ಭಾನುವಾರ, ಮಾರ್ಚ್ 7, 2021
31 °C

ತುಂಗಭದ್ರಾ ಹಿನ್ನೀರು- ರಿಂಗ್‌ಬಂಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಂಗಭದ್ರಾ ಹಿನ್ನೀರು- ರಿಂಗ್‌ಬಂಡ್

ಕೊಪ್ಪಳ: ನಗರಕ್ಕೆ ನೀರು ಪೂರೈಸುವ ತಾಲ್ಲೂಕಿನ ಕಾತರಕಿ ಬಳಿ ಇರುವ ಜಾಕ್‌ವೆಲ್‌ನಲ್ಲಿ ತುಂಗಭದ್ರಾ ನದಿಯ ಹಿನ್ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಸಂಭಾವ್ಯ ಕುಡಿಯುವ ನೀರಿನ ತೊಂದರೆಯನ್ನು ತಪ್ಪಿಸುವ ಸಲುವಾಗಿ ನಗರಸಭೆ ಜಾಕ್‌ವೆಲ್ ಬಳಿ ಹಿನ್ನೀರಿಗೆ ರಿಂಗ್‌ಬಂಡ್ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.ಭಾನುವಾರ ಜಾಕ್‌ವೆಲ್ ಬಳಿ ರಿಂಗ್‌ಬಂಡ್ ನಿರ್ಮಾಣ ಕಾರ್ಯದ ಪ್ರಗತಿಯನ್ನು ಪರಿಶೀಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಗರಸಭೆ ಅಧ್ಯಕ್ಷ ಸುರೇಶ ದೇಸಾಯಿ, ಕುಡಿಯುವ ನೀರಿನ ಸಮಸ್ಯೆ ಎದುರಿಸಲು ನಗರಸಭೆ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದರು.5 ಲಕ್ಷ ರೂಪಾಯಿ ವೆಚ್ಚದಲ್ಲಿ ರಿಂಗ್‌ಬಂಡ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ 55 ರಿಂದ 60 ಸಾವಿರ ಉಸುಕಿನ ಚೀಲಗಳನ್ನು ಬಳಸಿ ಈ ರಿಂಗ್‌ಬಂಡ್ ನಿರ್ಮಿಸಲಾಗುತ್ತಿದೆ ಎಂದು ವಿವರಿಸಿದರು.

ಒಂದು ತಿಂಗಳ ನಂತರ ಹಿನ್ನೀರಿನ ಪ್ರಮಾಣದಲ್ಲಿ ಮತ್ತಷ್ಟೂ ಇಳಿಕೆ ಕಂಡು ಬರುವ ಸಾಧ್ಯತೆ ಇದೆ. ಆಗ ನಗರಕ್ಕೆ ನೀರು ಪೂರೈಸುವಲ್ಲಿ ತೊಂದರೆಯಾಗಬಹುದು ಎಂಬ ಆತಂಕ ಇತ್ತು. ಆದರೆ, ನೀರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಬಾರದು ಎಂಬ ದೃಷ್ಟಿಯಿಂದ ಭದ್ರಾ ಅಣೆಕಟ್ಟೆಯಿಂದ ನೀರು ಬಿಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.ನಗರಸಭೆಯ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸರ್ಕಾರ ಈ ವಾರದ ಒಳಗಾಗಿ ತುಂಗಭದ್ರಾ ನದಿಗೆ 250 ಕ್ಯುಸೆಕ್  ನೀರು ಬಿಡುವುದಾಗಿ ತಿಳಿಸಿದೆ. ಅಲ್ಲದೇ, ಮೇ ಅಂತ್ಯದ ವರೆಗೆ ವಾರದಲ್ಲಿ ಒಂದು ಇಲ್ಲವೇ ಎರಡು ಬಾರಿ ಇದೇ ಪ್ರಮಾಣ ನೀರು ಬಿಡುವ ಭರವಸೆಯನ್ನೂ ನೀಡಿದೆ. ಹೀಗಾಗಿ ನಗರದ ಜನತೆ ಆತಂಕಪಡುವ ಅಗತ್ಯವಿಲ್ಲ ಎಂದರು.ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದು ಮ್ಯೋಗೇರಿ, ಸದಸ್ಯ ಡಾ.ಉಪೇಂದ್ರ, ಎಂಜಿನಿಯರ್ ವೀರೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.