ಸೋಮವಾರ, ಜನವರಿ 20, 2020
17 °C

ತಾಳಗುಂದ: ಉತ್ಖನನದಲ್ಲಿ ಚಂದ್ರಶಿಲೆ ಮೆಟ್ಟಿಲು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಾಳಕೊಪ್ಪ: ಐತಿಹಾಸಿಕ ಗ್ರಾಮ ತಾಳಗುಂದದಲ್ಲಿ ಎರಡನೆ ಹಂತದ ಪ್ರಾಯೋ­ಗಿಕ ಉತ್ಖನನ ಕಾರ್ಯ ಭರದಿಂದ ಸಾಗಿದೆ.

ಈ ವೇಳೆ ಕಂಚಿನ ಪೂಜಾ ಸಾಮಗ್ರಿ­ಗಳಾದ ಘಂಟೆ, ಆರತಿ ತಟ್ಟೆ, ದೀಪ, ಧೂಪಾ­ರತಿ, ಹಣತೆ, ಭಗ್ನವಾದ ವಿಷ್ಣು­ಮೂರ್ತಿ, ಶಾಸನಗಳ ತುಣುಕುಗಳು, ಸುಂದರ ಕಲಾಕೃತಿ ಹೊಂದಿರುವ ಹೆಂಚು, ವಿಶೇಷವಾದ ದೊಡ್ಡ ಸುಣ್ಣದ ಕಲ್ಲು ಸಿಕ್ಕಿದ್ದು ಅದನ್ನು ಭಗ್ನವಾಗಿರುವ ಶಿವಲಿಂಗವಿರಬಹುದು ಎಂದು ಅಂದಾಜಿಸಲಾಗಿದೆ.ಚಂದ್ರಶಿಲೆಯ ಚಂದ್ರಾಕೃತಿಯ ಮೆಟ್ಟಿ­ಲು­­ಗಳು ನೆಲದಿಂದ ಸುಮಾರು 3 ಅಡಿ ಆಳ­ದಲ್ಲಿ ಲಭ್ಯವಾಗಿದ್ದು ಉತ್ಖನನ ಕಾರ್ಯ­­ಕ್ಕೆ ಮತ್ತಷ್ಟು ಸ್ಫೂರ್ತಿ ದೊರಕಿದೆ.ಕನ್ನಡದ ಮೊದಲ ದೊರೆ ಮಯೂರ ವರ್ಮನ ಮೂಲ ನೆಲೆ, ಕನ್ನಡದ ಮೊದಲ ವಿದ್ಯಾಕೇಂದ್ರ ಎಂದು ಹೇಳಲಾ­ಗಿ­ರುವ ಸಾವಿರಾರು ವರ್ಷಗಳ ಇತಿಹಾಸ­ವಿರುವ ತಾಳಗುಂದ ಗ್ರಾಮದ ಪ್ರಣವೇಶ್ವರ ದೇವಾಲಯದ ಉತ್ಖನನ ಕಾರ್ಯ ನಡೆಯಬೇಕು ಎಂದು ಈ ಭಾಗದ ಜನರು  ಪುರಾತತ್ವ ಇಲಾಖೆಗೆ ಹಲವಾರು ಬಾರಿ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿದ್ದ ಪುರಾತತ್ವ ಇಲಾಖೆ ಫೆಬ್ರುವರಿ ತಿಂಗಳಿನಲ್ಲಿ ಪ್ರಾಯೋಗಿಕ ಉತ್ಖನನ ನಡೆಸಿತ್ತು.ಆ ಸಂದರ್ಭದಲ್ಲಿ ಗಂಗರ ಕಾಲದ 13 ಚಿನ್ನದ ನಾಣ್ಯಗಳು, ಖಳಚೂರರ ತಾಮ್ರದ ತಟ್ಟೆಗಳು ಲಭಿಸಿದ್ದವು.

ಈ ಬಗ್ಗೆ ರಾಜ್ಯ  ಪುರಾತತ್ವ ಶಾಸ್ತ್ರಜ್ಞರ ಉಪ ಮೇಲ್ವಿಚಾರಕ  ಕೇಶವ ಶರ್ಮ ಮಾತನಾಡಿ, ತಾಳಗುಂದದಲ್ಲಿ ಹುದುಗಿ ಹೋಗಿರುವ ಇತಿಹಾಸ ಹೊರಗೆಡವಲು ಪುರಾತತ್ವ ಇಲಾಖೆ ಮುಂದಾಗಿದ್ದು. ಉತ್ಖನನ ಕಾರ್ಯ ಪೂರ್ಣವಾದ ನಂತರವೇ ಇಲ್ಲಿಯ ಇತಿಹಾಸದ ಸ್ಪಷ್ಟ ಮಾಹಿತಿ ಲಭಿಸುತ್ತದೆ ಎಂದರು.

ಪ್ರತಿಕ್ರಿಯಿಸಿ (+)