ಶುಕ್ರವಾರ, ಮೇ 29, 2020
27 °C

ತೆರಿಗೆ ಇಳಿಕೆಗೆ ಪ್ರಣವ್ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕೃಷಿ ಉತ್ಪನ್ನ ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಕಡಿವಾಣ ವಿಧಿಸಲು ರಾಜ್ಯ ಸರ್ಕಾರಗಳು ಸ್ಥಳೀಯ  (ಆಕ್ಟ್ರಾಯ್, ಮಂಡಿ) ತೆರಿಗೆಗಳನ್ನು ರದ್ದುಪಡಿಸಬೇಕು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಲಹೆ ನೀಡಿದೆ.

ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಕಾರಣವಾಗಿರುವ ಸ್ಥಳೀಯ ತೆರಿಗೆಗಳನ್ನು ರದ್ದು ಮಾಡಿ ಸರಕುಗಳ ಸುಗಮ ಸಾಗಾಣಿಕೆ ಮತ್ತು ಪೂರೈಕೆಗೆ ಅವಕಾಶ ಮಾಡಿಕೊಡಬೇಕು ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು, ಬುಧವಾರ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು.

ರಾಜ್ಯಗಳ ಹಣಕಾಸು ಸಚಿವರ ಜೊತೆಗಿನ ಬಜೆಟ್ ಪೂರ್ವಭಾವಿ ಸಭೆ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಚಿಂತಿತರಾಗಿರುವ ಪ್ರಣವ್, ಈ ಪರಿಸ್ಥಿತಿ ನಿಯಂತ್ರಿಸಲು ರಾಜ್ಯ ಸರ್ಕಾರಗಳು ತಮ್ಮ ಪಾಲಿನ ಕರ್ತವ್ಯವನ್ನು ಪರಿಣಾಮಕಾರಿಯಾಗಿ ನಿಭಾಯಿಸಬೇಕು ಎಂದರು.

ಸದ್ಯಕ್ಕೆ ಆಹಾರ ಹಣದುಬ್ಬರ ಗರಿಷ್ಠ ಮಟ್ಟ ತಲುಪಲು ಕಾರಣವಾಗಿರುವ ಪೂರೈಕೆ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು.  ಸಗಟು ಮತ್ತು ಚಿಲ್ಲರೆ ಮಾರಾಟ ಬೆಲೆಯಲ್ಲಿನ ಹೆಚ್ಚುತ್ತಿರುವ ಅಂತರ ತಗ್ಗಿಸಬೇಕು. ಪೂರೈಕೆಯಲ್ಲಿನ ಅಡಚಣೆಗಳನ್ನು ನಿವಾರಿಸಬೇಕು. ಕೃಷಿ ಉತ್ಪಾದನೆ ಹೆಚ್ಚಿಸಬೇಕು, ಆಹಾರ ಧಾನ್ಯಗಳ ಸಮರ್ಪಕ ವಿತರಣೆ ಮತ್ತು ಮಾರಾಟ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು ಎಂದರು. ಕೆಲ ರಾಜ್ಯಗಳಲ್ಲಿ  ಕೃಷಿ ಉತ್ಪನ್ನ ಮತ್ತು ಮಾರಾಟ ಕಾಯ್ದೆಯಲ್ಲಿ (ಎಪಿಎಂಸಿ) ಅಗತ್ಯ ಸುಧಾರಣೆಗಳನ್ನು ತರಬೇಕಾಗಿದೆ. ಕೇಂದ್ರ ಸರ್ಕಾರವು ಅಗತ್ಯವಾದ ಸರಕುಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದು, ಸರಕುಗಳ ಪೂರೈಕೆ ಹೆಚ್ಚಿಸಲು ರಫ್ತು ಮೇಲೆ ನಿರ್ಬಂಧ ವಿಧಿಸಲಾಗಿದೆ  ಎಂದೂ ಪ್ರಣವ್ ನುಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.