ಬುಧವಾರ, ಜೂನ್ 16, 2021
28 °C

ತ್ಯಾಜ್ಯ ವೈಜ್ಞಾನಿಕ ವಿಲೇವಾರಿಗೆ ಹಿಂದೇಟು

ಪ್ರಜಾವಾಣಿ ವಾರ್ತೆ/ ಕೆ.ಎಚ್. ಓಬಳೇಶ್ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ರಸ್ತೆಬದಿಯಲ್ಲಿ ಸೃಷ್ಟಿಯಾಗಿರುವ ಕಸದ ರಾಶಿ. ತ್ಯಾಜ್ಯವನ್ನು ಚೆಲ್ಲಾಪಿಲ್ಲಿ ಮಾಡುತ್ತಿರುವ ವರಾಹ ಸಂಕುಲ. ಮನೆ ಮುಂದಿನ ಚರಂಡಿಯಲ್ಲಿರುವ ಕಲ್ಮಷ ಕಂಡು ರೋಸಿಹೋಗಿರುವ ನಾಗರಿಕರು. ವಾರಕ್ಕೊಮ್ಮೆಯೂ ಬಾರದ ಪೌರಕಾರ್ಮಿಕರು.-ಇದು ನಗರಸಭೆಯ ವಾರ್ಡ್‌ಗಳಲ್ಲಿ ಕಾಣುವ ಚಿತ್ರಣ. ಜಿಲ್ಲಾ ಕೇಂದ್ರದ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಸ್ವಚ್ಛತೆ ಕಣ್ಮರೆಯಾಗಿದೆ. ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿಯಾಗುತ್ತಿಲ್ಲ. ಪೌರಸಿಬ್ಬಂದಿಯ ಕೊರತೆ ಪರಿಣಾಮ ಹಿಂದುಳಿದ ವಾರ್ಡ್‌ಗಳಲ್ಲಿ ತಿಂಗಳು ಕಳೆದರೂ ಚರಂಡಿಯಲ್ಲಿ ಕಟ್ಟಿಕೊಂಡಿರುವ ತ್ಯಾಜ್ಯದ ವಿಲೇವಾರಿ ಆಗುವುದಿಲ್ಲ. ಸಮರ್ಪಕವಾಗಿ ಕಸ ವಿಲೇವಾರಿಯಾಗದ ಪರಿಣಾಮ ನಗರದಲ್ಲಿ ಸಾಂಕ್ರಾಮಿಕ ರೋಗದ ಭೀತಿಯೂ ತಲೆದೋರಿದೆ.ನಗರಸಭೆ ವ್ಯಾಪ್ತಿಯಲ್ಲಿ 16,314 ಮನೆಗಳಿವೆ. ಮದುವೆ ಮಂಟಪ, ಹೋಟೆಲ್, ಅಂಗಡಿ, ಕ್ಲಿನಿಕ್, ಆಸ್ಪತ್ರೆ ಸೇರಿದಂತೆ 20 ಸಾವಿರಕ್ಕೂ ಹೆಚ್ಚು ಖಾಸಗಿ ಸ್ವತ್ತುಗಳಿವೆ. ಹೀಗಾಗಿ, ಪ್ರತಿನಿತ್ಯವೂ ಸರಾಸರಿ 20 ಟನ್‌ಗೂ ಹೆಚ್ಚು ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಆದರೆ, ಇದರ ಸಮರ್ಪಕ ವಿಲೇವಾರಿ ಮಾತ್ರ ನಡೆಯುತ್ತಿಲ್ಲ.

 

ಇದರ ಪರಿಣಾಮ ಜಿಲ್ಲಾ ಕೇಂದ್ರ ಸ್ವಚ್ಛತೆಯಿಂದ ದೂರು ಉಳಿದಿದೆ. ದೂರದ ಊರುಗಳಿಂದ ನಗರಕ್ಕೆ ಬರುವ ನಾಗರಿಕರು ಇಲ್ಲಿನ ವಾತಾವರಣ ನೋಡಿ ಅಸಹ್ಯಪಟ್ಟುಕೊಳ್ಳುತ್ತಾರೆ ಎಂಬುದು ನಾಗರಿಕರ ದೂರು.ಯಡಬೆಟ್ಟದ ಬಳಿ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಸ್ಥಳ ಗುರುತಿಸಿ ಅಭಿವೃದ್ಧಿಪಡಿಸಲಾಗಿದೆ. ಆದರೆ, ಸದ್ಬಳಕೆಯಾಗುತ್ತಿಲ್ಲ. ಜತೆಗೆ, ಕರಿನಂಜನಪುರದ ರಸ್ತೆಬದಿಯಲ್ಲಿ ಸ್ವಯಂಸೇವಾ ಸಂಸ್ಥೆಯೊಂದರ ನೆರವಿನೊಂದಿಗೆ ಶೂನ್ಯ ತ್ಯಾಜ್ಯ ಘಟಕ ಸ್ಥಾಪಿಸಲಾಗಿದೆ.ಈ ಘಟಕಕ್ಕೆ ಸುಮಾರು 1 ಸಾವಿರ ಮನೆಗಳಿಂದ ಮಾತ್ರವೇ ದಿನನಿತ್ಯ ತ್ಯಾಜ್ಯ ಪೂರೈಕೆಯಾಗುತ್ತಿದೆ. ಉಳಿದ ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿಯಾಗುತ್ತಿಲ್ಲ. ಇದು ಕಲ್ಮಷ ವಾತಾವರಣದ ಸೃಷ್ಟಿಗೆ ಕಾರಣವಾಗಿದೆ.ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವ ಕಾರ್ಯಕ್ಕೆ ನಗರಸಭೆಯಿಂದ ಚಾಲನೆ ಸಿಕ್ಕಿಲ್ಲ. ವೈದ್ಯಕೀಯ ತ್ಯಾಜ್ಯದ ನಿರ್ವಹಣೆ  ಬಗ್ಗೆ ಇಂದಿಗೂ ಸ್ಪಷ್ಟತೆ ಮೂಡಿಲ್ಲ. ಹೀಗಾಗಿ, ಬಳಕೆಯಾದ ಸಿರೆಂಜ್ ಇತ್ಯಾದಿ ವಸ್ತುಗಳು ಬಡಾವಣೆಗಳ ಮನೆಯ ಹಿಂಭಾಗದಲ್ಲಿರುವ ಖಾಲಿ ಜಾಗ ಸೇರುತ್ತಿವೆ.ಕೆಲವೆಡೆ ನಾಗರಿಕರು ಕಸ ಹಾಕಲು ಇಟ್ಟಿರುವ ಪ್ಲಾಸ್ಟಿಕ್ ಡಬ್ಬಿಗಳು ಕೂಡ ಮುರಿದು ಬಿದ್ದಿವೆ. ಅವುಗಳ ದುರಸ್ತಿಗೆ ಮಾತ್ರ ನಗರಸಭೆ ಆಡಳಿತ ಮುಂದಾಗಿಲ್ಲ. ಘನ, ದ್ರವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಲ್ಲಿ ಸ್ಥಳೀಯ ಆಡಳಿತ ಸೋತಿದೆ ಎಂಬುದು ಸಾರ್ವಜನಿಕರ ಆರೋಪ.`ಬೀದಿಯಲ್ಲಿ ಕಸದ ರಾಶಿ ನೋಡಿದರೆ ತ್ಯಾಜ್ಯ ವಿಲೇವಾರಿಗೆ ನಗರಸಭೆಗೆ ಬಿಡುಗಡೆಯಾಗುವ ಅನುದಾನ ಎಲ್ಲಿಗೆ ಹೋಗುತ್ತದೆ? ಎಂಬ ಅನುಮಾನ ಮೂಡುವುದು ಸಹಜ. ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಿದರೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ.

 

ಮೊದಲು ಸ್ಥಳೀಯ ಆಡಳಿತ ಸ್ವಚ್ಛತೆಗೆ ಒತ್ತು ನೀಡಬೇಕು. ನಾಗರಿಕರು ಕೂಡ ಘನ ತ್ಯಾಜ್ಯ ವಿಂಗಡಿಸಿ ಕಸದ ತೊಟ್ಟಿಗೆ ಹಾಕಬೇಕು~ ಎಂಬುದು ಗೃಹಿಣಿ ಕಮಲಾ ಅನಿಸಿಕೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.