ಗುರುವಾರ , ಜೂನ್ 17, 2021
23 °C

ತುಮಕೂರಿಗೆ ರಾಜ್ಯದ ಏಕೈಕ ಮಹಿಳಾ ಜೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ರಾಜ್ಯದ ಏಕೈಕ ಮಹಿಳಾ ಜೈಲು ನಗರದಲ್ಲಿ ಶೀಘ್ರ ಅಸ್ತಿತ್ವಕ್ಕೆ ಬರಲಿದೆ. ಈ ಯೋಜನೆ ಪೂರ್ಣಗೊಂಡರೆ ಮುಂದಿನ ದಿನಗಳಲ್ಲಿ ಪುರುಷರ ಜತೆಗಿನ ಜೈಲು ವಾಸವನ್ನು ಮಹಿಳೆಯರು ತಪ್ಪಿಸಿಕೊಳ್ಳಲಿದ್ದಾರೆ.ಮಹಿಳಾ ಜೈಲು ರೂಪಿಸುವ ಉದ್ದೇಶದಿಂದ ನಗರದ ಕುಣಿಗಲ್ ರಸ್ತೆಯಲ್ಲಿದ್ದ ಹಳೆಯ ಜೈಲನ್ನು ಲೋಕೋಪಯೋಗಿ ಇಲಾಖೆ ನವೀಕರಿಸುವ ಕಾರ್ಯ ಆರಂಭಿಸಿದೆ. ಅಂದುಕೊಂಡಂತೆ ಎಲ್ಲವೂ ನಡೆದರೂ ಮಹಿಳಾ ಕೈದಿಗಳ ಪ್ರತ್ಯೇಕ ಜೈಲು ಹೊಂದಿದ ನಗರವಾಗಲಿದೆ.ಉದ್ದೇಶಿತ ಜೈಲಿನಲ್ಲಿ ಸುಮಾರು 200 ಮಹಿಳಾ ಕೈದಿಗಳಿಗೆ ಸ್ಥಳಾವಕಾಶ ಕಲ್ಪಿಸಲಾಗುತ್ತದೆ. ಜೈಲಿನಲ್ಲಿ ಸುಮಾರು 20 ಕೊಠಡಿಗಳನ್ನು ನಿರ್ಮಿಸಲು ರಾಜ್ಯ ಬಂಧಿಖಾನೆ ಇಲಾಖೆ ನಿರ್ಧರಿಸಿದೆ.ಹೊರ ರಾಜ್ಯಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಜೈಲು ನಿರ್ಮಿಸುವ ಪರಿಪಾಠ ಇದ್ದರೂ ರಾಜ್ಯದಲ್ಲಿ ಈವರೆಗೂ ಮಹಿಳೆಯರಿಗೆ ಪ್ರತ್ಯೇಕ ಅಥವಾ ವಿಶೇಷ ಜೈಲು ನಿರ್ಮಿಸಿರಲಿಲ್ಲ. ಭದ್ರತೆ ಮತ್ತು ತರಬೇತಿ ದೃಷ್ಟಿಯಿಂದ ಮಹಿಳೆಯರಿಗೆ ಪ್ರತ್ಯೇಕ ಜೈಲು ಅನಿವಾರ್ಯ ಎಂಬ ಸಂಗತಿಯನ್ನು ಮನಗಂಡ ಸರ್ಕಾರ ಈಚೆಗಷ್ಟೇ ಈ ಯೋಜನೆಗೆ ಚಾಲನೆ ನೀಡಿದೆ.ಮಹಿಳಾ ಜೈಲಿನಲ್ಲಿ ಕೈದಿಗಳಿಗೆ ತರಬೇತಿ ನೀಡುವ ಉದ್ದೇಶದಿಂದಲೇ ವಿಶೇಷ ಕರಕುಶಲ ತರಬೇತಿ ಕೇಂದ್ರವೂ ಅಸ್ತಿತ್ವಕ್ಕೆ ಬರಲಿದೆ. ಉಪ್ಪಿನಕಾಯಿ, ಮೆಣಸಿನಪುಡಿ, ಮೇಣದಬತ್ತಿ ಸೇರಿದಂತೆ ಪೂರಕ ಆರ್ಥಿಕ ಚಟುವಟಿಕೆಗೆ ಸಂಬಂಧಿಸಿದ ಹಲವು ಉದ್ದಿಮೆಗಳ ತರಬೇತಿ ಜೈಲಿನಲ್ಲಿ ನೀಡಲಾಗುತ್ತದೆ.ಜೈಲು ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಈಗಾಗಲೇ 75 ಲಕ್ಷ ರೂಪಾಯಿ ಮಂಜೂರು ಮಾಡಿದೆ. ಇನ್ನು 6 ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ ಎನ್ನುತ್ತಾರೆ ತುಮಕೂರು ಜೈಲಿನ ಮುಖ್ಯಾಧಿಕಾರಿ ಶಿವಣ್ಣ.ನೂತನ ಮಹಿಳಾ ಜೈಲು ಕಾರ್ಯಾರಂಭ ಮಾಡಿದ ನಂತರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಮಹಿಳಾ ಕೈದಿಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುತ್ತದೆ.ಆಕಸ್ಮಿಕವಾಗಿ ಅಪರಾಧ ಮಾಡಿ ಶಿಕ್ಷೆ ಅನುಭವಿಸುತ್ತಿರುವವರಿಗೆ ಜೈಲಿನಲ್ಲಿರುವ ಅವಧಿಯಲ್ಲಿ ಕರಕುಶಲಕಲೆ ಹಾಗೂ ಗುಡಿ ಕೈಗಾರಿಕೆಗಳ ತರಬೇತಿ ನೀಡುವುದರಿಂದ ಜೈಲಿನಿಂದ ಬಿಡುಗಡೆಯಾದ ನಂತರ ಅವರ ಜೀವನ ನಡೆಸುವಷ್ಟು ಸಂಪಾದಿಸಿಕೊಳ್ಳಲು ಸಾಧ್ಯವಾಗಲಿದೆ.ರಾಜ್ಯದ ವಿವಿಧ ಬಂಧಿಖಾನೆಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಮುಂದಿನ ತಿಂಗಳು ನಡೆಯಲಿರುವ ಆಯ್ಕೆ ಪ್ರಕ್ರಿಯೆಯಲ್ಲೇ ನೂತನ ಜೈಲಿಗೆ ಅಗತ್ಯವಿರುವ ಮಹಿಳಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತದೆ. ಪ್ರಸ್ತುತ ತುಮಕೂರಿನಲ್ಲಿ 20 ಮಹಿಳಾ ಕೈದಿಗಳಿದ್ದು, 7 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳಾ ಜೈಲಿನ ಪ್ರತ್ಯೇಕ ಅಸ್ತಿತ್ವಕ್ಕೆ ಪೂರಕವಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದು ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.