ಮಂಗಳವಾರ, ಮೇ 18, 2021
28 °C

ತುಘಲಕ್‌ಗೂ ಮಣೆ; ತುಕ್ರನಿಗೂ ಮನ್ನಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ಕಾರ್ನಾಡರಿಗೆ ತುಘಲಕ್ ಮುಖ್ಯನಾದರೆ, ನನಗೆ ತುಕ್ರ ಶ್ರೇಷ್ಠ ವ್ಯಕ್ತಿ. ಇಬ್ಬರ ಆಶಯವೂ ಒಂದೇ. ಆದರೆ ದಾರಿ ಬೇರೆ. ತುಕ್ರನಂತೆ ನಾನೂ ಇತಿಹಾಸ ಪುರುಷನಾಗುವ ಬಯಕೆ ಇದೆ...~

ಹಲವು ವರ್ಷಗಳ ಹಿಂದೆ ಧಾರವಾಡದಲ್ಲಿ ಮನೋಹರ ಗ್ರಂಥಮಾಲೆ ಏರ್ಪಡಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರರು ಹೇಳಿದ ಮಾತಿದು.ಸಾಮಾನ್ಯ ಮನುಷ್ಯನಾಗಿದ್ದ ತುಕ್ರ ಇತಿಹಾಸ ಸೇರಲು ನಡೆಸಿದ ಪ್ರಯತ್ನ, ಅದಕ್ಕಾಗಿ ಆತ ಎದುರಿಸಿದ ಸವಾಲು, ಸರ್ವಾಧಿಕಾರಿ ವ್ಯವಸ್ಥೆಯ ವಿರುದ್ಧ ನಡೆಸಿದ ನಿರಂತರ ಹೋರಾಟ, ಅನುಭವಿಸಿದ ನೋವುಗಳು ಕಂಬಾರರ `ತುಕ್ರನ ಕನಸು~ ನಾಟಕದಲ್ಲಿ ವ್ಯಕ್ತವಾಗಿದ್ದವು. ನಾಟಕದಲ್ಲಿ ತುಕ್ರ ಸತ್ತ ಮೇಲೆ ಇತಿಹಾಸ ಸೇರಿದ.ಆದರೆ ದೇಶದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠವನ್ನು ತಮ್ಮ ಮುಡಿಗೇರಿಸಿಕೊಳ್ಳುವ ಮೂಲಕ ಆ ನಾಟಕವನ್ನು ರಚಿಸಿದ ಖ್ಯಾತ ನಾಟಕಕಾರ ಡಾ. ಚಂದ್ರಶೇಖರ ಕಂಬಾರರು ಸಾಹಿತ್ಯ ಲೋಕದಲ್ಲಿ ಇತಿಹಾಸ ಬರೆದಿದ್ದಾರೆ.ಅಂದು ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ತುಘಲಕ್ ನಾಟಕದ ಕರ್ತೃ ಗಿರೀಶ ಕಾರ್ನಾಡರಿಗೂ ಜ್ಞಾನಪೀಠ ಪುರಸ್ಕಾರದ ಮನ್ನಣೆ ಸಿಕ್ಕಿದೆ. ತುಕ್ರನ ಕನಸು ಸಹ ಈಡೇರಿದೆ. `ನನ್ನ ಒಂದು ಕಣ್ಣು ನನ್ನ ನಾಟಕದ ಮೇಲಿದ್ದರೆ, ಇನ್ನೊಂದು ಕಣ್ಣು ಕಂಬಾರರ ನಾಟಕದ ಮೇಲಿರುತ್ತದೆ~ ಎಂದು ಕಾರ್ನಾಡರು ಹೇಳಿದ್ದರು. ಈಗ ಅವೆರಡೂ ಕಣ್ಣುಗಳು ಜ್ಞಾನಪೀಠದ ಹೊಳಪಿನಿಂದ ಕಂಗೊಳಿಸುತ್ತಿವೆ.ಆಡು ಭಾಷೆ, ಜಾನಪದದ ಸೊಗಡು ಕಂಬಾರರ ಸಾಹಿತ್ಯದ ದೊಡ್ಡ ಜೀವಾಳ. ದ.ರಾ. ಬೇಂದ್ರೆ ನಂತರ ಜಾನಪದದ ನುಡಿಗಟ್ಟುಗಳನ್ನು ಸಮರ್ಥವಾಗಿ ಬಳಸಿಕೊಂಡು ಸಾಹಿತ್ಯ ರಚಿಸಿದ ಸಾಹಿತಿ ಇನ್ನೊಬ್ಬರಿಲ್ಲ. ಹೀಗಾಗಿಯೇ ಕಂಬಾರರು ವಿಶಿಷ್ಟ ಎನಿಸಿದರು. ಇಂಗ್ಲಿಷ್ ಕವಿ ಯೇಟ್ಸ್‌ನಷ್ಟೇ ಸಮರ್ಪಕವಾಗಿ ಕಂಬಾರರು ಜನಪದ ಮಾಧ್ಯಮವನ್ನು ತಮ್ಮ ಸಾಹಿತ್ಯಿಕ ಭಾಷೆಯನ್ನಾಗಿ ಬಳಸಿಕೊಂಡರು.ಡಾ. ಚಂದ್ರಶೇಖರ ಕಂಬಾರರು ಕೇವಲ ಕವಿಯಾಗಿ, ಕಾದಂಬರಿಕಾರರಾಗಿ, ನಾಟಕಕಾರರಾಗಿ ಮಾತ್ರ ಗುರುತಿಸಿಕೊಂಡಿಲ್ಲ. ಅವರೊಬ್ಬ ಮಾನವತಾವಾದಿಯಾಗಿಯೂ ಹಲವರಿಗೆ ಮಾರ್ಗದರ್ಶಕರಾಗಿದ್ದರು.`ಕಂಬಾರರ ಎಲ್ಲ ನಾಟಕಗಳಲ್ಲಿ ಸ್ತ್ರೀಪಾತ್ರಗಳು ಅಶಕ್ತವಾಗಿವೆ. ಸ್ತ್ರೀಪಾತ್ರಗಳಿಗೆ ಶಕ್ತಿ ತುಂಬುವ ಪ್ರಯತ್ನವನ್ನೇ ಮಾಡಿಲ್ಲ. ಮಹಿಳೆಯರ ದೌರ್ಬಲ್ಯಗಳೇ ಕಂಬಾರರ ನಾಟಕದ ಶಕ್ತಿ ಎಂಬುದನ್ನು ಸ್ಪಷ್ಟಪಡಿಸುತ್ತವೆ~ ಎಂದು ಸಾಹಿತಿ ಡಾ. ಬಸವರಾಜ ಡೋಣೂರ ಬರೆದಿದ್ದರು.ಆ ವಿಮರ್ಶೆಯ ಅಭಿಪ್ರಾಯವನ್ನು ಕಂಬಾರರು ಒಪ್ಪಿಕೊಂಡು, `ಇಂಥ ವಿಮರ್ಶೆಗಳು ಇದ್ದಾಗಲೇ ನಮ್ಮ ತಪ್ಪು ಗೊತ್ತಾಗುತ್ತದೆ. ಇಲ್ಲವಾದರೆ ನಾವು ಹೇಳಿದ್ದೇ ಮಾತು, ಆಡಿದ್ದೇ ಆಟ ಎನ್ನುವಂತಿರುತ್ತದೆ. ತಿದ್ದಿ ಹೇಳುವ ಮನಸ್ಸುಗಳೂ ಬೇಕಾಗಿವೆ~ ಎಂದು ಹೇಳಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು. ಇಂಥ ಅನುಭವಗಳು ಹಲವರಿಗೆ ಆಗಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.