ಮಂಗಳವಾರ, ಜನವರಿ 31, 2023
19 °C

ತೆರೆಮರೆ ತಾರೆ ಬೆನಗಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆರೆಮರೆ ತಾರೆ ಬೆನಗಲ್

ಭಾರತೀಯ ಸಂವಿಧಾನ ರೂಪುಗೊಂಡ ಪ್ರಕ್ರಿಯೆಯಲ್ಲಿ ಕರ್ನಾಟಕದ ಪಾತ್ರವೂ ಇದೆ. ಸಂವಿಧಾನದ ಮೊದಲ ಕರಡನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದವರು ಮಂಗಳೂರಿನ ಬೆನಗಲ್ ನರಸಿಂಗ ರಾವ್. ಸಾಂವಿಧಾನಿಕ ಅಧ್ಯಯನಗಳ ಸಂದರ್ಭವನ್ನು ಹೊರತು ಪಡಿಸಿದರೆ ಇವರ ಹೆಸರು ಉಲ್ಲೇಖವಾಗುವುದು ಕಡಿಮೆ. ಸಂವಿಧಾನದ ಮುಖ್ಯ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಹೆಗಲೆಣೆಯಾಗಿ ನಿಂತವರು ಈ ನರಸಿಂಗ ರಾಯರು, ಬರ್ಮಾದ ಸಂವಿಧಾನವನ್ನು ರಚಿಸುವಲ್ಲಿಯೂ ಪ್ರಮುಖ ಪಾತ್ರಹಿಸಿದ್ದ ವ್ಯಕ್ತಿ.1887ರ ಫೆಬ್ರವರಿ 26ರಂದು ಮಂಗಳೂರಿನಲ್ಲಿ ಹುಟ್ಟಿದ ನರಸಿಂಗ ರಾವ್ ಅವರ ತಂದೆ ಬೆನಗಲ್ ರಾಘವೇಂದ್ರ ರಾವ್ ಅವರು ಆ ಕಾಲದ ಪ್ರಮುಖ ವೈದ್ಯರಲ್ಲಿ ಒಬ್ಬರು. ಕೆನರಾ ಹೈಸ್ಕೂಲ್‌ನಲ್ಲಿ ಓದಿದ ನರಸಿಂಗರಾಯರು ಇಡೀ ಮದ್ರಾಸ್ ಪ್ರಾಂತ್ಯಕ್ಕೇ ಮೊದಲ ಸ್ಥಾನ ಪಡೆದು ಮೆಟ್ರಿಕ್ಯುಲೇಷನ್ ಉತ್ತೀರ್ಣರಾದರು. ಮುಂದಿನ ಅಧ್ಯಯನಕ್ಕಾಗಿ ಚೆನ್ನೈಗೆ (ಆಗಿನ ಮದ್ರಾಸು) ತೆರಳಿದ ಅವರು ಇಂಟರ್ ಮೀಡಿಯೆಟ್‌ನಲ್ಲೂ ಮದ್ರಾಸ್ ಪ್ರಾಂತ್ಯಕ್ಕೇ ಮೊದಲಿಗರಾಗಿದ್ದರು.ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅವರನ್ನು ಗುರುತಿಸುತ್ತಿದ್ದುದೇ ಗಣಿತಶಾಸ್ತ್ರದ ಜೀನಿಯಸ್ ಎಂದು. ಅಲ್ಲಿಯೇ ತಮ್ಮ ಪದವಿ ಅಧ್ಯಯನ ಮಾಡಿದ ಅವರು ಸಂಸ್ಕೃತ, ಗಣಿತ ಮತ್ತು ಇಂಗ್ಲಿಷ್‌ಗಳನ್ನು ಐಚ್ಛಿಕ ವಿಷಯಗಳನ್ನಾಗಿ ಅಧ್ಯಯನ ಮಾಡಿ ಪದವಿ ಪಡೆದು ಕೇಂಬ್ರಿಜ್‌ಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ತೆರಳಿದರು.1909ರಲ್ಲಿ ಕೇಂಬ್ರಿಜ್‌ನ ಟ್ರಿನಿಟಿ ಕಾಲೇಜಿನಿಂದ ಟ್ರಿಪ್ಪೋಸ್ ಪಡೆಯುವ ಹೊತ್ತಿಗೆ ಆ ಕಾಲದ ಭಾರತೀಯ ಆಡಳಿತ ಸೇವಾ ಪರೀಕ್ಷೆಯಾದ ಐಸಿಎಸ್‌ನಲ್ಲಿ ಉತ್ತೀರ್ಣರಾಗಿದ್ದರು. ಭಾರತಕ್ಕೆ ಮರಳಿದ ಅವರು ಬಂಗಾಳದಲ್ಲಿ ತಮ್ಮ ಸರ್ಕಾರಿ ಸೇವೆ ಆರಂಭಿಸಿದರು. ಬಳಿಕ ನ್ಯಾಯಾಂಗ ಇಲಾಖೆಗೆ ಸೇರಿದ ನರಸಿಂಗ ರಾವ್ ಅವರಿಗೆ 1938ರಲ್ಲಿ ಬ್ರಿಟಿಷ್ ಸರ್ಕಾರ ನೈಟ್ ಪದವಿ ನೀಡಿ ಪುರಸ್ಕರಿಸಿತು. ಬ್ರಿಟಿಷ್ ಸರ್ಕಾರದ ಸೇವೆಯಲ್ಲಿದ್ದಾಗಲೇ ಅವರು ಗಾಂಧೀಜಿಯನ್ನೂ ಭೇಟಿಯಾಗಿದ್ದರು. ಅವರ ಪತ್ನಿ ಧನವಂತಿ ಮೂಲತಃ ಕಾಶ್ಮೀರದವರಾದರೂ ಕರ್ನಾಟಕದ ಹುಬ್ಬಳ್ಳಿಯಲ್ಲಿ ಬೆಳೆದವರು. ಭಾರತದಲ್ಲಿ ಕುಟುಂಬ ಯೋಜನೆಗೆ ನಾಂದಿ ಹಾಡಿದವರು.ಬೆನಗಲ್ ನರಸಿಂಗ ರಾವ್ ಅವರು ಸಂವಿಧಾನ ರಚನಾ ಸಭೆಯ ಸದಸ್ಯರಾಗಿರಲಿಲ್ಲ. ಪರಿಣಾಮವಾಗಿ ಸಂವಿಧಾನದ ರಚನೆಯಲ್ಲಿ ಅವರ ಕಾಣಿಕೆ ಏನೆಂಬುದು ಜನಸಾಮಾನ್ಯರಿಗೆ ಅರಿವಾಗುವ ಮಟ್ಟದಲ್ಲಿ ಪ್ರಚಾರಕ್ಕೆ ಬರಲಿಲ್ಲ. ಸರಳ ಮತ್ತು ಸ್ಪಷ್ಟ ಭಾಷೆಯ ಪೀಠಿಕೆಯೊಂದಿಗೆ ಆರಂಭವಾಗಿ ಸೂಕ್ಷ್ಮಗಳತ್ತ ಸಾಗುವ ಸಂವಿಧಾನದ ಭಾಷೆಯನ್ನು ನೀಡಿದವರು ಬೆನಗಲ್ ನರಸಿಂಗರಾಯರು. ಹಲವಾರು ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಮೂಲ ಕರಡನ್ನು ಸಿದ್ಧಪಡಿಸಿ ಸಂವಿಧಾನ ರಚನಾ ಸಭೆಯ ಮುಂದಿಡುವಲ್ಲಿ ನರಸಿಂಗರಾಯರ ಪಾತ್ರ ಬಹಳ ಮುಖ್ಯವಾದುದು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನದ ಕರಡು ರಚನಾ ಸಮಿತಿಯನ್ನು ನೇಮಿಸುವ ನಿರ್ಣಯ- ‘ಸಾಂವಿಧಾನಿಕ ಸಲಹೆಗಾರರು ನೀಡಿರುವ ಸಂವಿಧಾನದ ಕರಡನ್ನು ಪರಿಶೀಲಿಸಿ ಸಂವಿಧಾನ ರಚನಾ ಸಭೆಯಲ್ಲಿ ಈ ತನಕ ನಡೆದಿರುವ ಚರ್ಚೆಗಳಲ್ಲಿ ಮೂಡಿಬಂದ ವಿಚಾರಗಳು ಮತ್ತು ಅದಕ್ಕೆ ಪೂರಕವಾಗುವ ವಿಚಾರಗಳನ್ನು ಸೇರಿಸವುದು ಹಾಗೂ ಇಂಥದ್ದೊಂದು ಸಂವಿಧಾನ ಹೊಂದಿರಬೇಕಾದ ವಿಚಾರಗಳನ್ನು ಸೇರಿಸಿ ಪರಿಷ್ಕರಿಸಿ ಕರಡು ರಚನಾ ಸಮಿತಿ ಸಂವಿಧಾನ ರಚನಾ ಸಭೆಯ ಮುಂದಿಡುವುದು’ ಎಂದು ಹೇಳುತ್ತದೆ. ಅಂದರೆ ಸಂವಿಧಾನ ರಚನಾ ಸಭೆಯ ಮುಂದೆ ಇದ್ದ ಮೂಲ ಕರಡನ್ನು ಸಾಂವಿಧಾನಿಕ ಸಲಹೆಗಾರರಾಗಿದ್ದ ಬೆನಗಲ್ ನರಸಿಂಗರಾಯರು ಸಿದ್ಧಪಡಿಸಿದ್ದರು.ಸಂವಿಧಾನ ರಚನಾ ಕ್ರಿಯೆ ಪೂರ್ಣಗೊಂಡ ನಂತರ ಅದಕ್ಕೆ ಸಹಿ ಹಾಕಿದ ಸಂವಿಧಾನ ರಚನಾ ಸಭೆಯ ಅಧ್ಯಕ್ಷ ಬಾಬು ರಾಜೇಂದ್ರ ಪ್ರಸಾದ್ ಅವರು ಬೆನಗಲ್ ನರಸಿಂಗರಾಯರ ಕಾಣಿಕೆಯನ್ನು ಹೀಗೆ ಸ್ಮರಿಸಿಕೊಂಡಿದ್ದಾರೆ- ‘ಅವರು ಇಲ್ಲಿರುವಷ್ಟು ಕಾಲವೂ ಗೌರವ ಸೇವೆಯೆಂಬಂತೆ ಈ ಕೆಲಸದಲ್ಲಿ ತೊಡಗಿಸಿಕೊಂಡವರು. ತಮ್ಮ ಜ್ಞಾನ ಮತ್ತು ವಿದ್ವತ್ತಿನೊಂದಿಗೆ ಸಂವಿಧಾನ ರಚನಾ ಸಭೆಗೆ ಸಹಾಯ ಮಾಡಿದ್ದಷ್ಟೇ ಅಲ್ಲದೆ ಇತರ ಸದಸ್ಯರು ತಮ್ಮ ಕರ್ತವ್ಯವನ್ನು ಪೂರ್ಣ ಪ್ರಮಾಣದಲ್ಲಿ ನಿರ್ವಹಿಸಲು ಸಾಧ್ಯವಾಗುವಂತೆ ಅವರಿಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ಪೂರೈಸಿದರು’.ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿಯಾಗಿದ್ದ ಬೆನಗಲ್ ನರಸಿಂಗ ರಾವ್ ಅವರು 1950ರಲ್ಲಿ ಭದ್ರತಾ ಮಂಡಳಿಯ ಮುಖ್ಯಸ್ಥರಾಗಿದ್ದರು. ಹಾಗೆಯೇ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಧೀಶರಾಗಿದ್ದರು. 1953ರ ನವೆಂಬರ್ 30ರಂದು ಜ್ಯೂರಿಕ್‌ನ ಆಸ್ಪತ್ರೆಯಲ್ಲಿ ನಿಧನರಾದರು. ಸಂವಿಧಾನ ರಚನೆಯಲ್ಲಿ ಬಹುಮುಖ್ಯ ಪಾತ್ರವಹಿಸಿದ್ದ ಈ ಕರ್ನಾಟಕದ ಪ್ರತಿಭೆಯನ್ನು ನೆನಪಿಸಿಕೊಳ್ಳುವಂಥ ಕೆಲಸ ಕರ್ನಾಟಕದಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿದೆ. ಕನಿಷ್ಠ ಒಂದು ವಿಶ್ವವಿದ್ಯಾಲಯವಾದರೂ ಬೆನಗಲ್ ನರಸಿಂಗ ರಾವ್ ಅವರ ಹೆಸರಿನಲ್ಲಿ ಸಾಂವಿಧಾನಿಕ ಅಧ್ಯಯನಗಳ ಪೀಠವನ್ನಾದರೂ ಸ್ಥಾಪಿಸುವ ಮನಸ್ಸು ಮಾಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.