ಸೋಮವಾರ, ಆಗಸ್ಟ್ 10, 2020
24 °C
`ಪಾರಿವಾಳ ಗುಡ್ಡ ಉಳಿಸಿ' ಘೋಷಣೆಯಡಿ ಪ್ರತಿಭಟನೆ * ವಿವಿಧ ಸಂಘಟನೆಗಳು ಭಾಗಿ

ತಡೆಗೋಡೆ-ಒತ್ತುವರಿ ತೆರವಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಡೆಗೋಡೆ-ಒತ್ತುವರಿ ತೆರವಿಗೆ ಆಗ್ರಹ

ದೇವನಹಳ್ಳಿ: ಇಲ್ಲಿನ ಐತಿಹಾಸಿಕ ಪಾರಿವಾಳ ಗುಡ್ಡ ಉಳಿಸಬೇಕು ಎಂಬ ಘೋಷಣೆಯಡಿ ತಾಲ್ಲೂಕಿನ ವಿವಿಧ ಸಂಘಟನೆಗಳು ಬುಧವಾರ ಮಿನಿ ವಿಧಾನಸೌಧದ ಆವರಣದಲ್ಲಿ ಪ್ರತಿಭಟನೆ ನಡೆಸಿದವು.ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪಾರಿವಾಳ ಗುಡ್ಡ ಸಂರಕ್ಷಣಾ ಸಮಿತಿ ಅಧ್ಯಕ್ಷ ಸಿ.ಮುನಿರಾಜು ಮಾತನಾಡಿ ಪ್ರತಿಭಟನೆಯ ಉದ್ದೇಶವನ್ನು ವಿವರಿಸಿದರು.`ಅಂದಿನ ಸರ್ಕಾರವು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ 1998-99ರಲ್ಲಿ ಪಾರಿವಾಳ ಗುಡ್ಡದ ವ್ಯಾಪ್ತಿಯಲ್ಲಿನ 50 ಎಕರೆ ಭೂಮಿಯಲ್ಲಿ 30.09 ಎಕರೆ ಸ್ಥಳವನ್ನು ಜೈನ ಟ್ರಸ್ಟ್‌ಗೆ 99 ವರ್ಷಗಳ ಗುತ್ತಿಗೆ ನೀಡಿದೆ. ಗುತ್ತಿಗೆ ನೀಡುವಾಗ ಆರು ಷರತ್ತುಗಳನ್ನು ವಿಧಿಸಲಾಗಿತ್ತು. ಈ ಷರತ್ತುಗಳ ಅನುಸಾರ ಶಿಕ್ಷಣ ಸಂಸ್ಥೆ ಆಸ್ಪತ್ರೆ ಅನಾಥಾಶ್ರಮವನ್ನು ಎರಡು ವರ್ಷದೊಳಗೆ ಪ್ರಾರಂಭಿಸಬೇಕು ಎಂದು ಹೇಳಲಾಗಿತ್ತು.ಇಲ್ಲಿನ ಆಂಜನೇಯ ದೇವಾಲಯದ ಅಭಿವೃದ್ಧಿಯನ್ನೂ ಜೈನಮಂದಿರಗಳ ಅಭಿವೃದ್ಧಿಯ ಜೊತೆಜೊತೆಗೆ ಕೊಂಡೊಯ್ಯಬೇಕು ಎಂದು ಹೇಳಲಾಗಿತ್ತು. ಆದರೆ, ಟ್ರಸ್ಟ್ ಇದಕ್ಕೆ ವ್ಯತಿರಿಕ್ತ ನಡೆದುಕೊಂಡು ಬರುತ್ತಿದೆ. ಗುಡ್ಡದ ಮೇಲ್ಭಾಗದಲ್ಲಿರುವ ಗಣಪತಿ, ಕನಕ ಮಂಟಪ, ಬೀರೇಶ್ವರ ದೇವಾಲಯಕ್ಕೆ ಹೋಗಿ ಬರುವ ಈ ಹಿಂದಿನ ರಸ್ತೆಗೆ ಅಡ್ಡವಾಗಿ ತಡೆಗೋಡೆ ನಿರ್ಮಿಸಿದೆ.ಇದರಿಂದ ಈ ದೇಗುಲಗಳ ಭಕ್ತರ ಧಾರ್ಮಿಕ ಆಚರಣೆಗೆ ಧಕ್ಕೆ ಉಂಟಾಗಿದೆ. ಆದ್ದರಿಂದ ಕೂಡಲೇ ಈ ತಡೆಗೋಡೆಯನ್ನು ತೆರವುಗೊಳಿಸಬೇಕು. ಈ ನಿಟ್ಟಿನಲ್ಲಿ ಈ ಹಿಂದೆ ಅನೇಕ ಬಾರಿ ಪ್ರತಿಭಟನೆಯನ್ನೂ ನಡೆಸಲಾಗಿತ್ತು. ತಡೆಗೋಡೆ ನಿರ್ಮಿಸಿರುವ ಜಾಗ ದೇವಾಲಯಕ್ಕೆ ಮೀಸಲು ಎಂದು ಜಿಲ್ಲಾಧಿಕಾರಿ ಆದೇಶ ನೀಡಿದ್ದರೂ ಮತ್ತೆ ಹತ್ತು ಎಕರೆ ಭೂಮಿಯನ್ನು ಟ್ರಸ್ಟ್‌ಗೆ ನೀಡುವಂತೆ ಶಿಫಾರಸು ಮಾಡಲಾಗಿದೆ' ಎಂದು ಆರೋಪಿಸಿದರು.ಚಿಕ್ಕಬಳ್ಳಾಪುರ ಟಿಪ್ಪು ಯುವ ವೇದಿಕೆ ಅಧ್ಯಕ್ಷ ಷರೀಫ್, `ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಧಾರ್ಮಿಕ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ. ಪಾರಂಪರಿಕ ಸಂಪ್ರದಾಯಗಳ ಆಚರಣೆಗೆ ಅಡ್ಡಿ ಉಂಟುಮಾಡಲಾಗುತ್ತಿರುವುದು ದುರದೃಷ್ಟಕರ' ಎಂದರು.ರೈತ ಸಂಘದ ಗೌರವಾಧ್ಯಕ್ಷ ವಕೀಲ ಸಿದ್ದಾರ್ಥ ಮಾತನಾಡಿ, `ಭ್ರಷ್ಟ ಅಧಿಕಾರಿಗಳು ಖಾಸಗಿಯವರೊಂದಿಗೆ ಶಾಮೀಲಾಗಿ ಸಾರ್ವಜನಿಕ ಸ್ವತ್ತುಗಳನ್ನು ಲೂಟಿ ಮಾಡುತ್ತಿದ್ದಾರೆ. ಪಾರಿವಾಳ ಗುಡ್ಡದ 50 ಎಕರೆ ಪ್ರದೇಶದಲ್ಲಿ ಬಂಡೆ, ಖರಾಬು, ಗೋಮಾಳ, ಗಿಡ ಮರ ಹಾಗೂ ಪಕ್ಷಿಸಂಕುಲ ನಾಶವಾಗಿದೆ. ಆದ್ದರಿಂದ ಸರ್ಕಾರ ಸೂಕ್ತ ರೀತಿಯಲ್ಲಿ ಶೀಘ್ರವೇ ಕ್ರಮ ಜರುಗಿಸಬೇಕು' ಎಂದು ಒತ್ತಾಯಿಸಿದರು.ಜಿಲ್ಲಾ ರೈತ ಸಂಘದ ಅಧ್ಯಕ್ಷ ವೆಂಕಟನಾರಾಯಣಪ್ಪ ಮಾತನಾಡಿ, `ಪಟ್ಟಣ ವ್ಯಾಪ್ತಿಯಲ್ಲಿನ ಸ.ನಂ 438ರ 1-00 ಎಕರೆ, ಸ.ನಂ 221 ರಲ್ಲಿ 0-17 ಗುಂಟೆ, ಸ.ನಂ 212 ರ 0-30 ಗುಂಟೆ ಮತ್ತು ಚಿಕ್ಕಮದ್ದಯ್ಯನ ಧರ್ಮಛತ್ರ ಇವುಗಳು ಪುರಾತನ ಸ್ವತ್ತುಗಳು. ಪ್ರಸ್ತುತ ಇವುಗಳ ಮಾರುಕಟ್ಟೆ ಮೌಲ್ಯ 40 ರಿಂದ 50 ಕೋಟಿ ರೂ ಇದೆ. ಇವೆಲ್ಲಾ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿವೆ. ಆದರೆ ಇವುಗಳಲ್ಲಿ ಸಂಬಂಧಪಟ್ಟ ಇಲಾಖೆಗಳಲ್ಲಿ ದಾಖಲಾತಿಯನ್ನು ತಿರುಚಿ ಖಾಸಗಿಯವರು ಇವುಗಳ ಅಕ್ರಮ ಪರಭಾರೆಗೆ ಮುಂದಾಗಿದ್ದಾರೆ. ಈ ಬಗ್ಗೆ ಸಿಬಿಐನಿಂದ ತನಿಖೆಯಾಗಬೇಕು' ಎಂದು ಆಗ್ರಹಿಸಿದರು.ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್, ತಾಲ್ಲೂಕು ಅಧ್ಯಕ್ಷ ಶಶಿಧರ್, ಅರುಂಧತಿ ಸೇವಾ ಸಂಸ್ಥೆಯ ಅಧ್ಯಕ್ಷ ಬಿ.ಕೆ.ಶಿವಪ್ಪ, ಮಾದಿಗ ದಂಡೋರ ರಾಜ್ಯ ಘಟಕದ ಉಪಾಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ, ವಿಎಚ್‌ಪಿ ತಾಲ್ಲೂಕು ಘಟಕದ ಅಧ್ಯಕ್ಷ ರಾಜಮಣಿ, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ಅಧ್ಯಕ್ಷ ರವಿ, ಹಿಂದುಳಿದ ಜಾತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ದಾಸಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಅಂಬರೀಷ್, ಮೌಕ್ತಿಕಾಂಭ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ್, ತಿಗಳರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ, ಸದಸ್ಯ ರವಿಂದ್ರ, ಶಶಿಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ವಸಂತಬಾಬು, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಎಸ್.ಎಂ.ಆನಂದ್ ಕುಮಾರ್ ಇದ್ದರು.ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.`ಸದನದಲ್ಲಿ ಪ್ರಸ್ತಾಪಿಸುತ್ತೇನೆ'

ಈ ಸಂದರ್ಭದಲ್ಲಿ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಶಾಸಕ ಪಿಳ್ಳಮುನಿಶ್ಯಾಮಪ್ಪ, `ಸರ್ಕಾರಿ ಸ್ವತ್ತು ಉಳಿಯಬೇಕು. ಪಾರಿವಾಳ ಗುಡ್ಡದ ಅಕ್ರಮ ಒತ್ತುವರಿ ತಡೆಯಲೇಬೇಕು. ಈ ಸಮಸ್ಯೆ ಬಗ್ಗೆ ಬರಲಿರುವ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ. ಇದಕ್ಕೆ ಸೂಕ್ತ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸುತ್ತೇನೆ' ಎಂದು ಭರವಸೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.