ಗುರುವಾರ , ಮೇ 19, 2022
24 °C

ಡೇರಿ ಚುನಾವಣೆ, ಅನವಶ್ಯಕ ವೆಚ್ಚ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಆಯ್ಕೆ ಅವಿರೋಧವಾಗಿ ನಡೆಯಬೇಕಿತ್ತು, ಆದರೆ ಕಾಂಗ್ರೆಸ್ ಪಕ್ಷದವರು ಆಯ್ಕೆ ವಿಷಯದಲ್ಲಿ ರಾಜಕೀಯ ಮಾಡಿದ್ದರಿಂದ ಚುನಾವಣೆ ನಡೆಯುವಂತಾಯಿತು ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸಿದ್ದಮರೀಗೌಡರು ಆರೋಪಿಸಿದರು.ಕಸಬಾ ಹೋಬಳಿ ಜವನಮ್ಮನದೊಡ್ಡಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ನೂತನ ನಿರ್ದೇಶಕರಾಗಿ ಆಯ್ಕೆಯಾದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಹಾಲು ಉತ್ಪಾದಕರ ಸಹಕಾರ ಸಂಘವು ಸಾರ್ವಜನಿಕರ ಹಣದಿಂದ ನಡೆಯುತ್ತದೆ. ನಿರ್ದೇಶಕರ ಆಯ್ಕೆಗೆ ನಡೆಯುವ ಚುನಾವಣೆಯ ಖರ್ಚನ್ನು ಡೇರಿಯೇ ಭರಸಬೇಕಾಗುತ್ತದೆ. ಆದರೆ ಈ ರೀತಿ ವ್ಯರ್ಥವಾಗಿ ಹಣ ಖರ್ಚುಮಾಡುವ ಬದಲು ಸಂಘದ ಆಡಳಿತ ಮಂಡಳಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆಮಾಡಬಹುದಿತ್ತು. ಆದರೆ ಜವನಮ್ಮನದೊಡ್ಡಿ ಗ್ರಾಮದಲ್ಲಿ ರಾಜಕೀಯ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ಪಕ್ಷದವರು ಕೇವಲ ಎರಡು ನಿರ್ದೇಶಕ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಸ್ಪರ್ಧಿಸಿ ಚುನಾವಣೆ ನಡೆಸಿ, ಸಾರ್ವಜನಿಕ ಹಣವ್ಯಯಕ್ಕೆ ಕಾರಣಾಗಿದ್ದಾರೆ ಎಂದು ದೂರಿದರು.ಗ್ರಾಮ ಪಂಚಾಯಿತಿಯ ಚುನಾವಣೆ ಸಂದರ್ಭದಲ್ಲೂ ಸಹ ಅವಿರೋಧವಾಗಿ ಆಯ್ಕೆಯಾಗಬೇಕಿದ್ದುದ್ದನ್ನು ತಪ್ಪಿಸಿ ಕಾಂಗ್ರೆಸ್ ಪಕ್ಷ ಬೆಂಬಲ ಅಭ್ಯರ್ಥಿಯನ್ನು ನಿಲ್ಲಿಸಿ ಚುನಾವಣೆಯನ್ನೇ ಮಾಡಿದರು, ಆದರೆ ಕೇವಲ 150 ರಷ್ಟು ಮತಗಳನ್ನು ಪಡೆದು 300 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲನ್ನಪ್ಪಿದರು. ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ನಾರಾಯಣಗೌಡರು ಬಿ.ಜೆ.ಪಿ. ಪಕ್ಷದ ಅಭ್ಯರ್ಥಿಯಾಗಿ ತಮ್ಮ ನಾದಿನಿಯನ್ನು ನಿಲ್ಲಿಸಿ ಜೆಡಿಎಸ್ ಮತಗಳನ್ನು ಸೆಳೆದಿದ್ದರಿಂದ ಜೆಡಿಎಸ್ ಮತಗಳು ಇಬ್ಬಾಗವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗೆ ಕಾರಣವಾಯಿತೆ ಹೊರತು ಇದು ನಿಜವಾದ ಗೆಲುವಲ್ಲವೆಂದರು.ಕಾಂಗ್ರೆಸ್ ಪಕ್ಷವು ತಾಲ್ಲೂಕಿನಲ್ಲಿ ದುರಾಡಳಿತ ನಡೆಸುತ್ತಿದೆ. ಅಧಿಕಾರಿಗಳು ಅವರ ಕೈಗೊಂಬೆಯಾ ಗಿದ್ದಾರೆ. ಏಕಪಕ್ಷೀಯವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಶಾಸಕರು ಮತ್ತು ಅಧಿಕಾರಿಗಳ ತಾರತಮ್ಯ ನೀತಿಯನ್ನು ಖಂಡಿಸಿ ಜೆಡಿಎಸ್ ಪಕ್ಷವು ಮಾರ್ಚಿ 14ರ ಸೋಮವಾರ ಬೃಹತ್ ಪ್ರತಿಭಟನೆಯನ್ನು ಪಟ್ಟಣದಲ್ಲಿ  ನಡೆಸಲಿದೆ ಎಂದು ತಿಳಿಸಿದರು.ಟಿ.ತಿಮ್ಮೇಗೌಡ, ತಿಮ್ಮೇಗೌಡ, ತಿಮ್ಮರಾಜು, ಸಿ.ನಾಗರಾಜು, ಸುರೇಶ್, ಶಿವರಾಜು, ಚಂದ್ರಮ್ಮ, ಗೀತರಂಗಯ್ಯ, ಡೇರಿ ಕಾರ್ಯದರ್ಶಿ ತಿಮ್ಮೇಗೌಡ ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.