ಮಂಗಳವಾರ, ಮೇ 11, 2021
24 °C

ತಜ್ಞರ ಸಲಹೆ ಪಡೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಂಪಿಯ ದೇವಸ್ಥಾನಗಳು ಹಾಗೂ ಐತಿಹಾಸಿಕ ಸ್ಮಾರಕಗಳ ಸುರಕ್ಷತಾ ವಲಯದಲ್ಲಿ ಅಕ್ರಮ ಕಟ್ಟಡಗಳಿಗೆ ಅವಕಾಶ ಕೊಡಬಾರದು ಎಂಬ ರಾಜ್ಯ ಹೈಕೋಟಿನ ವಿಭಾಗೀಯ ಪೀಠದ ಆದೇಶ ಹಂಪಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕೈಗೊಂಡಿರುವ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಎತ್ತಿ ಹಿಡಿಯುವ ಮಹತ್ವದ ನಿರ್ಧಾರ.ವಿರೂಪಾಕ್ಷ ದೇವಸ್ಥಾನ ಬೀದಿಯಲ್ಲಿರುವ ವಿಜಯನಗರ ಕಾಲದ ಮಂಟಪಗಳ ಅತಿಕ್ರಮಣವನ್ನು ಹಂಪಿ ಪ್ರಾಧಿಕಾರ ಈಗಾಗಲೇ ತೆರವುಗೊಳಿಸಿದೆ.

 

ತೆರವು ವಿರುದ್ಧ ಸ್ಥಳೀಯರ ಆಕ್ಷೇಪಗಳು ಸಮರ್ಥನೀಯವಲ್ಲ. ಯಾವುದೇ ಕಾರಣಕ್ಕೂ ಒತ್ತುವರಿಯನ್ನು ಸಹಿಸುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಇಡೀ ಹಂಪಿಯನ್ನು ಯುನೆಸ್ಕೊ `ವಿಶ್ವ ಪರಂಪರೆಯ ತಾಣ~ಎಂದು ಘೋಷಿಸಿದೆ.

 

ಯುನೆಸ್ಕೊ ನಿಗದಿ ಪಡಿಸಿರುವ ಸಂರಕ್ಷಣಾ ಮಾನದಂಡಗಳನ್ನು ಅಳವಡಿಸಿಕೊಂಡು ಸ್ಮಾರಕಗಳನ್ನು ಸಂರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಸರ್ಕಾರ ತಜ್ಞರ ಸಲಹೆಯನ್ನೂ ಪಡೆಯಬೇಕು.1980ರ ದಶಕದಲ್ಲೇ ರಾಜ್ಯ ಸರ್ಕಾರ ಮಂಟಪಗಳ ತೆರವಿಗೆ ಆದೇಶ ಹೊರಡಿಸಿತ್ತು. ರಾಜಕೀಯ ಕಾರಣಗಳಿಂದಾಗಿ ತೆರವು ಸಾಧ್ಯವಾಗಿರಲಿಲ್ಲ. ಮಂಟಪಗಳನ್ನು ಮಳಿಗೆಗಳನ್ನಾಗಿ ಪರಿವರ್ತಿಸಿ ಅಲ್ಲಿ ನಾನಾ ವಸ್ತುಗಳ ಮಾರಾಟ ನಡೆಯುತ್ತಿತ್ತು.ಕೆಲ ಮಂಟಪಗಳು ವಾಸದ ಮನೆಗಳಾಗಿದ್ದವು. ಅತಿಕ್ರಮಣ ತೆರವುಗೊಳಿಸದಿದ್ದರೆ `ವಿಶ್ವ ಪರಂಪರೆಯ ತಾಣ~ದ ಮಾನ್ಯತೆಯನ್ನೇ ಹಿಂಪಡೆಯುವ ಎಚ್ಚರಿಕೆಯನ್ನು ಯುನೆಸ್ಕೊ ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರಾಧಿಕಾರ ತೆಗೆದುಕೊಂಡ ಕ್ರಮಗಳು ಸ್ವಾಗತಾರ್ಹ.ಸ್ಮಾರಕಗಳ ಸಂರಕ್ಷಣೆಯೂ ಆಗಬೇಕು, ಅತಿಕ್ರಮಣವನ್ನೂ ತೆರವುಗೊಳಿಸಬಾರದು ಎಂಬ ಸ್ಥಳೀಯರ ಧೋರಣೆಯನ್ನು ಒಪ್ಪಲಾಗದು. ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಸ್ಮಾರಕಗಳಿಗೆ ಉಳಿಗಾಲವಿಲ್ಲ.ಹಂಪಿ, ಕರ್ನಾಟಕದ ಸಂಸ್ಕೃತಿ ಹಾಗೂ ಪರಂಪರೆ ಸಂಕೇತ. ಅದು ಇಡೀ ಜಗತ್ತಿನ ಗಮನ ಸೆಳೆದಿದೆ. ಹಂಪಿಯ ಸ್ಮಾರಕಗಳ ಸುತ್ತಲಿನ ಭೂಮಿ ಅತಿಕ್ರಮಣ ಅಗಾಧ ಸ್ವರೂಪದ್ದು. ರಕ್ಕಸತಂಗಡಿ ಯುದ್ಧದ ನಂತರ ಹಂಪಿ ನಾಶವಾಯಿತು.ನಂತರದ ದಿನಗಳಲ್ಲಿ ಹಂಪಿಯನ್ನು ರಕ್ಷಣೆ ಮಾಡುವ ಸ್ಥಳೀಯ ಆಡಳಿತ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಮೂರುನಾಲ್ಕು ಶತಮಾನಗಳ ಹಿಂದಿನಿಂದಲೂ ಒತ್ತುವರಿ ಆಗುತ್ತಲೇ ಇದೆ.ಸ್ಮಾರಕಗಳ ಸುತ್ತಲಿನ ಭೂಮಿಯಲ್ಲಿ ಸಾಗುವಳಿ ನಡೆಯುತ್ತಿದೆ. ಅದನ್ನೆಲ್ಲ ತೆರವುಗೊಳಿಸುವುದು ದೊಡ್ಡ ಸವಾಲು. ಅದೇನೇ ಇರಲಿ, ಹಂಪಿ ನೋಡಲು ಬರುವ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳನ್ನೂ ಒದಗಿಸುವುದಕ್ಕೂ ಸರ್ಕಾರ ಗಮನ ಕೊಡಬೇಕು.

 

ಹಂಪಿಯ ಸ್ಮಾರಕಗಳು ವಿಶಾಲ ಭೂ ಪ್ರದೇಶದಲ್ಲಿ ಹರಡಿಕೊಂಡಿರುವುದರಿಂದ ಒತ್ತುವರಿಯ ಮೇಲೆ ನಿಗಾ ಇಡಲು ಸರ್ಕಾರ ಗಮನ ಕೊಡಬೇಕು. ಸ್ಮಾರಕಗಳ ಸಮೀಪದಲ್ಲಿ ವಾಹನ ಓಡಾಟ ನಿರ್ಬಂಧಿಸುವ ಬಗ್ಗೆಯೂ ನಿರ್ಧರಿಸಬೇಕು.

 

ಅಲ್ಲಿನ ಕಲ್ಲುಬಂಡೆಗಳ ಮೇಲೆ ಗಾಢ ಬಣ್ಣಗಳಲ್ಲಿ ಜಾಹೀರಾತು ಘೋಷಣೆಗಳನ್ನು ಬರೆಯುವವರ ವಿರುದ್ಧವೂ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. ಸ್ಮಾರಕ ಸಂರಕ್ಷಣೆ ಮತ್ತು ಒತ್ತುವರಿ ಆಗದಂತೆ ನೋಡಿಕೊಳ್ಳಲು ಕಾವಲು ಸಮಿತಿಯ ಅಗತ್ಯವಿದೆ. ಸರ್ಕಾರ ಈ ನಿಟ್ಟಿನಲ್ಲಿ ಆಲೋಚಿಸಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.