ಭಾನುವಾರ, ಮಾರ್ಚ್ 7, 2021
19 °C
ಎನ್‌ಟಿಎಂಎಸ್ ಕನ್ನಡ ಶಾಲೆ ರಾಮಕೃಷ್ಣಾಶ್ರಮಕ್ಕೆ ಹಸ್ತಾಂತರ ವಿಚಾರ

ತೀರ್ಮಾನ ಬದಲಿಸದಿದ್ದರೆ ರಾಜ್ಯವ್ಯಾಪಿ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೀರ್ಮಾನ ಬದಲಿಸದಿದ್ದರೆ ರಾಜ್ಯವ್ಯಾಪಿ ಹೋರಾಟ

ಮೈಸೂರು:ನಗರದ ಎನ್‌ಟಿಎಂಎಸ್ ಕನ್ನಡ ಶಾಲೆಯನ್ನು ರಾಮಕೃಷ್ಣಾಶ್ರಮಕ್ಕೆ ಹಸ್ತಾಂತರಿಸುವ ನಿರ್ಣಯವನ್ನು ಸರ್ಕಾರ ಕೈಬಿಡಬೇಕು. ಕಳೆದ ಬಿಜೆಪಿ ಸರ್ಕಾರವು ಮಾಡಿದ ಪ್ರಮಾದವು ಈಗಿನ ಕಾಂಗ್ರೆಸ್ ಸರ್ಕಾರದಿಂದ ಮರುಕಳಿಸಿದರೆ ರಾಜ್ಯವ್ಯಾಪಿ ಹೋರಾಟ ಮಾಡುತ್ತೇವೆ ಎಂದು ಕನ್ನಡ ಕ್ರಿಯಾಸಮಿತಿ ಅಧ್ಯಕ್ಷ ಪ. ಮಲ್ಲೇಶ್ ಎಚ್ಚರಿಕೆ ನೀಡಿದರು.ಗುರುವಾರ ರಾಮಕೃಷ್ಣನಗರದ ನೃಪತುಂಗ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಆರ್‌ಎಸ್‌ಎಸ್ ಬೆಂಬಲಿತ ಬಿಜೆಪಿ ಸರ್ಕಾರ ಮಾಡಿಹೋಗಿದ್ದ ಹಲವು ಯೋಜನೆಗಳು ಮತ್ತು ನಿರ್ಧಾರಗಳನ್ನು ಈಗಿನ ಸರ್ಕಾರವು ಕೈಬಿಡುತ್ತಿದೆ. ಅದೇ ರೀತಿ ಎನ್‌ಟಿಎಂಎಸ್ ಶಾಲೆಯ ತೀರ್ಮಾನವನ್ನೂ ಬದಲಿಸಬೇಕು.ಕನ್ನಡ ಶಾಲೆಯೊಂದು ಮುಚ್ಚುವುದನ್ನು ಸರ್ಕಾರ ತಡೆಯಬೇಕು. ಆ ವಿಶ್ವಾಸ ನಮಗೆ ಇದೆ. ಒಂದೊಮ್ಮೆ ಈ ಸರ್ಕಾರವೂ ರಾಮಕೃಷ್ಣ ಆಶ್ರಮಕ್ಕೆ ಶಾಲೆಯನ್ನು ಹಸ್ತಾಂತರಿಸುವ ಕಾರ್ಯಕ್ಕೆ ಕೈಹಾಕಿದರೆ, ಈಗ ಮೈಸೂರು ಮಟ್ಟದಲ್ಲಿ ಇರುವ ಹೋರಾಟವನ್ನು ರಾಜ್ಯವ್ಯಾಪಿಗೊಳಿಸುತ್ತೇವೆ' ಎಂದರು.`ನಮ್ಮ ಹೋರಾಟ ಐತಿಹಾಸಿಕ ಹಿನ್ನೆಲೆ ಇರುವ ಮತ್ತು ಕನ್ನಡ ಕಲಿಯುವ ಮಕ್ಕಳಿರುವ ಶಾಲೆಯ ಉಳಿವಿಗಾಗಿ. ಆದರೆ, ರಾಮಕೃಷ್ಣ, ವಿವೇಕಾನಂದ ಸ್ಮಾರಕ ಕಟ್ಟುವುದರ ವಿರುದ್ಧ ಅಲ್ಲ. ರಾಮಕೃಷ್ಣ, ವಿವೇಕಾನಂದರ ಬಗ್ಗೆ ಅಪಾರ ಗೌರವವಿದೆ. ಪ್ರಸ್ತುತ ರಾಮಕೃಷ್ಣ ಆಶ್ರಮ  ಬಡವರಿಗಾಗಿ ಯಾವುದೇ ರೀತಿಯ ಶಾಲೆ, ಕಾಲೇಜು ಕಟ್ಟಿಲ್ಲ. ಅವರ ಶಾಲೆಯಲ್ಲಿ ಲಕ್ಷಾಂತರ ಶುಲ್ಕ ನೀಡುವ ಶ್ರೀಮಂತರಿಗೆ ಮಾತ್ರ ಅವಕಾಶ ಇದೆ. ಅವರಿಗೆ ಇದೇ ಜಾಗ ಏಕೆ ಬೇಕು' ಎಂದು ಅಸಮಾಧಾನ ವ್ಯಕ್ತಪಡಿಸಿದರು.ನಾವು ಸ್ಮಾರಕ ವಿರೋಧಿಗಳಲ್ಲ

ಕಾರ್ಯಕ್ರಮದಲ್ಲಿ ಹಾಜರಿದ್ದ ಪ್ರೊ. ಎನ್. ಎಸ್. ರಘುನಾಥ್, `ನಾವು ವಿವೇಕಾನಂದ ಸ್ಮಾರಕ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿಲ್ಲ.  ಎನ್‌ಟಿಎಂಎಸ್ ಶಾಲೆಯ ಕಟ್ಟಡಕ್ಕೆ ಪಾರಂಪರಿಕ ಮೌಲ್ಯವಿದೆ. ಆದ್ದರಿಂದ ಅದನ್ನು ಉಳಿಸಿಕೊಳ್ಳುವುದೇ ಉಚಿತ. `ಜೆಂಟಲ್‌ಮೆನ್' ಎನಿಸಿಕೊಂಡಿರುವ ಹಿರಿಯರು ಇದರ ವಿರೋಧವಾಗಿ ಹೇಳಿಕೆ ನೀಡುವುದು ಅಥವಾ ನಮ್ಮ ಹೋರಾಟದ ಬಗ್ಗೆ ತಪ್ಪು ಕಲ್ಪನೆ ಮೂಡಿಸುವುದು ಸರಿಯಲ್ಲ' ಎಂದು ಹೇಳಿದರು.ಆಶ್ರಮದಲ್ಲಿಯೇ ಜಾಗವಿದೆ

`ಎನ್‌ಟಿಎಂಎಸ್ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚುವಂತೆ ಮಾಡಲು ಎಲ್ಲ ಕ್ರಮಗಳನ್ನೂ ಕೈಗೊಂಡಿದ್ದೇವೆ. ಈ ಶಾಲೆ ಇರುವುದು ಚಿಕ್ಕ ಜಾಗದಲ್ಲಿ. ಇಲ್ಲಿ ವಿವೇಕಾನಂದ ಸ್ಮಾರಕ ಕಟ್ಟಲು ಹೇಗೆ ಸಾಧ್ಯ. ವಿವೇಕಾನಂದರು ನಿರಂಜನಮಠಕ್ಕೆ ಬಂದಿದ್ದರು ಎಂದರೆ, ಮೈಸೂರಿಗೇ ಬಂದಿದ್ದರು ಎಂದರ್ಥ. ಆದ್ದರಿಂದ ಮೈಸೂರಿನಲ್ಲಿ ಎಲ್ಲಿ ಬೇಕಾದರೂ ದೊಡ್ಡದಾದ ನಿವೇಶನದಲ್ಲಿ ಸ್ಮಾರಕ ನಿರ್ಮಿಸಬೇಕು. ಅದಕ್ಕೆ ನಮ್ಮ ಬೆಂಬಲವೂ ಇದೆ. ಸದ್ಯ ರಾಮಕೃಷ್ಣ ಆಶ್ರಮದಲ್ಲಿಯೇ ಸಾಕಷ್ಟು ಜಾಗವಿದೆ. ಅಲ್ಲಿಯೇ ಏಕೆ ಕಟ್ಟಬಾರದು. ಆದರೆ, ನಗರ ಮಧ್ಯದಲ್ಲಿರುವ ಎನ್‌ಟಿಎಂಎಸ್ ಶಾಲೆಯ ಜಾಗವನ್ನು ಹೊಡೆಯುವ ರಿಯಲ್ ಎಸ್ಟೇಟ್ ಮಾಫಿಯಾ ಇದರ ಹಿಂದಿದೆ' ಎಂದು ಹಿರಿಯ ಪತ್ರಿಕೋದ್ಯಮಿ ರಾಜಶೇಖರ ಕೋಟಿ ಹೇಳಿದರು.ವಿವೇಕಾನಂದರಿಗೆ ಅವಮಾನ

`ಜನಿಸಿದ ಮಗು ವಿಶ್ವಮಾನವನಾಗಿರುತ್ತದೆ. ಬೆಳೆಯುತ್ತ ಬೆಳೆಯುತ್ತ ಅಲ್ಪಮಾನವ ನಾಗುತ್ತಾನೆ. ಕುವೆಂಪು ಅವರು ವಿವೇಕಾನಂದರನ್ನು ಸಂಪೂರ್ಣವಾಗಿ ಓದಿ ಕೃತಿ ರಚನೆ ಮಾಡಿದ್ದಾರೆ. ಆದರೆ, ಇವತ್ತು ಕೆಲವರು ಈ ವಿಷಯವನ್ನು ಆತ್ಮಪ್ರತಿಷ್ಠೆ ಮಾಡಿಕೊಂಡು ಕನ್ನಡ ಶಾಲೆಯ ವಿರುದ್ಧ ಮಾತನಾಡುತ್ತಿದ್ದಾರೆ. ವಿವೇಕಾನಂದರ ಬಗ್ಗೆ ನಮಗೆಲ್ಲ ಅಪಾರ ಗೌರವವಿದೆ. ಆದರೆ, ಹೊರದೇಶಗಳಲ್ಲಿಯೇ ಅವರನ್ನು ನಮಗಿಂತ ಹೆಚ್ಚಾಗಿ ಆರಾಧಿಸುತ್ತಾರೆ. ಆದರೆ, ಈ ವಿಷಯದಲ್ಲಿ ನಾವು ವಿವೇಕಾನಂದರನ್ನು ಅವಮಾನಿಸುತ್ತಿದ್ದೇವೆ. ಸತ್ಯದ ಮೇಲೆ ಸಮಾಜ ಕಟ್ಟಬೇಕು' ಎಂದು ಚಿಂತಕ ಕಿಕ್ಕೇರಿ ನಾರಾಯಣ ಹೇಳಿದರು.ಹಿರಿಯ ಲೇಖಕ ಪ್ರೊ. ಜಿ.ಎಚ್. ನಾಯಕ, ಪ್ರೊ.ಪಿ.ವಿ. ನಂಜರಾಜ ಅರಸು, ಮೀರಾ ನಾಯಕ, ಕೆ. ಬಸವರಾಜು, ಶಂಭುಲಿಂಗಸ್ವಾಮಿ, ಪ್ರೊ.ಪಂಡಿತಾರಾಧ್ಯ, ಎಂ.ಬಿ. ವಿಶ್ವನಾಥ್, ಸ.ರ. ಸುದರ್ಶನ್, ಸಂಸ್ಕೃತಿ ಸುಬ್ರಹ್ಮಣ್ಯ, ಬಿ.ಎ. ಶಿವಶಂಕರ್, ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠ್ಠಲಮೂರ್ತಿ ಇತರರು ಇದ್ದರು.ದೇಜಗೌ ಹೇಳಿಕೆಗೆ ಜೆಎಚ್‌ಎನ್ ವಿರೋಧ

ಮೈಸೂರು:
ರಾಮಕೃಷ್ಣ ಆಶ್ರಮದ ಸಮರ್ಥಕರಂತೆ ಇವತ್ತು ದೇಜಗೌ ಮಾತನಾಡುತ್ತಿದ್ದಾರೆ. ದೇಜಗೌ ಟ್ರಸ್ಟ್‌ನಿಂದ ಪ್ರಕಟಿತ ಮತ್ತು ಅವರೇ ಬರೆದ `ನೆನಪಿನ ಬುತ್ತಿ' ಕೃತಿಯನ್ನು ಒಮ್ಮೆ ರಾಮಕೃಷ್ಣ ಆಶ್ರಮದವರು ಓದಿದರೆ, ದೇಜಗೌಗೆ ವಿವೇಕರ ಬಗ್ಗೆ ಇರುವ ನಿಲುವು ಗೊತ್ತಾಗುತ್ತದೆ ಎಂದು ಹಿರಿಯ ಲೇಖಕ ಪ್ರೊ.ಜಿ.ಎಚ್. ನಾಯಕ ಟೀಕಿಸಿದರು.

ಗುರುವಾರ ರಾಮಕೃಷ್ಣನಗರದ ನೃಪತುಂಗ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎನ್‌ಟಿಎಂಎಸ್ ಶಾಲೆಯ ಜಾಗದಲ್ಲಿ ವಿವೇಕ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಹೇಳಿಕೆ ನೀಡಿರುವ ದೇಜಗೌ ಅವರನ್ನು ಟೀಕಿಸಿದರು.`ಮೈಸೂರಿನಲ್ಲಿ ವಿವೇಕಾನಂದ ನಗರ, ರಾಮಕೃಷ್ಣನಗರ, ಶಾರದಾದೇವಿನಗರ, ನಿವೇದಿತಾ ನಗರಗಳಿವೆ. ವಿವೇಕಾನಂದರ ಪ್ರತಿಮೆಯನ್ನೂ ಸ್ಥಾಪಿಸಲಾಗಿದೆ. ನಾವು ಇದ್ಯಾವುದಕ್ಕೂ ವಿರೋಧ ವ್ಯಕ್ತಪಡಿಸಿಲ್ಲ. ವಿವೇಕಾನಂದ, ರಾಮಕೃಷ್ಣರ ಬಗ್ಗೆ ನಮಗೂ ಅಪಾರ ಗೌರವ ಇದೆ. ನಾವು ಮೈಸೂರಿನಲ್ಲಿ ವಿವೇಕ ಸ್ಮಾರಕ ಮಾಡಲೂ ವಿರೋಧಿಸುತ್ತಿಲ್ಲ.ಆದರೆ, ಎನ್‌ಟಿಎಂಎಸ್ ಶಾಲೆಯ ಜಾಗದಲ್ಲಿ ಸ್ಥಾಪಿಸುವುದಕ್ಕೆ ನಮ್ಮ ವಿರೋಧವಿದೆ. ವಿವೇಕಾನಂದರ ಮಹಿಮೆಯನ್ನು ಮಾತನಾಡಲು ಇವರೇ ಆಗಬೇಕಿಲ್ಲ. ಅವರನ್ನು ಜಗತ್ತಿನಲ್ಲಿ ಬಹಳಷ್ಟು ಜನರು ತಿಳಿದುಕೊಂಡಿದ್ದಾರೆ. ದೇಜಗೌ ಕೃತಿಯಲ್ಲಿ ಬರೆದಿರುವ ಕೆಲವು ಅಂಶಗಳನ್ನು ಓದುವುದೂ ಅಸಹ್ಯವೆನಿಸುತ್ತದೆ. ಆಸಕ್ತಿ ಇರುವವರು ಇದನ್ನು ಓದಿ ಅರಿಯಬಹುದು' ಎಂದು ಹೇಳಿದರು.ಜ್ಞಾನಪ್ರಸಾರ ಜಾಗದಲ್ಲಿ ಸ್ಮಾರಕವಾಗಲಿ: ಅರಸ್

`ವಿವೇಕಾನಂದರು ಮೈಸೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ನಿರಂಜನಮಠದಲ್ಲಿ ತಂಗಿದ್ದರು ಎನ್ನುವುದಕ್ಕೆ ಪುರಾವೆಗಳಿಲ್ಲ. ಅವರೊಬ್ಬ ಬಹುದೊಡ್ಡ ಗೌರವಾನ್ವಿತ ಸನ್ಯಾಸಿಯಾಗಿದ್ದರು. ಸದ್ವಿದ್ಯಾ ಪಾಠಶಾಲೆಯಲ್ಲಿ ಅವರು ಉಪನ್ಯಾಸ ನೀಡಿದ್ದರು.ಅವರು ನಿದ್ದೆ ಮಾಡಿದ್ದರು ಎನ್ನುವ ನಿರಂಜನಮಠಕ್ಕಿಂತ, ಜ್ಞಾನಪ್ರಸಾರ ಮಾಡಿದ ಆ ಶಾಲೆಯಲ್ಲಿ ಸ್ಮಾರಕ ನಿರ್ಮಾಣ ಸೂಕ್ತ. 132 ವರ್ಷ ಇತಿಹಾಸವಿರುವ ಶಾಲೆ ಇದು. ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿಯೇ ಆರಂಭವಾದ ಭಾರತದ ಪ್ರಪ್ರಥಮ ಶಾಲೆ ಎನ್‌ಟಿಎಂಎಸ್. ಇಂತಹ ಐತಿಹಾಸಿಕ ಮಹತ್ವವಿರುವ ಶಾಲೆಯ ಜಾಗ ಏಕೆ ಬೇಕು. ಸರ್ಕಾರ ಇದಕ್ಕೆ ಅವಕಾಶ ನೀಡಬಾರದು' ಎಂದು ಪ್ರೊ.ನಂಜರಾಜ್ ಅರಸ್ ಹೇಳಿದರು.ಹೋರಾಟಗಾರರಿಂದಲೇ ಕನ್ನಡ

`ನಾವು ಕನ್ನಡವನ್ನು ಬಂಡವಾಳ ಮಾಡಿಕೊಂಡು ಬದುಕಿಲ್ಲ. ನಮಗೆ ಬೇರೆ ಉದ್ಯೋಗಗಳಿವೆ. ಆದರೂ, ಕನ್ನಡಕ್ಕಾಗಿ ಸಂಪೂರ್ಣವಾಗಿ ಸಮರ್ಪಿಸಿಕೊಂಡು ಬೀದಿಗಿಳಿದು ಹೋರಾಡಿದ್ದೇವೆ. ಜೈಲಿಗೂ ಹೋಗಿದ್ದೇವೆ. ಆದರೆ, ಇವತ್ತು ನಾನೊಬ್ಬನೇ ಕನ್ನಡಕ್ಕೆ ಹೋರಾಡಿದ್ದೇನೆ ಎನ್ನುವ ಹಿರಿಯ ಸಾಹಿತಿಗಳು ಬೀದಿಗಿಳಿದು ಹೋರಾಡಿದ್ದಾರೆಯೇ. ಕೋಣೆಯಲ್ಲಿ ಕುಳಿತು ಇವರು ಬರೆಯುವ ಪುಸ್ತಕ, ಕನ್ನಡ ಸಾಹಿತ್ಯ ಉಳಿದಿರುವುದು ನಮ್ಮಂತಹ ಸಾವಿರಾರು ಹೋರಾಟಗಾರರಿಂದ. ಆದರೆ, ನಮ್ಮನ್ನೇ ಅವಮಾನಿಸಿದ್ದಾರೆ. ಕನ್ನಡ ಶಾಲೆಯನ್ನು ಯಾವುದೇ ಕಾರಣಕ್ಕೂ ನಾವು ಹಸ್ತಾಂತರಿಸಲು ಬಿಡುವುದಿಲ್ಲ' ಎಂದು ತಾಯೂರು ವಿಠ್ಠಲಮೂರ್ತಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.