ಮಂಗಳವಾರ, ಮೇ 17, 2022
26 °C

ತಜ್ಞರ ಸಭೆಗೆ ಬರಗೂರು ಆಗ್ರಹ: ಶಾಲೆಗಳ ವಿಲೀನಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಡಿಮೆ ಮಕ್ಕಳು ಇರುವ ಸರ್ಕಾರಿ ಶಾಲೆಗಳನ್ನು ಸಮೀಪದ ಶಾಲೆಗಳಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಕೂಡಲೇ ತಡೆಯಬೇಕು ಹಾಗೂ ಈ ಬಗ್ಗೆ ಚರ್ಚಿಸಲು ತಜ್ಞರ ಸಭೆ ಕರೆಯಬೇಕು ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಈ ಕುರಿತು ಪತ್ರ ಬರೆದಿರುವ ರಾಮಚಂದ್ರಪ್ಪ, ತಾವು ಕೂಡಲೇ ಮಧ್ಯಪ್ರವೇಶಿಸಿ ಶಾಲೆಗಳನ್ನು ವಿಲೀನಗೊಳಿಸುವುದನ್ನು ತಡೆಯಬೇಕು. ತಜ್ಞರ ಸಭೆಯಲ್ಲಿ ಈ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.ಗುಣಮಟ್ಟದ ಶಿಕ್ಷಣ ನೀಡುವುದಕ್ಕಾಗಿ ಶಾಲೆಗಳನ್ನು ವಿಲೀನಗೊಳಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡಲು ವಿರೋಧವಿಲ್ಲ. ಆದರೆ ಈ ರೀತಿ ಒಂದು ಶಾಲೆಯನ್ನು ಮತ್ತೊಂದು ಶಾಲೆಯಲ್ಲಿ ವಿಲೀನಗೊಳಿಸಿದ ಮಾತ್ರಕ್ಕೆ ಗುಣಮಟ್ಟ ಹೆಚ್ಚಾಗುವುದಿಲ್ಲ. ಗುಣಮಟ್ಟದ ಶಿಕ್ಷಣ ಅಂದರೆ ಏನು ಎಂಬುದನ್ನು ಮೊದಲು ಅರ್ಥಮಾಡಿಕೊಂಡು ಆ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಬಹುಮುಖಿ ಕ್ರಮಗಳ ಬಗ್ಗೆ ಯೋಚಿಸಬೇಕು ಎಂದಿದ್ದಾರೆ.ಮಕ್ಕಳ ಸಂಖ್ಯೆ ಕಡಿಮೆಯಾಗಲು ಹಲವು ಕಾರಣಗಳಿವೆ. ಸುಸಜ್ಜಿತ ಶಾಲೆಗಳ ಕೊರತೆಯ ಜೊತೆಗೆ ಆಂಗ್ಲಮಾಧ್ಯಮ ಶಾಲೆಗಳು ತಲೆ ಎತ್ತಲು ಅವಕಾಶ ನೀಡಿರುವುದು ಮತ್ತು ಪೋಷಕರಿಗೆ ಆಂಗ್ಲ ಮಾಧ್ಯಮದತ್ತ ಇರುವ ವ್ಯಾಮೋಹ ಇದಕ್ಕೆ ಕಾರಣ. ಬಹುಪಾಲು ಬಡವರು, ಸಾಮಾಜಿಕವಾಗಿ ತುಳಿತಕ್ಕೆ ಒಳಗಾದ ಸಮುದಾಯದ ಮಕ್ಕಳು ಅನಿವಾರ್ಯವಾಗಿ ಸರ್ಕಾರಿ ಶಾಲೆಗಳಿಗೆ ಬರುವ ವಾತಾವರಣ ನಿರ್ಮಾಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಸರ್ಕಾರಿ ಶಾಲೆಗಳು ಮತ್ತು ಮಾತೃಭಾಷಾ ಮಾಧ್ಯಮವನ್ನು ಉಳಿಸುವುದಕ್ಕಾಗಿ ಎಲ್ಲ ರಾಜ್ಯಗಳ ಸಮಾನ ಮನಸ್ಕರು ಸಂಘಟಿತರಾಗಬೇಕು. ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಮಾಧ್ಯಮ ನೆಲೆಗೊಳಿಸಲು ಸಂವಿಧಾನಾತ್ಮಕ ಕ್ರಮಕ್ಕಾಗಿ ಒತ್ತಾಯಿಸಬೇಕು; ಹೋರಾಟ ನಡೆಸಬೇಕು. ಇಲ್ಲದಿದ್ದರೆ ಶೈಕ್ಷಣಿಕ ಅಸಮಾನತೆ ಇನ್ನೂ ಹೆಚ್ಚಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.