ಶುಕ್ರವಾರ, ಮೇ 20, 2022
20 °C

ತರಳಬಾಳು ಗುರುಭವನಕ್ಕೆ 10 ಕೋಟಿ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ತರಳಬಾಳು ಗುರುಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೆ ` 5 ಕೋಟಿ ಘೋಷಣೆ ಮಾಡಿದರು. ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ವಿದ್ಯಾಭ್ಯಾಸ ನಡೆಸಿದ ನಗರ ಸಮೀಪದ ತೆವರಚಟ್ನಹಳ್ಳಿಯಲ್ಲಿ ಭಾನುವಾರ ‘ತರಳಬಾಳು ಗುರುಭವನ’ಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಈ ಕೊಡುಗೆ ಪ್ರಕಟಿಸಿದರು.ಈ ಹಿಂದೆ ಘೋಷಣೆ ಮಾಡಿದ್ದಂತೆ ` 5 ಕೋಟಿ ಚೆಕ್‌ನ್ನು ಸಮಾರಂಭದಲ್ಲಿ ನೀಡಿದ ಯಡಿಯೂರಪ್ಪ, ಈ ಸಮಾರಂಭದಲ್ಲಿ ಮತ್ತೊಂದು ಸಲ ಮೊದಲ ಕಂತಾಗಿ ಗುರುಭವನಕ್ಕೆ ` ಐದು ಕೋಟಿ ನೀಡುವುದಾಗಿ ಭರವಸೆ ನೀಡಿದರು. ಸರ್ಕಾರ ಮಾಡುವ ಕೆಲಸವನ್ನು ಮಠ-ಮಂದಿರಗಳು ಮಾಡುತ್ತಿರುವುದರಿಂದ ಇಂತಹ ಮಠಗಳಿಗೆ ಸರ್ಕಾರ ಅನುದಾನ ನೀಡಿದರೆ ತಪ್ಪೇನೂ ಇಲ್ಲ ಎಂದು ಯಡಿಯೂರಪ್ಪ ಸಮರ್ಥಿಸಿಕೊಂಡರು.ಗುರುಗಳು ಇದೇ ಗುರುಭವನದಲ್ಲಿ ಸ್ಥಳದಲ್ಲೇ ಹೆಚ್ಚು ವಾಸ್ತವ್ಯ ಹೂಡಲು ಅನುಕೂಲವಾಗುವಂತೆ ಎಲ್ಲ ರೀತಿಯ ನೆರವು ಕಲ್ಪಿಸಲು ಸರ್ಕಾರ ಸಿದ್ಧವಿದೆ ಎಂದರು. ತರಳಬಾಳು ಗುರುಗಳಿಗೂ ಬೇರೆ ಗುರುಗಳಿಗೂ ವ್ಯತ್ಯಾಸವಿದೆ. ಇವರಿಗೆ ವಿಶಾಲವಾದ ದೃಷ್ಟಿಕೋನವಿದ್ದು, ಈ ಸಮಾಜ ಸರಿದಾರಿಯಲ್ಲಿ ಹೋಗಬೇಕು ಎನ್ನುವ ದೃಷ್ಟಿಯಿಂದ ಕ್ರಾಂತಿಕಾರಕ ಕೆಲಸಗಳನ್ನು ಮಾಡುತ್ತಿದ್ದಾರೆ. ಬೇರೆ ದೇಶಗಳಲ್ಲಿ ಹೋಗಿ ಬಸವಣ್ಣನವರ ವಿಚಾರಗಳನ್ನು ಉಪದೇಶಿಸಿದ್ದಾರೆ ಎಂದು ಸ್ಮರಿಸಿದರು.ನದಿದಂಡೆಯಲ್ಲಿ ಕಾಲಕಳೆಯುವ ಕನಸನ್ನು 1979ರಲ್ಲಿ ಕಂಡಿದ್ದೆ. ಈಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೂಲಕ ಅದು ನೆರವೇರುತ್ತಿದೆ. ಮುಖ್ಯಮಂತ್ರಿ ಒತ್ತಡದಿಂದ ಈ ಗುರುಭವನಕ್ಕೆ ಚಾಲನೆ ಸಿಕ್ಕಿದೆ ಎಂದು ಸಿರಿಗೆರೆ ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಹಿಂದೆ ರಾಜಮಹಾಜರು ಮಠ-ಮಂದಿರಗಳಿಗೆ ನೆರವು ನೀಡುತ್ತಾ ಬಂದಿದ್ದರು. ಈಗಿನ ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳು ಮಠ-ಮಂದಿರಗಳಿಗೆ ಹಣ ನೀಡಿದರೆ ತಪ್ಪಿಲ್ಲ ಎಂದು ಸ್ವಾಮೀಜಿ ಪ್ರತಿಪಾದಿಸಿದರು.ಸಂಸದ ಆಯನೂರು ಮಂಜುನಾಥ ಮಾತನಾಡಿ, ಯಡಿಯೂರಪ್ಪ, ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ ಅನುದಾನ ನೀಡುತ್ತಿರುವುದನ್ನು ನೋಡಿದರೆ ಅವರೆಲ್ಲೋ ದಾನಶೂರ ಕರ್ಣನ ದೂರದ ಸಂಬಂಧಿ ಇರಬಹುದು ಎನ್ನಿಸುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಎಲ್ಲ ವಿರೋಧಗಳನ್ನು ಮೆಟ್ಟಿ ನಿಲ್ಲುವ ಉಕ್ಕಿನ ಮನುಷ್ಯ ಎಂದು ಮುಖ್ಯಮಂತ್ರಿಗಳನ್ನು ಬಣ್ಣಿಸಿದ ಅವರು, ‘ಇವರ ಕಡೆ ಎಂಎಲ್‌ಎಗಳನ್ನು ಅವರು ಹೊತ್ತು ಕೊಂಡು (ಜೆಡಿಎಸ್) ಹೋಗಲು ಹೊರಟರೆ, ಇವರು ಅವರಿಗೆ ಒಂದು ಪಾವು ಹಾಲು ಸಿಗದಂತೆ ಕೊಟ್ಟಿಗೆಯನ್ನೇ ಖಾಲಿ ಮಾಡಲು ಹೊರಟ ಗಟ್ಟಿ ನಾಯಕರು’ ಎಂದು ಹೊಗಳಿದರು.ಮಠಾಧೀಶರಿಗೆ ಭೂಮಿಗಿರುವ ಗುರುತ್ವಾಕರ್ಷಣೆ ಇದೆ. ಅವರಿಗೆ ಎಂತಹವರನ್ನೂ ಮೇಲೆಕ್ಕೆತ್ತುವ ಶಕ್ತಿ ಇದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅಭಿಪ್ರಾಯಪಟ್ಟರು. ಸಮಾರಂಭದಲ್ಲಿ ಗುರುಭವನ ನಿರ್ಮಾಣಕ್ಕೆ ನದಿದಂಡೆಯಲ್ಲಿ ಏಳೂವರೆ ಎಕರೆ ಜಾಗ ದಾನ ಮಾಡಿದ ತೆವರಚಟ್ನಹಳ್ಳಿ ಗ್ರಾಮಸ್ಥರನ್ನು ಅತಿಥಿಗಳು ಹಾಗೂ ಸ್ವಾಮೀಜಿ ಸ್ಮರಿಸಿದರು. ಸಮಾರಂಭದಲ್ಲಿ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಕೆಪಿಎಸ್‌ಸಿ ಸದಸ್ಯ ಎಸ್. ರುದ್ರೇಗೌಡ, ಶಾಸಕರಾದ ಕೆ.ಜಿ. ಕುಮಾರಸ್ವಾಮಿ, ಮಾಡಾಳ್ ವಿರೂಪಾಕ್ಷಪ್ಪ, ಜಿ.ಪಂ. ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ, ಉಪಾಧ್ಯಕ್ಷ ಎಚ್.ಬಿ. ಗಂಗಾಧರಪ್ಪ, ನಗರಸಭೆ ಅಧ್ಯಕ್ಷ ಕೆ.ಎಸ್. ಗಂಗಾಧರಪ್ಪ, ‘ಕಾಡಾ’ ಅಧ್ಯಕ್ಷ ಕೆ. ಶೇಖರಪ್ಪ, ‘ಶಿಮೂಲ್’ ಅಧ್ಯಕ್ಷ ಷಣ್ಮುಖಪ್ಪ, ಎಪಿಎಂಸಿ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಕೆ.ಆರ್. ಜಯದೇವಪ್ಪ, ಮಾಜಿ ಸಚಿವ ಜಿ. ಬಸವಣ್ಯಪ್ಪ, ಜಿ.ಪಂ. ಸದಸ್ಯೆ ಗಾಯತ್ರಿ ಷಣ್ಮುಖಪ್ಪ, ಶಿವಮೊಗ್ಗ ತಾ.ಪಂ. ಅಧ್ಯಕ್ಷ ಕೆ.ಬಿ. ಚಂದ್ರಶೇಖರಪ್ಪ, ಸೂಡಾ ಅಧ್ಯಕ್ಷ ಎಸ್. ಜ್ಞಾನೇಶ್ವರ್, ನಗರಸಭಾ ಸದಸ್ಯ ಎಚ್.ಸಿ. ಯೋಗೀಶ್, ಮಾಜಿ ಶಾಸಕ ಶಾಂತನಗೌಡ, ಜಿಲ್ಲಾಧಿಕಾರಿವಿ. ಪೊನ್ನುರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಮುರುಗನ್, ಉಪ ವಿಭಾಗಾಧಿಕಾರಿ ವೈಶಾಲಿ ಮತ್ತಿತರರು ಉಪಸ್ಥಿತರಿದ್ದರು.ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ಹಂಪಿ ರುದ್ರಪ್ಪ ಸ್ವಾಗತಿಸಿದರು. ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಎಸ್.ಪಿ. ದಿನೇಶ್ ಕಾರ್ಯಕ್ರಮ ನಿರೂಪಿಸಿದರು. ನೆರವು: ಗುರುಭವನ ನಿರ್ಮಾಣಕ್ಕೆ ಸಿರಿಗೆರೆ ` 5 ಕೋಟಿ  ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಸಂಸದ ಬಿ.ವೈ. ರಾಘವೇಂದ್ರ ಸಂಸದರ ನಿಧಿಯಿಂದ ತಲಾ ` 10 ಲಕ್ಷ ಶಿವಮೊಗ್ಗ ನಗರಸಭೆ ` 1 ಲಕ್ಷ ನೆರವು ನೀಡುವುದಾಗಿ ಘೋಷಣೆ ಮಾಡಲಾಯಿತು. ಇದಕ್ಕೂ ಮೊದಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಗರದ ಕೃಷಿನಗರದಲ್ಲಿ ` 5ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ‘ತರಳಬಾಳು ಜಗದ್ಗುರು ಮಹಿಳಾ ವಿದ್ಯಾರ್ಥಿ ನಿಲಯ’ ಉದ್ಘಾಟಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.