ಸೋಮವಾರ, ಜೂನ್ 14, 2021
22 °C
ರಾಷ್ಟ್ರೀಯ ಸೇವಾ ಯೋಜನೆಗೆ ಹೊಸ ಭಾಷ್ಯ

ತ್ಯಾಜ್ಯ ವಿಲೇವಾರಿಗೆ ವಿದ್ಯಾರ್ಥಿಗಳ ಬಳಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊನ್ನಾಳಿ: ಪಟ್ಟಣ–ನಗರ ಪ್ರದೇಶಗಳ ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನ ಪರಿಚಯಿಸುವುದು, ಗ್ರಾಮೀಣ ನೈರ್ಮಲ್ಯದ ಮಹತ್ವ ಸಾರುವುದು, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವುದು, ಶ್ರಮದಾನದ ಮಹತ್ವ ಸಾರುವುದು... ಇವು ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್‌) ಪ್ರಮುಖ ಧ್ಯೇಯೋದ್ದೇಶಗಳು.ಗ್ರಾಮ ಸ್ವರಾಜ್ಯದ ಕನಸು ಕಂಡ ರಾಷ್ಟ್ರಪಿತ ಮಹಾತ್ಮ ಗಾಂಧಿ ಕೂಡ ‘ಪ್ರತಿ ಕಾಲೇಜುಗಳಲ್ಲಿ ಎನ್‌ಎಸ್‌ಎಸ್‌ ಘಟಕಗಳು ಅಸ್ತಿತ್ವದಲ್ಲಿರಬೇಕು’ ಎಂಬುದನ್ನು ಇದೇ ಕಾರಣಕ್ಕೆ ಪ್ರತಿಪಾದಿಸಿದ್ದರು. ಆದರೆ, ಹೊನ್ನಾಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇರುವ ಎನ್‌ಎಸ್‌ಎಸ್‌ ಘಟಕ ರಾಷ್ಟ್ರೀಯ ಸೇವಾ ಯೋಜನೆಗೆ ವಿನೂತನ ಭಾಷ್ಯ ಬರೆಯಲು ಮುಂದಾಗಿದೆ. ಕಟ್ಟಡ ನಿರ್ಮಾಣದ ತ್ಯಾಜ್ಯ ಹೊರಸಾಗಿಸಲು ಯುವ ಶಕ್ತಿಯನ್ನು ಬಳಸಿಕೊಳ್ಳುತ್ತಿರುವುದು ಆ ನಿಟ್ಟಿನಲ್ಲಿನ ಮೊದಲ ಹೆಜ್ಜೆ!ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಇಲ್ಲಿ ಅಕ್ಷರಶಃ ಮೈಮುರಿದು ದುಡಿಯಬೇಕು. ಕಾಲೇಜಿನ ಪ್ರಥಮ ಸೆಮಿಸ್ಟರ್‌ ವಿದ್ಯಾರ್ಥಿಗಳಿಂದ ಮೊದಲುಗೊಂಡು ಆರನೇ ಸೆಮಿಸ್ಟರ್‌ ವಿದ್ಯಾರ್ಥಿಗಳ ವರೆಗೂ ಪ್ರತಿಯೊಬ್ಬರಿಗೂ ಇಲ್ಲಿ ದುಡಿಮೆಯ ಸಮಾನಾವಕಾಶ! ಆದರೆ, ಸಂಬಳ ಮಾತ್ರ ಕೇಳುವಂತಿಲ್ಲ. ಒಂದು ವೇಳೆ ಎನ್‌ಎಸ್‌ಎಸ್‌ ಸ್ವಯಂಸೇವಕರು ಕೆಲಸ ಮಾಡಲು ನಿರಾಕರಿಸಿದರೆ ಆಂತರಿಕ ಅಂಕ ಕಡಿತಗೊಳಿಸುವ ಬೆದರಿಕೆ ಬರುತ್ತದಂತೆ. ಹೀಗೆಂದು ಕಣ್ಣೀರು ಹಾಕುತ್ತ ಅಳಲು ತೋಡಿಕೊಳ್ಳುತ್ತಾರೆ ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿಗಳು.ಎಂ.ಪಿ.ರೇಣುಕಾಚಾರ್ಯ  ಅವರ ಅವಧಿಯಲ್ಲಿ ₨ 1.21ಕೋಟಿ ವೆಚ್ಚದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣಗೊಂಡಿತ್ತು. ನಂತರದ ದಿನಗಳಲ್ಲಿ ಹೆಚ್ಚುವರಿ ಕೊಠಡಿಗಳು ಹಾಗೂ ವಿಸ್ತೃತ ಕಟ್ಟಡಕ್ಕೆಂದು ಕೋಟಿಗಟ್ಟಲೇ ಹಣ ಬಿಡುಗಡೆ ಯಾಗಿದೆ. ಆ ಹಣದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಅದರ ತ್ಯಾಜ್ಯ ಸಾಗಿಸಲು ಎನ್‌ಎಸ್‌ಎಸ್‌ ಸ್ವಯಂ ಸೇವಕರನ್ನು (ವಿದ್ಯಾರ್ಥಿಗಳನ್ನು) ಬಳಸಿ ಕೊಳ್ಳುತ್ತಿರುವುದು ಸರಿಯೇ ಎಂಬುದು ಪ್ರಜ್ಞಾವಂತರ ಪ್ರಶ್ನೆ. ಇದು ಶ್ರಮದಾನದ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಉಪನ್ಯಾಸಕರು ಸಮಜಾಯಿಷಿ ನೀಡುತ್ತಾರೆ.ಅಲ್ಲದೇ, ಈ ‘ವಿಶೇಷ ಶ್ರಮದಾನ’ ಮಾಡಿದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಊಟದ ಆಮಿಷವೊಡ್ಡುತ್ತಾರೆ! ವಿದ್ಯಾರ್ಥಿಗಳಿಂದ ಕೆಲಸ ಮಾಡಿಸುವುದಾದರೆ, ಕಟ್ಟಡ ನಿರ್ಮಾಣಕ್ಕೆಂದು ಬಿಡುಗಡೆಯಾಗಿರುವ ಕೋಟಿಗಟ್ಟಲೇ ಹಣ ಏನಾಗುತ್ತಿದೆ ಎಂಬುದು ಎಲ್ಲರ ಪ್ರಶ್ನೆ. ಅದು ಯಕ್ಷ ಪ್ರಶ್ನೆ ಆಗದಿರಲಿ...

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.