ಕರ್ನಾಟಕದ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಿಗೆ ಬೆಳೆ ಬೆಳೆಯದಂತೆ ನಿರ್ಬಂಧ ಹೇರುವಂತೆ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟಿನ ಮೊರೆಹೋಗಿದೆ. ಕರ್ನಾಟಕ ತನ್ನ ಪಾಲಿನ ನೀರನ್ನು ಬಳಸಿಕೊಂಡು ಬೇಸಿಗೆ ಬೆಳೆ ಬೆಳೆದರೆ ಅದರಿಂದ ತಮಿಳುನಾಡಿಗೆ ನಷ್ಟವಾಗುತ್ತದೆ ಎಂಬ ವಾದದಲ್ಲಿ ಹುರುಳಿಲ್ಲ. ಕರ್ನಾಟಕ ಹೆಚ್ಚು ನೀರು ಬಳಸಿಕೊಳ್ಳುತ್ತಿದೆ ಎಂಬ ತಮಿಳುನಾಡಿನ ಆರೋಪ ಹೊಸದಲ್ಲ. ಕಾವೇರಿ ನದಿ ನೀರು ಹಂಚಿಕೆಯ ಸೂತ್ರಕ್ಕೆ ಕರ್ನಾಟಕ ಬದ್ಧವಾಗಿರುವುದರಿಂದ ಹೆಚ್ಚಿನ ನೀರು ಬಳಸಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ರಾಜ್ಯದ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರು ಹತ್ತಾರು ವರ್ಷಗಳಿಂದ ಬೇಸಿಗೆ ಬೆಳೆ ಬೆಳೆಯುತ್ತಿದ್ದಾರೆ. ಅದು ಅವರ ಹಕ್ಕು. ಈ ಹಕ್ಕನ್ನು ಕಸಿಯುವ ಅಥವಾ ಮೊಟಕು ಮಾಡುವ ಪ್ರಯತ್ನಕ್ಕೆ ತಮಿಳುನಾಡು ಕೈಹಾಕಿರುವುದು ದುರದೃಷ್ಟಕರ.

ಕಾವೇರಿ ಐತೀರ್ಪು ಪುನರ್ಪರಿಶೀಲಿಸಲು ನ್ಯಾಯಮಂಡಳಿಗೆ ನಿರ್ದೇಶನ ನೀಡಬೇಕು ಎಂದು ತಮಿಳುನಾಡು ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ ನಂತರ ಹತಾಶವಾಗಿದ್ದ ತಮಿಳುನಾಡು ಈಗ ಬೇಸಿಗೆ ಬೆಳೆ ನಿಯಂತ್ರಿಸುವ ಹೊಸ ತಗಾದೆ ತೆಗೆದು ಕರ್ನಾಟಕಕ್ಕೆ ಕಿರುಕುಳ ನೀಡಲು ಹೊರಟಿದೆ. ಇದು ತಮಿಳುನಾಡಿನ ದುರಾಸೆ ಮತ್ತು ಹತಾಶೆಯನ್ನು ತೋರಿಸುತ್ತದೆ. ಕರ್ನಾಟಕ ತನ್ನ ಪಾಲಿನ ನೀರನ್ನು ತನಗೆ ಬೇಕಾದಂತೆ ಬಳಸಿಕೊಳ್ಳಲು ಅಡ್ಡಿ ಮಾಡುವುದನ್ನು ಸಹಿಸಲಾಗದು. ತಮಿಳುನಾಡಿನ ತಕರಾರುಗಳಿಗೆ ರಾಜ್ಯ ಸರ್ಕಾರ ಕಾನೂನು ಮೂಲಕವೇ ಉತ್ತರಿಸಬೇಕು. ಬೇಸಿಗೆ ಬೆಳೆ ಬೆಳೆಯುವ ರಾಜ್ಯದ ರೈತರ ಹಿತಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ.

ರಾಜ್ಯದಲ್ಲಿ ಕಳೆದ ಹತ್ತಾರು ವರ್ಷಗಳಿಂದ ಬೇಸಿಗೆ ಬೆಳೆಗೆ ನೀರು ಪೂರೈಸಲಾಗುತ್ತಿದೆ. ಈಗ ನೀರು ಪೂರೈಕೆ ನಿಲ್ಲಿಸಲು ಹೊರಟರೆ ಅಚ್ಚುಕಟ್ಟು ಪ್ರದೇಶದ ರೈತರು ಅದರ ವಿರುದ್ಧ ಹೋರಾಟಕ್ಕೆ ಮುಂದಾಗುತ್ತಾರೆ. ಬೇಸಿಗೆ ಬೆಳೆಗೆ ನೀರು ಪೂರೈಸುವುದಿಲ್ಲ ಎಂದು ಹೇಳುವುದು ಜೇನುಗೂಡಿಗೆ ಕಲ್ಲೆಸೆದಂತೆ. ಕೃಷ್ಣರಾಜ ಸಾಗರದ ನೀರನ್ನು ಬಳಸದೇ ಜಲಾಶಯದಲ್ಲೇ ಸಂಗ್ರಹಿಸಿಟ್ಟುಕೊಳ್ಳುವುದರಿಂದ ಏನು ಪ್ರಯೋಜನ? ತಮಿಳುನಾಡು ಪಾಲಿನ ನೀರನ್ನು ಬಿಟ್ಟನಂತರ ಉಳಿಯುವ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಹಕ್ಕು ಕರ್ನಾಟಕಕ್ಕೆ ಇದೆ. ಮುಂದಿನ ಮುಂಗಾರಿನಲ್ಲಿ ಸಕಾಲದಲ್ಲಿ ತಮಿಳುನಾಡಿಗೆ ನೀರು ಬಿಡಲು ಅನುಕೂಲವಾಗುವ ದೃಷ್ಟಿಯಿಂದ ಜಲಾಶಯದ ಸಂಗ್ರಹ ಮಟ್ಟ ಕಾಪಾಡಿಕೊಳ್ಳಬೇಕು ಎಂಬ ತಮಿಳುನಾಡಿನ ವಾದವನ್ನು ಒಪ್ಪಲಾಗದು.

ಕೃಷ್ಣರಾಜಸಾಗರ ಇರುವುದು ತಮಿಳುನಾಡಿನ ಹಿತರಕ್ಷಣೆಗಲ್ಲ. ಈ ವರ್ಷ ಕಾವೇರಿ ಕಣಿವೆಯ ಜಿಲ್ಲೆಗಳಲ್ಲೂ ನೀರಿನ ಕೊರತೆ ಇದೆ. ಬೆಂಗಳೂರು, ಮೈಸೂರು ಸೇರಿದಂತೆ ಅನೇಕ ನಗರ ಹಾಗೂ ಪಟ್ಟಣಗಳು ಕುಡಿಯವ ನೀರಿಗೆ ಕೃಷ್ಣರಾಜ ಸಾಗರವನ್ನು ಅವಲಂಬಿಸಿವೆ. ಮಳೆಗಾಲ ಆರಂಭವಾಗುವವರೆಗೆ ಜಲಾಶಯದ ನೀರನ್ನು ನಾಜೂಕಾಗಿ ಬಳಸಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ. ರಾಜ್ಯ ಸರ್ಕಾರ ತಕ್ಷಣ ಸರ್ವ ಪಕ್ಷಗಳ ಸಭೆ ಕರೆದು ಕಾವೇರಿ ನೀರಿನ ಹಕ್ಕು ರಕ್ಷಣೆಗೆ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಬೇಕು. ರಾಜ್ಯದ ರೈತರ ಹಿತರಕ್ಷಣೆಯ ಅಗತ್ಯವನ್ನು ಸುಪ್ರೀಂಕೋರ್ಟಿಗೆ ಮನದಟ್ಟು ಮಾಡಿಕೊಡಬೇಕು. ಆಡಳಿತ ಪಕ್ಷದಲ್ಲಿನ ಗುಂಪುಗಾರಿಕೆಯಿಂದ ಸರ್ಕಾರ ದುರ್ಬಲವಾಗಿದೆ ಎಂಬ ಭಾವನೆ ಬೆಳೆದಿದೆ. ಸರ್ಕಾರದ ದೌರ್ಬಲ್ಯ ರಾಜ್ಯದ ರೈತರ ಹಿತಕ್ಕೆ ಮಾರಕ ಆಗಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.