ಶನಿವಾರ, ಮೇ 15, 2021
25 °C
ನಗರ ಸಂಚಾರ

ತ್ಯಾಜ್ಯ ನಿರ್ವಹಣೆಗೆ ಪಾಲಿಕೆ ಹೊಸ ಹೆಜ್ಜೆ

ವಿನಾಯಕ ಭಟ್ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತ್ಯಾಜ್ಯ ನಿರ್ವಹಣೆಗೆ ಪಾಲಿಕೆ ಹೊಸ ಹೆಜ್ಜೆ

ಬೆಳಗಾವಿ: ನಗರದ ರಸ್ತೆಗಳ ವೃತ್ತದ ಬಳಿ ಕೊಳೆತು ನಾರುತ್ತಿರುವ ತ್ಯಾಜ್ಯ. ಅದರೊಳಗಿನ ಆಹಾರವನ್ನು ತಿನ್ನಲು ಕಿತ್ತಾಡುವ ನಾಯಿ- ಹಂದಿಗಳ ದಂಡು; ದುರ್ನಾತದಿಂದ ತಪ್ಪಿಸಿಕೊಳ್ಳಲು ಮೂಗು ಮುಚ್ಚಿಕೊಂಡು ಸಂಚರಿಸುತ್ತಿರುವ ನಾಗರಿಕರು... ಇಂಥ ದೃಶ್ಯಗಳಿಗೆ ಅಂತ್ಯ ಹಾಡಲು ಬೆಳಗಾವಿ ಮಹಾನಗರ ಪಾಲಿಕೆ ಮುಂದಾಗಿದೆ.ನಾಗರಿಕರು ಒಣ ಹಾಗೂ ಹಸಿ ತ್ಯಾಜ್ಯಗಳನ್ನು ಸೇರಿಸಿ ಎಸೆಯುತ್ತಿರುವುದು, ಕಸವನ್ನು ಒಯ್ಯಲು ಬರುವ ಪೌರ ಕಾರ್ಮಿಕರು ಒಂದೇ ಕಂಟೇನರ್‌ನಲ್ಲಿ ಒಣ ಹಾಗೂ ಹಸಿ ತ್ಯಾಜ್ಯ ಸಂಗ್ರಹಿಸಿ, ಬಳಿಕ ಅವುಗಳನ್ನು ತಂದು ಕಸದ ತೊಟ್ಟಿಯ ಬಳಿ ಹಾಕುತ್ತಿರುವುದರಿಂದ ನಗರದಲ್ಲಿ ನೈರ್ಮಲ್ಯ ಸಮಸ್ಯೆ ತಲೆತೋರಿದೆ. ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.ರಸ್ತೆಯ ಪಕ್ಕದಲ್ಲಿ ಎಲ್ಲೆಂದರೆಲ್ಲಿ ತ್ಯಾಜ್ಯ ಎಸೆಯುವುದಕ್ಕೆ ಕಡಿವಾಣ ಹಾಕಿ, ನಗರವನ್ನು ತ್ಯಾಜ್ಯ ಮುಕ್ತವನ್ನಾಗಿ ಮಾಡಲು ಮಹಾನಗರ ಪಾಲಿಕೆಯು, ತ್ಯಾಜ್ಯ ಸಂಗ್ರಹಿಸುವ ಆರಂಭಿಕ ಘಟ್ಟವಾದ ಮನೆ ಬಾಗಿಲಿನಲ್ಲೇ ಒಣ ಹಾಗೂ ಹಸಿ ಕಸಗಳನ್ನು ಪ್ರತ್ಯೇಕಿಸಲು ಯೋಜನೆ ರೂಪಿಸಿದೆ.ಪ್ರತಿಯೊಂದು ಮನೆಗೂ ತೆರಳಿ ಕಸವನ್ನು ಸಂಗ್ರಹಿಸಬೇಕು. ಮನೆಯಿಂದ ಕಸ ಸಂಗ್ರಹಿಸುವ ಸಂದರ್ಭದಲ್ಲೇ ಹಸಿ ಹಾಗೂ ಒಣ ತ್ಯಾಜ್ಯಗಳ ವಿಂಗಡಣೆ ಮಾಡಿಕೊಳ್ಳಬೇಕು. ಇದರಲ್ಲಿ ಶೇ. 100ರಷ್ಟು ಪ್ರಗತಿಯನ್ನು ಸಾಧಿಸಬೇಕು ಎಂದು ಈಚೆಗೆ ನಡೆದ ಲೋಕ ಅದಾಲತ್ ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆಯ ಆಡಳಿತಾಧಿಕಾರಿ ಎನ್. ಜಯರಾಮ್ ಅವರು ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದ್ದರು.ಈ ಹಿನ್ನೆಲೆಯಲ್ಲಿ ಸರ್ಕಾರೇತರ ಸಂಸ್ಥೆಗಳು, ಬಡಾವಣೆ ನಿವಾಸಿಗಳ ಸಂಘ, ಜನಪ್ರತಿನಿಧಿಗಳು ಹಾಗೂ ಪಾಲಿಕೆ ಸದಸ್ಯರ ಸಹಕಾರ ಪಡೆದು, ಇನ್ನು ಎರಡು ತಿಂಗಳ ಒಳಗೆ ನಗರವನ್ನು ತ್ಯಾಜ್ಯ ಎಸೆಯುವುದರಿಂದ ಮುಕ್ತಗೊಳಿಸಲು ಪಾಲಿಕೆಯು ಯೋಜನೆ ರೂಪಿಸಿದೆ.`ತ್ಯಾಜ್ಯದಿಂದ ಉಂಟಾಗುವ ಸಮಸ್ಯೆ ಕುರಿತು ಹಾಗೂ ಅವುಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸುವ ಬಗ್ಗೆ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ ಕಾರ್ಮಿಕರಿಗೆ ತರಬೇತಿ ನೀಡಲಾಗುತ್ತದೆ.ಇವರು ನಾಗರಿಕರಿಗೆ ತ್ಯಾಜ್ಯ ನಿರ್ವಹಣೆ ಕುರಿತು ತಿಳಿವಳಿಕೆ ಮೂಡಿಸಲಿದ್ದಾರೆ. ಇನ್ನು ಮೇಲೆ ಪ್ರತಿ ಮನೆಯವರೂ ತಮ್ಮ ಮನೆ ಬಾಗಿಲಿಗೆ ಬರುವ ಪೌರ ಕಾರ್ಮಿಕರಿಗೆ ತ್ಯಾಜ್ಯಗಳನ್ನು ಕಡ್ಡಾಯವಾಗಿ ನೀಡಬೇಕು ಎಂಬ ನಿಯಮವನ್ನು ರೂಪಿಸಲಾಗುವುದು' ಎಂದು ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಎಸ್. ನಾಯಕ ತಿಳಿಸಿದರು.`ಮನೆ ಬಾಗಿಲಿಗೆ ಬರುವ ಪೌರ ಕಾರ್ಮಿಕರಿಗೆ ಕಸ ನೀಡದೇ, ಅವುಗಳನ್ನು ರಸ್ತೆಯ ಪಕ್ಕದಲ್ಲಿ ಎಸೆಯುವ ಜನರಿಗೆ ದಂಡ ವಿಧಿಸಲಾಗುವುದು. ತ್ಯಾಜ್ಯ ವಿಂಗಡಣೆ ಕುರಿತು ಪ್ರತಿ ಮನೆಯವರಿಗೂ ಮಾಹಿತಿ ನೀಡಲಾಗುವುದು. ಮನೆಯಿಂದಲೇ ಕಸ ಸಂಗ್ರಹಿಸುವ ಗುರಿಯನ್ನು ಮುಂದಿನ ಎರಡು ತಿಂಗಳಲ್ಲಿ ಶೇ. 100ರಷ್ಟು ಸಾಧಿಸುವ ವಿಶ್ವಾಸ ಇದೆ' ಎಂದು ನಾಯಕ ತಿಳಿಸಿದರು.`ಹಿಂಡಾಲ್ಕೊ ಕಂಪೆನಿಯು ತನ್ನ ಸುತ್ತಲಿನ ಯಮನಾಪುರ, ಮುತ್ಯಾನಹಟ್ಟಿ, ಕಣಬರಗಿ, ಬಸವನಕೊಳ್ಳದಲ್ಲಿ ಒಣ ಹಾಗೂ ಹಸಿ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ಸಲುವಾಗಿ 6000 ತೊಟ್ಟಿಗಳನ್ನು ದೇಣಿಗೆಯಾಗಿ ನೀಡಿದೆ. ಇದೇ ರೀತಿ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸಲು ಇನ್ನಿತರ ಕಂಪೆನಿಗಳು ಮುಂದೆ ಬರಬೇಕು' ಎಂದು ನಾಯಕ ಅಭಿಪ್ರಾಯಪಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.