ಸೋಮವಾರ, ಸೆಪ್ಟೆಂಬರ್ 21, 2020
22 °C

ತರುಣ ಭಾರತದ ಕಿರಣ್ ಠಾಕೂರ್ ಕ್ಷಮೆ ಯಾಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತರುಣ ಭಾರತದ ಕಿರಣ್ ಠಾಕೂರ್ ಕ್ಷಮೆ ಯಾಚನೆ

ಬೆಂಗಳೂರು: ಶಾಸಕರಾದ ಅಭಯ ಪಾಟೀಲ ಮತ್ತು ಶಾಮ ಭೀಮ ಘಾಟಗೆ ಅವರ ಹಕ್ಕುಗಳಿಗೆ ಚ್ಯುತಿ ಉಂಟುಮಾಡಿದ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಬೆಳಗಾವಿಯ `ತರುಣ ಭಾರತ~ ಮರಾಠಿ ಪತ್ರಿಕೆಯ ಪ್ರಧಾನ ಸಂಪಾದಕ ಕಿರಣ್ ಠಾಕೂರ್ ಸೋಮವಾರ ವಿಧಾನಸಭೆಯಲ್ಲಿ ಕ್ಷಮೆ ಯಾಚಿಸಿದರು.`ಈ ಸದನದ ಬಗ್ಗೆ ನನಗೆ ಅಪಾರ ಗೌರವ ಇದೆ. ಈ ಇಬ್ಬರು ಶಾಸಕರ ಭಾವನೆಗಳಿಗೆ ನೋವಾಗುವಂತಹ ವರದಿಗಳು ಅಚಾತುರ್ಯದಿಂದ ಪ್ರಕಟವಾಗಿವೆ. ಇದಕ್ಕಾಗಿ ವಿಷಾದಿಸುತ್ತೇನೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ~ ಎಂದು ಠಾಕೂರ್ ಸದನದಲ್ಲಿ ಭರವಸೆ ನೀಡಿದರು.ಠಾಕೂರ್ ಅವರನ್ನು ಸದನಕ್ಕೆ ಕರೆಸಿ ವಾಗ್ದಂಡನೆ ವಿಧಿಸುವ ನಿರ್ಣಯವನ್ನು ಇದೇ 24ರಂದು ವಿಧಾನಸಭೆ ಅಂಗೀಕರಿಸಿತ್ತು. ಆದರೆ ಸೋಮವಾರ ಬೆಳಿಗ್ಗೆ ನಡೆದ ನಾಟಕೀಯ ಬೆಳವಣಿಗೆಗಳಿಂದ ವಾಗ್ದಂಡನೆ ವಿಧಿಸುವ ನಿರ್ಧಾರವನ್ನು ಕೈಬಿಡಲಾಯಿತು. ಈ ಪ್ರಕ್ರಿಯೆ ಕೇವಲ ಕ್ಷಮೆಯಾಚನೆಗೆ ಸೀಮಿತವಾಯಿತು. 

 ಠಾಕೂರ್ ರಕ್ಷಣೆಗೆ ತೆರೆಮರೆ ಕಸರತ್ತು
ಸೋಮವಾರದ ಕಾರ್ಯ ಕಲಾಪ ಪಟ್ಟಿ ಪ್ರಕಾರ ಮೊದಲ ವಿಷಯವೇ ವಾಗ್ದಂಡನೆ ವಿಧಿಸುವುದಾಗಿತ್ತು. ಇದಕ್ಕಾಗಿ ಸದನದಲ್ಲಿ ಕಟಕಟೆಯ ವ್ಯವಸ್ಥೆ ಮಾಡಲಾಗಿತ್ತು. ಆದರೆ ಬೆಳಿಗ್ಗೆ 10ಕ್ಕೆ ಆರಂಭವಾಗಬೇಕಿದ್ದ ಸದನ ಒಂದೂವರೆ ತಾಸು ತಡವಾಗಿ ಆರಂಭವಾಯಿತು. ವಾಗ್ದಂಡನೆ ಕೈಬಿಡುವ ಸಂಬಂಧ ಸ್ಪೀಕರ್ ಕಚೇರಿಯಲ್ಲಿ ತೆರೆಮರೆಯ ಸಂಧಾನ ನಡೆಯುತ್ತಿದ್ದರೆ, ಸದನಕ್ಕೆ ಬಂದಿದ್ದ ಶಾಸಕರು, ಸಚಿವರು ಅನೌಪಚಾರಿಕ ಚರ್ಚೆಯಲ್ಲಿ ತೊಡಗಿದ್ದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಹಾಗೂ ಮಹಾರಾಷ್ಟ್ರ ಸರ್ಕಾರದ ಒತ್ತಡದಿಂದ ವಾಗ್ದಂಡನೆ ನಿರ್ಣಯವನ್ನು ಕೈಬಿಡಲಾಗಿದೆ ಎಂಬ ಗುಸುಗುಸು ಮಾತು ಮೊಗಸಾಲೆಯಲ್ಲಿ ಕೇಳಿಬಂತು.

ಬೆಳಿಗ್ಗೆ 11.30ರ ಸುಮಾರಿಗೆ ಈ ವಿಷಯ ಚರ್ಚೆಗೆ ಬರುವಷ್ಟರಲ್ಲಿ ವಾಗ್ದಂಡನೆಗಾಗಿ ಸದನದಲ್ಲಿ ಸಿದ್ಧಪಡಿಸಿದ್ದ ಕಟೆಕಟೆ ಮಾಯವಾಗಿತ್ತು. ಬೋಪಯ್ಯ ಅವರು, `ಕಿರಣ್ ಠಾಕೂರ್ ಹಾಜರಿದ್ದಾರಾ~ ಎಂದು ಮಾರ್ಷಲ್‌ರನ್ನು ಪ್ರಶ್ನಿಸುತ್ತಿದ್ದಂತೆಯೇ, ಪ್ರತಿಪಕ್ಷಗಳ ಸದಸ್ಯರು ಒಮ್ಮೆಗೇ ಎದ್ದುನಿಂತು `ಕಟಕಟೆ ಏನಾಯಿತು~ ಎಂದು ಏರಿದ ಧ್ವನಿಯಲ್ಲಿ ಕೇಳಿದರು.ಗದ್ದಲದ ನಡುವೆಯೇ ಸ್ಪೀಕರ್ ಸೂಚನೆಯಂತೆ ಮಾರ್ಷಲ್‌ಗಳು ಠಾಕೂರ್ ಅವರನ್ನು ಸದನದ ಮುಂಭಾಗದ ದ್ವಾರದಿಂದ ಒಳಗೆ ಕರೆತಂದರು. ಆಗ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, `ಕೆಟ್ಟ ಸಂಪ್ರದಾಯ ಹಾಕಬೇಡಿ. ಠಾಕೂರ್ ಸದನದ ಸದಸ್ಯರಲ್ಲ, ಅವರು ಆರೋಪಿ. ಅವರನ್ನು ಸಭಾಧ್ಯಕ್ಷರ ಪೀಠದ ಬಳಿ ಕರೆತರಬೇಡಿ. ಕಟಕಟೆಯಲ್ಲಿಯೇ ನಿಲ್ಲಿಸಬೇಕು~ ಎಂದು ಆಗ್ರಹಿಸಿದರು. ಕಾಂಗ್ರೆಸ್, ಜೆಡಿಎಸ್‌ನ ಬಹುತೇಕ ಸದಸ್ಯರು ಇದಕ್ಕೆ ಧ್ವನಿಗೂಡಿಸಿದರು. `ಇದೇ 24ರಂದು ಸದನ ತೆಗೆದುಕೊಂಡ ನಿರ್ಣಯದಂತೆ ಆಗಬೇಕು~ ಎಂದು ಒತ್ತಾಯಿಸಿದರು.ಸದಸ್ಯರ ಭಾವನೆಗಳಿಗೆ ಸ್ಪಂದಿಸಿದ ಬೋಪಯ್ಯ, ಮತ್ತೆ ಕಟೆಕಟೆಯನ್ನು ಸದನಕ್ಕೆ ತರಿಸಿದರು. ಕಿರಣ್ ಠಾಕೂರ್ ಅವರು ಅದರಲ್ಲಿ ನಿಲ್ಲುತ್ತಿದ್ದಂತೆಯೇ ಸ್ಪೀಕರ್ ವಿಚಾರಣೆ ಆರಂಭಿಸಿದರು. `ಕಿರಣ್ ಠಾಕೂರ್ ನೀವೇನಾ~ ಎಂದು ಸ್ಪೀಕರ್ ಪ್ರಶ್ನಿಸಿದರು. `ಅವರಿಗೆ ಕನ್ನಡ ಬರುವುದಿಲ್ಲ. ಮರಾಠಿಯಲ್ಲಿ ಮಾತನಾಡುತ್ತಾರೆ~ ಎಂದು ಅವರ ಜತೆಗಿದ್ದ ವ್ಯಕ್ತಿಯೊಬ್ಬರು ಹೇಳಿದರು. ಇದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಠಾಕೂರ್ ಅವರಿಗೆ ಕನ್ನಡ ಬರುತ್ತದೆ ಎಂದು ಪಕ್ಷೇತರ ಸದಸ್ಯ ಶಿವರಾಜ ತಂಗಡಗಿ ಹೇಳಿದರು. ಇಂಗ್ಲಿಷ್‌ನಲ್ಲಿ ಉತ್ತರಿಸಲಿ ಎಂದು ಹಲವು ಸದಸ್ಯರು ಸೂಚಿಸಿದರು.ಕನ್ನಡ ಬರುವುದಿಲ್ಲ ಎಂಬ ಹೇಳಿಕೆಯಿಂದ ಸಿಟ್ಟಿಗೆದ್ದ ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ, `ಎಷ್ಟು ವರ್ಷದಿಂದ ಕರ್ನಾಟಕದಲ್ಲಿ ಇದ್ದಾರೆ? ಕನ್ನಡ ಬರುವುದಿಲ್ಲ ಎಂದರೆ ಹೇಗೆ? ನನಗೆ ಎರಡು ನಿಮಿಷ ಅವಕಾಶ ಕೊಡಿ. ಬಾಯಿಗೆ ಬಂದಂತೆ ಬೈಯ್ಯುತ್ತೇನೆ. ಆಗ ಅವರೇ ಬಾಯಿ ಬಿಡುತ್ತಾರೆ...~ ಎಂದು ಖಾರವಾಗಿ ಹೇಳಿದರು.ಕೊನೆಗೆ ಇಂಗ್ಲಿಷ್‌ನಲ್ಲಿ ಮಾತನಾಡಲು ಸ್ಪೀಕರ್ ಅವಕಾಶ ನೀಡಿದರು. ಆಗ ಲಿಖಿತ ಹೇಳಿಕೆಯನ್ನು ಓದಿದ ಠಾಕೂರ್, `ನನಗೆ ಸಂವಿಧಾನ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗದ ಬಗ್ಗೆ ಅಪಾರ ಗೌರವ ಇದೆ. ಈ ಸದನ ಮತ್ತು ಸದಸ್ಯರಿಗೆ ಅಗೌರವ ಉಂಟುಮಾಡುವ ಉದ್ದೇಶವಿಲ್ಲ.

 

ಪತ್ರಿಕೆಯಲ್ಲಿ ಪ್ರಕಟವಾಗುವ ಎಲ್ಲ ಸುದ್ದಿಗಳನ್ನು ಖುದ್ದಾಗಿ ಪರಿಶೀಲಿಸಲು ನನಗೆ ಸಾಧ್ಯವಾಗುವುದಿಲ್ಲ. ಸಂಪಾದಕೀಯ ವಿಭಾಗದ ಸಿಬ್ಬಂದಿಯನ್ನು ಅವಲಂಬಿಸಬೇಕಾಗುತ್ತದೆ. ನನ್ನ ಗಮನಕ್ಕೆ ಬಾರದೆ, ಸದನದ ಪಾರಮ್ಯಕ್ಕೆ ಚ್ಯುತಿ ತರುವ ಸುದ್ದಿ ಯಾವುದಾದರೂ ಪ್ರಕಟವಾಗಿದ್ದರೆ, ಮುಂದೆ ಅಂತಹ ಪ್ರಮಾದ ಮರುಕಳಿಸದಂತೆ ನೋಡಿಕೊಳ್ಳುತ್ತೇನೆ~ ಎಂದು ಭರವಸೆ ನೀಡಿದರು.ಇದರಿಂದ ತೃಪ್ತರಾಗದ ಸದಸ್ಯರು ವಿಷಾದ ವ್ಯಕ್ತಪಡಿಸಬೇಕು ಎಂದು ಪಟ್ಟು ಹಿಡಿದರು. ಆಗ ಸ್ಪೀಕರ್ ಅವರು ಲಿಖಿತ ಹೇಳಿಕೆಯಲ್ಲಿ `ವಿಷಾದ~ ಪದ ಇದೆ. ಅದನ್ನು ಯಾಕೆ ಹೇಳಿಲ್ಲ ಎಂದು ಪ್ರಶ್ನಿಸಿದರು. ಸ್ಪೀಕರ್ ಅವರಿಗೆ ಬರೆದುಕೊಟ್ಟಿರುವುದನ್ನು ಓದಲು ಏನು ತೊಂದರೆ ಎಂದು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.`ವಿಷಾದ ವ್ಯಕ್ತಪಡಿಸುತ್ತೀರಾ~ ಎಂದು ಸ್ಪೀಕರ್ ಕೇಳುತ್ತಿದ್ದಂತೆಯೇ ಠಾಕೂರ್ ಕಸಿವಿಸಿಗೊಂಡರು. ಸ್ವಲ್ಪ ಸಮಯದ ನಂತರ. `ಕ್ಷಮೆ ಕೋರುತ್ತೇನೆ~ ಎಂದರು. `ವಿಷಾದ ವ್ಯಕ್ತಪಡಿಸಲು ಸ್ಪೀಕರ್ ಸೂಚಿಸುತ್ತಿದ್ದಾರೆ~ ಎಂದು ಮಾರ್ಷಲ್ ಹೇಳಿದ ನಂತರ, ಠಾಕೂರ್ ವಿಷಾದ ವ್ಯಕ್ತಪಡಿಸಿದರು.ಬಳಿಕ ಮಾರ್ಷಲ್‌ಗಳು ಅವರನ್ನು ಹೊರಗೆ ಕರೆದುಕೊಂಡು ಹೋದರು. ಇದೆಲ್ಲ ಬರಿ ಹತ್ತು ನಿಮಿಷದಲ್ಲಿ ನಡೆದುಹೋಯಿತು.ನಂತರ ಹಕ್ಕುಬಾಧ್ಯತಾ ಸಮಿತಿ ಅಧ್ಯಕ್ಷ ಡಾ.ಸಿ.ಎನ್.ಅಶ್ವತ್ಥನಾರಾಯಣ, ಜಯಚಂದ್ರ ಮೊದಲಾದವರು ಮಾತನಾಡಲು ಅವಕಾಶ ನೀಡುವಂತೆ ಪಟ್ಟು ಹಿಡಿದರು. ವಿಷಯವನ್ನು ಮುಕ್ತಾಯಗೊಳಿಸುವಂತೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಲಹೆ ಮಾಡಿದರು. ಸಿದ್ದರಾಮಯ್ಯ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು.ಬೆಳಗಾವಿಯಲ್ಲಿ ಮರಾಠಿಗರು, ಕನ್ನಡಿಗರು ಸಾಮರಸ್ಯದಿಂದ ಇರಬೇಕು. ಸಂಘರ್ಷಕ್ಕೆ ಎಡೆಮಾಡಿಕೊಡಬಾರದು ಎಂಬ ಕಾರಣಕ್ಕಾಗಿ ಈ ಪ್ರಕರಣವನ್ನು ಇಷ್ಟಕ್ಕೆ ಮುಕ್ತಾಯಗೊಳಿಸಲಾಗಿದೆ ಎಂದು ಬೋಪಯ್ಯ ತಿಳಿಸಿದರು.ಇಷ್ಟಾದರೂ ಸಮಾಧಾನಗೊಳ್ಳದ ಅಶ್ವತ್ಥನಾರಾಯಣ ಮಾತನಾಡಲು ಅವಕಾಶ ಕೊಡಿ ಎಂದು ಎದ್ದುನಿಂತಾಗ ಆಕ್ರೋಶಗೊಂಡ ಬೋಪಯ್ಯ, `ನಿಮ್ಮ ಪಕ್ಷದ ಸದಸ್ಯರನ್ನು ನಿಯಂತ್ರಣ ಮಾಡದಿದ್ದರೆ ಹೇಗೆ? ಈ ರೀತಿ ಆದರೆ ನಾನು ಎದ್ದು ಹೋಗುತ್ತೇನೆ~ ಎಂದು ನೇರವಾಗಿ ಮುಖ್ಯಮಂತ್ರಿಗಳಿಗೆ ಹೇಳಿದರು.`ಸದಸ್ಯರ ಮಾನ ಮರ್ಯಾದೆ ಹರಾಜು ಹಾಕಿದವರನ್ನು ಇಷ್ಟಕ್ಕೆ ಬಿಡುವುದಾದರೆ ಅವರನ್ನು ಸದನಕ್ಕೆ ಕರೆಸುವ ಅಗತ್ಯವಿರಲಿಲ್ಲ. ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆ ಅವರು, ರಾಜ್ಯದ ಶಾಸಕರನ್ನು ತಾಲಿಬಾನಿಗಳು ಎಂದು ಕರೆದಿದ್ದಾರೆ. ಹಾಗಾದರೆ ನಾವೆಲ್ಲ ತಾಲಿಬಾನಿಗಳಾ....~ ಎಂದು ಜೆಡಿಎಸ್‌ನ ಕೆ.ಎಂ.ಶಿವಲಿಂಗೇಗೌಡ, ಸುನೀಲ್ ಹೆಗಡೆ, ಎಚ್.ಟಿ.ಕೃಷ್ಣಪ್ಪ ಮೊದಲಾದವರು ಪ್ರಶ್ನಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.