ಶುಕ್ರವಾರ, ಮೇ 20, 2022
20 °C

ಡೇವಿಸ್‌ಗೆ ಉಗ್ರರ ಸಂಪರ್ಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಭದ್ರತಾ ಪಡೆಯ ಇಬ್ಬರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಬಂಧಿತನಾಗಿರುವ ಅಮೆರಿಕದ ಬೇಹುಗಾರ ರೇಮಂಡ್ ಡೇವಿಸ್‌ಗೆ ತಾಲಿಬಾನ್ ಸಂಘಟನೆಯೊಂದಿಗೆ ನಿಕಟ ಸಂಬಂಧ ಇತ್ತು ಎಂದು ಪಾಕಿಸ್ತಾನದ ಪತ್ರಿಕೆಯೊಂದು ವರದಿ ಮಾಡಿದೆ.‘ಡೇವಿಸ್ ಪಾಕಿಸ್ತಾನದ ತೆಹ್ರೀಕ್-ಎ-ತಾಲಿಬಾನ್ ಉಗ್ರರ ಸಂಘಟನೆಯೊಂದಿಗೆ ನಿಕಟವಾಗಿದ್ದ ಎಂಬುದು ತನಿಖೆಯ ವೇಳೆ ಗೊತ್ತಾಗಿದೆ. ಉಗ್ರರು ಈತನ ಮೂಲಕ ಯುವಕರನ್ನು ತಮ್ಮ ಸಂಘಟನೆಗೆ ಸೆಳೆದುಕೊಳ್ಳುತ್ತಿದ್ದರು. ಲಾಹೋರ್ ಮತ್ತು ಪಂಜಾಬ್‌ನಲ್ಲಿ ಉಗ್ರರ ಚಟುವಟಿಕೆಗೆ ಡೇವಿಸ್ ಯೋಜನೆ ರೂಪಿಸುತ್ತಿದ್ದ’ ಎಂಬ ಅಧಿಕಾರಿಗಳ ಹೇಳಿಕೆಗಳನ್ನು ಆಧರಿಸಿ ‘ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ಪತ್ರಿಕೆ ಮಂಗಳವಾರ ವರದಿ ಮಾಡಿದೆ.ಲಾಹೋರ್ ವರದಿ: ಅಮೆರಿಕದ ರೇಮಂಡ್ ಡೇವಿಸ್‌ಗೆ ಮರಣ ದಂಡನೆ ವಿಧಿಸಬೇಕು ಎಂದು ಪಾಕಿಸ್ತಾನಿ ಮೂಲದ ಜಮಾತ್-ಉದ್-ದಾವಾ (ಜೆಯುಡಿ) ಉಗ್ರರ ಗುಂಪು ಒತ್ತಾಯಿಸಿದೆ.ಜೈಲಿನಲ್ಲೇ ವಿಚಾರಣೆ: ಈ ಮಧ್ಯೆ ಸುರಕ್ಷತೆ ಕಾರಣಗಳಿಗಾಗಿ ತೀವ್ರ ಭದ್ರತೆ ಇರುವ ಜೈಲಿನಲ್ಲಿ ರೇಮಂಡ್ ಡೇವಿಸ್ ಅವರ ವಿಚಾರಣೆ ನಡೆಸುವಂತೆ ಸರ್ಕಾರ ಮಾಡಿದ  ಮನವಿಯನ್ನು ಪಾಕಿಸ್ತಾನದ ನ್ಯಾಯಾಲಯ ಮಂಗಳವಾರ ಒಪ್ಪಿದೆ.ನ್ಯೂಯಾರ್ಕ್ ವರದಿ: ಅಮೆರಿಕದ ಬೇಹುಗಾರ ರೇಮಂಡ್ ಡೇವಿಸ್ ಪ್ರಕರಣವು  ಪಾಕಿಸ್ತಾನದಲ್ಲಿ ಈಜಿಪ್ಟ್‌ನಲ್ಲಿ ನಡೆದಂತೆಯೇ ಜನಾಂದೋಲನಕ್ಕೆ ಕಾರಣವಾಗಲಿದೆ ಎಂದು ಪಾಕಿಸ್ತಾನ ಕ್ರಿಕೆಟ್‌ನ ಮಾಜಿ ನಾಯಕ ಮತ್ತು ರಾಜಕಾರಣಿ ಇಮ್ರಾನ್ ಖಾನ್ ಹೇಳಿದ್ದಾರೆ.‘ಲಾಹೋರ್‌ನಲ್ಲಿ ಇಬ್ಬರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಬಂಧಿತನಾಗಿರುವ ಡೇವಿಸ್, ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಅಂಶ ಈಗ ಬೆಳಕಿಗೆ ಬಂದಿದೆ. ಹಾಗಾಗಿ ಇದು ಮಾಮೂಲಿ ಪ್ರಕರಣವಲ್ಲ. ಆತನನ್ನು ರಾಜತಾಂತ್ರಿಕ ನೀತಿ- ನಿಯಮದ ಮೇಲೆ ವಿನಾಯಿತಿ ನೀಡಿ ಬಿಡುಗಡೆ ಮಾಡಿದರೆ ಪಾಕ್‌ನಲ್ಲಿ ಜನಾಂದೋಲನ ಕಿಡಿ ಹೊತ್ತಿಕೊಳ್ಳಲಿದೆ’ ಎಂದು ಅವರು ‘ಟೈಮ್’ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.