ಪವಿತ್ರಕುಮಾರಿ ಮೂಗಿನ ಮೇಲಿದ್ದ ಕನ್ನಡಕವನ್ನು ಸ್ವಲ್ಪ ಜಾರಿಸಿ ಮೇಲ್ತುದಿಯಿಂದಲೇ ತೀಕ್ಷ್ಣ ದೃಷ್ಟಿ ಹರಿಸಿದಳು. ಎದುರಿಗೆ ಕುಳಿತಿದ್ದ ಮಧ್ಯವಯಸ್ಕ ಹೆಣ್ಣುಮಗಳು ನೋಡಲು ಲಕ್ಷಣವಾಗಿದ್ದಳು. ಕಣ್ಣುಗಳು ಪ್ರಶಾಂತವಾಗಿದ್ದವು. ಒಪ್ಪವಾಗಿ ಬಾಚಿದ್ದ ತಲೆಕೂದಲು, ನೀಳ ಮೂಗಿನ ಪಕ್ಕದಲ್ಲೊಂದು ಸಣ್ಣ ಮಚ್ಚೆ ಅವಳಿಗೆ ವಿಶಿಷ್ಟ ಸೌಂದರ್ಯ ಕಾಂತಿಯನ್ನು ನೀಡಿದಂತಿತ್ತು. ತಿದ್ದಿ ತೀಡಿದಂತಹ ಹುಬ್ಬು, ಗಂಡಸರನ್ನು ಕೆರಳಿಸಬಲ್ಲಂತಹ ಪುಟ್ಟ ಉಬ್ಬಿದ ತುಟಿ. ಮೊದಲ ನೋಟಕ್ಕೆ ನೋಡಿದರೆ ವಕೀಲರ ಬಳಿಗೆ ಬರಬಹುದಾದ ಯಾವ ಚಿಂತೆಯೂ ಇಲ್ಲದ ಮುಗ್ಧ ಗೃಹಿಣಿಯಂತೆ ಕಾಣಿಸಿದಳು.

ಇರಲಿ, ಮುಖ ನೋಡಿ ಎಲ್ಲವನ್ನೂ ಹೇಳೋದು ಯಾರಿಗೆ ಸಾಧ್ಯ? ಕೆಲವರು ಆಕಾಶ ಇನ್ನೇನು ತಲೆ ಮೇಲೆ ಬೀಳುವಂತಿದೆ ಎಂಬುದು ಗೊತ್ತಾದರೂ ಇದೀಗ ನಿದ್ದೆಯಿಂದ ಎದ್ದ ಮಗುವಿನಂತೆ ಪ್ರಶಾಂತರಾಗಿರುತ್ತಾರೆ ಎಂದುಕೊಂಡಳು ಪವಿತ್ರಕುಮಾರಿ.

ಗಂಡು-ಹೆಣ್ಣಿನ ನಡುವಣ ಜಗಳಗಳನ್ನು ಬಿಡಿಸಿ ಕುಟುಂಬವನ್ನು ಕಾಯುವ ತನ್ನ ಕೌನ್ಸೆಲಿಂಗ್ ಕೆಲಸದ ಬಗ್ಗೆ ಆಕೆಗೆ ತುಂಬ ಹೆಮ್ಮೆಯಿತ್ತು. ವಕೀಲರೆಂದರೆ ಕೇವಲ ಜಗಳ ಹಚ್ಚುವವರು ಎನ್ನುವ ಮಾತಿದ್ದರೂ, ಆಕೆ ಹತ್ತಿಪ್ಪತ್ತು ಕುಟುಂಬಗಳು ಒಡೆದು ಹೋಗುವುದನ್ನು ತಪ್ಪಿಸಿದ್ದಳು. ಗಂಡ-ಹೆಂಡತಿ ಇಬ್ಬರಲ್ಲಿ ಯಾರೇ ಸಲಹೆ ಕೇಳಿ ಬಂದರೂ ಆಕೆಯ ಮನಸ್ಸಿಗೆ ಮೊದಲು ಬರುತ್ತಿದ್ದುದು- ಎಷ್ಟು ಕಷ್ಟಪಟ್ಟಾದರೂ ಪರವಾಗಿಲ್ಲ, ಇವರಿಬ್ಬರನ್ನೂ ಒಂದುಗೂಡಿಸಬೇಕು ಅನ್ನುವ ಆಲೋಚನೆ.

ಎದುರಿಗೆ ಕುಳಿತಾಕೆ ಸ್ವಲ್ಪ ಕೆಮ್ಮಿದಂತೆ ನಟಿಸಿ ಪವಿತ್ರ ಕುಮಾರಿಯನ್ನು ಎಚ್ಚರಿಸಿದಳು. ಫೈಲ್ಗಳ ಮೇಲೆ ನೆಪಮಾತ್ರದ ಕಣ್ಣೋಡಿಸಿದ ಪವಿತ್ರ ಕುಮಾರಿ ಅವುಗಳನ್ನು ಮುಚ್ಚಿ ಯಾವೂರು? ಎಂದು ಔಪಚಾರಿಕವಾಗಿ ಮಾತು ಶುರು ಮಾಡಿದಳು. ಇಲ್ಲೇ ಬೆಂಗಳೂರು ಪಕ್ಕದ ಹಳ್ಳಿ ಎಂಬ ಸಂಕೋಚದ ಉತ್ತರ ಬಂತು. ಅಂದರೆ ತನ್ನ ಹಳ್ಳಿಯ ಹೆಸರು ಹೇಳಲೂ ಆಕೆಗೆ ಇಷ್ಟವಿಲ್ಲ.

ನೋಡಿದರೆ ಹಳ್ಳಿಯ ಹೆಂಗಸಿನಂತೆ ಕಾಣುತ್ತಿಲ್ಲ. ಕಷ್ಟಪಟ್ಟು ಸುಳ್ಳು ಹೇಳುತ್ತಿದ್ದಾಳೆ. ಕಳೆದ ವಾರ ಫೋನ್ನಲ್ಲಿ ಮಾತನಾಡಿದಾಗ ಆಕೆಯ ಇಂಗ್ಲಿಷ್ ಕೂಡಾ ಚೆನ್ನಾಗಿತ್ತು. ಹಣಕಾಸಿನ ಕೊರತೆ ಇದ್ದ ಕುಟುಂಬದವಳಂತೆಯೂ ಕಾಣಿಸುತ್ತಿಲ್ಲ.

ಪವಿತ್ರಕುಮಾರಿಯ ವೃತ್ತಿಯಲ್ಲಿ ಬಹಳ ಮುಖ್ಯವಾದದ್ದು ಎದುರಿಗಿದ್ದವರು ಮಾತಿಗೆ ಕುದುರಿಕೊಳ್ಳುವಂತೆ ಮಾಡುವುದು. ಬಂದವರ ಮನಸ್ಸಿನೊಳಗೆ ಇದ್ದದ್ದು ಸ್ವಲ್ಪವೂ ತಟವಟ ಇರದಂತೆ ತನಗೆ ಗೊತ್ತಾಗಬೇಕು. ಎಷ್ಟೋ ಸಲ ಬಂದವರು ತಮ್ಮ ಮಾತುಗಳ ಮೇಲೆ ತಮಗೇ ನಂಬಿಕೆ ಇಲ್ಲದಂತೆ ಮಾತನಾಡುತ್ತಿರುತ್ತಾರೆ. ಕೆಲವರು ತಾವು ಹೇಳುತ್ತಿರುವ ಸುಳ್ಳುಗಳನ್ನು ಸಂಪೂರ್ಣ ಸತ್ಯ ಎಂದು ನಂಬಿರುತ್ತಾರೆ. ಕೆಲವರು ಹೇಳಬೇಕೊ ಬಿಡಬೇಕೊ ಎಂಬ ಗೊಂದಲದಲ್ಲಿ ಅರ್ಧಸತ್ಯಗಳನ್ನೂ ಅರ್ಧ ಕಲ್ಪನೆಗಳನ್ನೂ ಬೆರೆಸಿ ಹೇಳುತ್ತಾರೆ. ಹಾಗೆಂದು ಅವರಿಗೆ ಸುಳ್ಳು ಹೇಳುವ ಉದ್ದೇಶ ಇರುವುದಿಲ್ಲ. ಸತ್ಯವೆಂದು ಭಾವಿಸಿದ್ದು ಸತ್ಯ ಹೌದೋ ಅಲ್ಲವೋ ಎಂಬ ಅನುಮಾನವೂ ಇದಕ್ಕೆ ಕಾರಣವಾಗಿರಬಹುದು. ಪವಿತ್ರಕುಮಾರಿಯ ಹತ್ತು ವರ್ಷಗಳ ವೃತ್ತಿ ಜೀವನದಲ್ಲಿ ಇಂತಹ ನೂರಾರು ಗಂಡು-ಹೆಣ್ಣುಗಳು ಬಂದು ಹೋಗಿದ್ದಾರೆ.

ನಿಮ್ಮ ಹೆಸರು ಗೊತ್ತಾಗಲಿಲ್ಲ...
ಜಯಂತಿ
ಹೇಳಿ, ಏನು ವಿಷಯ?

ಆಕೆ ಒಂದು ನಿಮಿಷ ಮೌನವಾದಳು. ಆಮೇಲೆ ಮಾತನಾಡುತ್ತಾ ಹೋದಳು. ಮೆಲುವಾಗಿ ಶುರುವಾದ ಮಾತುಗಳು ಬಳಿಕ ಗಟ್ಟಿಯಾಗುತ್ತಾ ಹೋದವು. ತನ್ನ ಗಂಡನ ಬಗ್ಗೆ, ಪುಟ್ಟ ಮಗುವಿನ ಬಗ್ಗೆ. ಅತ್ತೆ-ಮಾವನ ಬಗ್ಗೆ, ಸುಭಿಕ್ಷ ಕುಟುಂಬದ ಬಗ್ಗೆ, ಪರಿಸರದ ಬಗ್ಗೆ. ಆಕೆ ಹೇಳಿದ್ದೆಲ್ಲವನ್ನೂ ಕೇಳಿಸಿಕೊಂಡ ಬಳಿಕ ಸಮಸ್ಯೆಗಳೇನೂ ಇದ್ದಂತೆ ಕಾಣಿಸಲಿಲ್ಲ.

ನೀವು ಗಂಡನಿಂದ ಡೈವೋರ್ಸ್ ಕೊಡಿಸಿ ಅಂತ ನನ್ನ ಬಳಿ ಕೇಳೋದಕ್ಕೆ ಬಂದಿದ್ದೀರಾ?- ಪವಿತ್ರಕುಮಾರಿ ಅಚ್ಚರಿ, ಅನುಮಾನದಿಂದಲೇ ಕೇಳಿದಳು.

ಹೌದು... ನಿಧಾನವಾದರೂ ದೃಢವಾದ ಧ್ವನಿಯಲ್ಲಿ ಆಕೆ ಹೇಳಿದಳು.

ನಾನಿಲ್ಲಿ ಕುಟುಂಬಗಳನ್ನು ಜೋಡಿಸುವ ಕೆಲಸಕ್ಕೆ ಕುಳಿತುಕೊಂಡಿದ್ದೇನೆ. ಡೈವೋರ್ಸ್ ಕೊಡಿಸಿದ್ದು ಬಹಳ ಕಡಿಮೆ...
ನನಗೆ ಗೊತ್ತಿದೆ. ಆ ಕಡಿಮೆ ಕೇಸುಗಳಲ್ಲಿ ನನ್ನದೂ ಒಂದಿರುತ್ತದೆ ಎಂದುಕೊಂಡಿದ್ದೇನೆ ಮಾತನಾಡುತ್ತಾ ಆಕೆ ಇನ್ನಷ್ಟು ದೃಢವಾದಳು.

ಅಲ್ಲಮ್ಮೋ, ತುಂಬ ಒಳ್ಳೆಯ ಗಂಡ ಇದ್ದಾನೆ. ಅತ್ತೆ-ಮಾವ ಚೆನ್ನಾಗಿ ನೋಡಿಕೊಳ್ತಿದಾರೆ. ಪುಟ್ಟ ಮಗುವೂ ಇದೆ. ಕಷ್ಟಗಳೇ ಇಲ್ಲ ಎನ್ನುವಂತಹ ಪರಿಸರದಲ್ಲಿ ಇದ್ದೀಯ. ಆದರೂ ಏಕೆ ಈ ಡೈವೋರ್ಸ್ ಆಸೆ?

ಮೇಡಂ. ಯಾಕೋ ಈ ಗಂಡ ನನಗೆ ಫಿಟ್ ಅಲ್ಲ ಅನ್ನಿಸುತ್ತೆ. ನಾನು ಸುಖವಾಗಿಲ್ಲ ಅನ್ನಿಸುತ್ತೆ
ಒಂದು ಕುಡಿತದ ಚಟ ಇಲ್ಲ. ಸಿಗರೇಟು ಕೂಡಾ ಸೇದಲ್ಲ. ಹೊರಗಿನ ಸಂಬಂಧ ಇಟ್ಟುಕೊಂಡಿಲ್ಲ. ದುಡಿದದ್ದೆಲ್ಲವನ್ನೂ ಮನೆಗೇ ಖರ್ಚು ಮಾಡ್ತಾನೆ. ಒಂದು ದಿನ ನಿನ್ನನ್ನು ಹೊಡೆದಿಲ್ಲ. ಗಟ್ಟಿಯಾಗಿ ಕೂಗಾಡಿದ್ದೂ ಇಲ್ಲ. ಇನ್ನೆಂಥ ಗಂಡ ಬೇಕು ನಿನಗೆ? ಪವಿತ್ರಕುಮಾರಿ ಸ್ವಲ್ಪ ಅಸಹನೆಯಿಂದಲೇ ಕೇಳಿದಳು.

ಆಕೆ ಮೌನವಾದಳು. ಆಕೆಯ ಕೈಬೆರಳುಗಳು ಪರಸ್ಪರ ಆಟವಾಡುತ್ತಿದ್ದವು. ಎರಡು ನಿಮಿಷಗಳ ಬಳಿಕ ಗಂಟಲು ಸರಿ ಮಾಡಿಕೊಂಡಳು.

ಮೇಡಂ... ನಿಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಸ್ವಲ್ಪ ಕೇಳಬಹುದೆ?

ಇದ್ಯಾಕೋ ಅತಿಯಾಯಿತು ಅನ್ನಿಸಿತು ಪವಿತ್ರಕುಮಾರಿಗೆ. ಆದರೂ ಕ್ಲೈಂಟ್ ಮಾತನಾಡಲು ಆರಂಭಿಸಿದ್ದಾಳೆಂದರೆ ಇನ್ನಷ್ಟು ವಿಷಯಗಳು ಸಿಗಲಿವೆ ಎಂದೇ ಅರ್ಥ.

ಹೂಂ.. ಕೇಳಮ್ಮ...
ನೀವೂ ಡೈವೋರ್ಸಿ ಅಂತ ಕೇಳಿದ್ದೇನೆ. ನಿಮ್ಮ ಗಂಡನನ್ನು ಬಿಟ್ಟು ಕೆಲವು ವರ್ಷಗಳಾದುವಂತೆ...
ಹೌದು. ಅದು ಎಲ್ಲರಿಗೂ ಗೊತ್ತಿರುವ ಸತ್ಯ. ಅದರಲ್ಲೇನೂ ಹೊಸ ಸಂಗತಿ ಇಲ್ಲ...
ಕಾರಣ ಕೇಳಬಹುದೆ?

ಅದೂ ಜಗತ್ತಿಗೇ ಗೊತ್ತಿದೆ. ನನ್ನ ಗಂಡ ಮಹಾಕುಡುಕನಾಗಿದ್ದ. ಅವನದ್ದು ಕರಡಿಯಂತಹ ಪ್ರೀತಿ. ಆದರೆ ದುಡಿಯುತ್ತಿರಲಿಲ್ಲ. ಕುಡಿದು ಮನೆಗೆ ಬಂದು ನನಗೆ ಆಗಾಗ್ಗೆ ಒದೀತಿದ್ದ. ವಾರದಲ್ಲಿ ಎರಡು ಸಲವಾದರೂ ಮನೆಯಲ್ಲಿ ದೊಡ್ಡ ಜಗಳ. ಆತನ ತಂದೆ ಸ್ಥಿತಿವಂತರಾಗಿದ್ದರು. ಸಾಕಷ್ಟು ಆಸ್ತಿ ಮಾಡಿಟ್ಟು ಹೋಗಿದ್ದರು. ಕುಡಿತ, ರೇಸ್, ಹೆಣ್ಣಿನ ಸಂಗ ಅಂತ ಆತ ಎಲ್ಲವನ್ನೂ ಕಳೆದು ಬರುತ್ತಿದ್ದ. ಆತನನ್ನು ತಿದ್ದೋದಕ್ಕೆ ನಾನು ಸಾಕಷ್ಟು ಪ್ರಯತ್ನ ಪಟ್ಟೆ. ಐದು ವರ್ಷಗಳ ಕಾಲ ನನ್ನ ಬದುಕು ಯಾರಿಗೂ ಬೇಡ ಅನ್ನುವಂತಿತ್ತು. ಒಂದು ಮಗುವಾದರೆ ಎಲ್ಲ ಸರಿಯಾದೀತು ಅಂದುಕೊಂಡೆ. ಆದರೆ ಆತನಿಗೆ ಮಗುವಾಗುವುದು ಇಷ್ಟವಿರಲಿಲ್ಲ.

ಆತ ಹೀಗೆ ಆಗುವುದಕ್ಕೆ ಏನಾದರೂ ಕಾರಣಗಳಿವೆಯೆ ಎಂದು ಹುಡುಕಿದೆ. ನನಗೂ ಮುಂಚೆ ಬೇರೆ ಯಾರನ್ನಾದರೂ ಪ್ರೀತಿಸಿರಬಹುದೆ... ಎಂದು ಹುಡುಕಾಡಿದೆ. ನಮ್ಮದೇ ಪ್ರೇಮವಿವಾಹ! ಆತ ಅಷ್ಟೊಂದು ವ್ಯಗ್ರನಾಗುವುದಕ್ಕೆ, ಅಶಾಂತನಾಗುವುದಕ್ಕೆ ಕಾರಣಗಳೇ ಇರಲಿಲ್ಲ. ಆತನನ್ನು ರಮಿಸಿದೆ, ಕೌನ್ಸೆಲಿಂಗ್ ಮಾಡಿಸಿದೆ. ಸಾಕಷ್ಟು ವೈದ್ಯರ ಬಳಿಗೆ, ಕೊನೆಗೆ ಮಂತ್ರವಾದಿಗಳ ಬಳಿಗೂ ಕರೆದೊಯ್ದೆ.

ನಾಲ್ಕು ದಿನ ಸರಿ ಇರುತ್ತಿದ್ದ. ಮತ್ತೆ ಮೊದಲಿನಂತೆಯೇ. ಏನೂ ಪ್ರಯೋಜನವಾಗಲಿಲ್ಲ. ಸಂಬಂಧ ಕಿತ್ತುಕೊಳ್ಳುವುದೊಂದೇ ದಾರಿ ಎನ್ನುವುದು ದೃಢವಾಯಿತು. ಹಾಗೇ ಮಾಡಿದೆ. ಅದು ಜಾರಿಯಾಗುವುದಕ್ಕೆ ಮುನ್ನವೂ ಅವನಿಗೊಂದು ಅವಕಾಶ ಕೊಟ್ಟೆ. ಆದರೆ ಆತ ಮೃಗದಂತೆ ವರ್ತಿಸಿದ. ಅವತ್ತೊಂದು ದಿನ ನನ್ನನ್ನು ಕತ್ತು ಹಿಸುಕಿ ಕೊಲೆ ಮಾಡೋದಕ್ಕೇ ಬಂದ...

ಪವಿತ್ರಕುಮಾರಿ ದೊಡ್ಡದೊಂದು ನಿಟ್ಟುಸಿರು ಬಿಟ್ಟಳು. ಇಬ್ಬರೂ ಪರಸ್ಪರ ಮುಖ ನೋಡಿಕೊಂಡರು. ಮಾತನಾಡುತ್ತಾ ಪವಿತ್ರಕುಮಾರಿ ತನಗೇ ಗೊತ್ತಿಲ್ಲದಂತೆ ಟೇಬಲ್ ಮೇಲಿದ್ದ ಆಕೆಯ ಕೈ ಹಿಡಿದುಕೊಂಡಿದ್ದಳು.

ಆ ಏರ್ಕಂಡಿಷನ್ ಕೋಣೆಯೊಳಕ್ಕೆ ತಣ್ಣಗೆ ಸುಳಿದಾಡುತ್ತಿರುವ ಗಾಳಿಯೂ ಉಸಿರು ಬಿಗಿ ಹಿಡಿದುಕೊಂಡಂತಿತ್ತು. ದೊಡ್ಡ ಕಿಟಕಿಯ ಹೊರಗೆ ಜಗತ್ತು ತನ್ನದೇ ಚಟುವಟಿಕೆಯಲ್ಲಿ ಮುಳುಗಿತ್ತು. ಆಚೆ ಕಾಂಪೌಂಡಿನ ಮೂಲೆಯಲ್ಲಿ ದೊಡ್ಡದೊಂದು ಯಂತ್ರ ಬೋರ್ವೆಲ್ ಕೊರೆಯುತ್ತಿತ್ತು. ಅದರ ಸುತ್ತ ಜನ ಮುತ್ತಿಕೊಂಡಿದ್ದರು. ಆಳುಗಳು ಅತ್ತಿಂದಿತ್ತ ಓಡಾಡುತ್ತಿದ್ದರು. ನಿನ್ನೆ ಸಂಜೆಯೇ ಭೂಮಿ ಕೊರೆಯಲು ಆರಂಭಿಸಿದ್ದರು. ಇಡೀ ರಾತ್ರಿ ಕೊರೆಯುವ ಕೆಲಸ ನಡೆದಿರಬೇಕು. ಪವಿತ್ರಕುಮಾರಿ ಬೆಳಿಗ್ಗೆ ಕಚೇರಿಗೆ ಬಂದಾಗಲೂ ಕೆಲಸ ನಡೆದೇ ಇತ್ತು. ನೀರು ಸಿಕ್ಕಿದಂತೆ ಕಾಣುತ್ತಿಲ್ಲ. ಅದರಾಚೆಗಿನ ರಸ್ತೆಯಲ್ಲಿ ಕಾರುಗಳ ಸದ್ದು. ಕಾಗೆಯೊಂದರ ಅಸ್ಪಷ್ಟ ಧ್ವನಿ. ಕೀ.. ಎಂಬ ಸ್ಕೂಟರ್ ಹಾರ್ನ್..

ಐದು ನಿಮಿಷಗಳೇ ಕಳೆದುಹೋದವು. ಪವಿತ್ರಕುಮಾರಿ ಎಚ್ಚತ್ತುಕೊಂಡಳು. ಇದೇನಿದು ಇವತ್ತು ಇಷ್ಟೊಂದು ಮೂಡಿಯಾಗಿಬಿಟ್ಟೆ, ಅದೂ ಕ್ಲೈಂಟ್ ಮುಂದೆ! ಛೆ.. ಎಂದು ತಲೆ ಕೊಡವಿದಳು. ಮುಂಗುರುಳನ್ನು ಹಿಂದಕ್ಕೆ ತಳ್ಳಿ ಕುರ್ಚಿಯಲ್ಲಿ ನೆಟ್ಟಗೆ ಕುಳಿತುಕೊಂಡಳು.
ಮೇಡಂ.. ನನ್ನ ಜೀವನದಲ್ಲಿ ಇದ್ಯಾವುದೂ ಆಗಲಿಲ್ಲ. ನನ್ನ ಗಂಡ ನಿಮ್ಮ ಗಂಡನ ಹಾಗಿರಬೇಕಿತ್ತು. ಪೂರ್ತಿ ಅಲ್ಲವಾದರೂ ಅರ್ಧವಾದರೂ ಅವರಂತೆ ಇದ್ದಿರಬೇಕಿತ್ತು. ಇವರದ್ದು ಒಂದು ಕಟು ಮಾತಿಲ್ಲ, ಒಂದು ಹೊಡೆತ ಇಲ್ಲ. ಹೋಗಲಿ ಎಂದರೆ ನನ್ನ ಮೇಲೆ ಒಮ್ಮೆಯೂ ಸಿಟ್ಟು ಮಾಡಿಕೊಂಡಿಲ್ಲ. ಎಷ್ಟು ಕಿರಿಕಿರಿ ಮಾಡಿದರೂ ತುಂಬ ನೆಮ್ಮದಿಯಿಂದ, ಪ್ರಶಾಂತವಾಗಿ ಇರುತ್ತಾರೆ. ಹಾಸಿಗೆಯ ಮೇಲೂ ಹಾಗೆಯೇ... ಆಕೆ ಮಾತನ್ನು ನಿಲ್ಲಿಸಿ ಕಿಟಕಿಯ ಹೊರಗೆ ನೋಡತೊಡಗಿದಳು.

ಪವಿತ್ರಕುಮಾರಿಯ ಕುತೂಹಲ ಕೆರಳಿತು. ಆಕೆಯೇ ಮಾತು ಮುಂದುವರಿಸಬಹುದೆ ಎಂದು ಕಾದಳು. ಕೊನೆಗೆ ಕಾತರವನ್ನು ತೋರಗೊಡದಂತೆ ನಿಧಾನಕ್ಕೆ ಹಾಸಿಗೆಯ ಬಗ್ಗೆ ಹೇಳಿ... ಪರವಾಗಿಲ್ಲ ಎಂದಳು.

ಹಾಗೇನಿಲ್ಲ ಮೇಡಂ. ಹಾಸಿಗೆಯ ಸುಖಕ್ಕೂ ನನ್ನ ಗಂಡ ಯಾವ ಕೊರತೆ ಮಾಡಿಲ್ಲ. ಕೆಲವೊಮ್ಮೆ ಎಷ್ಟೊಂದು ವಿಜಂಭಿಸುತ್ತಾನೆ ಎಂದರೆ ನಾನೇ ಬೆಚ್ಚಿ ಬೀಳುತ್ತೇನೆ. ನನಗೂ ಅದು ಇಷ್ಟವೇ...

ಇನ್ನೇನಮ್ಮ ನಿನ್ನ ಪ್ರಾಬ್ಲಂ..? ಪವಿತ್ರಕುಮಾರಿಯ ಮುಖದಲ್ಲಿ ಕಂಡೂ ಕಾಣದ ಅಸಹನೆ.

ಅದೇ ಗೊತ್ತಾಗ್ತಿಲ್ಲ ಮೇಡಂ. ಯಾಕೋ ನನ್ನ ಗಂಡನಿಗೆ ನಾನು ಅನ್ಯಾಯ ಮಾಡ್ತಿದೇನೆ ಅನ್ನಿಸುತ್ತಿದೆ. ಡೈವೋರ್ಸ್ ಕೊಟ್ಟುಬಿಡಬೇಕು ಅನ್ನಿಸುತ್ತದೆ...

ಪವಿತ್ರಕುಮಾರಿ ಮಾತನಾಡಲಿಲ್ಲ. ನೇರವಾಗಿ ಆಕೆಯ ಮುಖವನ್ನೇ ದಿಟ್ಟಿಸಿ ನೋಡತೊಡಗಿದಳು. ಸಂಕೋಚದಿಂದ ಆಕೆ ಕಿಟಕಿಯ ಹೊರಗೆ ಕಣ್ಣು ತಿರುಗಿಸಿದಳು. ಬೋರ್ವೆಲ್ನ ಸದ್ದು ನಿಂತ ಹಾಗಿತ್ತು.

ನೋಡಮ್ಮೋ... ಅನುಭವದಿಂದ ಹೇಳ್ತೇನೆ. ಇದೆಲ್ಲ ಸಣ್ಣ ಮಾನಸಿಕ ತುಮುಲಗಳು. ಭಾವನೆಗಳೇ ಎಲ್ಲವೂ ಅಲ್ಲ. ಬದುಕು ಅಂದರೆ ಮೆದುಳಿಗೂ ಕೆಲಸ ಇದೆ. ಬದುಕಿನಲ್ಲಿ ಹೊಂದಾಣಿಕೆ ಮುಖ್ಯ. ಇಂತಹ ಗಂಡ ಸಿಗೋದಕ್ಕೆ ನೀನು ಪುಣ್ಯ ಮಾಡಿದ್ದೀಯ...
ಇಲ್ಲ ಮೇಡಂ. ನನ್ನ ಗಂಡನಿಗೆ ನಾನು ಅನ್ಯಾಯ ಮಾಡಿ ಬದುಕಲು ಇಷ್ಟ ಪಡುವುದಿಲ್ಲ...

ಮೊದಲು ಈ ಗಂಡ ನನಗೆ ಫಿಟ್ ಅಲ್ಲ ಅಂದೆ. ಈಗ ನೀನು ಅವನಿಗೆ ಅನ್ಯಾಯ ಮಾಡುವುದಿಲ್ಲ ಅಂತಿದೀಯ. ಸ್ವಲ್ಪ ಸ್ಪಷ್ಟವಾಗಿ ಹೇಳ್ತೀಯ.. ಗಂಡನಿಗೆ ಗೊತ್ತಿಲ್ಲದಂತೆ ಬೇರೆ ಯಾರನ್ನಾದರೂ ಪ್ರೀತಿಸುತ್ತಿದ್ದೀಯ.. ನಿನ್ನ ಜೀವನದಲ್ಲಿ ಇನ್ಯಾರಾದರೂ ಇದ್ದಾರಾ..?

ಹೌದು ಅಂದರೆ ಹೌದು. ಇಲ್ಲ ಅಂದರೆ ಇಲ್ಲ...
ಒಗಟಿನ ಮಾತು ಬೇಡ. ನನ್ನನ್ನು ನಿನ್ನ ಅಕ್ಕ ಅಂದುಕೋ. ಇಂತಹ ವಿಷಯಗಳಲ್ಲಿ ಸ್ಪಷ್ಟವಾಗಿ ಮಾತನಾಡಬೇಕು. ಈ ವಿಷಯ ಬೇರೆ ಯಾರಿಗೂ ಗೊತ್ತಾಗುತ್ತದೆ ಎನ್ನುವ ಸಂಶಯವೂ ಬೇಕಿಲ್ಲ. ಹಾಗೆ ಗೊತ್ತಾಗಬೇಕೆನ್ನಲು ನಿನ್ನ ವಿಳಾಸ ಕೂಡಾ ನನಗೆ ಗೊತ್ತಿಲ್ಲ....

ಮತ್ತೆ ಮೌನ...
ಅದು.. ಹಾಸಿಗೆಯ ಮಾತು ಬಂತಲ್ಲ ಮೇಡಂ... ಗಂಡನ ಜತೆಗೆ ಕೂಡುವಾಗ ನನ್ನ ಮನಸ್ಸಿನಲ್ಲಿ ಬೇರೆ ಆಲೋಚನೆಗಳು ಬರುತ್ತವೆ. ಗಂಡನ ಜಾಗದಲ್ಲಿ ಶಾರೂಕ್ ಖಾನ್, ಸಲ್ಮಾನ್ ಖಾನ್ ಮುಂತಾದವರೆಲ್ಲ ಬರುತ್ತಾರೆ. ಎಷ್ಟು ಪ್ರಯತ್ನಿಸಿದರೂ ಈ ತರಹದ ಆಲೋಚನೆಗಳನ್ನು ತಡೆಯಲು ಆಗುವುದಿಲ್ಲ. ಅಂದರೆ ಮಾನಸಿಕವಾಗಿ ನಾನು ಗಂಡನ ಜತೆಗಿಲ್ಲ. ಗಂಡನ ಬಗ್ಗೆ ನನಗೆ ಪ್ರೀತಿ ಇಲ್ಲ ಎಂದಲ್ಲವೆ ಇದರರ್ಥ..? ಗಂಡ ನನಗೆ ಸೂಕ್ತ ಅಲ್ಲವಾದ್ದರಿಂದಲೇ ಹಾಸಿಗೆಯಲ್ಲಿರುವಾಗ ಈ ಇತರರೆಲ್ಲ ಮನಸ್ಸಿನಲ್ಲಿ ಹಾದು ಹೋಗುವುದಲ್ಲವೆ?

ಪವಿತ್ರಕುಮಾರಿ ಗಟ್ಟಿಯಾಗಿ ನಕ್ಕುಬಿಟ್ಟಳು. ತಕ್ಷಣ ಎಚ್ಚೆತ್ತುಕೊಂಡು ಗಂಭೀರಳಾದಳು. ಅಯ್ಯೋ ಹುಚ್ಚಿ. ಇಷ್ಟು ಸಣ್ಣ ವಿಷಯಕ್ಕೆ ಗಂಡನಿಗೆ ಡೈವೋರ್ಸ್ ಕೊಡುವ ಮಾತನ್ನಾಡುತ್ತೀಯಲ್ಲ! ಸಿಂಪಲ್! ಇನ್ನು ಮುಂದೆ ಶಾರೂಕ್, ಸಲ್ಮಾನ್ರ ಸಿನಿಮಾ ನೋಡುವುದನ್ನು ನಿಲ್ಲಿಸಿಬಿಡು... ಎಂದಳು.

ಅಷ್ಟೇ ಅಲ್ಲ ಮೇಡಂ. ಗಂಡನ ಜತೆಗೆ ಹಾಸಿಗೆಯ ಮೇಲಿದ್ದಾಗ ಎದುರುಮನೆಯ ಹುಡುಗ, ಟೀವಿ ಜಾಹೀರಾತಿನಲ್ಲಿ ಬರುವ ಮಾಡೆಲ್ಗಳು, ಎಲ್ಲೋ ನೋಡಿದ ಅಥವಾ ಯಾವತ್ತೂ ನೋಡದೇ ಇರುವ ಹುಡುಗರೂ ಸ್ಮೃತಿ ಪಟಲದ ಮೇಲೆ ಬರುತ್ತಾರೆ. ಎಷ್ಟೋ ಸಲ ನಾನು ಗಂಡನ ಜತೆಗೆ ಕೂಡುತ್ತಿಲ್ಲ, ಆ ಬೇರೆಯವರ ಜತೆಗೇ ಮಲಗಿದ್ದೇನೆ ಎನ್ನುವಂತೆ ಭಾಸವಾಗುತ್ತದೆ. ನೀವು ನಗುವಷ್ಟು ಪರಿಸ್ಥಿತಿ ಸರಳವಾಗಿಲ್ಲ ಮೇಡಂ. ಇದು ಮೋಸ ಅಲ್ಲ ಅಂತೀರಾ? ಗಂಡನಿಗೆ ಮೋಸ ಮಾಡಿ ಬದುಕೋದು ನನಗೆ ಇಷ್ಟವಿಲ್ಲ... ದಯವಿಟ್ಟು ನನಗೆ ಡೈವೋರ್ಸ್ ಕೊಡಿಸಿ... ಆಕೆಯ ಸ್ವರ ಮೆದುವಾಗಿ ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿತು.

ಪವಿತ್ರಕುಮಾರಿ ಮಾತನಾಡಲಿಲ್ಲ. ಎದ್ದು ನಿಂತು ಕಿಟಕಿಯ ಬಳಿಗೆ ಬಂದಳು. ಹೊರಗೆ ನೋಡಿದರೆ ಬೋರ್ವೆಲ್ ಕೊರೆಯುವವರ ಸುತ್ತ ನಿಂತವರಲ್ಲಿ ಗಡಿಬಿಡಿಯ ಓಡಾಟ ಕಾಣಿಸುತ್ತಿತ್ತು. ಇನ್ನೂ ನೀರು ಸಿಕ್ಕಿಲ್ಲವೆ?

ಮತ್ತೆ ಬಂದು ಕುರ್ಚಿಯಲ್ಲಿ ಕುಳಿತು ಪವಿತ್ರಕುಮಾರಿ ಗಂಟಲು ಸರಿಪಡಿಸಿಕೊಂಡಳು. ಜಯಂತಿ. ನಾನು ಹೇಳೋದನ್ನು ಗಮನವಿಟ್ಟು ಕೇಳಿಸಿಕೊಳ್ಳಮ್ಮ... ನಿನ್ನ ಮನಸ್ಸಿನ ಕಲ್ಮಶಗಳ ಬಗ್ಗೆ ತುಂಬ ಪ್ರಾಮಾಣಿಕತೆಯಿಂದ ಹೇಳಿದ್ದೀಯ. ನಿಜಕ್ಕೂ ಇದು ಮೆಚ್ಚುವಂತಹದ್ದೆ. ಆದರೆ ನಿನ್ನ ಗಂಡ ಕೂಡಾ ಅಷ್ಟೇ ಪ್ರಾಮಾಣಿಕತೆಯಿಂದ ನಿನ್ನ ಬಳಿ ಮಾತನಾಡಿದ್ದಾನಾ? ನಿನಗೆ ಹಾಸಿಗೆಯಲ್ಲಿರುವಾಗ ಶಾರೂಕ್, ಸಲ್ಮಾನ್ ಮೈಕಟ್ಟು ಮನಸ್ಸಿಗೆ ಬಂದಂತೆಯೇ ಆತನಿಗೂ ಕರೀನಾ ಕಪೂರ್, ಬಿಪಾಸಾ ಬಸು ಮೈಕಟ್ಟು ಮನಸ್ಸಿಗೆ ಬಂದಿರಬಹುದಲ್ವಾ? ಆ ಬಗ್ಗೆ ನೀನು ಯಾವತ್ತಾದರೂ ಆತನ ಬಳಿ ವಿಚಾರಿಸಿದ್ದೀಯ? ವಿಚಾರಿಸಿದ್ದರೆ ನಿನಗೆ ಗೊತ್ತಾಗುತ್ತಿತ್ತು- ಆತನ ಮನಸ್ಸಿನಲ್ಲೂ ಹೀಗೆಯೇ ಬೇರೆ ಹುಡುಗಿಯರು ಬರುತ್ತಾರೆ.

ಮನಸ್ಸು ಪದ್ಮಪತ್ರದ ಮೇಲಿನ ಜಲಬಿಂದುವಿನಂತೆ. ಇವೆಲ್ಲ ಆ ಕ್ಷಣದ ಸತ್ಯಗಳು. ಸ್ಥಿರಭಾವಗಳಲ್ಲ. ವ್ಯಕ್ತಿತ್ವದ ಪ್ರಾಮಾಣಿಕತೆಗೂ ಒಂದು ಗಡಿರೇಖೆಯಿದೆ. ಎಷ್ಟೇ ಆದರೂ ಹೆಣ್ಣು ಒಂಟಿಯೇ. ನೀನು ಮತ್ತು ನಿನ್ನ ಗಂಡ ತುಂಬಾನೇ ಕ್ಲೋಸ್ ಅಂತ ನೀನು ತಿಳಿದುಕೊಂಡಿದ್ದೀಯ. ನಿಜ ಇರಬಹುದು. ಆದರೆ ಎಷ್ಟು ಕ್ಲೋಸ್? ಮನೇಲಿ ನೀವಿಬ್ಬರೂ ನಿಂತು ಮಾತನಾಡುವಾಗ ಇಬ್ಬರ ನಡುವೆಯೂ ಒಂದು ಅಡಿಯಷ್ಟಾದರೂ ಅಂತರ ಇರುತ್ತದಲ್ಲವೆ? ತುಂಬಾ ಕ್ಲೋಸ್ ಅಂದ ಮೇಲೆ ಆ ಸಣ್ಣ ಅಂತರವೂ ಇರಬಾರದಲ್ವ..?

ಯಾವುದೇ ವ್ಯಕ್ತಿ ತನ್ನ ವೈಯಕ್ತಿಕತೆಯನ್ನು ಉಳಿಸಿಕೊಂಡೇ ಇನ್ನೊಬ್ಬರ ಜತೆಗೆ ನಿಕಟವಾಗಿರುತ್ತಾನೆ. ಗಂಡ-ಹೆಂಡತಿಯ ನಡುವೆ ಎಷ್ಟೇ ಉತ್ಕಟ ಪ್ರೀತಿ ಇದ್ದರೂ ಗಂಡನ ಉಸಿರು ನಿಂತಾಕ್ಷಣ ಹೆಂಡತಿಯ ಉಸಿರೂ ನಿಂತು ಹೋಗುವುದಿಲ್ಲ, ಅಲ್ವೆ? ಮನಸ್ಸಿನ ಭಾವನೆಗಳು ಒಂದು ಕ್ಷಣ ಅಥವಾ ಒಂದು ಉತ್ಕಟ ಗಳಿಗೆಯಲ್ಲಿ ಸ್ವಲ್ಪ ಕಲಬೆರಕೆಯಾದಾಕ್ಷಣ ನಮ್ಮ ಬಗ್ಗೆ ನಾವೇ ಅನುಮಾನಗಳನ್ನು ಪಡಬೇಕಿಲ್ಲ... ಊರಿಗೆ ಹೋಗಿ ತಣ್ಣಗೆ ಕುಳಿತು ಆಲೋಚಿಸು. ಅಷ್ಟಕ್ಕೂ ಡೈವೋರ್ಸ್ ಕೊಡಲೇ ಬೇಕೆಂದಿದ್ದರೆ ಒಂದು ತಿಂಗಳು ಬಿಟ್ಟು ಮರಳಿ ಬಾರಮ್ಮೋ...

ಜಯಂತಿ ಕುಳಿತಲ್ಲಿಂದಲೇ ಕಿಟಕಿಯ ಹೊರಗೆ ನೋಡಿದಳು. ಬೋರ್ವೆಲ್ ಕೊರೆಯುವವರ ಗದ್ದಲ ಜೋರಾಗಿತ್ತು. ಕೊಳವೆಯಿಂದ ಸಣ್ಣದಾಗಿ ನೀರು ಜಿನುಗುತ್ತಿದ್ದಂತೆ ಕಾಣಿಸಿತು. ದೀರ್ಘ ನಿಟ್ಟುಸಿರೊಂದು ಹೊರಬಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.