ಶನಿವಾರ, ಮೇ 8, 2021
26 °C

ತೆಲಂಗಾಣ ಜನರಿಗೆ ವಂಚನೆ: ಶಿಂಧೆ, ಚಿದಂಬರಂ ವಿರುದ್ಧ ಆಂಧ್ರ ಪೊಲೀಸ್ ಕೇಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆಲಂಗಾಣ ಜನರಿಗೆ ವಂಚನೆ: ಶಿಂಧೆ, ಚಿದಂಬರಂ ವಿರುದ್ಧ ಆಂಧ್ರ ಪೊಲೀಸ್ ಕೇಸ್

ಹೈದರಾಬಾದ್ (ಐಎಎನ್ಎಸ್): ಪ್ರತ್ಯೇಕ ರಾಜ್ಯ ಸ್ಥಾಪನೆಯ ವಚನದಿಂದ ಹಿಂದೆ ಸರಿದುದಕ್ಕಾಗಿ 'ತೆಲಂಗಾಣ ಜನರಿಗೆ ವಂಚನೆ' ಎಸಗಿದ ಆರೋಪ ಮಾಡಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಮತ್ತು ಹಣಕಾಸು ಸಚಿವ ಪಿ. ಚಿದಂಬರಂ ವಿರುದ್ಧ ಆಂಧ್ರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಹೈದರಾಬಾದ್ ಹೊರವಲಯದ ಎಲ್. ಬಿ. ನಗರ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ನ್ಯಾಯಾಲಯದ ನಿರ್ದೇಶನದ ಮೇರೆಗೆ ಉಭಯ ಕೇಂದ್ರ ಸಚಿವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 420ರ (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ರಂಗಾರೆಡ್ಡಿ ಜಿಲ್ಲೆಯಲ್ಲಿನ ನ್ಯಾಯಾಲಯದಲ್ಲಿ ಈ ವರ್ಷ ಜನವರಿ 28ರಂದು ನೀಡಲಾಗಿದ್ದ ಆದೇಶವನ್ನು ಏಕೆ ಪಾಲಿಸಲಾಗಿಲ್ಲ ಎಂಬುದಾಗಿ ನ್ಯಾಯಾಲಯವು ಪೊಲೀಸ್ ಠಾಣೆಯ ಠಾಣಾಧಿಕಾರಿ (ಎಸ್ ಎಚ್ ಓ) ಅವರನ್ನು ತರಾಟೆಗೆ ತೆಗೆದುಕೊಂಡ ಬಳಿಕ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.ಠಾಣಾಧಿಕಾರಿಯವರು ಕಳೆದವಾರ ಎರಡನೇ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟರ ನ್ಯಾಯಾಲಯದಲ್ಲಿ ಹಾಜರಾಗಿದ್ದರು.ತೆಲಂಗಾಣ ವಿಷಯಕ್ಕೆ ಸಂಬಂಧಿಸಿದಂತೆ ಶಿಂಧೆ ಮತ್ತು ಚಿದಂಬರಂ ಇಬ್ಬರೂ ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡಿದ್ದು, ತನ್ಮೂಲಕ ಪ್ರದೇಶದ ಜನರನ್ನು ವಂಚಿಸಿದ್ದಾರೆ ಎಂದು ಅರ್ಜಿದಾರರು ನ್ಯಾಯಾಲಯದಲ್ಲಿ ದೂರಿದ್ದರು. ಪ್ರಕರಣವನ್ನು ದಾಖಲಿಸಿ ವಿಚಾರಣೆಗಾಗಿ ಪೊಲೀಸರಿಗೆ ವಹಿಸುವಂತೆ ಅವರು ನಿರ್ದೇಶನ ನೀಡುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.ಕಳೆದ ವರ್ಷ ಡಿಸೆಂಬರ್ 28ರಂದು ನವದೆಹಲಿಯಲ್ಲಿ ತೆಲಂಗಾಣ ವಿಷಯಕ್ಕೆ ಸಂಬಂಧಿಸಿದಂತೆ ಗೃಹ ಸಚಿವಾಲಯವು ಕರೆದಿದ್ದ ಸರ್ವ ಪಕ್ಷ ಸಭೆಯ ಸಂದರ್ಭದಲ್ಲಿ ಉಭಯ ಕೇಂದ್ರ ಸಚಿವರೂ ತೆಲಂಗಾಣ ವಿಷಯಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದರು. ಒಂದು ತಿಂಗಳ ಒಳಗಾಗಿ ತೆಲಂಗಾಣ ವಿಷಯವನ್ನು ಇತ್ಯರ್ಥ ಪಡಿಸಲಾಗುವುದು ಎಂದು ಶಿಂಧೆ ಹೇಳಿದ್ದರು.ಆಗ ಕೇಂದ್ರ ಗೃಹ ಸಚಿವರಾಗಿದ್ದ ಚಿದಂಬರಂ ಅವರು ಪ್ರತ್ಯೇಕ ತೆಲಂಗಾಣ ರಾಜ್ಯ ಸ್ಥಾಪನೆಯ ಪ್ರಕ್ರಿಯೆ ಆರಂಭಿಸಲಾಗುವುದು ಎಂದು 2009ರ ಡಿಸೆಂಬರ್ 9ರಂದು ಪ್ರಕಟಿಸಿದ್ದರು.ಏನಿದ್ದರೂ ರಾಯಲಸೀಮಾ ಪ್ರದೇಶದಲ್ಲಿ ಭುಗಿಲೆದ್ದ ಪ್ರತಿಭಟನೆಗಳನ್ನು ಅನುಸರಿಸಿ ಅದೇ ವರ್ಷ ಡಿಸೆಂಬರ್ 23ರಂದು ತಮ್ಮ ಹೇಳಿಕೆಯನ್ನು ಪರಿಷ್ಕರಿಸಿದ ಸಚಿವರು ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸಮಾಲೋಚನೆಗಳ ಅಗತ್ಯವಿದೆ ಎಂದು ಹೇಳಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.