾರ್ ಲಾಭದಾಯಕ.ಇಷ್ಟೆಲ್ಲಾ ನ್ಯೂನತೆಗಳಿದ್ದರೂ ದೀರ್ಘಾವಧಿಯಲ್ಲಿ ಅಂದರೆ ಕನಿಷ್ಠ ಐದು ವರ್ಷದ ನಂತರ ಡೀಸೆಲ್ ಕಾರ್ ಲಾಭದಾಯಕವೆನಿಸುತ್ತದೆ. ಈ ಅವಧಿಯಲ್ಲಿ ವಿಮಾ ಕಂತಿನ ಮೊತ್ತ ಕಡಿಮೆಯಾಗುತ್ತದೆ. ಜತೆಗೆ ಇಷ್ಟು ದಿನದ ಇಂಧನ ವೆಚ್ಚದಲ್ಲಿಯೂ ಪೆಟ್ರೋಲ್‌ಗೆ ಹೋಲಿಸಿದರೆ (ಪ್ರತಿದಿನ ಕನಿಷ್ಠ 30 ಕಿಮೀ ಓಡಿದ್ದರೆ) ಸಾಕಷ್ಟು ಉಳಿತಾಯವಾಗಿರುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.