ಸೋಮವಾರ, ಜೂನ್ 14, 2021
22 °C
ನಾಳೆ ಹಟ್ಟಿ ಪರಿಷೆ, ಜಾತ್ರೆಗೆ ಜಿಲ್ಲಾಡಳಿತ ಸಿದ್ಧತೆ

ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಸಜ್ಜಾದ ನಾಯಕನಹಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಯಕನಹಟ್ಟಿ: ಮಾರ್ಚ್‌ 19ರಂದು ನಡೆಯಲಿರುವ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಜಿಲ್ಲಾಡಳಿತದ ವತಿಯಿಂದ ಮೂಲಸೌಕರ್ಯ ಒದಗಿಸುವ ಕೆಲಸ ಭರದಿಂದ ಸಾಗಿದೆ.ಜಾತ್ರೆಯ ಬಂದೋಬಸ್ತ್‌ಗೆ 1,500 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ನ್ಯಾಯಾಲಯದ ಆದೇಶದಂತೆ ಪ್ರಾಣಿ ಬಲಿಯನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ಪೊಲೀಸರು ತಪಾಸಣೆ ಮಾಡಿ ವಾಹನಗಳನ್ನು ಬಿಡುತ್ತಿದ್ದಾರೆ.ಭದ್ರತೆಗಾಗಿ 3 ಡಿವೈಎಸ್‌ಪಿ, 8ಸಿಪಿಐ, 35ಪಿಎಸ್ಐ, 64ಎಎಸ್ಐ, 201 ಮುಖ್ಯ ಪೇದೆಗಳು, 504 ಪೇದೆಗಳು, 43 ಮಹಿಳಾ ಪೇದೆಗಳು, 300 ಜನ ಹೋಮ್‌ ಗಾರ್ಡ್‌ಗಳು ಎರಡು ದಿನ ಕಾರ್ಯ ನಿರ್ವಹಿಸಲಿದ್ದಾರೆ. ಜತೆಗೆ 7 ಜಿಲ್ಲಾ ಸಶಸ್ತ್ರ ತಂಡ, 4 ಕೆಎಸ್ಆರ್‌ಪಿ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ತುಮಕೂರು, ದಾವಣಗೆರೆ, ಬಳ್ಳಾರಿ ಜಿಲ್ಲೆಗಳ ಅಪರಾಧ ವಿಭಾಗದ ಸಿಬ್ಬಂದಿ ಮಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕಳವು ತಡೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಆರೋಗ್ಯ ವ್ಯವಸ್ಥೆ: ಜಾತ್ರೆಗೆ ಬರುವ ಭಕ್ತರ ಆರೋಗ್ಯ ರಕ್ಷಣೆಗಾಗಿ ನಾಲ್ಕು ಕಡೆ ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗಿದೆ. 12 ಜನ ವೈದ್ಯರು ಸೇರಿದಂತೆ 120 ಸಿಬ್ಬಂದಿ ನಿಯೋಜಿಸಲಾಗಿದೆ. ಸಮುದಾಯ ಆರೋಗ್ಯ ಕೇಂದ್ರದ ಬಳಿ ಎರಡು ಅಂಬುಲೆನ್ಸ್ ಸದಾ ಸಿದ್ಧವಿರುತ್ತವೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರೇಮಸುಧಾ ತಿಳಿಸಿದರು.ಕುಡಿಯುವ ನೀರಿನ ವ್ಯವಸ್ಥೆ: ಎರಡು ದೇವಸ್ಥಾನಗಳ ಬಳಿ ನೀರಿನ ಸೌಕರ್ಯ ಒದಗಿಸಲಾಗಿದೆ. ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮುರು, ಚಿತ್ರದುರ್ಗದ ಅರಣ್ಯ ಇಲಾಖೆಯ ನೀರಿನ ಟ್ಯಾಂಕರ್‌ಗಳು ನೀರನ್ನು ಪೂರೈಕೆ ಮಾಡಲಿವೆ. ನೀರಿನ ತೊಂದರೆ ನಿವಾರಣೆಗಾಗಿ ತಾಲ್ಲೂಕು ಆಡಳಿತ ಸಹಾಯವಾಣಿ ಆರಂಭಿಸಿದ್ದು, ಜಾತ್ರೆಯ ದಿನ ಮೊಬೈಲ್‌: 95916 55223, 91643 00622 ಸಂಪರ್ಕಿಸಬಹುದಾಗಿದೆ.ಸಾರಿಗೆ ವ್ಯವಸ್ಥೆ: ಜಾತ್ರೆಗೆ ಬರುವಂತಹ ಭಕ್ತರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ 250 ಬಸ್‌ಗಳನ್ನು ಓಡಿಸಲಿದೆ. ಇದಲ್ಲದೇ ಬಳ್ಳಾರಿ, ಚಿತ್ರದುರ್ಗ, ಚಳ್ಳಕೆರೆ ಡಿಪೊಗಳು ಬಸ್‌ಗಳನ್ನು ಬಿಟ್ಟಿವೆ. ಚಳ್ಳಕೆರೆ ರಸ್ತೆಯ ಪೆಟ್ರೋಲ್ ಬಂಕ್, ಜಗಳೂರು ರಸ್ತೆಯ ಚಿಕ್ಕಕೆರೆ ಬಳಿ ತಾತ್ಕಾಲಿಕ ಬಸ್‌ನಿಲ್ದಾಣಗಳನ್ನು ನಿರ್ಮಿಸಲಾಗಿದೆ.ಒಳಮಠ, ಹೊರಮಠಗಳಲ್ಲಿ  ಕರ್ತವ್ಯ ನಿರ್ವಹಿಸಲು ಕಂದಾಯ ಇಲಾಖೆ 300 ಜನ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ನಿಯೋಜಿಸಿದೆ. ಜತೆಗೆ ಹೋಬಳಿಯ ಎಂಟು ಜನ ಪಿಡಿಒಗಳನ್ನು ನಾನಾ ಕಾರ್ಯಗಳಿಗೆ ನೆರವಾಗಲು ಮೂರು ದಿನ ನಿಯೋಜಿಸಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.