ಶನಿವಾರ, ಮೇ 15, 2021
25 °C
ದಾವಣಗೆರೆ, ಚಿತ್ರದುರ್ಗ, ಹಾವೇರಿ, ಬಳ್ಳಾರಿಯಲ್ಲಿ ತೀವ್ರ ಎಚ್ಚರ ವಹಿಸಲು ಅಧಿಕಾರಿಗಳ ಸೂಚನೆ

ಡೆಂಗೆ: ನಾಲ್ಕು ಜಿಲ್ಲೆಯಲ್ಲಿ ಪರಿಸ್ಥಿತಿ ಗಂಭೀರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ದಾವಣಗೆರೆ, ಚಿತ್ರದುರ್ಗ, ಹಾವೇರಿ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಅಪಾಯಕಾರಿ ಡೆಂಗೆ ಜ್ವರ ಗಂಭೀರ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಹೀಗಾಗಿ ಬಹಳ ಎಚ್ಚರ ವಹಿಸಬೇಕು.- ಬೆಂಗಳೂರಿನ ವಿಕಾಸಸೌಧದ 122ನೇ ಕೊಠಡಿಯಿಂದ ಗುರುವಾರ ನಡೆದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ನೀಡಿದ ಸೂಚನೆಯಿದು.ಇಲಾಖೆಯಿಂದ ನಡೆಸಿದ ಸಮೀಕ್ಷೆಯಿಂದ ಈ ಅಂಶ ಬೆಳಕಿಗೆ ಬಂದಿದೆ. ಡೆಂಗೆಗೆ ಒಳಗಾದ ರೋಗಿಗಳು ಹಲವು ವಿಧದಲ್ಲಿ ತೀವ್ರ ಸಮಸ್ಯೆಗೆ ಈಡಾಗಿರುವುದು ಕಂಡುಬಂದಿದೆ. ವಿವಿಧ ವೈರಸ್‌ಗಳು ಪತ್ತೆಯಾಗಿವೆ. ಬಹಳ ಅಪಾಯಕಾರಿ ಸ್ಥಿತಿ ಇದಾಗಿದ್ದು, ಹೆಚ್ಚಿನ ವಿಚಕ್ಷಣೆಯ ಅಗತ್ಯವಿದೆ. ಅರಿವು ಕಾರ್ಯಕ್ರಮ ಕೈಗೊಳ್ಳುವ ಮೂಲಕ, ರೋಗ ನಿಯಂತ್ರಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ವ್ಯವಸ್ಥಾಪಕ ನಿರ್ದೇಶಕ ಡಾ.ಸುರೇಶ್ ಮಾತನಾಡಿ, ಹಲವು ಜಿಲ್ಲೆಗಳಲ್ಲಿ ಇಲಾಖೆಯಿಂದ ನೀಡಿರುವ ಮುಕ್ತನಿಧಿ ಬಳಕೆ ಕಡಿಮೆಯಾಗಿದೆ. ಅಧಿಕಾರಿಗಳು ಇತ್ತ ಗಮನಹರಿಸಬೇಕು. ಕೊರತೆ ಕಂಡುಬಂದರೆ  ಮುಂದಿನ ವಾರ ನೀಡಲಾಗುವುದು ಎಂದರು.ಹಿರಿಯ ಅಧಿಕಾರಿ ಡಾ.ರವಿಕುಮಾರ್ ಮಾತನಾಡಿ, ಕೇಂದ್ರದ ಮಾರ್ಗಸೂಚಿ ಪ್ರಕಾರ `ಎಲಿಸ' ಪರೀಕ್ಷೆ ಆಗಿದ್ದರೆ ಮಾತ್ರ ಡೆಂಗೆ ಜ್ವರ ಎಂದು ಪ್ರಮಾಣಪತ್ರ ನೀಡಬೇಕು. ಮುಖ್ಯಮಂತ್ರಿ ಅವರು ಪರಿಹಾರ ನೀಡುವುದಾಗಿ ಘೋಷಿಸಿರುವುದರಿಂದ ಪ್ರಮಾಣೀಕರಿಸುವುದು ಅಗತ್ಯವಾಗಿದೆ. ಸಾರ್ವಜನಿಕರಲ್ಲಿ ಗೊಂದಲದ ವಾತಾವರಣ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಮುಂಜಾಗ್ರತಾ ಕ್ರಮಕೈಗೊಳ್ಳಲು ಇಲಾಖೆಯ ಸಿಬ್ಬಂದಿ ಆಸಕ್ತಿ ವಹಿಸಬೇಕು ಎಂದು ಸೂಚಿಸಿದರು.ಶಾಲೆಗಳು, ಚಿತ್ರಮಂದಿರ, ಕಲ್ಯಾಣ ಮಂಟಪ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮೀಕರಣ ಮಾಡಬೇಕು ಎಂಬ ಬಳ್ಳಾರಿ ಜಿಲ್ಲಾಧಿಕಾರಿ ಸಲಹೆ ಸ್ವೀಕರಿಸಿದ ಅಧಿಕಾರಿಗಳು, ವಾರಕ್ಕೊಮ್ಮೆ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.ಜಿಲ್ಲೆಯಲ್ಲಿ, 284 ಶಂಕಿತ ಡೆಂಗೆ ಪ್ರಕರಣಗಳು ಕಂಡುಬಂದಿವೆ. ಇದರಲ್ಲಿ 65 ಪಾಸಿಟಿವ್ ಎಂಬುದು ಪತ್ತೆಯಾಗಿದೆ. ಒಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು.ಜಿ.ಪಂ. ಅಧ್ಯಕ್ಷೆ ಶೀಲಾ ಗದ್ದಿಗೇಶ್, ಉಪಾಧ್ಯಕ್ಷೆ ಯಶೋದಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್, ಸಿಇಒ ಎ.ಬಿ. ಹೇಮಚಂದ್ರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸರೋಜಾಬಾಯಿ, ಚಿಗಟೇರಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಪರಶುರಾಮಪ್ಪ ಪಾಲ್ಗೊಂಡಿದ್ದರು.

`ಎಲಿಸ' ಪರೀಕ್ಷೆಗೆ ಹಣಕಾಸಿನ ನೆರವು

ಎಸ್.ಎಸ್.ಆಸ್ಪತ್ರೆಯ ಡಾ.ಎನ್.ಕೆ.ಕಾಳಪ್ಪನವರ್ ಮಾತನಾಡಿ, `ಎರಡು ದಿನದಲ್ಲಿ ನಮ್ಮ ಆಸ್ಪತ್ರೆಯಲ್ಲಿ 150 ಪ್ರಕರಣಗಳು ಸ್ವೀಕೃತವಾಗಿವೆ. `ಎಲಿಸ' ಪರೀಕ್ಷೆ ಮಾಡುವುದಕ್ಕೆ ನಮಗೆ ಸರ್ಕಾರ ಹಣಕಾಸಿನ ನೆರವು ನೀಡಬೇಕು. ಇದಕ್ಕೆ ಹೆಚ್ಚಿನ ಹಣ ಬೇಕಾಗುವುದಿಲ್ಲ. ಇಲಾಖೆಯಿಂದ ಸಹಕರಿಸಬೇಕು' ಎಂದು ಕೋರಿದರು.`ಆಸ್ಪತ್ರೆಯ ಐಸಿಯುನಲ್ಲಿ 22 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. `ಎಲಿಸ' ಪರೀಕ್ಷೆ ಮಾಡಲು ರೂ 600ರಿಂದ ರೂ 800 ಆಗುತ್ತದೆ. ಇದನ್ನು ಸರ್ಕಾರ ಭರಿಸಿದರೆ ಅನುಕೂಲ ಆಗುತ್ತದೆ' ಎಂದು ಕೋರಿದರು.ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ, `ಜಿಲ್ಲೆಯ ರೋಗಿಗಳಿಗೆ ಮಾತ್ರ ಹಣಕಾಸಿನ ನೆರವು ನೀಡಲಾಗುವುದು' ಎಂದು ಭರವಸೆ ನೀಡಿದರು.

ಡೆಂಗೆಯಿಂದ ಮೃತಪಟ್ಟವರಿಗೆ ದಾಖಲೆಗಳೊಂದಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಕೋರಿ ಪ್ರಸ್ತಾವ ಸಲ್ಲಿಸುವಂತೆ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಡಿಎಚ್‌ಒಗೆ ಸೂಚಿಸಿದರು.ಈ ಪರೀಕ್ಷೆ ನಡೆಸುವುದರಿಂದ, ಡೆಂಗೆ ಇದೆಯೇ ಇಲ್ಲವೇ ಎಂಬುದು ದೃಢಪಡುತ್ತದೆ. ಆಗ, ಸರ್ಕಾರದಿಂದ ಮೃತವ್ಯಕ್ತಿಗೆ ಪರಿಹಾರ ಪಡೆಯಲು ಅನುಕೂಲ ಆಗುತ್ತದೆ. ನಿಖರ ಲೆಕ್ಕ ದೊರೆಯುತ್ತದೆ. ಅಲ್ಲದೇ, ಆ ವ್ಯಕ್ತಿಯಿದ್ದ ಪ್ರದೇಶದ ಸುತ್ತಮುತ್ತ ಅರಿವು ಕಾರ್ಯಕ್ರಮ ಕೈಗೊಳ್ಳಲು ಸಹಕಾರಿ ಆಗುತ್ತದೆ ಎಂದು ತಿಳಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.