ಶುಕ್ರವಾರ, ಮೇ 7, 2021
26 °C

ತಾಲ್ಲೂಕು ಕಚೇರಿಯಲ್ಲಿ ಏಕ ಗವಾಕ್ಷಿ ಸೇವೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ರಾಜ್ಯದಾದ್ಯಂತ ಹನ್ನೊಂದು ಇಲಾಖೆಗಳ 150ಕ್ಕೂ ಹೆಚ್ಚು ಸೇವೆಗಳಿಗೆ `ಸಕಾಲ~ ವ್ಯವಸ್ಥೆ ಮಾಡಲಾಗಿದೆ. ಹಾಸನದ ತಾಲ್ಲೂಕು ಕಚೇರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಾರ್ವಜನಿಕರ ಅನುಕೂಲಕ್ಕಾಗಿ ಏಕ ಗವಾಕ್ಷಿ ಸೇವೆಯನ್ನು ಆರಂಭಿಸಿದೆ. ಶುಕ್ರವಾರದಿಂದಲೇ ಈ ಸೇವೆ ಆರಂಭವಾಗಿದೆ.`ಸಕಾಲ~ದಲ್ಲಿ ಎಲ್ಲ ಸೇವೆಗಳೂ ಲಭ್ಯವಾಗುವುದಿಲ್ಲ. ಆದರೆ ಏಕ ಗವಾಕ್ಷಿ ಮೂಲಕ ಸಾರ್ವಜನಿಕರಿಗೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಲಭ್ಯವಾಗುತ್ತದೆ. ಜನರು ಬಂದು ಇಲ್ಲಿ ಅರ್ಜಿ ಸಲ್ಲಿಸಿದರೆ ಒಂದು ವಾರದ ಕಾಲಾವಕಾಶ ನೀಡಲಾಗುತ್ತದೆ. ಪುನಃ ಅದೇ ಗವಾಕ್ಷಿಗೆ ಬಂದು ಅವರು ತಮಗೆ ಬೇಕಾದ ದಾಖಲೆ ಪಡೆದುಕೊಳ್ಳಬಹುದು. ಒಂದು ವೇಳೆ ದಾಖಲೆ ನೀಡುವಲ್ಲಿ ಸಮಸ್ಯೆಯಾಗಿದ್ದರೆ ಯಾವ ಅಧಿಕಾರಿ ಅಥವಾ ಸಿಬ್ಬಂದಿ ಬಳಿಗೆ ಹೋದರೆ ಅವರ ಕೆಲಸವಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸಲಾಗುತ್ತದೆ. ಇದರಿಂದ ಸಾರ್ವಜನಿಕರು ಮತ್ತೆ ಮತ್ತೆ ಕಚೇರಿಗೆ ಅಲೆದಾಡುವುದು, ಒಂದು ಕೊಠಡಿಯಿಂದ ಇನ್ನೊಂದು ಕೊಠಡಿಗೆ ಹೋಗುವುದು, ಭ್ರಷ್ಟಾಚಾರ ಎಲ್ಲವನ್ನೂ ನಿಯಂತ್ರಿಸಬಹುದು. ಪ್ರಾಯೋಗಿಕವಾಗಿ ಹಾಸನದಲ್ಲಿ ನಾವು ಈ ಸೇವೆ ಆರಂಭಿಸುತ್ತಿದ್ದೇವೆ, ಯಶಸ್ವಿಯಾದರೆ ಇದನ್ನೇ ಎಲ್ಲ ತಾಲ್ಲೂಕುಗಳಲ್ಲೂ ಅಳವಡಿಸುವಂತೆ ಸರ್ಕಾರಕ್ಕೆ ಸಲಹೆ ನೀಡುತ್ತೇವೆ~ ಎಂದು ತಹಶೀಲ್ದಾರ ಮಥಾಯಿ ತಿಳಿಸಿದ್ದಾರೆ.ರಾತ್ರಿಯಲ್ಲೂ ಕೆಲಸ: ಸಿಬ್ಬಂದಿ ಕೊರತೆ ಹಾಗೂ ಇನ್ನೂ ಹತ್ತು ಹಲವು ಸಮಸ್ಯೆಗಳಿಂದಾಗಿ ತಾಲ್ಲೂಕಿನಲ್ಲಿ ನಾಗರಿಕರಿಗೆ ಸಕಾಲದಲ್ಲಿ ಅನೇಕ ಸೇವೆಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ತಾಲ್ಲೂಕು ಕಚೇರಿಯಲ್ಲಿ ಸಂಜೆ 5 ರಿಂದ ರಾತ್ರಿ 12ಗಂಟೆಯವರೆಗಿನ ಒಂದು ಶಿಫ್ಟ್ ಆರಂಭಿಸಲು ತೀರ್ಮಾನಿಸಲಾಗಿದೆ. ಶುಕ್ರವಾರದಿಂದಲೇ ಇದು ಜಾರಿಯಾಗಲಿದೆ ಎಂದು ಮಥಾಯಿ ತಿಳಿಸಿದರು.ಸರ್ವೆ ದಾಖಲೆಗಳನ್ನು (ಸ್ಕೆಚ್) ಪಡೆಯಲು, ಭೂಮಿ ಹಸ್ತಾಂತರವಾದ ಬಳಿಕ ಖಾತೆ-ಪಹಣಿ ಪಡೆಯಲು ಪ್ರಸಕ್ತ ಜನರು ಕನಿಷ್ಠ ಒಂದು ವರ್ಷದವರೆಗೆ ಕಾಯಬೇಕಾಗಿ ಬರುತ್ತಿದೆ. `ಭೂಮಿ~ ಯೋಜನೆಯಡಿ ಇಂಥ ಸಾವಿರಾರು ದಾಖಲೆಗಳು ಬಾಕಿ ಇರುವುದರಿಂದ ಸರದಿಪ್ರಕಾರ ಎಲ್ಲವನ್ನೂ ವಿಲೇವಾರಿ ಮಾಡಬೇಕಾಗಿದೆ.ಇದರಿಂದಾಗಿ ವಿಳಂಬವಾಗುತ್ತಿದೆ. ರಾತ್ರಿ ಶಿಫ್ಟ್ ಆರಂಭಿಸಿ ದಾಖಲೆಗಳ ಕಂಪ್ಯೂಟರೀಕರಣ ಆರಂಭಿಸಿದರೆ ಈ ಕಾರ್ಯ ಸ್ವಲ್ಪ ವೇಗವಾಗಿ ನಡೆಯಬಹುದೆಂಬ ಉದ್ದೇಶದಿಂದ ಈ ಯೋಜನೆ ರೂಪಿಸಿದ್ದೇವೆ. ಇಬ್ಬರು ಕಂಪ್ಯೂಟರ್ ಆಪರೇಟರ್‌ಗಳು ಹಾಗೂ ಇತರ ಇಬ್ಬರು ಸಿಬ್ಬಂದಿ ರಾತ್ರಿ 12 ಗಂಟೆವರೆಗೆ ಕೆಲಸ ಮಾಡಲಿದ್ದಾರೆ ಎಂದರು.`ಅರ್ಜಿ ಕೊಟ್ಟು 45ದಿನದೊಳಗೆ ದಾಖಲೆ ಲಭಿಸಬೇಕು ಎಂಬುದು ಸಹಜವಾದ ನಿರೀಕ್ಷೆ. ಸದ್ಯದ ಸ್ಥಿತಿಯಲ್ಲಿ ಅದು ಅಸಾಧ್ಯ. ಆದರೆ ಕನಿಷ್ಠ 90 ದಿನದೊಳಗೆ ದಾಖಲೆಗಳನ್ನು ನೀಡುವಂತಾಗಬೇಕು ಎಂಬ ಗುರಿ ಇಟ್ಟುಕೊಂಡು ಈ ಶಿಫ್ಟ್ ಆರಂಭಿಸಿದ್ದೇವೆ~ ಎಂದು ಮಥಾಯಿ ತಿಳಿಸಿದರು.24ಗಂಟೆ ಸಹಾಯವಾಣಿ: ಕಳೆದ ಕೆಲವು ದಿನಗಳಿಂದ ತಾಲ್ಲೂಕಿನ ವಿವಿಧೆಡೆ ಮಳೆಯಾಗಿ ಆಸ್ತಿಪಾಸ್ತಿಗೆ ಹಾನಿಯಾಗಿರುವ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ತಾಲ್ಲೂಕು ಕಚೇರಿಯಲ್ಲಿ 24 ಗಂಟೆಗಳ ಸಹಾಯವಾಣಿ ಆರಂಭಿಸಲಾಗಿದೆ.ಮಳೆಯಿಂದ ಯಾವುದೇ ಸಮಸ್ಯೆ ಉಂಟಾದಲ್ಲಿ ಕೂಡಲೇ ದೂರವಾಣಿ (08172)268395 ಸಂಪರ್ಕಿಸಿ ಮಾಹಿತಿ ನೀಡಿದಲ್ಲಿ, ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಯನ್ನು ಕಳುಹಿಸಿ ಸೂಕ್ತ ಸಹಾಯ ಒದಗಿಸಲಾಗುವುದು ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.