ಬುಧವಾರ, ಜನವರಿ 29, 2020
24 °C

ತೀಜನ್ ಬಾಯಿ ದನಿಗೆ ಬೆರಗಾದ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಡಿಯಾರಿ ಜಿಲ್ಲೆಯಲ್ಲಿ ಹುಟ್ಟಿದ ತೀಜನ್ ಬಾಯಿ ಅಕ್ಷರ ಬಲ್ಲವರಲ್ಲ. ಆದರೆ ಪಾಂಡ್ವಾನಿ ಸಂಗೀತ ಕಲೆಯ ಮೂಲಕ ಜಗತ್ತಿನ ಹಲವಾರು ದೇಶಗಳಲ್ಲಿ ಸಂಚರಿಸಿ ಕಾರ್ಯಕ್ರಮ ನೀಡಿದವರು. ಉಮೇದ್‌ ಸಿಂಗ್ ದೇಶ್‍ಮುಖ್ ಅವರ ಮಾರ್ಗದರ್ಶನದಲ್ಲಿ ಈ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.ಪಾಂಡ್ವಾನಿ ಸಂಗೀತವನ್ನು ಕಾಪಾಲಿ ಶೈಲಿಯಲ್ಲಿ ಕಲಿತ ಅವರು ಹಲವಾರು ಪ್ರದರ್ಶನಗಳನ್ನು ನೀಡಿದ್ದಾರೆ. ಕುಳಿತು ಹಾಡುವ ವೇದವತಿ ಶೈಲಿಯಲ್ಲಿ ಮಾರ್ಪಾಟು ತಂದು ನಿಂತುಕೊಂಡು ಹಾಡಿದ ಪ್ರಥಮ ಮಹಿಳೆಯೂ ಹೌದು. ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡುತ್ತ ಅವರು ಅಕ್ಷರ ಬಾರದೇ ಇದ್ದರೂ ಇಂತಹ ಸನ್ಮಾನ ಸ್ವೀಕರಿಸುವ ಅವಕಾಶ ಪಡೆದ ತಮಗೆ ಜನ್ಮನೀಡಿದ ತಂದೆ ತಾಯಿಯನ್ನು ಸ್ಮರಿಸಿಕೊಂಡರು.ತ್ರೇತಾ ಯುಗದ ನಾರಿ ಸೀತಾ ದೇವಿ, ದ್ವಾಪರ ಯುಗದ ದ್ರೌಪದಿ ದೇವಿಯ ಕಾರಣದಿಂದ ದುಷ್ಟತನದ ನಿವಾರಣೆ ಆಯಿತು. ಕಲಿಯುಗದಲ್ಲಿ ಅವರ ಸಂದೇಶಗಳು ಪಾಂಡ್ವಾನಿ ಸಂಗೀತದ ಮೂಲಕ ತಮ್ಮ ಪಾಲಿಗೆ ಲಭ್ಯವಾಗಿದೆ. ಆದರೆ ವಿಪರ್ಯಾಸವೆಂದರೆ ಕಲಿಯುಗದಲ್ಲಿ ನಡೆಯುತ್ತಿರುವ ಅತ್ಯಾಚಾರ, ದುರಾಚಾರಗಳಿಂದ ನಾರಿಯನ್ನು ಪಾರುಮಾಡಲು ಕೃಷ್ಣನೇ ಕಾಣುತ್ತಿಲ್ಲ. ನಾರಿಯರೇ ಒಂದಾಗಿ ಹೋರಾಡಬೇಕಾಗಿದೆ ಎಂದರು ಹೇಳಿದರು.ಬಳಿಕ ಪಾಂಡ್ವಾನಿ ಸಂಗೀತ ಕಲೆಯ ‘ದ್ರೌಪದಿ ಪ್ರಸಂಗ’ವನ್ನು ಪ್ರಸ್ತುತಪಡಿಸಿದರು. ಸಮಯದ ಅಭಾವದಿಂದ ಸಂಗೀತದ ಉಪಕರಣಗಳನ್ನು ಬಳಸುವುದು ಸಾಧ್ಯವಾಗಲಿಲ್ಲ. ಆದರೆ ಏರುಸ್ವರದ ಅವರ ಮಾತುಗಳಿಗೆ ಸಭೆ ನಿಬ್ಬೆರಗಾಗಿ ಆಲಿಸಿತು.ಅಪ್ಪಟ ದೇಸೀ ಅಲಂಕಾರ

ತೀಜನ್‌ಬಾಯಿ ಅಪ್ಪಟ ಸಾಂಪ್ರದಾಯಿಕ ಅಲಂಕಾರದಲ್ಲಿ ವೇದಿಕೆಗೆ ಆಗಮಿಸಿದ್ದರು. ಕೆಂಪುಬಣ್ಣದ ಸೀರೆಯನ್ನು ನಿರಿಗೆ ಹಾಕದೆ ಉಟ್ಟ ಅವರು, ಅಂಗೈಯಷ್ಟಗಲದ ಬೆಳ್ಳಿಯ ಡಾಬು, ಕಾಲಿಗೆ ಕುಣಿಪು ರೀತಿಯ ಗೆಜ್ಜೆ ಮತ್ತು ಅಗಲವಾದ ಕಡಗ ಧರಿಸಿದ್ದರು. ಎರಡೂ ಕೈಯ ಬೆರಳುಗಳಿಗೆ ರೂಪಾಯಿ ಗಾತ್ರದ ಉಂಗುರಗಳನ್ನು ಧರಿಸಿ, ವಂಕಿ, ಗೆಜ್ಜೆಯಾಕೃತಿಯ ಸರವನ್ನು ಧರಿಸಿದ್ದರು.ಸ್ಥೂಲ­ಕಾಯಸ್ಥರಾದರೂ ತಮ್ಮ ನಿರ್ಭಿಡೆಯ ನಿಲುವಿನಿಂದ ಆಕರ್ಷಕವಾಗಿ ಕಾಣುತ್ತಿದ್ದರು. ಪಾಂಡ್ವಾನಿ ಪ್ರಸ್ತುತಿಗೆ ಮುನ್ನ ಚಪ್ಪಲಿಗಳನ್ನು ಕಳಚಿ ಮೈಕ್ ಮುಂದೆ ನಿಂತರೆ, ಕೊನೆಗೆ ಬೋಲ್ ಬೃಂದಾವನ್‌ ವಿಹಾರಿ ಲಾಲ್‌ಕೀ.. ಎನ್ನುತಿದ್ದಂತೆಯೇ ಸಭೆ ಜೈಕಾರ ಹಾಕಿತು.

ಪ್ರತಿಕ್ರಿಯಿಸಿ (+)