ಭಾನುವಾರ, ಮೇ 22, 2022
21 °C

ತಮಿಳುನಾಡು : ತೃತೀಯ ರಂಗ ರಚನೆಗೆ ಗಂಭೀರ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಐಎಎನ್‌ಎಸ್): ಚುನಾವಣಾಪೂರ್ವ ಹೊಂದಾಣಿಕೆಗೆ ಸಂಬಂಧಿಸಿದಂತೆ ಅಣ್ಣಾಡಿಎಂಕೆ ಮತ್ತು ಮಿತ್ರ ಪಕ್ಷಗಳ ಮಧ್ಯೆ ಆರಂಭದಲ್ಲಿಯೇ ಒಡಕು ಮೂಡಿದ್ದು, ತೃತೀಯ ರಂಗ ರಚನೆಯ ಮಾತುಗಳು ಕೇಳಿಬರುತ್ತಿವೆ.160 ಸ್ಥಾನಗಳಲ್ಲಿ ಸ್ಪರ್ಧಿಸುವ ನಿರ್ಧಾರವನ್ನು ಅಣ್ಣಾಡಿಎಂಕೆ ಪ್ರಕಟಿಸಿದ ಬೆನ್ನಲ್ಲಿಯೇ ಮಿತ್ರ ಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.ಅಣ್ಣಾಡಿಎಂಕೆಯ ಪ್ರಮುಖ ಮಿತ್ರ ಪಕ್ಷವಾದ ಡಿಎಂಡಿಕೆಯ ಮುಖ್ಯಸ್ಥ ವಿಜಯಕಾಂತ್ ಜತೆ ಇತರ ಮಿತ್ರ ಪಕ್ಷಗಳ ಮುಖಂಡರು ಹೊಸ ಬೆಳವಣಿಗೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.‘ಯಾವುದೇ ಮಹತ್ವದ ನಿರ್ಧಾರಕ್ಕೆ ಬರುವ ಮೊದಲು ನಾವು ಎಲ್ಲರ ಜತೆಗೂ ಚರ್ಚಿಸಬೇಕು, ಶುಕ್ರವಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ’ ಎಂದು ವಿಜಯಕಾಂತ್ ತಿಳಿಸಿದ್ದಾರೆ.ಆಡಳಿತದಲ್ಲಿರುವ ಡಿಎಂಕೆಯನ್ನು ಶತಾಯುಗತಾಯು ಮಣಿಸಬೇಕು ಎಂಬ ಕಾರಣಕ್ಕೆ ಅಣ್ಣಾಡಿಎಂಕೆ ನೇತೃತ್ವದಲ್ಲಿ 10 ಪಕ್ಷಗಳು ಸ್ಥಾನ ಹೊಂದಾಣಿಕೆ ಮಾತುಕತೆ ನಡೆಸಿದ್ದವು. 234 ಸ್ಥಾನಗಳ ಪೈಕಿ 74 ಸ್ಥಾನಗಳ ಹಂಚಿಕೆ ವಿಚಾರದಲ್ಲಿ ಎಐಎಡಿಎಂಕೆ ಮಿತ್ರ ಪಕ್ಷಗಳ ಜತೆ ಒಂದು ಒಪ್ಪಂದಕ್ಕೆ ಬಂದಿದೆ.  ಒಪ್ಪಂದದ ಪ್ರಕಾರ ಡಿಎಂಡಿಕೆ -41, ಸಿಪಿಎಂ -12, ಸಿಪಿಐ-10, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ-1, ಎಂಎನ್‌ಎಂಕೆ-3, ಪಿಟಿ-2 ಎಸ್‌ಎಂಕೆ-2, ಫಾರ್ವರ್ಡ್ ಬ್ಲಾಕ್ -1, ಕೊಂಗು ಯುಥ್ ಫೆಡರೇಷನ್ -1, ಮತ್ತು ಎಐಎಂಎಂಕೆ-1 ಸ್ಥಾನ ನೀಡಲಾಗಿದೆ.ಈ ಮಧ್ಯೆ, ಅಣ್ಣಾಡಿಎಂಕೆ ಏಕಪಕ್ಷೀಯವಾಗಿ 160 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದ್ದರಿಂದ ಮಿತ್ರ ಪಕ್ಷಗಳಲ್ಲಿ ಅಸಮಾಧಾನ ಉಂಟು ಮಾಡಿದೆ ಹಾಗೂ ತೃತೀಯ ರಂಗ ರಚನೆಯ ಮಾತುಗಳು ಕೇಳಿಬರುತ್ತಿದೆ.ಏಕಪಕ್ಷೀಯವಾಗಿ  ಕ್ಷೇತ್ರಗಳನ್ನು ಪ್ರಕಟಿಸುವ ಮೂಲಕ ಅಣ್ಣಾಡಿಎಂಕೆ ತನ್ನ ದೀರ್ಘಕಾಲದ ಮಿತ್ರ ಪಕ್ಷವಾದ ವೈಕೊ ನೇತೃತ್ವದ ಎಂಡಿಎಂಕೆಯನ್ನು ಕಡೆಗಣಿಸಿದೆ.ಇದರಿಂದ ಕುಪಿತಗೊಂಡಿರುವ ಎಂಡಿಎಂಕೆ ಕಾರ್ಯಕರ್ತರು ಜಯಲಲಿತಾ ಅವರ ಪ್ರತಿಕೃತಿಯನ್ನು ದಹಿಸಿದ್ದಾರೆ. ಡಿಎಂಡಿಕೆ, ಸಿಪಿಐ, ಸಿಪಿಎಂ, ಎಂಎಂಕೆ ಮತ್ತು ಫಾರ್ವರ್ಡ್ ಬ್ಲಾಕ್ ಪಕ್ಷಗಳು ಅಣ್ಣಾಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರ ಕ್ರಮದಿಂದ ತೀವ್ರ ಅಸಮಾಧಾನಕ್ಕೆ ಒಳಗಾಗಿವೆ. ಈ ಹಿನ್ನೆಲೆಯಲ್ಲಿ ಎಡಪಕ್ಷಗಳು ಮತ್ತು ಸಣ್ಣ ಪಕ್ಷಗಳ ಮುಖಂಡರು ಸಭೆ ಸೇರಿ ತೃತೀಯ ರಂಗ ರಚನೆಯ ಬಗ್ಗೆ ಚರ್ಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.