ಭಾನುವಾರ, ಏಪ್ರಿಲ್ 11, 2021
23 °C

ಡೆಂಗೆ, ಚಿಕೂನ್‌ಗುನ್ಯಾ: ವಿವಿಧೆಡೆ ಜಾಗೃತಿ ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಡೆಂಗೆ ಹಾಗೂ ಚಿಕೂನ್‌ಗುನ್ಯಾ ರೋಗಗಳ ಬಗೆಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಜಾಥಾಗೆ ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಚಾಲನೆ ನೀಡಿದರು.ನಗರಸಭೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಜಾಥಾಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಸಾರ್ವಜನಿಕರು ತಮ್ಮ ಮನೆಗಳ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಮೂಲಕ ಈ ರೋಗಗಳನ್ನು ನಿಯಂತ್ರಿಸಬಹುದಾಗಿದೆ ಎಂದರು.ನಗರದ ವಿವಿಧ ಶಾಲೆಗಳ ಮಕ್ಕಳು, ಶಿಕ್ಷಕರು, ಸ್ತ್ರೀ ಶಕ್ತಿ ಮತ್ತು  ಸ್ವ-ಸಹಾಯ ಸಂಘದವರು, ಅಂಗನವಾಡಿ ಕಾರ್ಯಕರ್ತೆಯರು ಜಾಥದಲ್ಲಿ ಪಾಲ್ಗೊಂಡಿದ್ದರು.ನಿಂತ ನೀರು ಸೊಳ್ಳೆಯ ಉತ್ಪತ್ತಿಯ ತವರು, ಡೆಂಗೆ ಜ್ವರ ಅಪಾಯಕಾರಿ, ಡೆಂಗೆ ಜ್ವರಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಬನ್ನಿ ಎಲ್ಲರೂ ಒಂದಾಗಿ ಸೇರಿ ಡೆಂಗೆ ಮುಕ್ತ ಸಮಾಜ ನಿರ್ಮಿಸೋಣ ಎಂಬ ಘೋಷಣೆ ಕೂಗುತ್ತಾ ನಗರದ ಪ್ರಮುಖ ಸಂಚರಿಸಿ ಸಾರ್ವಜನಿಕರ ಗಮನ ಸೆಳೆದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮರೀಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವಿಮಲಾ, ಮಂಡ್ಯ ತಾಲ್ಲೂಕು ತಹಶೀಲ್ದಾರ್ ಮಮತಾ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಜೆ.ಗಂಗಾಧರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ ಇದ್ದರು.ಡೆಂಗೆ ಜ್ವರದ ಬಗ್ಗೆ ಅರಿವು

ಮಂಡ್ಯ: ಜಿಲ್ಲೆಯ ಎಲ್ಲಾ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ, ಸ್ತ್ರೀಶಕ್ತಿ ಸಂಘಗಳು, ಅಂಗನವಾಡಿ ಕೇಂದ್ರ ಮುಂತಾದ ಕಡೆಗಳಲ್ಲಿ ಮಂಗಳವಾರ ಡೆಂಗೆ ಜ್ವರದ ಬಗ್ಗೆ ಅರಿವು ಮೂಡಿಸಲಾಯಿತು.ಸೊಳ್ಳೆಗಳಿಂದ ಹರಡುವ ಡೆಂಗೆ ಹಾಗೂ ಇತರೆ ಮಾರಣಾಂತಿಕ ಜ್ವರಗಳನ್ನು ಮುನ್ನೆಚ್ಚರಿಕೆ ವಹಿಸಿದರೆ ನಿಯಂತ್ರಿಸಬಹುದಾಗಿದೆ. ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಕ್ರಮಕೈಗೊಳ್ಳಬೇಕು ಎಂದು ವೈದ್ಯರುಗಳು ತಿಳವಳಿಕೆ ಮೂಡಿಸಿದರು.ಮಂಡ್ಯ ನಗರಸಭೆಯ ಸಭಾಂಗಣದಲ್ಲಿ ಸ್ತ್ರೀ ಶಕ್ತಿ ಸಂಘದವರಿಗೆ, ಸ್ವ-ಸಹಾಯ ಸಂಘದವರಿಗೆ ಡಾ. ಗಂಗಾಧರ ಅವರು, ಡೆಂಗೆ, ಮಲೇರಿಯಾ, ಚಿಕೂನ್‌ಗುನ್ಯಾ, ಮೆದುಳು ಜ್ವರದ ಲಕ್ಷಣ, ಚಿಕಿತ್ಸೆ, ಹರಡುವ ವಿಧಾನದ ಬಗೆಗೆ ವಿವರಿಸಿದರು.ನಗರಸಭೆ ಪ್ರಭಾರ ಆಯುಕ್ತ ಶಿವಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ ಮತ್ತಿತರರು ಪಾಲ್ಗೊಂಡಿದ್ದರು.ವಿದ್ಯಾರ್ಥಿಗಳ ಜಾಥಾಗೆ ಚಾಲನೆ


ಮದ್ದೂರು: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಡೆಂಗೆ ಜ್ವರದ ವಿರುದ್ಧ ಶಾಲಾ ಮಕ್ಕಳ ಜನ ಜಾಗೃತಿ ಜಾಥಾ ಬುಧವಾರ ಯಶಸ್ವಿಯಾಗಿ ನಡೆಯಿತು.ಪಟ್ಟಣದ ನರಸಿಂಹಸ್ವಾಮಿ ದೇಗುಲದ ಆವರಣದಿಂದ ಏರ್ಪಡಿಸಿದ್ದ ಶಾಲಾ ಮಕ್ಕಳ ಜಾಥಾಕ್ಕೆ ಪುರಸಭಾಧ್ಯಕ್ಷ ಚಂದ್ರು ಚಾಲನೆ ನೀಡಿದರು. ಪೇಟೆ ಬೀದಿಯ ಮೂಲಕ ಡೆಂಗೆ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗುತ್ತಾ ಮಕ್ಕಳು ಸಾರ್ವಜನಿಕರ ಗಮನ ಸೆಳೆದರು.ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಕಾಂತರಾಜು, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಷ್ಮ, ಪುರಸಭಾ ಮುಖ್ಯಾಧಿಕಾರಿ ಚಿಕ್ಕನಂಜಯ್ಯ, ಪ್ರಾಂಶುಪಾಲ ಸಿದ್ದರಾಜು, ಎನ್‌ಎಸ್‌ಎಸ್ ಅಧಿಕಾರಿ ಕಾಳಯ್ಯ, ಆರೋಗ್ಯ ಸಹಾಯಕ ಸಲೀಂ, ಅಧ್ಯಯನ ವಿದ್ಯಾಟ್ರಸ್ಟ್‌ನ ಜಿಲ್ಲಾ ಸಂಚಾಲಕ ಅಂಬರಹಳ್ಳಿಸ್ವಾಮಿ, ಗುಡಿಗೆರೆ ಬಸವರಾಜು, ಲಾರಾ ಪ್ರಸನ್ನ ಸೇರಿದಂತೆ ಪಟ್ಟಣದ ವಿವಿಧ ಶಾಲೆಗಳ ಶಿಕ್ಷಕರು ವಿದ್ಯಾರ್ಥಿಗಳು ಹಲವರು ಭಾಗವಹಿಸಿದ್ದರು.ಸ್ವಚ್ಛತೆಗೆ ಆದ್ಯತೆ ನೀಡಿ: ರಮೇಶ್‌ಮೂರ್ತಿ

ಶ್ರೀರಂಗಪಟ್ಟಣ: ಡೆಂಗೆ ಜ್ವರ ಹರಡುವುದನ್ನು ತಡೆಯಲು ತಾಲ್ಲೂಕಿನ ತಡಗವಾಡಿಯಲ್ಲಿ ಬುಧವಾರ ಜನ ಜಾಗೃತಿ ಕಾರ್ಯಕ್ರಮ ನಡೆಯಿತು.  ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಜಂಟಿಯಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಊರಿನ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಯಿತು. ವಿದ್ಯಾರ್ಥಿಗಳು ಡೆಂಗೆ ಜ್ವರ ತಡೆ ಕುರಿತು ಮಾಹಿತಿಯುಳ್ಳ ಫಲಕ ಹಿಡಿದು ಸಾಗಿದರು. ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕೂಡ ಈ ಜಾಥಾದಲ್ಲಿ ಪಾಲ್ಗೊಂಡಿದ್ದರು.ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ವಿ.ರಮೇಶ್‌ಮೂರ್ತಿ ಮಾತನಾಡಿ, ಪ್ರತಿ ಮನೆಯಲ್ಲೂ ಶೌಚಾಲಯ ಇರಬೇಕು. ಮನೆಯ ಆವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ನೀರು ನಿಲ್ಲದಂತೆ ನೋಡಿಕೊಳ್ಳಬೇಕು.ಸ್ವಚ್ಛತೆ ಕಾರ್ಯದಲ್ಲಿ ಗ್ರಾಮ ಪಂಚಾಯಿತಿ ಜತೆ ಸಹಕರಿಸಬೇಕು ಎಂದು ಕೋರಿದರು. ಗ್ರಾಮ ಪಂಚಾಯಿತಿ. ಸದಸ್ಯರಾದ ಟಿ.ಎಂ.ದೇವೇಗೌಡ, ಮುಖ್ಯ ಶಿಕ್ಷಕ ಬಸವಲಿಂಗಶೆಟ್ಟಿ ಇತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.