ಸೋಮವಾರ, ಜನವರಿ 20, 2020
26 °C

ತ್ರಿಕೋನ ಸರಣಿಗೆ ಭಾರತ ತಂಡ; ಇರ್ಫಾನ್‌ಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಚೆನ್ನೈ (ಪಿಟಿಐ):ಹತ್ತನೇ ವಿಶ್ವಕಪ್ ನಂತರ ಏಕದಿನ ಕ್ರಿಕೆಟ್ ತಂಡದಿಂದ ದೂರ ಉಳಿದಿದ್ದ ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ವಿರುದ್ಧದ ಟ್ವೆಂಟಿ-20 ಪಂದ್ಯ ಹಾಗೂ ತ್ರಿಕೋನ ಏಕದಿನ ಸರಣಿಗೆ ಭಾರತ ತಂಡಕ್ಕೆ ಮರಳಿದ್ದಾರೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿ ಭಾನುವಾರ ಇಲ್ಲಿ ಸಭೆ ನಡೆಸಿ ಭಾರತ ತಂಡವನ್ನು ಆಯ್ಕೆ ಮಾಡಿತು. ಗಾಯದಿಂದ ಚೇತರಿಸಿಕೊಂಡಿರುವ ವೇಗಿ ಜಹೀರ್ ಖಾನ್ ಸಹ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.ಭಾರತ, ಶ್ರೀಲಂಕಾ ಹಾಗೂ ಆತಿಥೇಯ ಆಸ್ಟ್ರೇಲಿಯಾ ತಂಡಗಳ ನಡುವೆ ತ್ರಿಕೋನ ಏಕದಿನ ಸರಣಿ ನಡೆಯಲಿದೆ.ಗಾಯಗೊಂಡಿರುವ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಹಾಗೂ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರಿಗೆ ತಂಡದಲ್ಲಿ ಸ್ಥಾನ ಲಭಿಸಿಲ್ಲ. ಕೊನೆಯ ಕ್ಷಣದಲ್ಲಿ ಆಸೀಸ್ ವಿರುದ್ಧದ ಟೆಸ್ಟ್ ಸರಣಿ ತಪ್ಪಿಸಿಕೊಂಡಿದ್ದ ಪ್ರವೀಣ್ ಕುಮಾರ್, ಕಳೆದ ಎರಡು ವರ್ಷ ತಂಡದಿಂದ ಹೊರಗುಳಿದಿದ್ದ ಎಡಗೈ ಬೌಲರ್ ಇರ್ಫಾನ್ ಪಠಾಣ್ ಏಕದಿನ ಸರಣಿಗೆ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.ಟೆಸ್ಟ್ ಸರಣಿಯಲ್ಲಿ ಭಾರತ ಕಳಪೆ ಪ್ರದರ್ಶನ ನೀಡುತ್ತಿರುವುದರಿಂದ ತಂಡದಲ್ಲಿ ಭಾರಿ ಬದಲಾವಣೆ ಮಾಡಲಾಗುವುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಬದಲಾವಣೆ ಮಾಡಿಲ್ಲ. ಏಪ್ರಿಲ್ 2ರಂದು ಶ್ರೀಲಂಕಾ ವಿರುದ್ಧ ನಡೆದ ವಿಶ್ವಕಪ್ ಫೈನಲ್ ಪಂದ್ಯದ ನಂತರ ಸಚಿನ್ ಮತ್ತೆ ಏಕದಿನ ಪಂದ್ಯ ಆಡಿರಲಿಲ್ಲ.ಫೆಬ್ರವರಿ 1 ಹಾಗೂ 2ರಂದು ಟಿ-20 ಪಂದ್ಯ ಮತ್ತು 5ರಿಂದ ಏಕದಿನ ತ್ರಿಕೋನ ಸರಣಿ ಆರಂಭವಾಗಲಿದೆ.

ಏಕದಿನ ಹಾಗೂ ಟ್ವೆಂಟಿ-20ಗೆ ಭಾರತ ತಂಡ ಇಂತಿದೆ: ಮಹೇಂದ್ರ ಸಿಂಗ್ ದೋನಿ (ನಾಯಕ), ವೀರೇಂದ್ರ ಸೆಹ್ವಾಗ್ (ಉಪ ನಾಯಕ), ಸಚಿನ್ ತೆಂಡೂಲ್ಕರ್,  ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ,  ರವೀಂದ್ರ ಜಡೇಜಾ, ಆರ್. ಅಶ್ವಿನ್, ಉಮೇಶ್ ಯಾದವ್, ಪ್ರವೀಣ್ ಕುಮಾರ್, ಆರ್. ವಿನಯ್ ಕುಮಾರ್, ಮನೋಜ್ ತಿವಾರಿ, ರಾಹುಲ್ ಶರ್ಮ, ಪಾರ್ಥಿವ್ ಪಟೇಲ್ (ವಿಕೆಟ್ ಕೀಪರ್), ಇರ್ಫಾನ್ ಪಠಾಣ್ ಮತ್ತು ಜಹೀರ್ ಖಾನ್.

ಪ್ರತಿಕ್ರಿಯಿಸಿ (+)