ಸೋಮವಾರ, ಏಪ್ರಿಲ್ 19, 2021
29 °C

ತಂದೆ ಪ್ರಾಣಕ್ಕೆ ಕುತ್ತು ತಂದ ಮಗನ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೆಜೆಸ್ಟಿಕ್ ಸಮೀಪ ಖಾಸಗಿ ಬಸ್ ಡಿಕ್ಕಿ ಹೊಡೆದು ಯುವಕನೊಬ್ಬ ಮೃತಪಟ್ಟಿದ್ದು, ಈ ವಿಷಯ ತಿಳಿದ ಆ ಯುವಕನ ತಂದೆಯೂ ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ.ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಮಂಜೇಗೌಡ (50) ಮತ್ತು ಅವರ ಪುತ್ರ ಧರಣಿ (24) ಮೃತಪಟ್ಟವರು. ಆಟೊ ಚಾಲಕರಾಗಿದ್ದ ಧರಣಿ, ನಗರದ ಸುಂಕದಕಟ್ಟೆ ಸಮೀಪ ಸ್ನೇಹಿತರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರು, ಸ್ನೇಹಿತರ ಜತೆ ಮೆಜೆಸ್ಟಿಕ್ ಬಳಿಯ ಚಿತ್ರಮಂದಿರವೊಂದರಲ್ಲಿ ಶನಿವಾರ ರಾತ್ರಿ ಸಿನಿಮಾ ನೋಡಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.ಧರಣಿ ಮತ್ತು ಸ್ನೇಹಿತರು ಸಿನಿಮಾ ಮುಗಿದ ನಂತರ ಚಿತ್ರಮಂದಿರದಿಂದ ಹೊರ ಬಂದು ಸುಬೇದಾರ್ ಛತ್ರಂ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಈ ವೇಳೆ ಆ ರಸ್ತೆಯಲ್ಲಿ ಖಾಸಗಿ ಟ್ರಾವೆಲ್ಸ್ ಏಜೆನ್ಸಿಗಳ ಮೂರ‌್ನಾಲ್ಕು ಬಸ್‌ಗಳು ನಿಂತಿದ್ದವು. ಈ ಸಂದರ್ಭದಲ್ಲಿ ಅಲ್ಲಿಗೆ ಹೊಯ್ಸಳ ವಾಹನದಲ್ಲಿ ಬಂದ ಉಪ್ಪಾರಪೇಟೆ (ಕಾನೂನು ಮತ್ತು ಸುವ್ಯವಸ್ಥೆ) ಠಾಣೆಯ ಸಿಬ್ಬಂದಿ, ರಸ್ತೆ ಬದಿಯಲ್ಲಿ ನಿಂತಿದ್ದ ನಂದಿನಿ ಟ್ರಾವೆಲ್ಸ್ ಏಜೆನ್ಸಿ ಬಸ್‌ನ (ನೋಂದಣಿ ಸಂಖ್ಯೆ ಕೆಎ-01, ಬಿ-7861) ಚಾಲಕನಿಗೆ ಗದರಿಸಿ ವಾಹನವನ್ನು ಅಲ್ಲಿಂದ ತೆಗೆಯುವಂತೆ ಸೂಚಿಸಿದರು.

 

ಪೊಲೀಸರ ಗದರಿಕೆಯಿಂದ ಬೆದರಿದ ಚಾಲಕ, ಮುಂಭಾಗದಲ್ಲಿ ಸ್ಥಳಾವಕಾಶ ಇಲ್ಲದಿದ್ದರಿಂದ ಆತುರದಲ್ಲಿ ಹಿಮ್ಮುಖವಾಗಿ ವಾಹನ ಚಾಲನೆ ಮಾಡಿದ. ಅದೇ ವೇಳೆಗೆ ವಾಹನದ ಹಿಂಭಾಗಕ್ಕೆ ಬಂದ ಧರಣಿ ಅವರಿಗೆ ಬಸ್ ಗುದ್ದಿದ ಪರಿಣಾಮ ತೀವ್ರವಾಗಿ ಗಾಯಗೊಂಡು ಕುಸಿದು ಬಿದ್ದರು. ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಉಪ್ಪಾರಪೇಟೆ ಸಂಚಾರ ಠಾಣೆಯ   ಪೊಲೀಸರು ಹೇಳಿದ್ದಾರೆ.ಧರಣಿ ಸಾವಿನ ಸುದ್ದಿಯನ್ನು ಅವರ ಕುಟುಂಬ ಸದಸ್ಯರಿಗೆ ತಿಳಿಸಲಾಯಿತು. ವಿಷಯ ತಿಳಿದು ದುಃಖದ ಮಡುವಿನಲ್ಲೇ ಭಾನುವಾರ ನಸುಕಿನಲ್ಲಿ ಮೆಜೆಸ್ಟಿಕ್‌ಗೆ ಬಂದಿಳಿದ ಮಂಜೇಗೌಡ ಅವರಿಗೆ ಹೃದಯಾಘಾತವಾಯಿತು. ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಏಳು ಗಂಟೆ ಸುಮಾರಿಗೆ ಅವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.ಬಸ್ ಚಾಲಕ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡು ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಧರಣಿ ಅವರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಪೊಲೀಸರೇ ಕಾರಣ:  `ನಂದಿನಿ ಟ್ರಾವೆಲ್ಸ್‌ನ ಬಸ್ ಚಾಲಕ, ಕೆಲ ಪ್ರಯಾಣಿಕರು ಬರಬೇಕಿದ್ದು ಸ್ವಲ್ಪ ಕಾಲಾವಕಾಶ ಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ. ಆತನ ಮನವಿಗೆ ಸ್ಪಂದಿಸದ ಹೊಯ್ಸಳ ವಾಹನದ ಸಿಬ್ಬಂದಿ ಚಾಲಕನಿಗೆ ಲಾಠಿಯಿಂದ ಹೊಡೆದು, ಕೂಡಲೇ ಅಲ್ಲಿಂದ ವಾಹನ ತೆಗೆಯಬೇಕೆಂದು ತಾಕೀತು ಮಾಡಿದರು.ಇದರಿಂದ ಬೆದರಿದ ಚಾಲಕ, ಹಿಂಬದಿಯಲ್ಲಿ ಜನ ಬರುತ್ತಿರುವುದನ್ನು ಗಮನಿಸದೆ ತರಾತುರಿಯಲ್ಲಿ ಹಿಮ್ಮುಖವಾಗಿ ವಾಹನ ಚಾಲನೆ ಮಾಡಿದ್ದರಿಂದ ಈ ಅಪಘಾತ ಸಂಭವಿಸಿತು.ಅಪಘಾತದಲ್ಲಿ ಧರಣಿ ಮೃತಪಟ್ಟ ವಿಷಯ ತಿಳಿದು ಆಘಾತಗೊಂಡ ಆತನ ತಂದೆ ಹೃದಯಾಘಾತವಾಗಿ ಸಾವನ್ನಪ್ಪಿದರು. ಅವರಿಬ್ಬರ ಸಾವಿಗೆ ಪೊಲೀಸರ ಅತಿಯಾದ ಕರ್ತವ್ಯ ಪ್ರಜ್ಞೆಯೇ ಕಾರಣ~ ಎಂದು ಧರಣಿ ಸ್ನೇಹಿತರು ದೂರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.