ಗುರುವಾರ , ಮೇ 13, 2021
24 °C

ತ್ರಿಮೂರ್ತಿಗಳಿಂದ ರಾಜಕೀಯ ಅಸ್ಥಿರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  `ಇಂದಿನ ರಾಜಕೀಯ ಅಸ್ಥಿರತೆಗೆ ರಾಮಕೃಷ್ಣ ಹೆಗಡೆ, ಎಚ್. ಡಿ.ದೇವೇಗೌಡ ಮತ್ತು ಜೆ.ಎಚ್. ಪಟೇಲ್ ಅವರೇ ಕಾರಣ~ ಎಂದು ವಿಧಾನಪರಿಷತ್ ಸದಸ್ಯ ಎಂ. ಸಿ. ನಾಣಯ್ಯ ಅವರು ನುಡಿದರು.`ಭಾರತ ಯಾತ್ರಾ ಕೇಂದ್ರ~ವು ಕರ್ನಾಟಕ ಚಿತ್ರಕಲಾ ಪರಿಷತ್ ಮತ್ತು ರಾಜ್ಯ ರಾಜಕೀಯ ಚಿಂತಕರ ವೇದಿಕೆಯ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ, ರಾಮಕೃಷ್ಣ ಹೆಗಡೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, `ಈ ಮೂವರೂ ಮುಖಂಡರು ತಮ್ಮ ಪ್ರತಿಷ್ಠೆ ಬದಿಗಿಟ್ಟಿದ್ದರೆ  ಜನತಾ ಪರಿವಾರ ಇಂದಿಗೂ ಅಧಿಕಾರದಲ್ಲಿ ಮುಂದುವರೆಯುತ್ತಿತ್ತು~ ಎಂದರು.`1983ರಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಜನತಾ ಪರಿವಾರದ ನೇತೃತ್ವದಲ್ಲಿ ಅಧಿಕಾರಕ್ಕೆ ಬಂತು. ಜನಪರ ಆಡಳಿತ ನೀಡಿತು. ಆ ನಂತರ ಈ ಮೂವರು ನಾಯಕರು ತೆಗೆದುಕೊಂಡ ಭಿನ್ನ ನಿಲುವುಗಳಿಂದ ರಾಜ್ಯ ರಾಜಕೀಯ ಅಸ್ಥಿರತೆಯತ್ತ ನಡೆಯಿತು~ ಎಂದರು.ಬಳ್ಳಾರಿಯು ರಾಜ್ಯದಲ್ಲಿದೆಯೋ ಇಲ್ಲ ವೋ ಎಂಬ ಬಗ್ಗೆ ಸಂಶಯ ಬರುತ್ತಿದೆ. ಅದೇ ಒಂದು ಪ್ರತ್ಯೇಕ ರಾಷ್ಟ್ರದಂತಾಗಿದೆ ಎಂದು ವ್ಯಂಗ್ಯವಾಡಿದ ನಾಣಯ್ಯ, ಈ ಪರಿಸ್ಥಿತಿಗೆ ಕಾರಣ ಏನೆಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಪ್ರಶಸ್ತಿ ಪ್ರದಾನ ಮಾಡಿದ ಸಚಿವ ಗೋವಿಂದ ಎಂ.ಕಾರಜೋಳ ಮಾತನಾಡಿ, `ರಾಜಕಾರಣದಲ್ಲಿ ಎಷ್ಟೋ ಜನ ಬಂದು ಹೋಗಿದ್ದಾರೆ. ಆದರೆ ಹೆಗಡೆ ಅವರಂತೆ ತತ್ವ-ಸಿದ್ಧಾಂತಗಳ ಮೂಲಕ ಕಟಿಬದ್ಧವಾಗಿ ಕೆಲಸ ಮಾಡಿದವರು ನಾಣಯ್ಯ. ಕಾನೂನು ಸಚಿವರಾಗಿ ಕೆಲಸ ಮಾಡಿದ ಅವರು, ಮೌಲ್ಯಕ್ಕೆ ಬೆಲೆ ಕೊಟ್ಟರು~ ಎಂದರು.ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ ಮಾತನಾಡಿ, `ಒಂದು ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಅವರನ್ನು ನಾನು ಟೀಕಿಸಿದ್ದೆ. ಅವರ ವಿರುದ್ಧ ದೂರು ನೀಡಿದ್ದೆ. ಆ ಬಗ್ಗೆ ಪೂರ್ವಗ್ರಹ ಪೀಡಿತರಾಗದೇ ನನಗೆ ಚುನಾವಣಾ ಪ್ರಣಾಳಿಕೆ ತಯಾರಿಸುವ ಜವಾಬ್ದಾರಿ ವಹಿಸಿದ್ದರು.ಶಿವಮೊಗ್ಗದಿಂದ ಹೊಳೆಹೊನ್ನೂರಿಗೆ ಚುನಾವಣಾ ಪ್ರಚಾರಕ್ಕೆ ಹೊರಟಿದ್ದ ಅವರು, ತಮ್ಮಂದಿಗೆ ಕರೆದುಕೊಂಡು ಹೋಗಿ, ಪ್ರಣಾಳಿಕೆಯ ಕರಡಿನಲ್ಲಿದ್ದ ಸಣ್ಣ -ಪುಟ್ಟ ದೋಷ ಸರಿಮಾಡಿದರು ಎಂದರು. `ಈಗ ಎಲ್ಲ ಪಕ್ಷದಲ್ಲಿನ ಒಳ್ಳೆಯವರು ಎಂದು ಗುರುತಿಸಲ್ಪಡುವವರು ಜನತಾ ಪರಿವಾರದಿಂದ ಹೋದವರೇ ಆಗಿದ್ದಾರೆ~ ಎಂದು ಹೇಳಿದರು.ಜೆಡಿಯು ಮುಖಂಡ ಡಾ.ಎಂ.ಪಿ. ನಾಡಗೌಡ, `ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜನತಾ ಪರಿವಾರದಿಂದ ಹೆಗಡೆ ಅವರನ್ನು ಉಚ್ಚಾಟಿಸಲಾಯಿತು.  ಈ ನಿರ್ಣಯಕ್ಕೆ ಒಪ್ಪಿಗೆ ಪಡೆಯಲು ನನ್ನ ಕೈ ಎತ್ತಿಸಿದ್ದರು. ಅವರನ್ನು ಪಕ್ಷದಿಂದ ಹೊರಕಳಿಸುವ ಪಾಪದಲ್ಲಿ ನಾನೂ ಇಷ್ಟವಿಲ್ಲದೇ ಪಾಲುದಾರನಾದೆ~ ಎಂದರು.ಮಾಜಿ ಸಭಾಪತಿ ಬಿ.ಎಲ್.ಶಂಕರ್, `ಭ್ರಷ್ಟಾಚಾರ ಇಂದು ಎಲ್ಲ ವಲಯದಲ್ಲೂ ಇದೆ. ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ಸೂಚಿಸಲು ತೆರಿಗೆ ವಂಚಿಸಿದ ಸಿನಿಮಾ ನಟರು ಭಾಗವಹಿಸಿ ಪೆರೇಡ್ ಮಾಡಿದರು. ಅವರ ಬಗ್ಗೆ ಮಾತನಾಡದವರು, ಬರೀ ರಾಜಕಾರಣಿಗಳು  ಬಗ್ಗೆ ಮಾತ್ರ ಧ್ವನಿ ಎತ್ತುತ್ತಿದ್ದಾರೆ~ ಎಂದು ವ್ಯಂಗ್ಯವಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು, ಚಲನಚಿತ್ರ ನಿರ್ದೇಶಕ ಟಿ.ಎನ್. ಸೀತಾರಾಂ, ಭಾರತ ಯಾತ್ರಾ ಕೇಂದ್ರದ ಮುಖಂಡ ನಾಗರಾಜಮೂರ್ತಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.