ಶುಕ್ರವಾರ, ಮೇ 27, 2022
31 °C

ಡೆಂಗೆ-ಚಿಕುನ್ ಗುನ್ಯಾಕ್ಕೆ ಸಮರ್ಪಕ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಡೆಂಗೆ, ಚಿಕುನ್ ಗುನ್ಯಾ ರೋಗ ಲಕ್ಷಣಕ್ಕೆ ತುತ್ತಾದಾಗ ರೋಗಿಗೆ `ಕಾಂಪೊನೆಂಟ್ ಥೆರಪಿ~( ರಕ್ತದಲ್ಲಿನ  ಕೆಂಪು ರಕ್ತ ಕಣ, ಪ್ಲಾಸ್ಮಾ ಹಾಗೂ ಪ್ಲೆಟ್‌ಲೆಟ್( ಪ್ಲೇಟ್‌ಲೆಟ್) ಬೇರ್ಪಡಿಸುವ ವ್ಯವಸ್ಥೆ) ವ್ಯವಸ್ಥೆ ಜಿಲ್ಲೆಯಲ್ಲಿ ಈವರೆಗೂ ಇಲ್ಲದೇ ಇದ್ದುದರಿಂದ ಸಾವನ್ನಪ್ಪಿದವರೇ ಹೆಚ್ಚು!ಜಿಲ್ಲಾ ಕೇಂದ್ರವಾದ ರಾಯಚೂರು, ತಾಲ್ಲೂಕು ಕೇಂದ್ರಗಳಾದ ಸಿಂಧನೂರು, ಲಿಂಗಸುಗೂರ, ಮಾನ್ವಿ, ದೇವದುರ್ಗದಲ್ಲಿ ತಜ್ಞ ವೈದ್ಯರು ಡೆಂಗೆ ಮತ್ತು ಚಿಕುನ್ ಗುನ್ಯಾ ರೋಗಕ್ಕೆ ಪ್ರಾಥಮಿಕ ಹಂತದ ಚಿಕಿತ್ಸೆ ನೀಡಿದರೂ ಬದುಕುವುದು ಕಷ್ಟ ಎಂಬ ಸ್ಥಿತಿ ಇರುತ್ತಿದ್ದರಿಂದ `ಕಾಂಪೊನೆಂಟ್ ಥೆರಪಿ~ ವ್ಯವಸ್ಥೆ ಇರುವ ಬಳ್ಳಾರಿ, ಹೈದರಾಬಾದ್, ಬೆಂಗಳೂರಿಗೆ ತೆರಳಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಪಡೆಯುತ್ತಾ ಬಂದಿದ್ದಾರೆ.ಈ ಸಮಸ್ಯೆ ಪರಿಹಾರಕ್ಕೆ ನಗರದ ನವೋದಯ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರವು ಸುಮಾರು ಒಂದು ಕೋಟಿಗೂ ಹೆಚ್ಚು ಮೊತ್ತದಲ್ಲಿ `ಕಾಂಪೊನೆಂಟ್ ಥೆರಪಿ~ ಘಟಕವನ್ನು ಸಂಸ್ಥೆಯ ರಕ್ತ ಭಂಡಾರದಲ್ಲಿ  ಸ್ಥಾಪನೆ ಮಾಡಿದೆ. ಯಂತ್ರಗಳಿಗೇ 30 ಲಕ್ಷ ವೆಚ್ಚ ಮಾಡಿದೆ. ಜಿಲ್ಲೆಯಲ್ಲಿ ಪ್ರಪ್ರಥಮ ಕಾಂಪೊನೆಂಟ್ ಥೆರಪಿ ಘಟಕ ಇದಾಗಿದೆ.ಸರ್ಕಾರಿ ವೈದ್ಯಕೀಯ ಕಾಲೇಜು, ಐಎಂಎ ರಕ್ತ ಭಂಡಾರದಲ್ಲಿ ಕಾಂಪೊನೆಂಟ್ ಥೆರಪಿ ಘಟಕ ಸ್ಥಾಪನೆ ಪ್ರಕ್ರಿಯೆ ಇನ್ನೂ ನಡೆದಿದೆ.ಕಾಂಪೊನೆಂಟ್ ಥೆರಪಿ ಘಟಕ ಸ್ಥಾಪನೆ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಪ್ರಸ್ತಾಪಿಸಿದಾಗ ಸ್ವಯಂ ಪ್ರೇರಣೆಯಿಂದ ನವೋದಯ ವೈದ್ಯಕೀಯ ಕಾಲೇಜು ಮುಂದೆ ಬಂದು  ಕೇಂದ್ರ ಆರೋಗ್ಯ ಇಲಾಖೆ, ರಾಜ್ಯ ಸರ್ಕಾರದ ತಜ್ಞ ವೈದ್ಯರ ತಂಡದ ಶಿಫಾರಸ್ಸು, ನಿಯಮಾವಳಿಳನ್ವಯ ಕಾಂಪೊನೆಂಟ್ ಥೆರಪಿ ಘಟಕ ಸ್ಥಾಪನೆ ಮಾಡಿದ್ದು, 2012- ಮೇ 11ರಿಂದ ಈ ಘಟಕ ಕಾರ್ಯ ಆರಂಭಿಸಿದೆ. ಜಿಲ್ಲೆಯ ಜನತೆ ಹೈದರಾಬಾದ್, ಬೆಂಗಳೂರಿಗೆ ತೆರಳದೇ ನವೋದಯ ಆಸ್ಪತ್ರೆಯಲ್ಲಿನ ಕಾಂಪೊನೆಂಟ್ ಥೆರಪಿ ಘಟಕದ ಪ್ರಯೋಜನ ಪಡೆಯಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ವೆಂಕಟೇಶ ಅವರು ಮನವಿ ಮಾಡಿದ್ದಾರೆ.ಕಾಂಪೊನೆಂಟ್ ಥೆರಫಿ ಘಟಕದಲ್ಲಿನ ಉಪಕರಣಗಳು: ರಕ್ತದಲ್ಲಿನ ಕೆಂಪು ರಕ್ತ ಕಣ, ಪ್ಲಾಸ್ಮಾ ಮತ್ತು ಬಿಳಿ ರಕ್ತ ಕಣ ಬೇರ್ಪಡಿಸುವ ಯಂತ್ರ ಸೆಂಟ್ರಿಫಿಗ್ಯುಲೇಶನ್, ಬಿಳಿ ರಕ್ತ ಕಣ( ಪ್ಲೆಟ್‌ಲೆಟ್) ಸಂಗ್ರಹಿಸಿಡುವ ಪ್ಲೆಟ್‌ಲೆಟ್ ಇನ್‌ಕ್ಯುಬೇಟರ್,  ಮೂರು ರೀತಿ ಬೇರ್ಪಟ್ಟ ರಕ್ತದ ಬ್ಯಾಗ್‌ಗಳನ್ನು ಬ್ಯಾಕ್ಟಿರೀಯಾ ಮುಕ್ತಗೊಳಿಸುವ ಶುದ್ಧೀಕರಣ ಘಟಕ ಲ್ಯಾಮಿನೇರ್ ಏರ್ ಫ್ಲೋ ಯಂತ್ರ, ರಕ್ತದಲ್ಲಿನ ಪ್ಲಾಸ್ಮಾ ಬ್ಯಾಗ್ ಸಂಗ್ರಹಣ ಯಂತ್ರ, ಸಾಮಾನ್ಯ ರಕ್ತ ಸಂಗ್ರಹಕ್ಕೆ ಶಿಥಲೀಕರಣ( ಫ್ರೀಜರ್) ಯಂತ್ರ ಇವೆ.ರಕ್ತದಾನಿಗಳ ಕೊಠಡಿ, ರಕ್ತ ದಾನ ಮಾಡಿದ ಬಳಿಕ ಸುಧಾರಿಸಿಕೊಳ್ಳಲು ಪ್ರತ್ಯೇಕ ಕೊಠಡಿ, ಕಾಂಪೊನೆಂಟ್ ಥೆರಫಿ ಯಂತ್ರಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಇದೆ. ಕಾಂಪೊನೆಂಟ್ ಥೆರಪಿ ಘಟಕದ ಯಂತ್ರಗಳಿಗೆ ದಿನದ 24 ತಾಸೂ ವಿದ್ಯುತ್ ಅವಶ್ಯ. ಈ ವ್ಯವಸ್ಥೆಯನ್ನೂ ಘಟಕವು ಹೊಂದಿದೆ. ಒಂದು ಕ್ಷಣ ವಿದ್ಯುತ್ ಹೋದರೆ ರಕ್ತದ ಕಣ ಬೇರ್ಪಡಿಸುವ ಯಂತ್ರ `ಸೆಂಟ್ರಿಪ್ಯೂಗೇಶನ್~ ಯಂತ್ರದ ಕಾರ್ಯ ಸ್ಥಗಿತಗೊಳ್ಳಲು ಅರ್ಧ ಗಂಟೆ ಬೇಕಾಗುತ್ತದೆ! ಈ ಯಂತ್ರದ ಕಾರ್ಯ ವಿಧಾನವೇ ಆ ರೀತಿಯದ್ದು ಎಂದು ಕಾಂಪೊನೆಂಟ್ ಥೆರಪಿ ಘಟಕದ ಮುಖ್ಯಸ್ಥರಾದ ಡಾ.ಸಾಗರ್, ತಜ್ಞರಾದ ನಾರಾಯಣ `ಪ್ರಜಾವಾಣಿ~ಗೆ ತಿಳಿಸಿದರು.ದಾನಿಗಳಿಂದ 450 ಎಂ.ಎಲ್ ರಕ್ತ ಪಡೆದರೆ ರಕ್ತದ ಕಣ ಬೇರ್ಪಡಿಸಿದ ಬಳಿಕ ಅದರಲ್ಲಿ 200 ಎಂ.ಎಲ್ ಕೆಂಪು ರಕ್ತ ಕಣ, 150 ಎಂ.ಎಲ್ ಪ್ಲಾಸ್ಮಾ, 50-60ರಷ್ಟು ಪ್ಲೆಟ್‌ಲೆಟ್ ಇರುತ್ತದೆ. ಡೆಂಗೆ ಮತ್ತು ಚಿಕುನ್ ಗುನ್ಯಾ ರೋಗಿಗಳಿಗೆ ವೈದ್ಯರ ಶಿಫಾರಸ್ಸಿನಂತೆ ಪ್ಲೆಟ್‌ಲೆಟ್‌ಗಳನ್ನು ಸಂಬಂಧಪಟ್ಟ ರೋಗಿ ದೇಹಕ್ಕೆ ಹಾಕಲಾಗುತ್ತದೆ. ಪ್ಲಾಸ್ಮಾ ರಕ್ತದ ಕಣಗಳನ್ನು ಹಿಮೊಫಿಲಿಯಾ, ತೀವ್ರ ರಕ್ತಸ್ರಾವದಿಂದ ಬಳಲುವ ರೋಗಿಗಳಿಗೆ ತಜ್ಞ ವೈದ್ಯರ ಶಿಫಾರಸಿನಂತೆ ಪೂರೈಸಲಾಗುತ್ತದೆ ಎಂದು ಹೇಳುತ್ತಾರೆ.ಪ್ಲೇಟ್‌ಲೆಟ್ ಆಯುಷ್ಯ 5 ದಿನ ಮಾತ್ರ: ಪ್ಲೆಟ್‌ಲೆಟ್ ಇನ್‌ಕ್ಯುಬೇಟರ್ ಯಂತ್ರದಲ್ಲಿ ಪ್ಲೆಟ್‌ಲೆಟ್‌ಗಳನ್ನು 5 ಮಾತ್ರ ಸಂಗ್ರಹಿಸಿಡಲು ಸಾಧ್ಯ. 5 ದಿನಗಳಾದ ಬಳಿಕ ಅದರ ಆಯುಷ್ಯ ಮುಗಿದಂತೆ. ಅದು ಉಪಯೋಗಕ್ಕೆ ಬರುವುದಿಲ್ಲ. ಡೆಂಗೆ ರೋಗಕ್ಕೆ ವ್ಯಕ್ತಿ ತುತ್ತಾದಾಗ ತುರ್ತಾಗಿ ಪ್ಲೇಟ್‌ಲೆಟ್ ಲಭ್ಯ ಇದ್ದರೆ ದೊರಕಿಸಬಹುದು. ಪ್ಲೆಟ್ ಇದ್ದೂ ಪಡೆಯುವವರು ಇಲ್ಲದೇ ಇದ್ದರೆ 5 ದಿನಕ್ಕೆ ಅದು ನಿರುಪಯುಕ್ತ. ಹೀಗಾಗಿ  ರಕ್ತದ ಕಣಗಳಿಂದ ನಿರಂತರ ಪ್ಲೇಟ್‌ಲೆಟ್ ಬೇರ್ಪಡಿಸಿ ಪ್ಲೆಟ್‌ಲೆಟ್ ಇನ್‌ಕ್ಯುಬೇಟರ್‌ನಲ್ಲಿ ಇಡುವುದು ನಿತ್ಯದ ಪ್ರಕ್ರಿಯೆ. ಈ ಅಂಶ ಸಾರ್ವಜನಿಕರು, ರೋಗಿಗಳ ಸಂಬಂಧಿಕರು ಅರಿತಿರಬೇಕಾಗುತ್ತದೆ ಎಂದು ಹೇಳುತ್ತಾರೆ.ಪ್ಲೆಟ್‌ಲೆಟ್ ಪಡೆಯಲು, ರಕ್ತ ಪಡೆಯಲು ಬರುವವರ ಕಡೆಯಿಂದ ಆರೋಗ್ಯಯುತ ಒಬ್ಬ ವ್ಯಕ್ತಿ ರಕ್ತದಾನ ಮಾಡುವುದು ಅವಶ್ಯ. ಆ ರೀತಿ ರಕ್ತ ಪಡೆದ ಬಳಿಕವೇ ಲಭ್ಯ ಇರುವ ಪ್ಲೆಟ್‌ಲೆಟ್, ರಕ್ತ ದೊರಕಿಸಲಾಗುತ್ತದೆ ಎಂದು ತಿಳಿಸುತ್ತಾರೆ.ಪ್ಲೆಟ್‌ಲೆಟ್ ರಕ್ತದ ಕಣ ಹೊಂದಿರುವ ಬ್ಯಾಗ್‌ಗೆ ಸದಾ ಕುಲುಕುವ ಯಂತ್ರ ಪ್ಲೆಟ್‌ಲೆಟ್ ಇನ್‌ಕ್ಯುಬೇಟರ್ ವ್ಯವಸ್ಥೆ ಬೇಕು. 5-10 ನಿಮಿಷ ಈ ವ್ಯವಸ್ಥೆಯಿಂದ ಹೊರ ತೆಗೆದರೂ ಅದು ನಿರುಪಯುಕ್ತ! ಹೀಗಾಗಿ ಪ್ಲೆಟ್‌ಲೆಟ್ ರಕ್ತದ ಕಣ ಹೊಂದಿರುವ ಬ್ಯಾಗ್‌ನ್ನು ದೂರದ ಊರು, ದೂರದ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ರೋಗಿಗೆ ಹಾಕುವುದಕ್ಕೆ ಸಮಸ್ಯೆ. ಹೀಗಾಗಿ ಕಾಂಪೊನೆಂಟ್ ಥೆರಫಿ  ಘಟಕದಿಂದ ಸ್ವಲ್ಪವೇ ದೂರ ಇರುವ ನಗರದಲ್ಲಿನ ಆಸ್ಪತ್ರೆ, ಸಾಧ್ಯವಾದರೆ ಇದೇ ಆಸ್ಪತ್ರೆಯಲ್ಲಿ( ನವೋದಯ ಆಸ್ಪತ್ರೆ) ಪ್ಲೆಟ್‌ಲೆಟ್ ಹಾಕಿಸಿ ಚಿಕಿತ್ಸೆ ಕೊಡಿಸಬಹುದು ಎಂದು ಕಾಲೇಜಿನ ಅಧೀಕ್ಷಕ ಡಾ. ರಾಜಶೇಖರ, ರಕ್ತ ಭಾಂಡಾರದ ತಜ್ಞ ನಾರಾಯಣ ವಿವರಿಸಿದರು.ಪ್ಲೆಟ್‌ಲೆಟ್‌ಗೆ ಆಯುಷ್ಯ ಕೇವಲ 5 ದಿನ ಮಾತ್ರ ಆಗಿದ್ದರಿಂದ ಇವುಗಳ ಸಂಗ್ರಹಕ್ಕೆ ರಕ್ತದಾನಿಗಳಿಂದ ನಿರಂತರ ರಕ್ತದಾನ ಅವಶ್ಯ. ರಕ್ತದಾನಿಗಳಿಲ್ಲದೇ ಪ್ಲೆಟ್‌ಲೆಟ್ ಸಂಗ್ರಹ ಅಸಾಧ್ಯ. ಕಾಂಪೊನೆಂಟ್ ಥೆರಫಿ ಘಟಕ ನಿರಂತರ ಕಾರ್ಯ ನಿರ್ವಹಿಸಿ ಡೆಂಗೆ ರೋಗಿಗಳಿಗೆ ಪ್ಲೆಟ್‌ಲೆಟ್ ದೊರಕಿಸಲು ರಕ್ತದಾನಿಗಳೇ ಆಧಾರವಾಗಿದ್ದಾರೆ.ಶುಲ್ಕ ವಿವರ: ರಕ್ತ ದಾನಿಗಳ ತಪಾಸಣೆ ಮಾಡಿ ರಕ್ತ ಪಡೆಯಲು, ಸೇವಾ ಶುಲ್ಕ ಸೇರಿ 600 ರೂಪಾಯಿ ಶುಲ್ಕ ಪ್ಲೆಟ್‌ಲೆಟ್ ದೊರಕಿಸಲು ನಿಗದಿಪಡಿಸಲಾಗಿದೆ. ಪ್ಲಾಸ್ಮಾ ಪಡೆಯಲು 600,  ಸಾಮಾನ್ಯ ರಕ್ತ ಪಡೆಯಲು 900 ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.ಹಣಕ್ಕಿಂತ ಜನತೆಗೆ ಸೇವೆ ಕಲ್ಪಿಸಲು ಕಾಂಪೊನೆಂಟ್ ಥೆರಪಿ ಘಟಕ ಆರಂಭಿಸಿದೆ. ಕನಿಷ್ಠ ಪ್ರಮಾಣದ ಶುಲ್ಕ ನಿಗದಿಪಡಿಸಲಾಗಿದೆ. ಜನತೆಗೆ ಸೇವೆ ಒದಗಿಸಲು ತಮ್ಮ ಘಟಕ ಸಿದ್ಧವಾಗಿರುತ್ತದೆ. ಜನತೆ ತಾಳ್ಮೆಯಿಂದ ಈ ಸೇವೆ ಪಡೆಯಬೇಕು ಎಂದು ರಕ್ತ ಭಂಡಾರದ ಮುಖ್ಯಸ್ಥ ಡಾ ಸಾಗರ್, ನಾರಾಯಣ, ಡಾ ಚಂದ್ರಕಾಂತ್, ಡಾ. ಯೋಗೇಂದ್ರ ಅವರು ಮನವಿ ಮಾಡಿದರು. ಮೇಲ್ವಿಚಾರಕ ಕಿರಣಕುಮಾರ, ತಾಂತ್ರಿಕ ಸಿಬ್ಬಂದಿ ನಾರಾಯಣ, ಆರ್.ಎಚ್ ಕರೆಡ್ಡಿ ಈ ಘಟಕದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಾಗಿದ್ದಾರೆ.ಆಸ್ಪತ್ರೆಗೆ ಚಿಕಿತ್ಸೆಗೆ ಧಾವಿಸುವ ರೋಗಿಗಳಿಗೆ, ಈ ಭಾಗದ ಜನತೆಗೆ ಅನುಕೂಲಕ್ಕಾಗಿ ಈ ಕಾಂಪೊನೆಂಟ್ ಥೆರಪಿ ಘಟಕ ಸ್ಥಾಪಿಸಿದೆ. ಹೈದರಾಬಾದ್, ಬೆಂಗಳೂರಿಗೆ ತೆರಳಿ ಚಿಕಿತ್ಸೆಗೆ ಪರದಾಡುವ ಕಷ್ಟ ದೂರವಾಗಿ ಜನತೆಗೆ ಅನುಕೂಲ ಆದರೆ ಸಂಸ್ಥೆಯ ಪ್ರಯತ್ನ ಸಾರ್ಥಕ ಎಂದು ನವೋದಯ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ರಜಿಸ್ಟರ್ ಡಾ ಶ್ರೀನಿವಾಸ್ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.