ಶನಿವಾರ, ಮೇ 28, 2022
30 °C

ತ್ಯಾಜ್ಯ ವಿಲೇವಾರಿಗೆ ಸುಲಭ ಪರಿಹಾರ-ಬೆಂಕಿ ಹಾಕಿ!

ಪ್ರಜಾವಾಣಿ ವಾರ್ತೆ/ ಉ.ಮ.ಮಹೇಶ್ Updated:

ಅಕ್ಷರ ಗಾತ್ರ : | |

ತ್ಯಾಜ್ಯ ವಿಲೇವಾರಿಗೆ ಸುಲಭ ಪರಿಹಾರ-ಬೆಂಕಿ ಹಾಕಿ!

ಬೀದರ್: ನಗರದಲ್ಲಿ ಬೆಳಗಿನ ವೇಳೆ ವಾಯು ವಿಹಾರಕ್ಕಾಗಿ ಬರುವ ನಾಗರಿಕರಿಗೆ ಕೆಲವೆಡೆ ಆಗಷ್ಟೇ ಬೆಂಕಿ ಹಾಕಿರುವ ತ್ಯಾಜ್ಯ, ಪ್ಲಾಸ್ಟಿಕ್‌ನಿಂದ ಹೊರಹೊಮ್ಮುವ ಹೊಗೆಯ ಸೇವನೆಯೂ ಆಗುತ್ತದೆ. ಇಂಥದೊಂದು ಸೌಲಭ್ಯ ಒದಗಿಸಿದ ಹಿರಿಮೆ ನಗರಸಭೆಯ ಸಿಬ್ಬಂದಿಗೆ ಸಲ್ಲಬೇಕು!ನಗರದ ವಿವಿಧೆಡೆ ಯಥೇಚ್ಚವಾಗಿ ಸಂಗ್ರಹವಾಗುವ ತ್ಯಾಜ್ಯ, ಕಾಗದ, ಪ್ಲಾಸ್ಟಿಕ್‌ನ ವಿಲೇವಾರಿಗಾಗಿ ಕೆಲವು ಸಿಬ್ಬಂದಿ ಕಂಡುಕೊಂಡಿರುವ ಸುಲಭದ ಮಾರ್ಗ, ಕಸಕ್ಕೆ ಬೆಂಕಿ ಹಾಕುವುದು .ಇದರಿಂದ ನಗರ ಸ್ವಚ್ಛವಾಗಲಿದೆಯೋ ಇಲ್ಲವೋ, ಆದರೆ, ವಾತಾವರಣವನ್ನು ಕಲ್ಮಶಗೊಳಿಸುವ ಬೆಳಗಿನ ವಾಯುವಿಹಾರಕ್ಕೆ ತೆರಳುವ ನಾಗರಿಕರಿಗೆ, ಪ್ರಶಾಂತ ವಾತಾವರಣ ಬಯಸಿ ಹೊರಬರುವ ಜನರಿಗೆ ಹೊಗೆಯ ಸೇವನೆಯೂ ಆಗಲಿದೆ.ಅಂಗಡಿಗಳಲ್ಲಿ ನೀಡುವ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಬ್ಯಾಗ್‌ಗಳು, ಸರಕು ಕಟ್ಟಲು ಬಯಸುವ ಪ್ಲಾಸ್ಟಿಕ್ ಹೊದಿಕೆಗಳು, ತ್ಯಾಜ್ಯವನ್ನು ಸೇರುವ ಬೆಂಕಿಯಲ್ಲಿ ಉರಿಯುವ ವಸ್ತುಗಳು ಎಲ್ಲವನ್ನು ಸೇರಿ ಬೆಂಕಿ ಹಾಕಲಾಗುತ್ತದೆ.ಗಣೇಶ ಮೈದಾನ, ಕೆಇಬಿ ಎದುರು, ಐಎಂಎ ಕಚೇರಿ ಬಳಿ, ಬಸ್ ನಿಲ್ದಾಣದ ಬಳಿ ಹೀಗೆ ಎಲ್ಲ ಕಡೆ ಆಗಾಗ್ಗೆ ಇಂಥ ದೃಶ್ಯಗಳು ಕಾಣಿಸುತ್ತವೆ. ಇದು ಸಿಬ್ಬಂದಿಯೇ ಕಂಡುಕೊಂಡಿರುವ ಮಾರ್ಗ. ನಾವು ಎಲ್ಲವನ್ನು ಗೂಡಿಸಿ ಒಂದೆಡೇ ಹಾಕುತ್ತೇವೆ. ಸರಿಯಾದ ಸಮಯದಲ್ಲಿ ಅದು ಸಾಗಣೆ ಆಗದಿದ್ದರೆ ಗಾಳಿಗೆ ಮತ್ತೆ ಚೆಲ್ಲಾಪಿಲ್ಲಿಯಾಗುತ್ತದೆ.ಇದು, ಇನ್ನೊಂದು ರೀತಿಯ ಸಮಸ್ಯೆ. ಇದನ್ನು ತಪ್ಪಿಸಲು ನಾವು ಹೀಗೆ ಬೆಂಕಿ ಹಾಕುತ್ತೇವೆ ಎಂಬುದು ಹೀಗೆ ಬೆಂಕಿ ಹಾಕಲು ಸಜ್ಜಾಗಿದ್ದ ಸಿಬ್ಬಂದಿಯೊಬ್ಬರ ಪ್ರತಿಕ್ರಿಯೆ.ಹೀಗೆ ತ್ಯಾಜ್ಯಗಳಿಂದ ಮುಖ್ಯವಾಗಿ ಪ್ಲಾಸ್ಟಿಕ್ ತ್ಯಾಜ್ಯಗಳಿಗೆ ಬೆಂಕಿ ಹಾಕಿದಾಗ, ಕ್ಯಾನ್ಸರ್ ಸೇರಿದಂತೆ ಆರೋಗ್ಯದ ಮೇಲೆ ಕಾಲಾನಂತರ ಗಂಭೀರ ಸ್ವರೂಪದ ಪರಿಣಾಮ ಬೀರಬಹುದಾದ ರಸಾಯನಿಕ ಅಂಶಗಳು ಮತ್ತು ಟಾಕ್ಸಿಕ್‌ಗಳನ್ನು ಹೊರಸೂಸುತ್ತದೆ.ಇದನ್ನೇ ಜನ, ಜಾನುವಾರು ಸೇವಿಸಿದಾಗ ಕಾಲಾನಂತರದಲ್ಲಿ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬುದು ಅಧ್ಯಯನ ವರದಿಯೊಂದರ ಸಾರ.ಆದರೂ, ಈ ಬಗೆಗೆ ಸ್ಥಳೀಯ ಆಡಳಿತ ಮುಖ್ಯವಾಗಿ ನಗರಸಭೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ದಂತಿಲ್ಲ. ನಗರಸಭೆಯ ಅಧಿಕಾರಿಗಳ ಉದಾಸೀನತೆ ಮತ್ತು ತ್ಯಾಜ್ಯ ವಿಲೇವಾರಿಗೆ ಪರಿಣಾಮಕಾರಿ ವ್ಯವಸ್ಥೆಯನ್ನು ರೂಪಿಸದ ಸದಸ್ಯರ ನಿರ್ಲಕ್ಷ್ಯವು ಇದಕ್ಕೆ ಕಾರಣವೇ. ತ್ಯಾಜ್ಯ ವಿಲೇವಾರಿಗಾಗಿ ಮನೆಮನೆಯಿಂದ ನೇರವಾಗಿ ಕಸ ಸಂಗ್ರಹಿಸುವ ವ್ಯವಸ್ಥೆ ಹಿಂದೊಮ್ಮೆ ಜಾರಿಯಾಗಿದ್ದರೂ ಈಗ ಅದು ಹಳ್ಳ ಹಿಡಿದಿದೆ. ಸದ್ಯ, ಸಂಗ್ರಹಿಸಿದ ತ್ಯಾಜ್ಯವನ್ನು ಹೊರವಲಯದ ಸುಲ್ತಾನ್‌ಪೂರ್ ಬಳಿ ವಿಲೇವಾರಿ ಮಾಡುತ್ತಿದ್ದರು ಪೂರ್ಣ ಪರಿಹಾರ ದೊರೆತಿಲ್ಲ. ಇತ್ತ, ಬೆಂಕಿ ಹಾಕುವ ಕಾರ್ಯ ಮುಂದುವರಿದಿದೆ.ಇಷ್ಟಕ್ಕೂ, ಈಚೆಗಷ್ಟೇ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಪರಿಸರ ರಕ್ಷಿಸಿ, ಮಾಲಿನ್ಯ ತಪ್ಪಿಸಿ ಎಂದು ಕರೆ ನೀಡಿದ ಅಧಿಕಾರಿಗಳಾದರೂ ಏನು ಮಾಡುತ್ತಿದ್ದಾರೆ. ಬೆಂಕಿ ಹಾುವ ಮಾರ್ಗ ಅವರ ಗಮನಕ್ಕೇ ಬಂದಿಲ್ಲವೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.