ಮಂಗಳವಾರ, ಜನವರಿ 28, 2020
23 °C

ತಮ್ಮಣ್ಣ ವಿರುದ್ಧ ದೂರಿನಲ್ಲಿ ಹುರುಳಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಹುದ್ದೆಯಲ್ಲಿದ್ದ ಅವಧಿಯಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪದ ಮೇಲೆ ಕಿರುಗಾವಲು ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ವಿರುದ್ಧ ಮಾಜಿ ಸಂಸದ ಜಿ.ಮಾದೇಗೌಡ ಸಲ್ಲಿಸಿದ್ದ ಖಾಸಗಿ ದೂರಿನಲ್ಲಿ ಹುರುಳಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದಾರೆ.ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಅಡಿಯಲ್ಲಿ ಮಾದೇಗೌಡ ಅವರು 2011ರ ಫೆಬ್ರುವರಿಯಲ್ಲಿ ತಮ್ಮಣ್ಣ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ದೂರಿನಲ್ಲಿರುವ ಆರೋಪಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು.ತಮ್ಮಣ್ಣ ಅವರು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (ಕೆಐಎಡಿಬಿ) 198ರಿಂದ 1999ರವರೆಗೆ ಮುಖ್ಯ ಅಭಿವೃದ್ಧಿ ಅಧಿಕಾರಿ (ಸಿಡಿಓ) ಹುದ್ದೆಯಲ್ಲಿದ್ದರು. ಈ ಅವಧಿಯಲ್ಲಿ ಬಿಡದಿ ಬಳಿ ಟೊಯೊಟಾ ಕಿರ್ಲೋಸ್ಕರ್ ಕೈಗಾರಿಕಾ ಪ್ರದೇಶ ನಿರ್ಮಾಣದಲ್ಲಿ ಸರ್ಕಾರಕ್ಕೆ 19 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಸಲ್ಲಿಸಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದರು. ಸಿಡಿಓ ಹುದ್ದೆಯಲ್ಲಿದ್ದ ಅವಧಿಯಲ್ಲಿ ಭಾರಿ ಅವ್ಯವಹಾರ ನಡೆಸಿದ್ದು, 180 ಕೋಟಿ ರೂಪಾಯಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪವನ್ನೂ ದೂರಿನಲ್ಲಿ ಸಲ್ಲಿಸಿದ್ದರು.ನ್ಯಾಯಾಲಯದ ಆದೇಶದಂತೆ ತಮ್ಮಣ್ಣ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಲೋಕಾಯುಕ್ತ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಕಳೆದ ಫೆಬ್ರುವರಿ 26ರಂದು ಅವರ ನಿವಾಸಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ದೀರ್ಘಕಾಲ ತನಿಖೆ ನಡೆಸಿದ ಪೊಲೀಸರು, ಮಾದೇಗೌಡ ಅವರು ದೂರಿನಲ್ಲಿ ಉಲ್ಲೇಖಿಸಿದ್ದ ಆರೋಪಗಳು, ಸಲ್ಲಿಸಿದ್ದ ದಾಖಲೆಗಳೊಂದಿಗೆ ತಮ್ಮಣ್ಣ ಅವರು ಸಲ್ಲಿಸಿದ್ದ ಉತ್ತರ, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು. ಗುರುವಾರ ಅಂತಿಮ ವರದಿ ಸಲ್ಲಿಸುವಂತೆ ನ್ಯಾಯಾಲಯ ತನಿಖಾಧಿಕಾರಿಗೆ ಅಂತಿಮ ಗಡುವು ನೀಡಿತ್ತು.8,500 ಪುಟಗಳ ವರದಿ: ಗುರುವಾರ ನ್ಯಾಯಾಲಯಕ್ಕೆ ಹಾಜರಾದ ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಪೊಲೀಸರು, ಅಂತಿಮ ವರದಿ ಮತ್ತು ದಾಖಲೆಗಳನ್ನು ಸಲ್ಲಿಸಿದರು. ತನಿಖಾ ತಂಡ ವರದಿಯೂ ಸೇರಿದಂತೆ 8,500 ಪುಟಗಳಷ್ಟು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಮಾದೇಗೌಡ ಸಲ್ಲಿಸಿದ್ದ ದೂರಿನಲ್ಲಿದ್ದ ಯಾವುದೇ ಆರೋಪವನ್ನೂ ಸಾಬೀತು ಮಾಡುವಂತಹ ದಾಖಲೆಗಳು ತನಿಖೆಯ ವೇಳೆ ಲಭ್ಯವಾಗದ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಕ್ತಾಯಗೊಳಿಸಬಹುದು (`ಬಿ~ ವರದಿ) ಎಂದು ತನಿಖಾ ತಂಡ ವರದಿಯಲ್ಲಿ ಹೇಳಿದೆ.`ಸಿಎಜಿ ವರದಿಯಲ್ಲಿ ಉಲ್ಲೇಖಿಸಿರುವ ವಿಷಯದಲ್ಲಿ ತಮ್ಮಣ್ಣ ಅವರು ಯಾವುದೇ ತಪ್ಪು ಮಾಡಿರುವ ಬಗ್ಗೆ ದಾಖಲೆಗಳಿಲ್ಲ. ಅವರ ಬಳಿ 180 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಇದೆ ಎಂಬ ಆರೋಪದ ಬಗ್ಗೆಯೂ ದಾಖಲೆಗಳು ದೊರೆತಿಲ್ಲ. ತನಿಖೆಯಲ್ಲಿ ಪತ್ತೆಯಾದ ಅಂಶಗಳ ಬಗ್ಗೆ ತಾಂತ್ರಿಕ ತಜ್ಞರು ಮತ್ತು ಕಾನೂನು ತಜ್ಞರ ಸಲಹೆ ಪಡೆದು ಅಂತಿಮ ವರದಿ ಸಲ್ಲಿಸಲಾಗಿದೆ~ ಎಂದು ಲೋಕಾಯುಕ್ತದ ಉನ್ನತ ಮೂಲಗಳು ತಿಳಿಸಿವೆ.ಪ್ರಶ್ನಿಸಲು ನಿರ್ಧಾರ: ಲೋಕಾಯುಕ್ತ ಪೊಲೀಸರ ವರದಿ ಆಧರಿಸಿ ಪ್ರಕರಣದ ಮುಂದಿನ ವಿಚಾರಣೆ ಇದೇ 25ರಂದು ನಡೆಯಲಿದೆ. ಆದರೆ, ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ತನಿಖಾ ವರದಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮಾದೇಗೌಡ, ವರದಿಯನ್ನು ಪ್ರಶ್ನಿಸಿ ಆಕ್ಷೇಪಣೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)