‘ನನ್ನ ಸ್ನೇಹಿತೆಯ ಒಂದು ವರ್ಷದ ಮಗು, ಕೆಲಸಕ್ಕೆ ಹೋಗುವ ತಾಯಿಯನ್ನು ಟಾಟಾ ಮಾಡಿ ಕಳಿಸುತ್ತದೆ. ಆದರೆ ಅದೇ ವಯಸ್ಸಿನ ನಮ್ಮ ಮಗಳು ಮಾತ್ರ ನಮ್ಮನ್ನು ಆಫೀಸಿಗೆ ಹೋಗಲು ಬಿಡುವುದೇ ಇಲ್ಲ. ನಿತ್ಯ ಅಳು. ಅವಳನ್ನು ಮನೆಯಲ್ಲಿ ಬಿಟ್ಟು ಬಂದ ಮೇಲೆ ಸತತವಾಗಿ ಅಳುತ್ತಲೇ ಇದ್ದಾಳೆ ಎಂದು ಅವಳ ಜೊತೆಯಿರುವ ಅಜ್ಜಿಯಿಂದ ಫೋನ್ ಬರುತ್ತದೆ. ಕೆಲವು ಸಲ ನಾವು ಮಧ್ಯ ದಾರಿಯಲ್ಲೇ ಮನೆಗೆ ವಾಪಸ್ ಬಂದು ಸಮಾಧಾನ ಪಡಿಸಬೇಕಾಗುತ್ತದೆ’– ಇದು ಹೆರಿಗೆಯಾದ 8 ತಿಂಗಳ ನಂತರ ಕೆಲಸಕ್ಕೆ ಹೋಗುತ್ತಿರುವ ತಾಯಿಯೊಬ್ಬಳ ವ್ಯಥೆ.

‘ತಂದೆ– ತಾಯಿ ಹೊರ ಹೋಗುವಾಗ ಸುತ್ತಲಿನ ಮನೆಗೆಲ್ಲ ಕೇಳುವಷ್ಟು ಜೋರಾಗಿ ಪಕ್ಕದ ಮನೆಯ ಮಗು ರಂಪ ಮಾಡುತ್ತದೆ. ಆದರೆ ನಮ್ಮ ಒಂದೂವರೆ ವರ್ಷದ ಮಗು ಮಾತ್ರ ಸುಮ್ಮನಿರುತ್ತದೆ. ಹಾಗಿದ್ದರೆ ಅವನನ್ನು ಮನೆಯಲ್ಲಿ ಬಿಟ್ಟು ನಾವು ಹೊರಹೋಗುವುದಕ್ಕೆ ಅವನು ಮನಸ್ಸಿನಲ್ಲೇ ನೊಂದುಕೊಳ್ಳುತ್ತಿರಬಹುದೇ? ಅವನು ರಂಪ ಮಾಡದೇ ಸುಮ್ಮನಿರಲು ಏನು ಕಾರಣ ಇರಬಹುದು?’– ಎಂದು ಆತಂಕದಿಂದ ಕೇಳುತ್ತಾರೆ ಒಂದೂವರೆ ವರ್ಷದ ಮಗುವಿನ ತಾಯಿ ರಂಜನಾ.

‘ಕೆಲವು ದಿನಗಳ ಪ್ರವಾಸದ ನಂತರ ನಾನು ಮನೆಗೆ ಕಾಲಿಡುತ್ತಿದ್ದಂತೆ ಚಪ್ಪಲಿ ಕಳಚಲೂ ಬಿಡದೆ ಫೆವಿಕಾಲ್ ತರಹ ನನಗೆ ಅಂಟಿಕೊಂಡೇ ಇರುತ್ತಾನೆ. ಬಾತ್ರೂಮ್ ಒಳಗೆ ಹೋದರೆ, ಹೊರಬರುವವರೆಗೂ ಬಾಗಿಲು ತಟ್ಟುತ್ತಲೇ ಇರುತ್ತಾನೆ. ನೀರು ಕುಡಿಯಲು ಸಹ ಬಿಡೋಲ್ಲ. ಆಟಕ್ಕೆ ಕರೆಯುತ್ತಾನೆ. ಇದು ಮೊದಲ ಅರ್ಧ ಗಂಟೆ ಮಾತ್ರ. ಯಾಕೆ ಹೀಗೆ ಡಾಕ್ಟ್ರೇ?’ ಎಂದು ಕೇಳುತ್ತಾರೆ ಎರಡು ವರ್ಷದ ಮೊಮ್ಮಗ ಇರುವ ಅಜ್ಜ.

ಕಾರಣ ಏನು?
ಚಿಕ್ಕ ಮಕ್ಕಳ ಇಂತಹ ವರ್ತನೆಗಳಿಗೆ ಕಾರಣ ಅಗಲಿಕೆಯ ಆತಂಕ. ಮೊದಲ ಆರು ತಿಂಗಳವರೆಗೆ ಅಮ್ಮನ ಹಾಲು ಕುಡಿದು ಅವಳ ಜೊತೆ ಬೆಚ್ಚಗೆ ನಿದ್ರಿಸುವುದು ಮಾತ್ರ ಮಗುವಿಗೆ ಗೊತ್ತು. ಪಕ್ಕದಲ್ಲಿ ಇರುವವಳು ತನ್ನ ಅಮ್ಮ ಎಂಬುದರ ಅರಿವು ಸಹ ಅದಕ್ಕೆ ಇರುವುದಿಲ್ಲ. ಬೇರೆ ಯಾರು ಎದೆ ಹಾಲು ಕುಡಿಸಿದರೂ ಅವರ ಮಗ್ಗುಲಲ್ಲೇ ಅದು ಸಂತೊಷವಾಗಿ ಇರುತ್ತದೆ. ಮನೆಯಿಂದ ಹೊರಗೆ ಯಾಕೆ ಹೋಗುತ್ತಾರೆ, ಮನೆಗೆ ಯಾರು ಬಂದರು, ಹೋದರು ಎಂಬುದಿರಲಿ ಹಗಲು, ರಾತ್ರಿಯ ಪರಿಕಲ್ಪನೆಯೂ ಅದಕ್ಕೆ ಇರದು.

ಆದರೆ ಏಳು ತಿಂಗಳಿನಿಂದ ಅಪ್ಪ, ಅಮ್ಮ ಎಂಬ ಅರಿವು ಮತ್ತು ತಾನು, ಇವರು ಬೇರೆ ಬೇರೆ ಎಂಬುದು ಅದಕ್ಕೆ ಗೊತ್ತಾಗತೊಡಗುತ್ತದೆ. ಇವರು ಸದಾ ತನ್ನ ಜತೆಯೇ ಇರಬೇಕೆಂದು ಮಗು ಬಯಸುತ್ತದೆ. ಮನೆಯ ಹೊರಗೆ ಹೋದವರು ಮತ್ತೆ ತಿರುಗಿ ಬರುವುದಿಲ್ಲ ಎಂಬ ಭಯ ಅದಕ್ಕೆ ಆಗುತ್ತದೆ.

ಇದಲ್ಲದೆ ಬಹಳ ಸಮಯ ಆತ್ಮೀಯರು ಕಣ್ಣಿನಿಂದ ದೂರವಾದರೆ (ಕಚೇರಿ, ಇತರ ಕೆಲಸಕ್ಕೆ ಮನೆ ಹೊರಗೆ ಹೋದಾಗ) ಮನಸ್ಸಿನಲ್ಲಿ ಅವರ ಮುಖ ನೆನೆದು ರಂಪ ಮಾಡುವುದು ಸಹಜ. ಇದನ್ನು ‘ಪ್ರತಿನಿಧಿತ್ವ ತರ್ಕ’ ಎನ್ನುತ್ತೇವೆ. ಇವೆಲ್ಲ ಅಗಲಿಕೆಯ ಆತಂಕಕ್ಕೆ ಮೂಲ ಕಾರಣಗಳು. ಬಹುತೇಕ ಎಲ್ಲ ಮಕ್ಕಳಲ್ಲಿ ಸಾಮಾನ್ಯವಾದ ಇಂತಹ ಒಂದು ನಡವಳಿಕೆ ಆರು ತಿಂಗಳಿನ ನಂತರ ಆರಂಭವಾಗುತ್ತದೆ. 12 ರಿಂದ 14 ತಿಂಗಳಲ್ಲಿ ಇದು ಹೆಚ್ಚು. ಕೆಲವು ಮಕ್ಕಳಲ್ಲಿ 4 ವರ್ಷದವರೆಗೂ ಸಹಜ. ಹೊಸ ಪರಿಸರ, ಹೊಸ ಮನೆ, ಡೇ-ಕೇರ್ ಸೆಂಟರ್ಗೆ ದಾಖಲಾದಾಗ, ಪ್ರೀತಿಯ ವ್ಯಕ್ತಿಯ ಸಾವು, ಅತಿ ಮುದ್ದು ಮಾಡಿಸಿಕೊಳ್ಳುವವರು, ತಂದೆ-– ತಾಯಿ ನಡುವಿನ ವಿರಸದ ಸಮಯದಲ್ಲಿ, ಉದ್ಯೋಗಸ್ಥ ಅಪ್ಪ--– ಅಮ್ಮ ಹಾಗೂ ವಿಭಕ್ತ ಕುಟುಂಬಗಳಲ್ಲಿ ಈ ಬಗೆಯ ನಡವಳಿಕೆ ದೊಡ್ಡ ಮಕ್ಕಳಲ್ಲೂ ಹೆಚ್ಚಾಗಿ ಇರುತ್ತದೆ.

ಮಗುವಿನ ಇಂತಹ ಆತಂಕ ಹೆತ್ತವರಿಗೆ ಮನೋವೇದನೆ ತರುತ್ತದೆ. ಕಚೇರಿ ಕೆಲಸಕ್ಕೆ ಹೋಗುವಾಗ ಅಥವಾ ಕೆಲಸದಲ್ಲಿ ಇರುವಾಗ ‘ನನ್ನ ಸ್ವಾರ್ಥಕ್ಕಾಗಿ ಮನೆಯಲ್ಲಿ ಮಗುವನ್ನು ಬಿಟ್ಟು ಬಂದಿದ್ದೇನೆ’ ಎಂಬಂತಹ ತಪ್ಪಿತಸ್ಥ ಭಾವನೆ ಅಥವಾ ಅತ್ತೂ ಕರೆದೂ ಮಗುವಿಗೆ ತೊಂದರೆ ಆಗಿರಬಹುದು, ಊಟ ಮಾಡದೇ ಇರಬಹುದು ಎಂಬ ಚಿಂತೆ ಆಗುವುದು ಸಹಜ.

ಉಪಾಯ ಏನು?
ಬೈಬೈ ಹೇಳಿ: ತಾವು ಹೊರಡುವುದನ್ನು ನೋಡಿದರೆ ರಂಪ ಮಾಡಬಹುದೆಂಬ ಕಾರಣದಿಂದ ಮಗು ಬೇರೆ ಕೋಣೆಯಲ್ಲಿ ಇದ್ದಾಗ ಅದರ ಕಣ್ಣು ತಪ್ಪಿಸಿ ಮನೆಯ ಹೊರಗೆ ಹೋಗುವುದು ಸಾಮಾನ್ಯ. ಇದು ಹೆತ್ತವರು ಮಾಡುವ ದೊಡ್ಡ ತಪ್ಪು. ಇದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತದೆ. ಏಕೆಂದರೆ ಅಮ್ಮ ಒಮ್ಮಿಂದೊಮ್ಮೆಲೇ ಯಾಕೆ, ಹೇಗೆ ಮಾಯವಾದಳು, ಅವಳು ಮತ್ತೆ ಬರುವುದಿಲ್ಲ ಎಂದೇ ಅದು ಭಾವಿಸುತ್ತದೆ. ನಿಮ್ಮ ನೆನಪಾದಾಗಲೆಲ್ಲ ಮನಸ್ಸಿನಲ್ಲಿ ನಿಮ್ಮ ಮುಖವನ್ನೇ ಸ್ಮರಿಸಿಕೊಂಡು, ಅಮ್ಮ ಮನೆಯಲ್ಲಿ ಇಲ್ಲ, ತಾನು ಒಂಟಿ ಎಂದು ನಿರ್ಧರಿಸುತ್ತದೆ.

ಇನ್ನೂ ಪೂರ್ಣ ಮಾತು ಬಾರದ ಮಗು ತನ್ನ ಇಂತಹ ಭಾವನೆಗಳನ್ನು ಸದಾ ಕಿರಿಕಿರಿ, ಅಳುವಿನ ಮೂಲಕ ವ್ಯಕ್ತಪಡಿಸಿ ಊಟದಿಂದ ದೂರ ಉಳಿಯುತ್ತದೆ. ಈ ಕಾರಣದಿಂದ ‘ಇವತ್ತು ಬಹಳ ಕಿರಿಕಿರಿ ಮಾಡುತ್ತಿದೆ, ಊಟ, ನಿದ್ರೆ ಮಾಡಿಲ್ಲ’ ಎಂಬ ಫೋನ್ ಮಾಹಿತಿಯು ಮಗುವಿನ ಜತೆ ಮನೆಯಲ್ಲಿರುವ ಅಜ್ಜ, ಅಜ್ಜಿ ಅಥವಾ ಬಾಡಿಗೆ ಆರೈಕೆದಾರರಿಂದ (ಬೇಬಿ ಸಿಟ್ಟರ್) ಕಚೇರಿಯಲ್ಲಿರುವ ಹೆತ್ತವರಿಗೆ ರವಾನೆಯಾಗುವುದು ಹೊಸದೇನಲ್ಲ.

ನೀವು ಮನೆಯಿಂದ ಹೊರಹೋಗುವಾಗ ‘ನಾನು ಆಫೀಸಿಗೆ ಹೋಗಿ ಸಂಜೆ ಬೇಗ ಬರುತ್ತೀನಿ, ಅಜ್ಜಿ ಹತ್ತಿರ ಆಟವಾಡುತ್ತಿರು, ಹಣ್ಣು ತರುತ್ತೇನೆ’ ಎಂದು ಅಪ್ಪಿ ಮುದ್ದು ಮಾಡಿ ಹೇಳಿ. ಆರಂಭದ ಕೆಲವು ದಿನ ಮಗು ಅಳಬಹುದು. ಈ ಬಗ್ಗೆ ಚಿಂತೆ ಮಾಡದೆ ಕಚೇರಿಗೆ ಹೊರಡಿ. ದಿನಕಳೆದಂತೆ ನಿಮ್ಮನ್ನು ಟಾಟಾ ಮಾಡಿ ನಗುತ್ತಾ ಬೀಳ್ಕೊಡುತ್ತದೆ. ನಿಮ್ಮ ಅನುಪಸ್ಥಿತಿಯಲ್ಲಿ ಅದು ರಂಪ ಮಾಡದು. ಏಕೆಂದರೆ ನೀವು ತಿರುಗಿ ಬರುತ್ತೀರಿ ಎಂಬ ಭರವಸೆ ಅದಕ್ಕೆ ಇರುತ್ತದೆ.

ಹಸಿವೆ, ಬಳಲಿಕೆ ಆದಾಗಲೂ ಈ ವರ್ತನೆ ಸಾಮಾನ್ಯ. ಆದ್ದರಿಂದ ಮಗುವಿಗೆ ಆಹಾರ ನೀಡಿದ ನಂತರ ಅಥವಾ ನಿದ್ರೆ ಮಾಡಿದ ನಂತರ ಮನೆಯ ಹೊರಹೋಗಲು ಸೂಕ್ತ ಸಮಯ.

ಏಕಕಾಲಕ್ಕೆ ನಿರ್ಗಮನ: ಸಾಧ್ಯವಾದಾಗಲೆಲ್ಲ ನೀವು ಕೆಲಸಕ್ಕೆ ಮತ್ತು ಮಗು ಆಟವಾಡಲು ಅಜ್ಜ-– ಅಜ್ಜಿಯ ಜತೆ ಮನೆಯಿಂದ ಹೊರಗೆ ಒಂದೇ ಸಮಯಕ್ಕೆ ಹೊರಡಿ. ಮನೆಯ ಹೊರಗೆ ಮಗು ನಿಮ್ಮ ಜೊತೆ ಇರುವಾಗ ಮಾತನಾಡಿಸಿ ನಿರ್ಗಮಿಸಿ. ಇದರಿಂದ ಆಗುವ ಅನುಕೂಲವೆಂದರೆ, ಮಗು ನಿಮ್ಮನ್ನು ಬೀಳ್ಕೊಡುವಾಗ ರಂಪ ಮಾಡದು. ಇದಲ್ಲದೆ ತಿರುಗಿ ಮನೆಗೆ ಬಂದಾಗ ‘ಅಮ್ಮ ಮನೆಯಲ್ಲಿಲ್ಲ’ ಎಂಬ ಭಾವನೆ ಸಹ ಅದಕ್ಕೆ ಬರದು.

ಮಗು ಇಷ್ಟಪಟ್ಟರೆ ಕಚೇರಿಯಿಂದ ದೂರವಾಣಿ ಮೂಲಕ ಅದರ ಜೊತೆ ಮಾತನಾಡಿ. ಆದರೆ, ಪದೇ ಪದೇ ಹೀಗೆ ಮಾತನಾಡುವುದರಿಂದ ಅಮ್ಮ ಮನೆಯಲ್ಲಿಲ್ಲ ಎಂದು ಅದು ನೆನಪಿಸಿಕೊಳ್ಳುವ ಅಪಾಯವೂ ಇರುತ್ತದೆ.

ನೆನಪಿನ ವಸ್ತು ನೀಡಿ: ನೀವು ಹೊರಹೋಗುವಾಗ ನಿಮ್ಮ ಫೋಟೊ, ಬಟ್ಟೆ ಅಥವಾ ಇಷ್ಟದ ಆಟಿಕೆ ಕೊಡಿ. ನಿಮ್ಮ ನೆನಪಾದಾಗಲೆಲ್ಲ ಅದು ರಂಪ ಮಾಡದೆ ಈ ಉಡುಗೊರೆಯ ವಸ್ತು ನೋಡಿಕೊಂಡು ಇರುತ್ತದೆ. ಆದರೆ ಇಲ್ಲಿ ಜಾಗ್ರತೆ ಅವಶ್ಯ. ಈ ವಸ್ತು ನಿಮ್ಮ ಅನುಪಸ್ಥಿತಿಯನ್ನು ನೆನಪಿಸುವ ಅಪಾಯವೂ ಇರುತ್ತದೆ. ಉಡುಗೊರೆ ನೀಡುವುದನ್ನು ಪ್ರಯತ್ನಿಸಿ ನೋಡಿ. ವಿಫಲವಾದರೆ ಯಾವುದೇ ವಸ್ತುವನ್ನು ನೀಡಬೇಡಿ.

ಮಗುವನ್ನು ಮನೆಯಲ್ಲಿ ಬಿಟ್ಟು ಹೋಗುವ ಆರಂಭದ ಒಂದೆರಡು ತಿಂಗಳು ತಂದೆ ಅಥವಾ ತಾಯಿಯಲ್ಲಿ ಒಬ್ಬರು ಬೇಗ ಮನೆಗೆ ಬನ್ನಿ. ಸ್ವಲ್ಪ ಸಮಯದವರೆಗೆ ನಿಮ್ಮಿಬ್ಬರ ಕೆಲಸದ ವೇಳೆ ಭಿನ್ನವಾಗಿರಲಿ. ಉದಾ: ತಾಯಿ ಹಗಲು ಮತ್ತು ತಂದೆ ರಾತ್ರಿ ಪಾಳಿಯಾಗಿದ್ದರೆ ಒಬ್ಬರು ಮಗುವಿನ ಜೊತೆ ಇರಬಹುದು.

ಆಟ: ನೀವು ಮನೆಯಿಂದ ಹೊರಡುವ ಮೊದಲು ಸ್ವಲ್ಪ ಹೊತ್ತು ಮಗುವಿಗೆ ಇಷ್ಟವಾದ ಆಟ ಅಥವಾ ಆಟಿಕೆಯಲ್ಲಿ ಜೊತೆಯಾಗಿ ಕಳೆಯಿರಿ. ಮಗು ಆಟದಲ್ಲಿ ಇರುವಾಗಲೇ ಮಾತನಾಡಿಸಿ ಹೊರಡಿ. ಆಟದಲ್ಲಿ ಮಗ್ನವಾಗಿರುವಾಗ ನಿಮ್ಮ ಅಗಲಿಕೆಯನ್ನು ಅದು ಪರಿಗಣಿಸುವುದಿಲ್ಲ, ಆಟದಲ್ಲೇ ತಲ್ಲೀನವಾಗಿ ನಿಮ್ಮ ಅಗಲಿಕೆಯನ್ನು ಮರೆಯುತ್ತದೆ.

ಮನೆಯಲ್ಲಿ ಅಜ್ಜ, ಅಜ್ಜಿ ಇಲ್ಲದ ಸಂದರ್ಭಗಳಲ್ಲಿ ಮಗುವಿನ ಜೊತೆಗಿರಲು ಬೇಬಿ ಸಿಟ್ಟರ್ ನೇಮಿಸಿಕೊಳ್ಳುವುದು ಈಗಿನ ಸಂಸ್ಕೃತಿ. ಇವರನ್ನು ಪದೇ ಪದೇ ಬದಲಿಸಬೇಡಿ. ಏಕೆಂದರೆ ಹೊಸಬರ ಜೊತೆ ಹೊಂದಿಕೊಳ್ಳಲು ಕನಿಷ್ಠ 15 ದಿನವಾದರೂ ಬೇಕು ಅಥವಾ ನಂತರವೂ ಅದು ಹೊಂದಿಕೊಳ್ಳದೇ ಇರಬಹುದು. ಹೊಸ ಬೇಬಿ ಸಿಟ್ಟರ್ ಜೊತೆ ಮಗುವನ್ನು ಬಿಟ್ಟು ಕೆಲಸಕ್ಕೆ ಹೋಗುವ ಅರ್ಧ ಗಂಟೆ ಮುಂಚೆ ತಂದೆ/ ತಾಯಿ, ಮಗು ಮತ್ತು ಬೇಬಿ ಸಿಟ್ಟರ್ ಒಟ್ಟಿಗೇ ಕಳೆಯಿರಿ. ಹೀಗೆ ಮಾಡುವುದರಿಂದ ಮಗು ಮತ್ತು ಕೆಲಸದಾಕೆ ಹತ್ತಿರವಾಗುತ್ತಾರಲ್ಲದೆ, ಮಗು ಬೇಬಿ ಸಿಟ್ಟರ್ನ ಜೊತೆಗಿರಲು ಭಯ ಪಡುವುದಿಲ್ಲ.

ಸಮಯ ಗೊತ್ತಿರಲಿ: ಮನೆಯ ಆಚೆ ಹೋಗುವ ಮೊದಲು ‘ನೀನು ನಿದ್ದೆ ಮಾಡಿದ ನಂತರ, ಸಂಜೆ ಅಥವಾ ರಾತ್ರಿ ಊಟದ ಸಮಯಕ್ಕೆ ಬರುತ್ತೇನೆ’ ಎಂದು ಸನ್ನೆ ಮಾಡಿ ಮಾತನಾಡುತ್ತಾ ಹೇಳಿ. ಎಳೆ ಮಗುವಿಗೆ ನೀವು ಹೇಳುವುದು ಪೂರ್ಣ ಅರ್ಥವಾಗದೇ ಇರಬಹುದು, ಆದರೆ ಅಮ್ಮ ತಿರುಗಿ ಬರುತ್ತಾಳೆ ಎಂಬ ಭರವಸೆಯನ್ನು ಅದು ಮೂಡಿಸುತ್ತದೆ.

ಹಂತ ಹಂತವಾಗಿರಲಿ
ಮಗುವನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗುವ ಪ್ರಕ್ರಿಯೆ ಹಂತ ಹಂತವಾಗಿರಲಿ. ಸುಮಾರು 7 ತಿಂಗಳ ಕಾಲ 24 ಗಂಟೆಯೂ ಜೊತೆಗಿದ್ದ ಆತ್ಮೀಯ ವ್ಯಕ್ತಿ ಒಮ್ಮೆಲೇ ದಿನ ಪೂರ್ತಿ ಕಾಣದಿದ್ದಾಗ ಮಗುವಿಗೆ ಆತಂಕ ಸಹಜ.

ಆರಂಭದಲ್ಲಿ ಪ್ರಾಯೋಗಿಕವಾಗಿ ಒಂದೆರಡು ಗಂಟೆ ಮಾತ್ರ ಹೊರಹೋಗಿ ಪ್ರಯತ್ನಿಸಿ. ನಂತರ ಕ್ರಮೇಣ ಈ ಅವಧಿಯನ್ನು ದಿನಕ್ಕೆ ಒಂದೆರಡು ಗಂಟೆ ಹೆಚ್ಚಿಸುತ್ತಾ ಬನ್ನಿ. ಈ ಪ್ರಯತ್ನಕ್ಕೆ ಮಗು ಸ್ಪಂದಿಸಿದರೆ ನಿರಾತಂಕವಾಗಿ ಕಚೇರಿಗೆ ಹೋಗಬಹುದು.

ಇವು ಬೇಡ
ತಂದೆ ತಾಯಿಗೆ ಕಿರುಕುಳ ನೀಡುವ, ಅವರ ಅಪಹರಣ, ಹತ್ಯೆಯನ್ನು ಬಿಂಬಿಸುವ ಟಿ.ವಿ. ದೃಶ್ಯಗಳನ್ನು ಮಗು ನೋಡದಿರಲಿ. ಹಿಂದಿನ ದಿನ ಇಂತಹ ದೃಶ್ಯ ನೋಡಿದ ಮಗು, ಇವು ತನ್ನ ತಂದೆ ತಾಯಿಗೂ ಸಾಧ್ಯ, ಹೀಗಾದರೆ ಇವರು ತಿರುಗಿ ಮನೆಗೆ ಬರುವುದಿಲ್ಲ ಎಂದು ಭಾವಿಸುತ್ತದೆ. ಹೀಗಾಗಿ, ಮರುದಿನ ನಿಮ್ಮನ್ನು ಮನೆಯಿಂದ ಹೊರಗೆ ಹೋಗಲು ಬಿಡುವುದಿಲ್ಲ.

ಮನೆ ಹೊರಗೆ ಹೋಗುವಾಗ ಹೆಚ್ಚು ಭಾವನಾತ್ಮಕತೆ ಬೇಡ. ಸಣ್ಣ ಮುಖ ಮಾಡಬೇಡಿ. ಅಳಬೇಡಿ. ಹೀಗೆ ಮಾಡುವುದರಿಂದ ಅಮ್ಮ ತಿರುಗಿ ಬರುವುದಿಲ್ಲ ಎಂದು ಮಗು ಭಾವಿಸುತ್ತದೆ.

ಮಕ್ಕಳ ಮನೋಸ್ಥಿತಿ ಮಗುವಿಂದ ಮಗುವಿಗೆ ಮತ್ತು ವಯಸ್ಸಿನಿಂದ ವಯಸ್ಸಿಗೆ ಭಿನ್ನ. ಇಲ್ಲಿ ವಿವರಿಸಿದ ಎಲ್ಲ ವಿಧಾನಗಳನ್ನು ಎಲ್ಲ ಮಕ್ಕಳ ಮೇಲೂ ಪ್ರಯೋಗಿಸಬೇಕೆಂದಿಲ್ಲ. ನಿಮ್ಮ ಮಗುವಿಗೆ ಸೂಕ್ತವಾದುದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಿ.

ನಿರಾಸೆ ಬೇಡ
ನಿಮ್ಮ ಎಲ್ಲ ಪ್ರಯತ್ನದ ನಂತರವೂ, ಮನೆಯಿಂದ ನೀವು ಒಂದು ಹೆಜ್ಜೆಯೂ ಹೊರಗಿಡದಂತೆ ಮಗು ರಂಪ ಮಾಡುವುದು ಅಪರೂಪ, ಆದರೆ ಸಾಧ್ಯ. ಅಳುತ್ತಿರುವ ಮಗುವನ್ನು ಬಿಟ್ಟು ನೌಕರಿಗೆ ಹೋಗುವುದು ಸ್ವಾರ್ಥ ಎಂಬ ಹತಾಶೆ ಬೇಡ. ಕಚೇರಿ ತಲುಪುವವರೆಗೆ ಮತ್ತು ಕೆಲಸದ ಸಮಯದಲ್ಲಿ ರಂಪಾಟದ ಮಗುವನ್ನು ನೆನಪಿಸಿಕೊಂಡು ನಿರಾಶರಾಗದಿರಿ. ಏಕೆಂದರೆ ಈ ವರ್ತನೆ ಅಲ್ಪಕಾಲಿಕ. ಸಹಜ ಬೆಳವಣಿಗೆಯ ಒಂದು ಹಂತ. ದಿನಗಳೆದಂತೆ ಮಗು ಪರಿಸ್ಥಿತಿಗೆ ಹೊಂದಿಕೊಳ್ಳುತ್ತದೆ.

ತಾಯಂದಿರೇ ಕೇಳಿ...
‘ಅಯ್ಯೋ ದಿನವೆಲ್ಲ ಕಚೇರಿ ಕೆಲಸದಲ್ಲಿ ಸುಸ್ತಾಗಿದ್ದೇನೆ, ಅರ್ಧ ಗಂಟೆ ಮಗುವನ್ನು ನನ್ನ ಹತ್ತಿರ ತರಬೇಡಿ’ ಎಂದು ಹೇಳಿ ತಪ್ಪು ಮಾಡುವ ತಾಯಂದಿರಿಗೆ ಒಂದು ಕಿವಿಮಾತು. ನೀವು ಮನೆಯಲ್ಲಿ ಕಾಲಿಟ್ಟ ತಕ್ಷಣ (ಅಥವಾ ಕೆಲ ದಿನ ಪ್ರವಾಸದ ನಂತರ ಅಜ್ಜ, ಅಜ್ಜಿ, ಮನೆಗೆ ಬಂದಾಗ) ಮಗು ಬಾತ್ರೂಮಿಗೂ ಹೋಗಲು ಬಿಡದೆ ನಿಮ್ಮ ಹಿಂದೆಯೇ ಇರುತ್ತದೆ.

ಇದಕ್ಕೆ ಕಾರಣ, ಮನೆಗೆ ಬಂದವರು ಮತ್ತೆ ಹೊರಗೆ ಹೋಗಬಹುದೆಂಬ ಭಯ. ಇದಲ್ಲದೆ ದಿನವೆಲ್ಲ ನಿಮ್ಮಿಂದ ದೂರವಿದ್ದು ಬೇಸರಗೊಂಡ ಮಗುವಿಗೆ ಕೂಡಲೇ ನಿಮ್ಮ ಜೊತೆ ಆಟವಾಡಬೇಕೆಂಬ ಆತುರ. ಆದ್ದರಿಂದ, ಮನೆಗೆ ಬಂದ ತಕ್ಷಣವೇ ನಿಮ್ಮ ಎಲ್ಲ ಆಯಾಸವನ್ನೂ ಸಹಿಸಿಕೊಂಡು, ಮಗುವನ್ನು ಅಪ್ಪಿಕೊಂಡು ಮುದ್ದಾಡಿ, ಕನಿಷ್ಠ ಮೊದಲ ಅರ್ಧ ಗಂಟೆಯಾದರೂ ಅದರೊಟ್ಟಿಗೆ ಕಳೆಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.