ಗುರುವಾರ , ಮೇ 26, 2022
30 °C

ಥಳುಕು ಬಳುಕು: ವ್ಯಾನ್ ವಿಷಯ

ಪೂರ್ವಿ Updated:

ಅಕ್ಷರ ಗಾತ್ರ : | |

ವ್ಯಾನ್‌ಗಳು ಸುದ್ದಿಯಲ್ಲಿವೆ. ಸಲ್ಮಾನ್ ಖಾನ್ ಓಡಾಡುವ ವ್ಯಾನ್ ಈಚೀಚೆಗೆ ಯಾಕೋ ವಿಪರೀತ ಸದ್ದು ಮಾಡುತ್ತಿದೆಯಂತೆ. ಅದರಲ್ಲಿ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಕೊರಗು ಅವರದ್ದು. ಅವರು ಶೂಟಿಂಗ್‌ನಿಂದ ಮನೆಗೆ ತೆರಳುತ್ತಿದ್ದಾಗ, ದಿಢೀರನೆ ಮಾರ್ಗಮಧ್ಯೆಯೇ ವ್ಯಾನ್‌ನಿಂದ ಕೆಳಗಿಳಿದದ್ದು ಸುದ್ದಿ. ವ್ಯಾನ್ ಶಬ್ದ ಮಾಡದಂತೆ ರೀಪೇರಿ ಮಾಡಿಸಿಕೊಂಡು ಬಂದೇ ಮುಖ ತೋರಿಸಬೇಕೆಂದು ಅವರು ಚಾಲಕನಿಗೆ ಆದೇಶವಿತ್ತರು.ಆ ವ್ಯಾನ್ ಕುರಿತು ಸಲ್ಮಾನ್‌ಗೆ ಸೆಂಟಿಮೆಂಟ್ ಇದೆ. ಮೊನ್ನೆಮೊನ್ನೆ ಅಸೀನ್ ಜೊತೆ ಅವರ ಮದುವೆಯಾಯಿತು ಎಂಬ ಸುದ್ದಿ ಹಬ್ಬಿದ್ದೇ ಆ ವ್ಯಾನ್ ನಿಂತಿದ್ದ ಜಾಗದಿಂದ. ಯಾಕೆಂದರೆ, ಅದರಿಂದ ಧೋತಿ ಎತ್ತಿಕೊಂಡು, ‘ರೆಡಿ’ ಚಿತ್ರದ ದೃಶ್ಯವೊಂದಕ್ಕೆ ಅಣಿಯಾಗಿ, ಅವರು ಅಸೀನ್‌ಗೆ ತಾಳಿ ಕಟ್ಟಿದರು. ಪಂಜಾಬಿ ಶೈಲಿಯ ಆ ಮದುವೆ ನೋಡಿ ಅಲ್ಲಿದ್ದ ಯಾರೋ ನಿಜಕ್ಕೂ ಇಬ್ಬರೂ ವಿವಾಹವಾದರೆಂದು ಹಬ್ಬಿಸಿದ ಸುದ್ದಿ ಕೇರಳ ತಲುಪಿ, ಮಾಧ್ಯಮದಲ್ಲಿ ಪ್ರಕಟವಾಗಿತ್ತು. ಖುದ್ದು ಅಸೀನ್ ಆ ಸುದ್ದಿ ಕೇಳಿ ನಕ್ಕಿದ್ದರು. ಸಲ್ಮಾನ್ ಖಾನ್, ಅಸೀನ್ ಮದುವೆ ದೃಶ್ಯದ ನಂತರ ಕುಳಿತು ಮಾತನಾಡಿದ್ದು ಅದೇ ವ್ಯಾನ್‌ನಲ್ಲಿ.ಈಗ ಮಾಧುರಿ ದೀಕ್ಷಿತ್ ವ್ಯಾನ್ ವಿಚಾರಕ್ಕೆ ಬರೋಣ. ‘ಕೌನ್ ಬನೇಗ ಕರೋಡ್‌ಪತಿ’ ಶೂಟಿಂಗ್ ಕಾಲದಲ್ಲಿ ಅಮಿತಾಬ್ ಬಚ್ಚನ್ ಬಳಸುತ್ತಿದ್ದ ವ್ಯಾನ್ ಕಂಡು ಮಾಧುರಿ ಆಕರ್ಷಿತರಾದದ್ದು ಹಳೆಯ ಕಥೆ. ಆ ವ್ಯಾನ್ ಈಗ ಮಾಧುರಿ ಸುಪರ್ದಿಯಲ್ಲಿದೆ. ಖುದ್ದು ಅಮಿತಾಬ್ ಬಚ್ಚನ್ ಅವರಿಗೆ ವ್ಯಾನನ್ನು ಕೊಟ್ಟಿದ್ದಾರೆಂಬುದು ಸುದ್ದಿ. ಎಷ್ಟು ಹಣಕ್ಕೆ ಬಿಕರಿ ಮಾಡಿದರೆಂಬುದು ಮಾತ್ರ ಗುಟ್ಟಾಗಿರುವ ವಿಚಾರ. ತುಂಬಾ ಇಷ್ಟವಾದದ್ದಕ್ಕೆ ಬೆಲೆ ಕಟ್ಟಲಾದೀತೆ ಎಂದು ಮಾಧುರಿ ಪ್ರಶ್ನಿಸುತ್ತಾರೆ.ಈಗ ನೃತ್ಯಕ್ಕೆ ಸಂಬಂಧಿಸಿದ ‘ರಿಯಾಲಿಟಿ ಶೋ’ನಲ್ಲಿ ಮಾಧುರಿ ದೀಕ್ಷಿತ್ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದು, ಆ ಕಾರ್ಯಕ್ರಮ ಸೂಪರ್‌ಹಿಟ್ ಆಗಿದೆ. ಮಾಧುರಿಯನ್ನು ನೋಡಲು ಈಗಲೂ ಜನ ಮುಗಿಬೀಳುತ್ತಿರುವುದನ್ನು ಕಂಡು ಅವರ ಪತಿ ಹಾಗೂ ಮಕ್ಕಳು ಕೂಡ ದಂಗಾಗಿದ್ದಾರೆ. ಅಂದಹಾಗೆ, ಇತ್ತೀಚೆಗೆ ರಿಯಾಲಿಟಿ ಶೋ ಶೂಟಿಂಗ್‌ಗೆ ಅಮಿತಾಬ್ ಕೊಟ್ಟ ವ್ಯಾನ್‌ನಲ್ಲೇ ಮಾಧುರಿ ಸಂಸಾರ ಸಮೇತರಾಗಿ ಹೋದರಂತೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.