ಭಾನುವಾರ, ಮೇ 9, 2021
26 °C

ತಾಳ್ಮೆ ಕಳೆದುಕೊಳ್ಳಲಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶಾಖಪಟ್ಟಣ (ಐಎಎನ್‌ಎಸ್): ಇನಿಂಗ್ಸ್‌ನ ಅಂತಿಮ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಮುಂಬೈ ಇಂಡಿಯನ್ಸ್ ತಂಡದ ಗೆಲುವಿಗೆ ಕಾರಣರಾದ ರೋಹಿತ್ ಶರ್ಮ ಅವರ ಬ್ಯಾಟಿಂಗ್‌ನ್ನು ತಂಡದ ನಾಯಕ ಹರಭಜನ್ ಸಿಂಗ್ ಶ್ಲಾಘಿಸಿದ್ದಾರೆ.`ರೋಹಿತ್ ಒಬ್ಬ ಪ್ರಬುದ್ಧ ಆಟಗಾರ. ಅವರು ಸೊಗಸಾದ ಇನಿಂಗ್ಸ್ ಕಟ್ಟಿದರು. ಕೊನೆಯವರೆಗೂ ಒತ್ತಡಕ್ಕೆ ಒಳಗಾಗದೆ ನಮ್ಮನ್ನು ಗೆಲುವಿನ ಗಡಿ ದಾಟಿಸುವಲ್ಲಿ ಯಶಸ್ವಿಯಾದರು~ ಎಂದು ಪಂದ್ಯದ ಬಳಿಕ ಹರಭಜನ್ ಪ್ರತಿಕ್ರಿಯಿಸಿದ್ದಾರೆ.ವಿಶಾಖಪಟ್ಟಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಐದು ವಿಕೆಟ್‌ಗಳಿಂದ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಮಣಿಸಿತ್ತು. ರೋಹಿತ್ 50 ಎಸೆತಗಳಲ್ಲಿ ಅಜೇಯ 73 ರನ್ ಗಳಿಸಿದ್ದರು. ಅಂತಿಮ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿಗೆ 18 ರನ್‌ಗಳು ಬೇಕಾಗಿದ್ದವು. ರೋಹಿತ್ ಈ ಓವರ್‌ನಲ್ಲಿ ಎರಡು ಸಿಕ್ಸರ್ ಸಿಡಿಸಿ ತಂಡಕ್ಕೆ ರೋಚಕ ಜಯ ತಂದಿತ್ತಿದ್ದರು.`ಗುರಿಯನ್ನು ತಲುಪುವ ವಿಶ್ವಾಸವಿತ್ತು. ಆದರೂ ಅಲ್ಪ ಬೇಗನೇ ಗೆಲುವು ಪಡೆದಿದ್ದರೆ ಚೆನ್ನಾಗಿತ್ತು~ ಎಂದು ಹರಭಜನ್ ನುಡಿದಿದ್ದಾರೆ.ಕೊನೆಯವರೆಗೂ ತಾಳ್ಮೆ ಕಳೆದುಕೊಳ್ಳದೇ ಇದ್ದುದು ಯಶಸ್ಸಿಗೆ ಕಾರಣ ಎಂದು ರೋಹಿತ್ ಶರ್ಮ ಹೇಳಿದ್ದಾರೆ. `ಅಂತಿಮ ಕ್ಷಣಗಳಲ್ಲಿ ಅತಿಯಾದ ಒತ್ತಡವಿತ್ತು. ಆದರೆ ತಾಳ್ಮೆ ಕಳೆದುಕೊಳ್ಳಲಿಲ್ಲ. ಕೊನೆಯ ಓವರ್‌ನಲ್ಲಿ ನಮಗೆ 18 ರನ್‌ಗಳು ಬೇಕಿದ್ದವು. ಅದನ್ನು ಗಳಿಸುವ ವಿಶ್ವಾಸವಿತ್ತು. ಅಂತಿಮ ಓವರ್‌ನ ಐದನೇ ಎಸೆತದಲ್ಲಿ ರನೌಟ್‌ನಿಂದ ಪಾರಾದದ್ದು ನಮಗೆ ನೆರವಾಯಿತು. ಎರಡನೇ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಕಾರಣ ನಮಗೆ ಚಾರ್ಜರ್ಸ್ ವಿರುದ್ಧ ಗೆಲುವು ಅನಿವಾರ್ಯವಾಗಿತ್ತು~ ಎಂದು ಅವರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.