ಮಂಗಳವಾರ, ಮೇ 24, 2022
24 °C

ಡೆಂಗೆ ಜ್ವರ: ತಡವಲಗಾ ತಲ್ಲಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಶಂಕಿತ ಡೆಂಗೆಗೆ ಒಂದು ತಿಂಗಳ ಅವಧಿಯಲ್ಲಿ ಮೂವರು ಮಕ್ಕಳು ಮೃತಪಟ್ಟಿರುವ ಇಂಡಿ ತಾಲ್ಲೂಕು ತಡವಲಗಾ ಗ್ರಾಮದಲ್ಲಿ ಜನ ತಲ್ಲಣಗೊಂಡಿದ್ದಾರೆ.`ಒಂದು ತಿಂಗಳ ಅವಧಿಯಲ್ಲಿ ನಮ್ಮೂರಲ್ಲಿ ಮೂರು ಮಕ್ಕಳು ಡೆಂಗೆಗೆ ಬಲಿಯಾಗಿವೆ. 10 ತಿಂಗಳ ಸುಶ್ಮಿತಾ ಶರಣಪ್ಪ ಇಂಡಿ, ಆಕೆಯ ಸಹೋದರಿ ಒಂಬತ್ತು ತಿಂಗಳ ಗೀತಾ ಸಾಹೇಬಗೌಡ ಇಂಡಿ, ಎರಡು ವರ್ಷದ ದಾಕ್ಷಾಯಿಣಿ ಬಿರಾದಾರ ಡೆಂಗೆಗೆ ಬಲಿಯಾಗಿದ್ದಾರೆ. ಇನ್ನೂ ಕೆಲ ಮಕ್ಕಳು ಜ್ವರದಿಂದ ಬಳಲುತ್ತಿವೆ~ ಎಂದು ಗ್ರಾಮದ ಜನ ಗೋಳಿಡುತ್ತಿದ್ದಾರೆ.`ನನ್ನ ಮಗಳಿಗೆ ಜ್ವರ ಬಂದಿತ್ತು. ಸರ್ಕಾರಿ ದವಾಖಾನಿಗೆ ಹೋದ್ವಿ. ಅವ್ರ ವಿಜಾಪುರಕ್ಕೆ ಕರಕೊಂಡ್ ಹೋಗ್ರಿ ಅಂದ್ರು. ವಿಜಾಪುರಕ್ಕ ಹೋಗುವಷ್ಟರಲ್ಲಿ ಮಗಳು ಪ್ರಾಣ ಬಿಟ್ಟಿದ್ಳು~ ಎಂದು ಹದಿನೈದು ದಿನಗಳ ಹಿಂದಷ್ಟೇ ಮಗಳನ್ನು ಕಳೆದುಕೊಂಡಿರುವ ಸಾಹೇಬಗೌಡ ಇಂಡಿ ಕಣ್ಣೀರಿಟ್ಟರು.`ನಮಗೆ ಒಬ್ಬಾಕೆ ಮಗಳು ಇದ್ಲು. ಆಕಿನ್ನ ಈ ಡೆಂಗಿ ಕಿತ್ಕೊಂಡು ಹೋತು~ ಎಂದು ಕರುಳ ಕುಡಿಯನ್ನು ಕಳೆದುಕೊಂಡಿರುವ ತಾಯಿ ಅನಿತಾ ಅಳಲಾರಂಭಿಸಿದಳು.`ಹದಿನೈದು ದಿನಗಳ ಹಿಂದೆ ಈ ಡೆಂಗಿ ರೋಗಕ ನನ್ನ ಮಗಳು ಬಲಿ ಆದ್ಳು. ಈಗ ನಮ್ಮ ಅಣ್ಣನ ಮಗಳು ಸುಶ್ಮಿತಾ ಬಲಿಯಾಗಿದ್ದಾಳೆ. 15 ದಿನದಾಗ್ ನಮ್ಮ ನಮ್ಯಾಗ ಮುತ್ತಿನಂತಾ ಎರಡ್ ಮಕ್ಳು ಹ್ವಾದ್ವು~ ಎಂದು ಅನಿತಾ-ಸಾಹೇಬಗೌಡ ದಂಪತಿ ಬಿಕ್ಕಿ ಬಿಕ್ಕಿ ಅಳುತ್ತ ಹೇಳಿದರು.ಸಾಹೇಬಗೌಡ-ಶರಣಪ್ಪ ಎಂಬ ಇಬ್ಬರು ಸಹೋದರರು ಒಟ್ಟಾಗಿ ಈ ಮನೆಯಲ್ಲಿ ವಾಸವಾಗಿದ್ದಾರೆ. ಸಾಹೇಬಗೌಡ ತಮ್ಮ ಏಕೈಕ ಪುತ್ರಿಯನ್ನು ಕಳೆದುಕೊಂಡಿದ್ದರೆ, ಶರಣಪ್ಪನ ಮೂವರು ಮಕ್ಕಳಲ್ಲಿ ಸುಶ್ಮಿತಾ ಸಾವನ್ನಪ್ಪಿದ್ದಾಳೆ.ಆತನ ಏಕೈಕ ಪುತ್ರ ಸುರೇಶ (12) ಸಹ ಜ್ವರದಿಂದ ಬಳಲುತ್ತಿದ್ದು, ಮನೆಯವರಿಗೆ ಆಗಸವೇ ಕಳಚಿ ಬಿದ್ದಂತಾಗಿದೆ.

`ಸುಶ್ಮಿತಾಳಿಗೆ ಹತ್ತು ತಿಂಗಳ ವಯಸ್ಸು. ಜ್ವರ ಬಂದ್ವು. ವಿಜಾಪುರದ ಡಾ.ಬಿದರಿ ಅವರಿಗೆ ತೋರಿಸಿದೆವು. ಡೆಂಗೆ ಇದೆ ಎಂದರು. ಸೊಲ್ಲಾಪುರ ಸಿವಿಲ್ ಆಸ್ಪತ್ರೆಗೆ ಕರೆದುಕೊಂಡು ಹೋದ್ವಿ. ಸಾಲ ಮಾಡಿ 60 ಸಾವಿರ ರೂಪಾಯಿ ಖರ್ಚು ಮಾಡಿದರೂ ಮಗಳ ಜೀವ ಉಳೀಲಿಲ್ಲ. ಮಗಳು ಹೆಣವಾಗಿ ಮನೆಗೆ ಬಂದಳು~ ಎಂದು ಸುಶ್ಮಿತಾಳ ತಂದೆ ಶರಣಪ್ಪ-ತಾಯಿ ಜ್ಯೋತಿ ಹೇಳಿದರು.ತಡವಲಗಾ ಗ್ರಾಮದಲ್ಲಿ ನೈರ್ಮಲ್ಯ ಎಂಬುದೇ ಇಲ್ಲ. ಈ ಮಕ್ಕಳು ಶಂಕಿತ ಡೆಂಗೆಗೆ ಬಲಿಯಾಗಿದ್ದಾರೆ ಎಂಬ ಸುದ್ದಿ ಪ್ರಕಟವಾದ ನಂತರ ಗ್ರಾಮ ಪಂಚಾಯಿತಿಯವರು ರಸ್ತೆಯಲ್ಲಿ ಸ್ವಲ್ಪ ಮಣ್ಣು ಎಸೆದಿದ್ದಾರೆ. ಚರಂಡಿ ನೀರು ರಸ್ತೆಯಲ್ಲಿಯೇ ಹರಿಯುತ್ತಿರುವುದು. ಕೊಳವೆ ಬಾವಿಯ ಸುತ್ತ ಕೊಳಚೆ ನೀರು ತುಂಬಿಕೊಂಡಿರುವುದು. ಸೊಳ್ಳೆಗಳ ಸಾಮ್ರಾಜ್ಯವೇ ಅಲ್ಲಿರುವುದು ಕಂಡು ಬಂತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.