ಶುಕ್ರವಾರ, ಮೇ 20, 2022
26 °C

ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ವಿದ್ಯುತ್ ಕೊರತೆಯನ್ನು ನೀಗಿಸುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಕಾರ್ಯಕ್ಕೆ ಮುಂದಾಗಿದೆ.ನಗರದಲ್ಲಿ ದೊರೆಯುವ ಹಸಿ ತ್ಯಾಜ್ಯದಿಂದ ಶಾಶ್ವತವಾಗಿ ಬೀದಿದೀಪಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲು ವಿವಿಧ ಭಾಗಗಳಲ್ಲಿ 16 ಜೈವಿಕ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಪಾಲಿಕೆ ಸಿದ್ಧತೆ ನಡೆಸಿದೆ.ಪಾಲಿಕೆಯ ಈ ಯೋಜನೆಯಂತೆ ನಗರದ ಮತ್ತಿಕೆರೆ, ಕೆ.ಆರ್.ಮಾರುಕಟ್ಟೆ, ನಾಗಪುರ, ಗಾಂಧಿನಗರ, ರಾಜರಾಜೇಶ್ವರಿನಗರ, ದೇವರಚಿಕ್ಕನಹಳ್ಳಿ, ಜಯನಗರ, ಪಟ್ಟಾಭಿರಾಮನಗರ, ಕೋರಮಂಗಲ, ದೊಮ್ಮಲೂರು, ಸ್ಯಾಂಕಿ ರಸ್ತೆ, ಕೆ.ಆರ್.ರಸ್ತೆ, ಗರುಡಾಚಾರ್‌ಪಾಳ್ಯ, ಕೆ.ಆರ್.ಪುರ ಮಾರುಕಟ್ಟೆ, ಕೆಂಚನಹಳ್ಳಿ ಹಾಗೂ ಕುವೆಂಪು ಬಡಾವಣೆಗಳಲ್ಲಿ ಘಟಕಗಳು ಸ್ಥಾಪನೆಯಾಗಲಿವೆ.ಪ್ರತಿಯೊಂದು ಘಟಕ ನಿರ್ಮಾಣಕ್ಕೆ 16 ಕೋಟಿ ವೆಚ್ಚವಾಗಲಿದೆ. 5 ಸಾವಿರ ಚದರಡಿ ವಿಸ್ತೀರ್ಣದ ಸ್ಥಳದ ಅವಶ್ಯಕತೆ ಇದ್ದು, ಒಟ್ಟಾರೆ ಎಲ್ಲಾ ಘಟಕಗಳಿಂದ 800 ಕಿಲೋ ವಾಟ್ ವಿದ್ಯುತ್ ಉತ್ಪಾದಿಸುವ ಅಂದಾಜಿದೆ.

ನಗರದಲ್ಲಿ ನಿತ್ಯ 3 ಸಾವಿರ ಟನ್‌ಗಳಷ್ಟು ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ವಿಲೇವಾರಿಗೆ ಪ್ರತಿ ವರ್ಷ ಸುಮಾರು 350 ಕೋಟಿ ಹಣ ವ್ಯಯವಾಗುತ್ತಿದೆ.

 

ಇದುವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿ ತಲೆನೋವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಅದನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಲು ಉದ್ದೇಶಿಸಿದೆ.ಪ್ರತಿ ನಿತ್ಯ ಒಂದು ಟನ್ ಕಸ ವಿಲೇವಾರಿಗೆ ಒಂದು ಸಾವಿರ ರೂಪಾಯಿ ಖರ್ಚಾಗುತ್ತಿದೆ. ನಗರದ ಹತ್ತಿರದ ಬಡಾವಣೆಗಳಲ್ಲಿ ವಿದ್ಯುತ್ ಘಟಕಗಳು ಸ್ಥಾಪನೆಯಾದರೆ ಕಸ ವಿಲೇವಾರಿಗೆ ಬಳಕೆಯಾಗುವ ಹಣ ಉಳಿತಾಯವಾಗಲಿದೆ.ಈ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಿದರೆ ಮಾತ್ರ ಯೋಜನೆ ಯಶಸ್ವಿಯಾಗಲಿದೆ ಎನ್ನುತ್ತಾರೆ ಪಾಲಿಕೆಯ ಹಿರಿಯ ಅಧಿಕಾರಿಗಳು. ಘಟಕಗಳ ನಿರ್ಮಾಣಕ್ಕೆ ಪಾಲಿಕೆಯು ಈಗಾಗಲೇ ಎರಡು ಬಾರಿ ಟೆಂಡರ್ ಪ್ರಕ್ರಿಯೆ ನಡೆಸಿದೆ. ಆದರೆ, ಒಂದು ಖಾಸಗಿ ಕಂಪೆನಿ ಮಾತ್ರ ಟೆಂಡರ್‌ನಲ್ಲಿ ಭಾಗವಹಿಸಲು ಒಲವು ತೋರಿದೆ.

 

ಹೆಚ್ಚಿನ ಕಂಪೆನಿಗಳು ಟೆಂಡರ್‌ನಲ್ಲಿ ಭಾಗವಹಿಸದ ಕಾರಣ ಪಾಲಿಕೆ ಸರ್ಕಾರಿ ನಿಯಮದಂತೆ ಮತ್ತೆ `ಇ- ಟೆಂಡರ್~ ಪ್ರಕ್ರಿಯೆ ನಡೆಸಲು ಮುಂದಾಗಿದೆ.ನಗರದ ಬೀದಿ ದೀಪಗಳ ನಿರ್ವಹಣೆಗಾಗಿ ಪಾಲಿಕೆಯು ಪ್ರತಿ ತಿಂಗಳು 8 ಕೋಟಿ ರೂಪಾಯಿಗಳನ್ನು `ಬೆಸ್ಕಾಂ~ಗೆ ಪಾವತಿ ಮಾಡುತ್ತಿದೆ. ಈ ಬಯೋ ಮಿಥೇನ್ ಘಟಕಗಳು ನಿರ್ಮಾಣವಾದರೆ ಕೋಟಿಗಟ್ಟಲೆ ಹಣ ಉಳಿತಾಯವಾಗಲಿದೆ.ಇದರಿಂದ ವಿದ್ಯುತ್‌ಗೆ `ಬೆಸ್ಕಾಂ~ ಅನ್ನು ಅವಲಂಬಿಸುವುದು ತಪ್ಪಲಿದೆ. ಕೇವಲ ವಿದ್ಯುತ್ ಉತ್ಪಾದನೆ ಮಾತ್ರವಲ್ಲದೆ ಇಲ್ಲಿ ಸಿಗುವ ಗೊಬ್ಬರವನ್ನು ನಗರದ ಎಲ್ಲಾ ಉದ್ಯಾನಗಳಿಗೆ ಬಳಸಿಕೊಳ್ಳಲು ಪಾಲಿಕೆಯು ಚಿಂತಿಸಿದೆ.ಬಿಬಿಎಂಪಿ ಕೈಗೊಂಡಿರುವ ಪೈಲಟ್ ಯೋಜನೆಗೆ ಸ್ಥಳೀಯರು ಹಾಗೂ ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳ ಸಹಕಾರದ ಅವಶ್ಯಕತೆ ಇದೆ. ಅವರು ಸೂಚಿಸುವ ಸ್ಥಳದಲ್ಲೇ ಪಾಲಿಕೆಯು ಘಟಕಗಳನ್ನು ತೆರೆಯಲು ಮುಂದಾಗಲಿದ್ದು, ಈ ಬಗ್ಗೆ ಸಂಘ- ಸಂಸ್ಥೆಗಳ ಪ್ರತಿಕ್ರಿಯೆಗಾಗಿ ಪಾಲಿಕೆ ಎದುರು ನೋಡುತ್ತಿದೆ.ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಲ್ಲಿ 2012ರ ಅಂತ್ಯದೊಳಗೆ ಯೋಜನೆ ಪೂರ್ಣಗೊಳ್ಳಲಿದೆ ಎಂಬುದು ಹಿರಿಯ ಅಧಿಕಾರಿಗಳ ಅಭಿಪ್ರಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.