ಗುರುವಾರ , ಆಗಸ್ಟ್ 6, 2020
27 °C
ಮೂರು ಕಾಯ್ದೆಗಳಿಗೆ 22 ತಿದ್ದುಪಡಿ

ತನಿಖೆ-ಬಂಧನ: `ಸೆಬಿ'ಗೆ ಪರಮಾಧಿಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತನಿಖೆ-ಬಂಧನ: `ಸೆಬಿ'ಗೆ ಪರಮಾಧಿಕಾರ

ನವದೆಹಲಿ (ಪಿಟಿಐ): ಠೇವಣಿ ಸಂಗ್ರಹ, ಹೂಡಿಕೆ ಆಕರ್ಷಣೆ ಮತ್ತು ಹಣಕಾಸು ಸೇವಾ ಚಟುವಟಿಕೆಗಳ ಮೂಲಕ ಅಕ್ರಮವಾಗಿ ಗಳಿಸಿದ ಸಂಪತ್ತನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ವಂಚಕ ಸಂಸ್ಥೆಯ ಮುಖ್ಯಸ್ಥ ಮತ್ತು ಉನ್ನತ ಅಧಿಕಾರಿ ವಿರುದ್ಧ ತನಿಖೆ, ವಶಕ್ಕೆ ಪಡೆದು ವಿಚಾರಣೆ ನಡೆಸುವುದು, ಬಂಧನಕ್ಕೆ ಒಳಪಡಿಸುವುದೂ ಸೇರಿದಂತೆ ಹೆಚ್ಚಿನ ಅಧಿಕಾರವನ್ನು `ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ'ಗೆ(ಸೆಬಿ) ಕೇಂದ್ರ ಸರ್ಕಾರ ನೀಡಿದೆ.ಇದಕ್ಕೆ ಸಂಬಂಧಿಸಿದಂತೆ `ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ(ಎಸ್‌ಇಬಿಐ) ಕಾಯ್ದೆ', ಸಾಲಪತ್ರ ಕರಾರು ನಿಯಂತ್ರಣ ಕಾಯ್ದೆ(ಎಸ್‌ಸಿಆರ್‌ಎ) ಮತ್ತು ಹೂಡಿಕೆದಾರರ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಈ ಮೂರು ಕಾಯ್ದೆಗಳಿಗೆ ತರಲಾದ ಒಟ್ಟು 22 ತಿದ್ದುಪಡಿಗಳಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಕಳೆದ ವಾರವೇ ಒಪ್ಪಿಗೆ ನೀಡಿದ್ದಾರೆ.ಹೆಚ್ಚಿನ ಅಧಿಕಾರ ಲಭಿಸಿರುವುದರಿಂದ `ಸೆಬಿ' ಇನ್ನು ಮುಂದೆ ತಪ್ಪಿತಸ್ಥ ವ್ಯಕ್ತಿಗಳ ವಿರುದ್ಧ ನೇರವಾಗಿ ಕ್ರಮ ಕೈಗೊಳ್ಳಬಹುದು. ಆರೋಪಿಗಳನ್ನು ಬಂಧಿಸಲೂ ಆದೇಶ ಹೊರಡಿಸಬಹುದು. ಅಕ್ರಮ ಗಳಿಕೆ ಜಪ್ತಿ ಅಥವಾ ಅಷ್ಟೇ ಮೌಲ್ಯದ ದಂಡ ವಿಧಿಸಬಹುದು. ಇದಕ್ಕಾಗಿ ವಸೂಲಿ ಅಧಿಕಾರಿಗಳನ್ನೂ ನೇಮಿಸಿಕೊಳ್ಳಬಹುದು. 15 ವರ್ಷಗಳಷ್ಟು ಹಳೆಯದಾದ ಪ್ರಕರಣಗಳಲ್ಲಿಯೂ ದಾಖಲೆ ವಶಪಡಿಸಿಕೊಂಡು ತನಿಖೆಗೆ ಆದೇಶಿಸಬಹುದು. ವಂಚನೆ ನಡೆಸಿದ ಆರೋಪಕ್ಕೊಳಗಾದ ಯಾವುದೇ ಕಂಪೆನಿ, ಸಂಸ್ಥೆ ಅಥವಾ ವ್ಯಕ್ತಿಯ ಬ್ಯಾಂಕ್ ಖಾತೆ ವಿವರ ಪರಿಶೀಲಿಸಬಹುದು.ಅಗತ್ಯ ಬಿದ್ದರೆ ದೇಶದಲ್ಲಿರುವ ಮತ್ತು ವಿದೇಶಗಳಲ್ಲಿರುವ ಇತರೆ ನಿಯಂತ್ರಣಾ ಸಂಸ್ಥೆಗಳಿಂದಲೂ ಮಾಹಿತಿ ಪಡೆದುಕೊಳ್ಳುವ ಅಧಿಕಾರವನ್ನು `ಸೆಬಿ'ಗೆ ನೀಡಲಾಗಿದೆ. ಆರೋಪಿಗೆ ಸೇರಿದ ಕಟ್ಟಡ, ಕಚೇರಿ, ಮನೆಗೆ ಪ್ರವೇಶಿಸಿ, ಆರೋಪಿ ಸಂಚರಿಸುವ ವಾಹನ, ವಿಮಾನ ತಡೆದು ವಿಚಾರಣೆಗೊಳಪಡಿಸಬಹುದು.

 

ಸಂಶಯಾಸ್ಪದ ವ್ಯಕ್ತಿಗಳ ಮನೆಗೆ ಬೀಗ ಹಾಕಿದ್ದರೆ ಮುರಿದು ಒಳ ಪ್ರವೇಶಿಸಿ ತನಿಖೆ ನಡೆಸಬಹುದು. ಆರೋಪಿ ವ್ಯಕ್ತಿ ಅಥವಾ ಕಂಪೆನಿ ತಮಗೆ ಸಂಬಂಧಿಸಿದ ಆರು ವರ್ಷಕ್ಕಿಂತಲೂ ಹಳೆಯದಾದ ಪ್ರಕರಣಗಳನ್ನು ಶೀರ್ಘರ ಇತ್ಯರ್ಥಪಡಿಸುವಂತೆ `ಸೆಬಿ'ಗೆ ಮನವಿ ಸಲ್ಲಿಸಬಹುದು.ಕಾಯ್ದೆಯ ತಿದ್ದುಪಡಿಯಲ್ಲಿ ಇಂತಹ ಪ್ರಕರಣಗಳ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ. ಒಬ್ಬರೇ ನ್ಯಾಯಾಧೀಶರು ಕೋರ್ಟ್ ಕಲಾಪ ನಿರ್ವಹಿಸುತ್ತಾರೆ. ಹೆಚ್ಚಿನ ಅಧಿಕಾರ ನೀಡಿರುವುದರ ಜತೆಗೇ,  ತನಿಖೆಗಾಗಿ ವಶಪಡಿಸಿಕೊಳ್ಳುವ ದಾಖಲೆಗಳನ್ನು `ಎಲೆಕ್ಟ್ರಾನಿಕ್ ಮಾದರಿಯಲ್ಲಿ' ಸಂರಕ್ಷಿಸಿ ಇಡುವಂತೆಯೂ `ಸೆಬಿ'ಗೆ ಸರ್ಕಾರ ಸೂಚನೆ ನೀಡಿದೆ.ವಂಚನೆ ತಡೆಗೆ ಕ್ರಮ

ಅಕ್ರಮ ಚಿಟ್ ಫಂಡ್ ಯೋಜನೆಗಳು, ಸಂಚಿತ ಹೂಡಿಕೆ ಯೋಜನೆಗಳಿಂದ(ಸಿಐಎಸ್) ಸಾರ್ವಜನಿಕರು ಮೋಸ ಹೋಗುವುದನ್ನು ತಡೆಗಟ್ಟಲೆಂದೇ `ಸೆಬಿ'ಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಸರ್ಕಾರ ಪ್ರಕಟಿಸಿರುವ ಹೂಡಿಕೆ ಯೋಜನೆಗಳನ್ನು ಹೊರತುಪಡಿಸಿ, ಇತರೆ ಯಾವುದೇ ಸಂಚಿತ ಠೇವಣಿಗಳು, ಹೂಡಿಕೆಗಳಿಗಾಗಿ ಸಾರ್ವಜನಿಕರಿಂದ 100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಹಣ ಸಂಗ್ರಹಿಸಿದರೆ ಅದನ್ನು ವರ್ಗೀಕರಿಸಿ `ಸೆಬಿ'ಗೆ ಮಾಹಿತಿ ನೀಡುವುದನ್ನು ಹೊಸ ಕಾಯ್ದೆ ಕಡ್ಡಾಯಗೊಳಿಸಿದೆ. ಆದರೆ, ಸರ್ಕಾರಿ ಹೂಡಿಕೆ ಯೋಜನೆಗಳನ್ನು`ಸೆಬಿ' ಅಧಿಕಾರ ವ್ಯಾಪ್ತಿಯಿಂದ ಹೊರಗಿರಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.