ಭಾನುವಾರ, ಮಾರ್ಚ್ 7, 2021
22 °C
ಸಲಿಂಗ ಮದುವೆ, ಒಬಾಮ ಕೇರ್‌ಗೆ ಸುಪ್ರೀಂಕೋರ್ಟ್ ಒಪ್ಪಿಗೆ

ತೀರ್ಪು ಟೀಕಿಸಿದ ಬಾಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೀರ್ಪು ಟೀಕಿಸಿದ ಬಾಬಿ

ವಾಷಿಂಗ್ಟನ್ (ಪಿಟಿಐ): ಸಲಿಂಗ ಮದುವೆ ಹಾಗೂ ಅಧ್ಯಕ್ಷ ಬರಾಕ್‌ ಒಬಾಮ ಅವರ ಮಹತ್ವಾಕಾಂಕ್ಷೆಯ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ‘ಒಬಾಮ ಕೇರ್‌’ ಕಾಯ್ದೆಯನ್ನು ಎತ್ತಿ ಹಿಡಿದ ಅಮೆರಿಕ ಸುಪ್ರೀಂಕೋರ್ಟ್ ತೀರ್ಪನ್ನು ಭಾರತ ಮೂಲದ ಲೂಸಿಯಾನ ಗವರ್‍ನರ್‌ ಮತ್ತು ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಾಬಿ ಜಿಂದಾಲ್‌ ಕಟುವಾಗಿ ಟೀಕಿಸಿದ್ದಾರೆ.ಆದರೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್‌ ಹಾಗೂ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್‌ ಅವರು ಸುಪ್ರೀಂಕೋರ್ಟ್‌ ತೀರ್ಪನ್ನು ಸ್ವಾಗತಿಸಿದ್ದಾರೆ.‘ಸಲಿಂಗ ಮದುವೆಗೆ ಮಾನ್ಯತೆ ನೀಡಿದ ಮತ್ತು ಆರೋಗ್ಯ ಕಾಯ್ದೆ ಎತ್ತಿಹಿಡಿದ ಸುಪ್ರೀಂಕೋರ್ಟ್ ಸಂಪೂರ್ಣವಾಗಿ ಹದ್ದು ಮೀರಿದೆ. ನ್ಯಾಯಾಧೀಶರು ತಮಗಾಗಿ ಕಾನೂನು ಮಾಡಿಕೊಳ್ಳುತ್ತಿದ್ದಾರೆ’ ಎಂದು ಬಾಬಿ ಆರೋಪಿಸಿದ್ದಾರೆ.2016ರ ಅಧ್ಯಕ್ಷೀಯ ಚುನಾವಣೆಗೆ ಪ್ರಚಾರ ಆರಂಭಿಸಿರುವ ಬಾಬಿ, ‘ನಾವೇನಾದರೂ ಸ್ವಲ್ಪ ಹಣ ಉಳಿಸಬೇಕು ಎಂದಿದ್ದರೆ ಈ ಕೋರ್ಟ್‌ ವ್ಯವಹಾರಗಳಿಂದ ದೂರ ಇರುವುದು ಒಳಿತು’ ಎಂದು ಅವರು ಹೇಳಿದ್ದಾರೆ.‘ಗಂಡು, ಹೆಣ್ಣಿನ ನಡುವಿನ ಮದುವೆ ನಡೆದುಕೊಂಡು ಬಂದಿರುವ ಸಹಜ ಸಂಪ್ರದಾಯ. ಇದನ್ನು ನ್ಯಾಯಾಲಯವೊಂದು ಬದಲಿಸಲಾಗದು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಸುಪ್ರೀಂಕೋರ್ಟ್  ನೀಡಿದ ತೀರ್ಪು ಐತಿಹಾಸಿಕ. ಇದು ಅಮೆರಿಕದ ಸಾಮಾಜಿಕ ಬದಲಾವಣೆಗೆ ದೊರೆತ ಅದ್ಭುತ ಗೆಲುವು’ ಎಂದು ಒಬಾಮ ಬಣ್ಣಿಸಿದ್ದಾರೆ.ಅಮೆರಿಕ ಮಾನವ ಹಕ್ಕುಗಳ ಇತಿಹಾಸದಲ್ಲಿ ಸಲಿಂಗ ಮದುವೆಗೆ ಮಾನ್ಯತೆ ನೀಡಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ಐತಿಹಾಸಿಕ ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಬಾನ್‌ ಕಿ ಮೂನ್ ಹೊಗಳಿದ್ದಾರೆ.ಸಲಿಂಗ ಮದುವೆಗೆ ಕಾನೂನು ಮಾನ್ಯತೆ ನೀಡಿ ಅಮೆರಿಕ ಸುಪ್ರಿಂಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಇದರನ್ವಯ ಅಮೆರಿಕದ ಎಲ್ಲ 50 ರಾಜ್ಯಗಳ ಸಲಿಂಗಿಗಳು ಮದುವೆಯಾಗಬಹುದು. ದಶಕಗಳಿಂದ ಇದಕ್ಕಾಗಿ ಹೋರಾಟ ನಡೆಸಿದ್ದ ಸಲಿಂಗಿ ಸಮೂಹಕ್ಕೆ ದೊರೆತ ಜಯ ಎಂದು ಈ ತೀರ್ಪನ್ನು ಬಣ್ಣಿಸಲಾಗಿದೆ. ಒಬಾಮ ಮಹಾತ್ವಾಕಾಂಕ್ಷೆಯ ವಿವಾದಿತ ‘ಒಬಾಮ ಕೇರ್‌’ ಆರೋಗ್ಯ ಕಾನೂನಿಗೂ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.