ಸೋಮವಾರ, ಮೇ 16, 2022
28 °C

ತೀರ್ಪು ಪ್ರಶ್ನಿಸುವ ಮೊದಲು ನಿಯಮ ಓದಿ: ದೋನಿಗೆ ಐಸಿಸಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕ್ರಿಕೆಟ್‌ನಲ್ಲಿ ತಂತ್ರಜ್ಞಾನ ಅಳವಡಿಕೆಯನ್ನು ಪ್ರಶ್ನಿಸುವ ಮೊದಲು ಅಂಪೈರ್ ತೀರ್ಪು ಮರು ಪರಿಶೀಲನಾ ಪದ್ಧತಿ (ಯುಡಿಆರ್‌ಎಸ್)ಯ ನಿಯಮಗಳನ್ನು ಓದುವಂತೆ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸೂಚಿಸಿದೆ.ಇಂಗ್ಲೆಂಡ್ ವಿರುದ್ಧ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಇಯಾನ್ ಬೆಲ್ ವಿರುದ್ಧ ಅಂಪೈರ್ ನೀಡಿದ ತೀರ್ಪಿನ ಬಗ್ಗೆ ವಿವಾದ ಸೃಷ್ಟಿಯಾಗಿತ್ತು. ಈ ಸಂಬಂಧ ದೋನಿ ಯುಡಿಆರ್‌ಎಸ್ ಹಾಗೂ ಅಂಪೈರ್ ಕ್ರಮವನ್ನು ಟೀಕಿಸಿದ್ದರು.ಆ ಪಂದ್ಯದಲ್ಲಿ ಯುವರಾಜ್ ಸಿಂಗ್ ಬೌಲಿಂಗ್‌ನಲ್ಲಿ ಬೆಲ್ ವಿರುದ್ಧ ಭಾರತದ ಆಟಗಾರರು ಎಲ್‌ಬಿ ಡಬ್ಲ್ಯು ಮನವಿ ಸಲ್ಲಿಸಿದ್ದರು. ಅದನ್ನು ಅಂಪೈರ್ ಬಿಲಿ ಬೌಡೆನ್ ನಿರಾಕರಿಸಿದ್ದರಿಂದ ನಾಯಕ ದೋನಿ ಯುಡಿಆರ್‌ಎಸ್ ನಿಯಮದ ಮೊರೆ ಹೋಗಿದ್ದರು. ಅದರಲ್ಲಿ ಬೆಲ್ ಔಟ್ ಎಂದು ಮೂರನೇ ಅಂಪೈರ್ ತೀರ್ಪು ನೀಡಿದ್ದರೂ ಫೀಲ್ಡ್ ಅಂಪೈರ್ ಬೌಡೆನ್ ಔಟ್ ನೀಡಿರಲಿಲ್ಲ.ಆದರೆ ಟಿವಿ ರಿಪ್ಲೇನಲ್ಲಿ ಯುವಿ ಹಾಕಿದ ಎಸೆತ ವಿಕೆಟ್‌ಗೆ ಬಡಿಯುವಂತಿತ್ತು. ‘ಮನುಷ್ಯರ ಯೋಚನೆಗಳಿಂದ ತಂತ್ರಜ್ಞಾನವನ್ನು ಕಲಬೆರಕೆ ಮಾಡುವುದು ಕೆಟ್ಟದ್ದು. ಹಾಗಾಗಿ ನಮಗೆ ಆ ವಿಕೆಟ್ ಲಭಿಸಲಿಲ್ಲ. ಮುಂದಿನ ದಿನಗಳಲ್ಲಿ ಈ ಸಂಬಂಧದ ವಿವಾದಗಳು ಎದ್ದಾಗ ಅದು ತಂತ್ರಜ್ಞಾನ ಅಥವಾ ಮನುಷ್ಯರ ನಿಲುವು ಆಗಿರಲಿ’ ಎಂದು ಟೈನಲ್ಲಿ ಕೊನೆಗೊಂಡ ಆ ಪಂದ್ಯದ ಬಳಿಕ ದೋನಿ ನಿರಾಸೆಯಿಂದ ಹೇಳಿದ್ದರು.‘ಚೆಂಡು ಸ್ಟಂಪ್‌ಗೆ ಬಡಿಯುತ್ತಿತ್ತು ಎಂದು ಹಾಕ್‌ವೇ ಹೇಳುತ್ತಿದೆ. ಈ ನಡುವೆಯೂ ಮನವಿಯನ್ನು ಏಕೆ ತಿರಸ್ಕರಿಸಲಾಗಿದೆ ಎಂಬುದಕ್ಕೆ ಕಾರಣಗಳಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.ಆದರೆ ಈ ರೀತಿ ಆರೋಪ ಮಾಡುವ ಮೊದಲು ದೋನಿಗೆ ಕ್ರಿಕೆಟ್ ನಿಯಮಗಳು ಚೆನ್ನಾಗಿ ಗೊತ್ತಿರಬೇಕು ಎಂದು ಐಸಿಸಿಯ ಜನರಲ್ ಮ್ಯಾನೇಜರ್ ಡೇವ್ ರಿಚರ್ಡ್ಸನ್ ನುಡಿದಿದ್ದಾರೆ, ‘ಯುಡಿಆರ್‌ಎಸ್‌ನಲ್ಲಿ ಹಲವು ನಿಯಮಗಳಿವೆ. ಆದರೆ ಹೆಚ್ಚಿನ ಬಾರಿ ಆಟಗಾರರಿಗೆ ಎಲ್ಲಾ ನಿಯಮಗಳ ಬಗ್ಗೆ ಅರಿವಿರುವುದಿಲ್ಲ.ಅಕಸ್ಮಾತ್ ದೋನಿಗೆ ಎಲ್ಲಾ ನಿಯಮಗಳು ಗೊತ್ತಿದ್ದಿದ್ದರೆ ತೀರ್ಪನ್ನು ಮಾತನಾಡದೆ ಒಪ್ಪಿಕೊಳ್ಳುತ್ತಿದ್ದರು’ ಎಂದು ಅವರು ಖಾಸಗಿ ಚಾನೆಲ್‌ವೊಂದಕ್ಕೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.